ನುಡಿಯಂಗಳ | ‘ಕಾನಾ ಕಾನಾ’ ಎಂದರೆ ಸರಿ, ‘ಕಾನಾ ಕಾನಾ’ ಎಂದರೆ ತಪ್ಪು

Date:

Advertisements

ಶಿಕ್ಷಕರಿಗೆ ಹೇಳಬೇಕಾಗಿರುವುದು, ‘ಖಾನಾ ಖಾನಾ’ ಎಂದು. ಎಂದರೆ ಹಿಂದಿಯಲ್ಲಿ, ‘ಊಟ ಮಾಡುವುದು’ ಎಂಬ ಅರ್ಥ. ಇಲ್ಲಿ ಆಗುತ್ತಿದ್ದುದು ಏನು ಎಂದರೆ, ಶಿಕ್ಷಕರು ತಾವು ‘ಕಾನಾ ಕಾನಾ’ ಎಂದು ಅಲ್ಪಪ್ರಾಣವಾಗಿ ಹೇಳುತ್ತಿದ್ದರೂ ಅದು ಅವರ ಕಿವಿಗೆ ಮಾತ್ರ ತಾವು ಹೇಳುತ್ತಿರುವುದು ‘ಖಾನಾ ಖಾನಾ’ ಎಂದೇ ಕೇಳಿಸುತ್ತದೆ, ಆದರೆ, ಮಕ್ಕಳು ಹೇಳುವ ‘ಕಾನಾ ಕಾನಾ’ ಮಾತ್ರ ‘ಕಾನಾ ಕಾನಾ’ ಆಗಿಯೇ ಕೇಳಿಸುತ್ತದೆ. ಇದು ಆಲಿಸುವಿಕೆಯ ಮನೋವಿಜ್ಞಾನದ ವಿಚಾರ

ಅದು ಹಳೆಯ ಕಾಲ. ರೈಲುಗಳು, ರೈಲು ನಿಲ್ದಾಣಗಳು ಈಗಿನ ಹಾಗೆ ಮೈಲುದ್ದ ಇರುತ್ತಿರಲಿಲ್ಲ. ಹಾಸನ ಅಂಥ ಒಂದು ಚಿಕ್ಕ ಸ್ಟೇಷನ್ ಆಗಿತ್ತು. ಕೆಲವೇ ಜನ ಪೋರ್ಟರುಗಳು. ರೈಲು ಬಂದು ಪ್ಲಾಟ್ ಫಾಮ್‌ ಮೇಲೆ ನಿಂತ ಕೂಡಲೇ ಸಿದ್ದಪ್ಪ ಎನ್ನುವ ಒಬ್ಬ ಪೋರ್ಟರ್, ಊರು ಬಂತು ಇಳೀರಿ ಎನ್ನುವ ಹಾಗೆ, “ಆಸನಾ…. ಆಸನಾ…. ಯಾರ್ರಿ ಆಸನಾ… ಇಳೀರಿ ಆಸನಾ…” ಎಂದು ಅನೌನ್ಸ್ ಮಾಡುತ್ತಿದ್ದರು (ಮೊದಲು ಬಸ್ ಸ್ಟ್ಯಾಂಡಿನಲ್ಲಿ ಇದ್ದರೋ ಏನೋ!).

WhatsApp Image 2025 05 26 at 10.50.54 AM

ಅಲ್ಲಿನ ಸ್ಟೇಷನ್ ಮಾಸ್ಟರ್ ಸ್ವಲ್ಪ ಕನ್ನಡ ಪಂಡಿತರ ತರಹ. ಸಿದ್ಧಪ್ಪ ‘ಹಾಸನ’ವನ್ನು ‘ಆಸನ’ ಎಂದು ಕೂಗುತ್ತಿದ್ದುದಕ್ಕೆ ಅವರಿಗೆ ಕಿರಿಕಿರಿ ಆಗುತ್ತಿತ್ತು. ಅವರು ಹಲವು ಸಲ ಸಿದ್ದಪ್ಪನನ್ನು ಆಫೀಸಿನಲ್ಲಿ ಕರೆಸಿಕೊಂಡು, ಅದು ‘ಆಸನ’ ಅಲ್ಲ, ‘ಹಾಸನ’ ಎಂದು, ಆ ಬದಲಿಗೆ ಹಾ ಎಂದು ಏಳುವುದನ್ನು, ಸಾರಿ, ಹೇಳುವುದನ್ನು ಕಲಿಸಲು ಬಹಳ ಪ್ರಯತ್ನ ಮಾಡಿದ್ದರು. ಆದರೆ, ಸಿದ್ಧಪ್ಪನಿಗೆ ಹಾ ಬರಲೇ ಇಲ್ಲ. ‘ಆಸನಾ’ ಮುಂದುವರೆದಿತ್ತು.

