ಗುಬ್ಬಿ ಪಟ್ಟಣದ ಹೊರವಲಯ ಹೇರೂರು ಬಳಿಯ ಭೂಮಿ ಪಬ್ಲಿಕ್ ಸ್ಕೂಲ್ ಹಿಂಬದಿಯ ರಸ್ತೆಯಲ್ಲಿ ಬರುವ ಗಂಗಾಧರಯ್ಯ ಎಂಬುವರಿಗೆ ಸೇರಿದ ಮಾವಿನ ತೋಟದಲ್ಲಿ ಅನುಮಾನಾಸ್ಪದ ರೀತಿ ಕೊಳೆತ ಸ್ಥಿತಿಯ ಸುಮಾರು 33 ವರ್ಷದ ವ್ಯಕ್ತಿಯ ಶವ ಪತ್ತೆಯಾಗಿ ನಂತರ ಮೃತದೇಹದ ಕೈ ಮೇಲಿದ್ದ ಅಚ್ಚೆ ಮೂಲಕ ನೇಪಾಳ ಮೂಲದ ವ್ಯಕ್ತಿ ನಿರ್ಮಲ್ ಜವಾನ್ ಸಿಂಗ್ ಎಂದು ಗುರುತಿಸಲಾಗಿದೆ.
ಬೆಳಿಗ್ಗೆ ಕೊಳೆತ ಶವದ ವಾಸನೆ ಎಲ್ಲಡೆ ಪಸರಿಸಿ ಪೊಲೀಸರಿಗೆ ಮಾಹಿತಿ ರವಾನೆಯಾಗಿದೆ. ನಂತರ ಸ್ಥಳಕ್ಕೆ ಬಂದ ಪೊಲೀಸರು ಶವ ಪತ್ತೆಗೆ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಈಗಾಗಲೇ ದಾಖಲಾಗಿದ್ದ ವ್ಯಕ್ತಿ ಕಾಣೆ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದು ಅದರಲ್ಲಿ ಈತ ಯಾರಾದರೂ ಇರಬಹುದಾ ಎಂಬ ಬಗ್ಗೆ ಮಾಹಿತಿ ಸಂಗ್ರಹಣೆಗೆ ಮುಂದಾದರು.
ಮೃತ ವ್ಯಕ್ತಿ ನೇಪಾಳ ಮೂಲದ ನಿರ್ಮಲ್ ಜವಾನ್ ಸಿಂಗ್ ಎಂದು ಮೃತನ ಸಹೋದರ ಸಂಬಂಧಿ ಕೈಯಲ್ಲಿದ್ದ ಅಚ್ಚೆ ನೋಡಿ ಗುರುತು ಪತ್ತೆ ಮಾಡಲಾಯಿತು. ಈತ ಒಂದು ವಾರದಿಂದ ನಾಪತ್ತೆಯಾಗಿದ್ದ ವ್ಯಕ್ತಿ. ಹೋಟೆಲ್ ಗಳಲ್ಲಿ ಕೆಲಸ ಮಾಡುತ್ತಿದ್ದ. ಬೆಳಿಗ್ಗೆ ಮತ್ತು ರಾತ್ರಿ ವೇಳೆ ಎರೆಡೆರಡು ಕಡೆ ಕೆಲಸ ಮಾಡುತ್ತಿದ್ದ ನೇಪಾಳಿ ವ್ಯಕ್ತಿ ಹೇರೂರು ಗ್ರಾಮದ ಮಾವಿನ ತೋಪು ಬಳಿ ಶವವಾಗಿ ಪತ್ತೆಯಾಗಿದ್ದು, ಪೊಲೀಸರಿಗೆ ಹಲವು ಅನುಮಾನಗಳಿಗೆ ಕಾರಣವಾದ ಹಿನ್ನಲೆ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ಪುರುಷೋತ್ತಮ್ ಹಾಗೂ ಡಿವೈಎಸ್ಪಿ ಶೇಖರ್ ಆಗಮಿಸಿ ಪರಿಶೀಲಿಸಿದರು. ಪ್ರಕರಣ ದಾಖಲಿಸಿಕೊಂಡ ಗುಬ್ಬಿ ಪೊಲೀಸರು ಮೃತ ದೇಹವನ್ನು ಪರೀಕ್ಷೆಗೆ ಒಳಪಡಿಸಿ ಸಂಬಂಧಿಕರಿಗೆ ಹಸ್ತಾಂತರಿಸಿ ಸಾವಿನ ಹಿನ್ನೆಲೆಗೆ ತನಿಖೆಯನ್ನು ಚುರುಕುಗೊಳಿಸಿದ್ದಾರೆ.