ನಾಯಿ ಕಡಿತದ ಚಿಕಿತ್ಸೆಗಾಗಿ ಅಸ್ಪತ್ರೆಗೆ ಬಂದ ಹೃತಿಕ್ಷಾಳನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ಶಿಪಾರಸು ಮಾಡಿದ ವೈದ್ಯರು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿಕೊಡದೆ ನಿರ್ಲಕ್ಷ್ಯ ತೋರಿದ್ದು ವಿಷಾದನೀಯ ಎಂದು ತಹಶೀಲ್ದಾರ್ ಡಾ. ಸ್ಮಿತಾ ಅಸಮಾಧಾನ ವ್ಯಕ್ತಪಡಿಸಿದರು.
ಮಂಡ್ಯ ಜಿಲ್ಲೆಯ ಮದ್ದೂರಿನ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಸರ್ಕಾರಿ ಆಸ್ಪತ್ರೆ ಎದರು ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
“ಮಗುವಿನ ಸಾವಿಗೆ ಮಂಡ್ಯದ ಸಂಚಾರಿ ಪೊಲೀಸರಷ್ಟೇ ಮದ್ದೂರಿನ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೂ ಕಾರಣವಾಗಿದೆ. ವೈದ್ಯರ ಮೇಲೆಯೂ ಶಿಸ್ತುಕ್ರಮ ಕೈಗೊಳ್ಳಬೇಕು. ಇಂತಹ ಘಟನೆ ಸಂಭವಿಸಬಾರದಿತ್ತು. ಇದು ಸಂಬಂಧಿಸಿದ ಅದಿಕಾರಿಗಳಿಗೆಲ್ಲ ಮುಜುಗರ ತರಲಿದೆ” ಎಂದರು.
ಪ್ರತಿಭಟನೆ ಮೂಲಕ ವೈದ್ಯರ ನಿರ್ಲಕ್ಷ್ಯ ನನ್ನ ಗಮನಕ್ಕೆ ಬಂದಿರುವುದರಿಂದ ವೈದ್ಯರ ನಿರ್ಲಕ್ಷ್ಯ ಕುರಿತು ತನಿಖೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುತ್ತೇನೆ” ಎಂದು ಮಾತನಾಡಿದರು.

ತಾ ಪಂ ಇಒ ರಾಮಲಿಂಗಯ್ಯ ಮಾತನಾಡಿ, “ಮದ್ದೂರು ತಾಲೂಕಿನ ನಲವತ್ತೆರಡು ಗ್ರಾ ಪಂಗಳ ಬಜೆಟ್ ಪರಿಷ್ಕರಿಸಿ ನಾಯಿಗಳ ಸಂತಾನ ಹರಣ ಚಿಕಿತ್ಸೆಗೆ ಕ್ರಮವಹಿಸಲಾಗುವುದು. ಈ ಬಗ್ಗೆ ತುರ್ತಾಗಿ ಪಿಡಿಒಗಳ ಗಮನ ಸೆಳೆಯಲಾಗುವುದು” ಎಂದು ಹೇಳಿದರು.
ತಾ ಆರೊಗ್ಯ ವೈದ್ಯಾಧಿಕಾರಿ ರವೀಂದ್ರ ಬಿ ಗೌಡ ಮಾತನಾಡಿ, “ಎಲ್ಲ ಆಸ್ಪತ್ರೆ ಗಳಲ್ಲಿ ನಾಯಿ ಕಡಿತದ ಚುಚ್ಚುಮದ್ದು ಲಭ್ಯವಿದ್ದು, ಬಿಪಿಎಲ್, ಎಪಿಎಲ್ ಎಂಬ ತಾರತಮ್ಯ ಇಲ್ಲದೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ” ಎಂದರು.
ಮದ್ದೂರು ಆಸ್ಪತ್ರೆಯ ವೈಧ್ಯಾಧಿಕಾರಿ ಡಾ. ಬಾಲಕೃಷ್ಣ ಮಾತನಾಡಿ, “ನಾಯಿಕಡಿತದ ಚುಚ್ಚುಮದ್ದು ಸಾಕಷ್ಟು ಪ್ರಮಾಣದ ದಾಸ್ತಾನು ಇದ್ದು, ಹೃತಿಕ್ಷಾಳಿಗೂ ಕೂಡ ಪ್ರಥಮ ಚಿಕಿತ್ಸೆ ಜತೆಗೆ ನಾಯಿಕಡಿತಕ್ಕೆ ಚುಚ್ಚುಮದ್ದು ನೀಡಲಾಗಿತ್ತು. ತಲೆಗೆ ನಾಯಿ ಕಚ್ಚಿದ್ದರಿಂದ ಸೋಂಕು ಮೆದುಳಿಗೆ ತಲುಪದಿರಲೆಂದು ಹೆಚ್ಚುವರಿ ಚಿಕಿತ್ಸೆಗೆ ಮಂಡ್ಯ ಜಿಲ್ಲಾಸ್ಪತ್ರೆಗೆ ಶಿಪಾರಸು ಮಾಡಲಾಗಿತ್ತು.