Advertisements

ಸ್ಟೇಷನ್ ಮಾಸ್ಟರರಿಗೆ ಒಂದು ಉಪಾಯ ಹೊಳೆಯಿತು. ಸಿದ್ದಪ್ಪನಿಗೆ ಹಾ ಉಚ್ಚರಿಸಲು ಬರುತ್ತಿಲ್ಲ. ಆ ಎನ್ನುತ್ತಾನೆ. ಚಿಂತೆಯಿಲ್ಲ. ಈತನನ್ನ ಮುಂದಿನ ಸ್ಟೇಷನ್‍ಗೆ ವರ್ಗ ಮಾಡಿಬಿಟ್ಟರೆ ಸಮಸ್ಯೆ ಬಗೆಹರಿಯುತ್ತದೆ. ಮುಂದಿನ ಸ್ಟೇಷನ್ ‘ಅರಸೀಕೆರೆ’. ಅರಸೀಕೆರೆ ಎಂದು ಹೇಳಲು ಸಿದ್ಧಪ್ಪನಿಗೆ ಸುಲಭವಾಗುತ್ತದೆ. ಆಯಿತು, ಸಿದ್ಧಪ್ಪ ಅರಸೀಕೆರೆ ಸ್ಟೇಷನ್ನಿಗೆ ಹೋದ.

ಮುಂದೆ ಒಂದು ದಿನ ನಮ್ಮ ಸ್ಟೇಷನ್ ಮಾಸ್ಟರ್ ಏನೋ ಕೆಲಸಕ್ಕೆ ಅಂತ ರೈಲಿನಲ್ಲಿಯೇ ಅರಸೀಕೆರೆಗೆ ಹೋದರು. ಅಲ್ಲಿ ತಮ್ಮ ಶಿಷ್ಯ ಸಿದ್ದಪ್ಪ ಅರಸೀಕೆರೆ ಹೆಸರನ್ನು ಸರಿಯಾಗಿ ಹೇಳುತ್ತಿರಬಹುದು, ಅದನ್ನೊಮ್ಮೆ ಕೇಳಿ ಆನಂದಿಸಬೇಕು ಎಂದುಕೊಂಡರು. ಸರಿ, ರೈಲು ಅರಸೀಕೆರೆ ನಿಲ್ದಾಣವನ್ನು ತಲುಪುತ್ತಲೇ, ಸಿದ್ದಪ್ಪನ ಧ್ವನಿ ಕೇಳಿಸಿತು. “ಹರಸೀಕೆರೆ… ಯಾರ್ರೀ ಹರಸೀಕೆರೆ… ಇಳೀರಿ ಹರಸೀಕೆರೆ…” ಸ್ಟೇಷನ್ ಮಾಸ್ಟರರಿಗೆ ನಿರಾಸೆಯಾಯಿತು. ಹಾಸನದಲ್ಲಿ ಹ ಹೇಳಲು ಬಾರದಿದ್ದ ಸಿದ್ಧಪ್ಪ ಅರಿಸೀಕೆರೆಯಲ್ಲಿ ಅ ಬದಲು ಹ ಹೇಳುತ್ತಿದ್ದ.

WhatsApp Image 2025 05 26 at 10.50.54 AM1

ಸಿದ್ದಪ್ಪ, ಹಾಸನವನ್ನು ಆಸನ ಎನುತ್ತಿದ್ದ, ಅರಸೀಕೆರೆಯನ್ನು ಹರಸೀಕೆರೆ ಎನ್ನುತ್ತಿದ್ದ. ಆ ಮತ್ತು ಹ -ಗಳು ಅದಲು ಬದಲು ಆಗುತ್ತಿದ್ದವು. ಸಿದ್ದಪ್ಪನಂಥ ಗ್ರಾಮೀಣ ಪ್ರದೇಶದಿಂದ ಬಂದ ಅಪ್ಪಟ ಕನ್ನಡ ಮಾತೃಭಾಷಿಗೆ ಇದು ಒಂದು ರೀತಿ ಸಹಜವೇ ಆಗಿತ್ತು. ಕನ್ನಡ ಹೋರಾಟಗಾರರ ನಾಯಕರೊಬ್ಬರು ಆವೇಶದಿಂದ ಭಾಷಣ ಮಾಡುತ್ತಾ, ‘ನೀವೇನೂ ಹಂಜಬೇಡಿ, ಹಳುಕಬೇಡಿ, ಓರಾಡಿ..’ ಎಂದು ಪ್ರೋತ್ಸಾಹಿಸುತ್ತಿದ್ದುದನ್ನು ನಾನು ಕೇಳಿದ್ದೆ.

ನಾನು 1975-78ರಲ್ಲಿ ಮೈಸೂರಿನ ಭಾರತೀಯ ಭಾಷಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆ. ಕನ್ನಡ ವಿಭಾಗದಲ್ಲಿ ದಿ. ಆಲನಹಳ್ಳಿ ಕೃಷ್ಣ ಮತ್ತು ದೇವನೂರು ಮಹಾದೇವ ನನ್ನ ಸಹೋದ್ಯೋಗಿಗಳಾಗಿದ್ದರು ಎಂಬುದು ಒಂದು ಅಪರೂಪದ, ಹೆಮ್ಮೆಯ ಸಂಗತಿ.

ದೇವನೂರು ಮತ್ತು ಕೃಷ್ಣ ಇಬ್ಬರೂ ಅಪ್ಪಟ ಗ್ರಾಮೀಣ ಪದೇಶದಿಂದ ಬಂದ ಲೇಖಕರು ಎಂದು ನಮಗೆಲ್ಲರಿಗೂ ಗೊತ್ತು. ಅದು ಅವರ ಸಾಹಿತ್ಯ ಕೃತಿಗಳಲ್ಲಿಯೂ ಕಾಣುತ್ತದೆ. ಅವರ ಆಲನಹಳ್ಳಿ/ದೇವನೂರಿನ ಆಡುಮಾತಿನ ಕನ್ನಡ ಆಲಿಸಲು ಸಂಗೀತದಂತೆ ಇಂಪು. ಇಬ್ಬರಿಗೂ ಹಾಸನದ ಸಿದ್ದಪ್ಪನ ಹಾಗೆ ಹ ಬದಲು ಅ ಉಚ್ಚಾರವಾಗುತ್ತಿತ್ತು. ಆದರೆ, ಕೃಷ್ಣ ಅವರಿಗೆ ತಾನು ಸರಿಯಾಗಿಯೇ ಉಚ್ಚರಿಸುತ್ತೇನೆ, ದೇವನೂರರಿಗೆ ಸರಿಯಾಗಿ ಉಚ್ಚರಿಸಲು ಬರುವುದಿಲ್ಲ ಎಂಬ ಅಭಿಪ್ರಾಯ. ಅದನ್ನಿಟ್ಟುಕೊಂಡು ಅವರು ದೇವನೂರರಿಗೆ ತಮಾಷೆ ಮಾಡುತ್ತಿದ್ದರು.