ಆ ಸಮಯದಲ್ಲಿ ಆ್ಯಂಬುಲೆನ್ಸ್ ಸೌಲಭ್ಯ ಪಡೆಯುವಂತೆ ಹೇಳಿ ಆರ್ಥೈಸುವಲ್ಲಿ ನಮ್ಮ ವೈದ್ಯರು ವಿಫಲರಾಗಿದ್ದಾರೆ. ಆದರ ಹೊರತು ಉಳಿದಂತೆ ಯಾವುದೆ ಲೋಪವಾಗಿಲ್ಲ” ಎಂದು ಸಮರ್ಥಿಸಿಕೊಂಡರು.
ಆಸ್ಪತ್ರೆಯ ವ್ಯವಸ್ಥೆ ಸುಧಾರಿಸುವ ಬಗ್ಗೆ ತುರ್ತಾಗಿ ಆಸ್ಪತ್ರೆಯಲ್ಲಿ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳ ಸಭೆ ಕರೆಯುವುದಾಗಿ ಭರವಸೆ ನೀಡಿದರು.
ಇದನ್ನೂ ಓದಿದ್ದೀರಾ? ಬೆಳಗಾವಿ | ದಲಿತರ ವಿರುದ್ಧ ಹಿಂಸಾತ್ಮಕ ಆಚರಣೆ ಆರೋಪ
ಪುರಸಭೆ ಮುಖ್ಯಾಧಿಕಾರಿ ಮೀನಾಕ್ಷಿ, ಪಶುಪಾಲನೆ ಇಲಾಖೆ ವೈದ್ಯಾಧಿಕಾರಿ ಡಾ. ಗೋವಿಂದ, ಗೊರವನಹಳ್ಳಿ ಪಿಡಿಒ
ಪೂರ್ಣಿಮಾ, ತಾ.ಪಂ ಎ ಡಿ ಮಂಜುನಾಥ್, ಪ್ರಗತಿಪರ ಸಂಘಟನೆಯ ನ ಲಿ ಕೃಷ್ಣ, ಉಮಾಶಂಕರ್, ಚನ್ನಸಂದ್ರ ಲಕ್ಷ್ಮಣ್, ಅವಿನಾಶ್, ಗೋಪಾಲ್, ಚನ್ನಪ್ಪ, ರಾಜೇಶ್, ರೈತ ಸಂಘಟನೆಯ ಶಂಕರೇಗೌಡ, ನಾಗರಾಜು, ವಿನೊದ್ ಬಾಬು, ಉಮೇಶ್ ಸಾಹಿತ್ಯ ಪರಿಷತ್ ಅಧ್ಯಕ್ಷ ಸುನೀಲ್, ದಲಿತ ಮುಖಂಡ ಆತಗೂರು ನಿಂಗಪ್ಪ, ಮರಳಿಗ ಶಿವರಾಜ್, ಹಾಗಲಹಳ್ಳಿ ಬಸವರಾಜ್, ಅಜ್ಜಹಳ್ಳಿ ಬಸವರಾಜ್, ಮಲವರಾಜ್, ಸುಮಾರ್ಗ ಪುಟ್ಟಲಿಂಗಯ್ಯ, ಹೊನ್ನಲಗೆರೆ ಅಪ್ಪಾಜಿ, ಬ್ಯಾಡರಹಳ್ಳಿ ಶಿವಕುಮಾರ್ ಸೇರಿದಂತೆ ಇತರರು ಇದ್ದರು.
ಘಟನೆ ಹಿನ್ನೆಲೆ
ನಾಯಿ ಕಡಿತದಿಂದ ಗಾಯಗೊಂಡಿದ್ದ ತಮ್ಮ ಮಗುವನ್ನು ಅಶೋಕ್-ವಾಣಿ ದಂಪತಿ ಬೈಕ್‌ನಲ್ಲಿ ಮಿಮ್ಸ್ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದಾಗ ಸ್ವರ್ಣಸಂದ್ರ ಬಳಿ ಹೆದ್ದಾರಿಯಲ್ಲಿ ಟ್ರಾಫಿಕ್ ಪೊಲೀಸರು ಹೆಲ್ಮೆಟ್ ಧರಿಸಿಲ್ಲವೆಂದು ತಡೆದು ತಪಾಸಣೆ ಮಾಡಲು ಮುಂದಾಗಿದ್ದರು. ಈ ವೇಳೆ ಬೈಕ್‌ನಿಂದ ಬಿದ್ದಿದ್ದ ಮಗುವಿನ ಮೇಲೆ ಲಾರಿ ಹರಿದ ಪರಿಣಾಮ ಮೂರೂವರೆ ವರ್ಷದ ಮಗು ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿತ್ತು. ಈ ಹಿನ್ನೆಲೆ ಸಾರ್ವಜನಿಕರು ರಸ್ತೆತಡೆ ನಡೆಸಿ ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮೂವರು ಎಎಸ್‌ಐಗಳನ್ನು ಅಮಾನತುಗೊಳಿಸಿದ್ದಾರೆ. ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮೂವರು ಎಎಸ್‌ಐಗಳನ್ನು ಅಮಾನತುಗೊಳಿಸಿದ್ದಾರೆ.