ಒಂದು ಮಧ್ಯಾಹ್ನ ನಾವೆಲ್ಲರೂ ಒಟ್ಟಿಗೇ ಊಟಕ್ಕೆ ಕುಳಿತಿದ್ದೆವು. ನಮ್ಮ ಸಂಸ್ಥೆಯ ಜಾನಪದ ಸಾಹಿತ್ಯ ವಿಭಾಗದಲ್ಲಿ ಕಾಶ್ಮೀರದ ಒಬ್ಬ ಸಹೋದ್ಯೋಗಿ ಇದ್ದರು. ಅವರ ಹೆಸರು, ಡಾ. ಜವಾಹರಲಾಲ್ ಹಂಡು. ಅವರ ಹೆಸರು ‘ಡಾ.ಹಂಡು’ ಆದರೆ ದೇವನೂರರಿಗೆ ‘ಹಂಡು’ ಪದವನು ಹೇಳಲು ಬರುವುದಿಲ್ಲ. ಅವರು ಅದನ್ನು ‘ಅಂಡು’ ಎನ್ನುವಂತೆ ಹೇಳುತ್ತಾರೆ ಎಂಬುದು ಆಲನಹಳ್ಳಿಯವರ ವಾದ. ಇದ್ದರೂ ಇರಬಹುದು. ಆದರೆ, ಅವರು ಅದನ್ನು ಹೇಳಿದ್ದು ಹೀಗೆ.

“This Mahadeva, you know, instead of saying” ಇದನ್ನು ಕೇಳಿ ನಾವು ಜೋರಾಗಿ ನಕ್ಕೆವು. ನಾವು ನಕ್ಕಿದ್ದು ತಾವು ಹೇಳಿದ ತಮಾಷೆಯ ಮಾತಿಗೆ ಎಂದು ಆಲನಹಳ್ಳಿಯವರು ಭಾವಿಸಿದರು. ಆದರೆ ನಾವು ನಕ್ಕಿದ್ದು ಅವರ ತಪ್ಪು ಉಚ್ಚಾರಕ್ಕಾಗಿ. ದೇವನೂರು ಹೇಳಬೇಕಾಗಿತ್ತು, ಬದಲಿಗೆ ಹೇಳುತ್ತಾರೆ ಎಂಬ ಎರಡೂ ಪ್ರಯೋಗಗಳಲ್ಲಿ ಆಲನಹಳ್ಳಿಯವರು ತಾವೇ ಸ್ವತಃ ತಪ್ಪಾಗಿ, ಹಂಡು ಬದಲಿಗೆ ‘ಅಂಡು’ ಎನ್ನುತ್ತಿದ್ದಾರೆ. ಎಂದರೆ, instead of saying ಎಂದು ಹೇಳುವಾಗ ತಾವು ಹೇಳಿದ್ದ ‘ಡಾ.ಅಂಡು,’ ಎಂಬುದು ಸ್ವತಃ ಅವರಿಗೆ ‘ಡಾ.ಹಂಡು’ ಎನ್ನುವ ರೀತಿಯಲ್ಲಿ ಸರಿಯಾಗಿಯೇ ಕೇಳಿಸುತ್ತದೆ, ನಮಗೆ ಮಾತ್ರ ಅದು ‘ಡಾ.ಅಂಡು’ ಆಗಿ ಕೇಳಿಸುತ್ತದೆ.

ಒತ್ತಿದ್ದರೆ ಪುಡಿಪುಡಿ ಆಗುತ್ತೆ

ನಾನು ಬರೆದು, ನಿರ್ದೇಶನ ಮಾಡಿ, ಒಂದು ಪ್ರಧಾನ ಪಾತ್ರವನ್ನು ಅಭಿನಯಿಸಿರುವ, ‘ಚಂದನ ಚಿಗುರು’ ಚಲನಚಿತ್ರದಲ್ಲಿ ಒಂದು ದೃಶ್ಯ ಬರುತ್ತದೆ. ಅದರಲ್ಲಿ (ನಾನು ಮಾಡಿದ ಪಾತ್ರ) ಕನ್ನಡ ಶಿಕ್ಷಕರು ಮಕ್ಕಳಿಗೆ ಮಹಾಪ್ರಾಣ ಹೇಳಲು ಬರುವುದಿಲ್ಲ ಎಂಬುದರ ಕುರಿತು ಬೇಸರಪಟ್ಟುಕೊಂಡು, ‘ಪ್ರಬಂದ’ ಅಂತ ಬರೆಯಬಾರದು, ‘ಪ್ರಬಂಧ’ ಅಂತ ಬರೆಯಬೇಕು ಎಂದು ಬೋರ್ಡಿನ ಮೇಲೆ ಬರೆದು ಕಲಿಸುತ್ತಿರುತ್ತಾರೆ. ಅಷ್ಟರಲ್ಲಿ ಅವರಿಗೆ ತರಗತಿಯಲ್ಲಿ ಮೂರನೇ ಸಾಲಿನಲ್ಲಿ ಕುಳಿತಿರುವ ಹರ್ಷಿತಾ ಎನ್ನುವ ಹುಡುಗಿ ತರಗತಿಯಲ್ಲೇ ಕುಳಿತು ಕದ್ದುಮುಚ್ಚಿ ಏನನ್ನೋ ತಿನ್ನುತ್ತಿರುವುದು ಗಮನಕ್ಕೆ ಬರುತ್ತದೆ. ಕೇಳಿದಾಗ, ‘ಅಪ್ಪಳ, ಸಾರ್,’ ಎನ್ನುತ್ತಾಳೆ. ಈಗ ಶಿಕ್ಷಕರಿಗೆ ಆಕೆ ತರಗತಿಯಲ್ಲಿ ಕುಳಿತು ತಿನ್ನುತ್ತಾ ಇರುವುದು ತಪ್ಪಾಗಿ ಕಾಣುವುದಿಲ್ಲ. ಆದರೆ ಆಕೆ ‘ಹಪ್ಪಳ’ವನ್ನು ‘ಅಪ್ಪಳ’ ಎಂದಿದ್ದು ದೊಡ್ಡ ತಪ್ಪಾಗಿ ತೋರುತ್ತದೆ.

WhatsApp Image 2025 05 26 at 10.50.54 AM2
WhatsApp Image 2025 05 26 at 10.50.54 AM3

ಸರಿ, ಕನ್ನಡ ಮೇಷ್ಟ್ರು, ಅದನ್ನು ‘ಅಪ್ಪಳ’ ಅನ್ನಬಾರದು, ‘ಹಪ್ಪಳ ಅನ್ನು.’ ಎಂದು ಹೇಳಿಕೊಡುತ್ತಾರೆ. ಆದರೆ ಹರ್ಷಿತಾಳಿಗೆ ಹಪ್ಪಳ ಎನ್ನಲು ಬರುವುದೇ ಇಲ್ಲ. ಆಕೆ, ‘ಅಪ್ಪಳ’ನೇ ಅನ್ನುತ್ತಾಳೆ. ಅದಕ್ಕೆ ಶಿಕ್ಷಕರು, ‘ಅ ಅಲ್ಲ ಹ, ಹ… ಅದನ್ನೇ ಸ್ವಲ್ಪ ಒತ್ತಿ ಹೇಳು,’ ಎನ್ನುತ್ತಾರೆ. ಅದಕ್ಕೆ ಹರ್ಷಿತಾ, ‘ಒತ್ತಿದರೆ ಜೋಬಲ್ಲೇ ಪುಡಿಪುಡಿ ಆಗುತ್ತೇ ಸಾರ್,’ ಎನ್ನುತ್ತಾಳೆ. ಇಡೀ ತರಗತಿಯಲ್ಲಿ ನಗೆ.

ಕಾನಾ…ಕಾನಾ… ನಹೀ… ಕಾನಾ… ಕಾನಾ


ಇನ್ನೊಂದು ಉದಾಹರಣೆ ಕೊಡುತ್ತೇನೆ. ನಾನು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕನಾಗಿದ್ದಾಗ, ಉಳಿದ ಕೆಲಸಗಳ ಜೊತೆಯಲ್ಲಿ, ಹಿಂದಿ ಪಾಠಗಳನ್ನು ರೆಕಾರ್ಡ್ ಮಾಡಿ ಪ್ರಸಾರ ಮಾಡಬೇಕಾಗಿತ್ತು. ಇದರಲ್ಲಿ ಒಬ್ಬ ಹಿಂದಿ ಶಿಕ್ಷಕರು, ತಮ್ಮ ಇಬ್ಬರು ವಿದ್ಯಾರ್ಥಿಗಳೊಂದಿಗೆ, ಒಂದು ಅಥವಾ ಎರಡು ಪಾಠಗಳನ್ನು ಸಿದ್ಧಪಡಿಸಿಕೊಂಡು ಬಂದು ಸ್ಟುಡಿಯೋದಲ್ಲಿ ರೆಕಾರ್ಡ್ ಮಾಡುತ್ತಿದ್ದರು. ನಾನು ಬರೀ ರೆಕಾರ್ಡ್ ಮಾಡಿ ಪ್ರಸಾರ ಮಾಡುತ್ತಿದ್ದೆ.

WhatsApp Image 2025 05 26 at 10.50.54 AM4

ಒಮ್ಮೆ ಈ ರೀತಿಯ ಒಂದು ಪಾಠವನ್ನು ರೆಕಾರ್ಡ್ ಮಾಡುತ್ತಿರುವಾಗ ಶಿಕ್ಷಕರು ಹೇಳಿದ್ದನ್ನು ವಿದ್ಯಾರ್ಥಿಗಳು ಪುನರುಚ್ಚರಿಸಬೇಕಾಗಿತ್ತು. ಒಂದು ಹಂತದಲ್ಲಿ ಶಿಕ್ಷಕರು, “ಕಾನಾ…ಕಾನಾ…’ ಎಂದರು. ಸರಿ, ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ, “ಕಾನಾ…ಕಾನಾ…’ ಎಂದು ಪುನರುಚ್ಚರಿಸಿದರು. ಶಿಕ್ಶಕರಿಗೆ ಅದು ತಪ್ಪು ಎನ್ನಿಸಿತು. ಮತ್ತೊಮ್ಮೆ ಹೇಳಿಸಿದರು. ಆಗಲೂ ಮಕ್ಕಳು ‘ಕಾನಾ..ಕಾನಾ…’ ಎಂದರು. ಶಿಕ್ಷಕರಿಗೆ ತುಸು ಅಸಮಾಧಾನವಾಗಿ, (ಹಿಂದಿಯಲ್ಲಿಯೇ) ವಿವರಿಸಿದರು, “‘ಕಾನಾ ಕಾನಾ’ ನಹೀ ಬಚ್ಚೋ, ಠೀಕ್‍ಸೆ ಬೋಲೋ, ‘ಕಾನಾ ಕಾನಾ,’” ಈಗಲೂ ಮಕ್ಕಳು, ತುಸು ಗೊಂದಲದ ಧ್ವನಿಯಲ್ಲಿ ಅಂದರು, ‘ಕಾನಾ…ಕಾನಾ..’

ಇದು ನನ್ನ ಗಮನಕ್ಕೆ ಬಂತು. ನಾನು ರೆಕಾರ್ಡಿಂಗ್ ಮಾಡುವುದನ್ನು ನಿಲ್ಲಿಸಿ, ಸ್ಟುಡಿಯೋ ಒಳಗಡೆ ಹೋಗಿ ಶಿಕ್ಷಕರಿಗೆ ಕೇಳಿದೆ, ಅವರು ತುಸು ರೇಗಿ ಹೇಳಿದರು, “ನೋಡಿ ಸಾರ್, ಈಗಿನ ಹುಡುಗರಿಗೆ ಸರಿಯಾಗಿ ಉಚ್ಚಾರಣೇನೇ ಬರುವುದಿಲ್ಲ.” ಎಂದರು. ಮುಂದುವರೆದು, “ಸಾರ್, ನಾನು ಹೇಳುತ್ತಿರುವುದು, ‘ಕಾನಾ ಕಾನಾ’ ಎಂದು. ಈ ಮಕ್ಕಳು ತಪ್ಪಾಗಿ ‘ಕಾನಾ ಕಾನಾ’ ಎನ್ನುತ್ತಿದ್ದಾರೆ.” ಎಂದರು.

ಇಲ್ಲಿ ಸಮಸ್ಯೆ ಏನು ಎಂದು ನಿಮಗೆ ಅರ್ಥವಾಯಿತೇ?

ಶಿಕ್ಷಕರಿಗೆ ಹೇಳಬೇಕಾಗಿರುವುದು, ‘ಖಾನಾ ಖಾನಾ’ ಎಂದು. ಎಂದರೆ ಹಿಂದಿಯಲ್ಲಿ, ‘ಊಟ ಮಾಡುವುದು’ ಎಂಬ ಅರ್ಥ. ಇಲ್ಲಿ ಆಗುತ್ತಿದ್ದುದು ಏನು ಎಂದರೆ, ಶಿಕ್ಷಕರು ತಾವು ‘ಕಾನಾ ಕಾನಾ’ ಎಂದು ಅಲ್ಪಪ್ರಾಣವಾಗಿ ಹೇಳುತ್ತಿದ್ದರೂ ಅದು ಅವರ ಕಿವಿಗೆ ಮಾತ್ರ ತಾವು ಹೇಳುತ್ತಿರುವುದು ‘ಖಾನಾ ಖಾನಾ’ ಎಂದೇ ಕೇಳಿಸುತ್ತದೆ, ಆದರೆ, ಮಕ್ಕಳು ಹೇಳುವ ‘ಕಾನಾ ಕಾನಾ’ ಮಾತ್ರ ‘ಕಾನಾ ಕಾನಾ’ ಆಗಿಯೇ ಕೇಳಿಸುತ್ತದೆ. ಇದು ಆಲಿಸುವಿಕೆಯ ಮನೋವಿಜ್ಞಾನದ ವಿಚಾರ.

ಕೆಲವರಿಗೆ ತಾವು ಮಹಾಪ್ರಾಣದ ಧ್ವನಿಗಳನ್ನುಅಲ್ಪಪ್ರಾಣವಾಗಿ ಹೇಳಿದರೂ, ಅದು ಬೇರೆಯವರಿಗೆ ಅಲ್ಪಪ್ರಾಣವಾಗಿ ಕೇಳಿಸಿದರೂ ಅವರಿಗೆ ಮಾತ್ರ ಅದು ಮಹಾಪ್ರಾಣವಾಗಿ ಕೇಳಿಸುತ್ತದೆ. ಅಲ್ಪಪ್ರಾಣ ಮಹಾಪ್ರಾಣದ ವ್ಯತ್ಯಾಸವನ್ನು ನಾವು ಕೇವಲ (ಕ-ಖ; ಟ-ಠ -ನಂಥ) ವರ್ಗೀಯ ವ್ಯಂಜನಗಳಲ್ಲಿ ಮಾತ್ರ ನೋಡುತ್ತೇವೆ. ಅವರ್ಗೀಯ ವ್ಯಂಜನಗಳಲ್ಲಿ ಅಲ್ಪ/ಮಹಾಪ್ರಾಣ ಜೋಡಿ ಇರುವುದಿಲ್ಲ. ಆದರೂ, ಹ ಧ್ವನಿಯ ಸಂದರ್ಭದಲ್ಲಿ ಮಹಾಪ್ರಾಣದ ಸಮಸ್ಯೆ ಇರುವವರು ಹ-ವನ್ನು ಅ ಎಂಬಂತೆ ಉಚ್ಚರಿಸುತ್ತಾರೆ. ಕೆಲವೊಮ್ಮೆ ನಮ್ಮ ಹಾಸನದ ಸಿದ್ದಪ್ಪನ ತರಹ ಅ-ವನ್ನು ಹ-ಆಗಿಯೂ ಉಚ್ಚರಿಸಿ ಬಿಡುತ್ತಾರೆ. ಉದಾ: ಹಜ್ಜಿ ತನ್ನ ಮನೆಯ ಹಂಗಳದಲ್ಲಿ ಹಕ್ಕಿ ಹಾರಿಸುತ್ತಾ ಕೂತಿತ್ತು, ಅಷ್ಟರಲ್ಲಿ ಹೊಂದು ಅಕ್ಕಿ ಆರಿಬಂದು ಹೊಂದು ಹಕ್ಕಿ ಕಾಳನ್ನು ಎಕ್ಕಿಕೊಂಡು ಆರಿ ಓಯಿತು. (ಅಜ್ಜಿ ತನ್ನ ಮನೆಯ ಅಂಗಳದಲ್ಲಿ ಅಕ್ಕಿ ಆರಿಸುತ್ತಾ ಕೂತಿತ್ತು; ಅಷ್ಟರಲ್ಲಿ ಒಂದು ಹಕ್ಕಿ ಹಾರಿಬಂದು ಒಂದು ಅಕ್ಕಿ ಕಾಳನ್ನು ಹೆಕ್ಕಿಕೊಂಡು ಹಾರಿ ಹೋಯಿತು.) (ಇದೊಂದು ವಿಪರೀತ ಉದಾಹರಣೆ, ಇಲ್ಲಿನ ಸಮಸ್ಯೆಯನ್ನು ಅರ್ಥ ಮಾಡಿಸಲು ಈ ವಾಕ್ಯವನ್ನು ಕಟ್ಟಲಾಗಿದೆ.)

ಮೂಲ ಕನ್ನಡದಲ್ಲಿ ಮಹಾಪ್ರಾಣ ಧ್ವನಿಗಳು ಇಲ್ಲದೇ ಇರುವುದೇ ಇದಕ್ಕೆ ಮೂಲ ಕಾರಣ. ವರ್ಗೀಯ ವ್ಯಂಜನಗಳಲ್ಲಿ ಬರುವ, ಖ ಘ, ಛ ಝ, ಠ ಢ, ಥ ಧ, ಫ ಭ ಇವು ಮಹಾಪ್ರಾಣಾಕ್ಷರಗಳು. ಇವುಗಳನ್ನು ಉಚ್ಚರಿಸಲು ನಾವು ಹೆಚ್ಚು ಉಸಿರನ್ನು ಬಳಸುತ್ತೇನೆ. ಅದಕ್ಕೆ ಅವುಗಳನ್ನು ‘ಮಹಾಪ್ರಾಣ’ ಎನ್ನುತ್ತೇವೆ. ಇಲ್ಲಿ ಪ್ರಾಣ ಎಂದರೆ ಉಸಿರು.

ಮಹಾಪ್ರಾಣದ ಅಕ್ಷರಗಳು ಮುಖ್ಯವಾಗಿ ಸಂಸ್ಕೃತ ಭಾಷೆಯಿಂದ ಎರವಲು ಪಡೆದ ಶಬ್ದಗಳಲ್ಲಿ ಇರುತ್ತವೆ. ಕನ್ನಡದ ಮನೆ ಮಾತಿನ ಆಡುಭಾಷೆಯಲ್ಲಿ ಇಂಥ ಎರವಲು ಪದಗಳನ್ನು ಬಳಸುವುದಿಲ್ಲ. ಬಳಸಿದರೂ ತದ್ಭವ ಮಾಡಿಕೊಂಡು ಅಲ್ಪಪ್ರಾಣ ಮಾಡಿಕೊಂಡು ಬಳಸುತ್ತೇವೆ. ಈ ಅಭ್ಯಾಸ ಮುಖ್ಯವಾಗಿ ಹಳೆಯ ಮೈಸೂರಿನ ಪ್ರದೇಶದ ಹುಟ್ಟಾ ಕನ್ನಡ ಮಾತೃಭಾಷೀಯ ಜನರ ಮಾತಿನಲ್ಲಿ ಕಂಡುಬರುತ್ತದೆ. ಇದನ್ನೇ ಅನುಸರಿಸಿ ಅವರ್ಗೀಯ ವ್ಯಂಜನವಾದ ‘ಹ’ ಕೂಡ ‘ಅ’ ಎಂಬಂತೆ ಉಚ್ಚಾರವಾಗುತ್ತದೆ, ಉದಾ: ಆಲು, ಅಲವಾರು, ಅಪ್ಪಳ, ಇಡಿತ, ಈಯಾಳಿಸು, ಐನುಗಾರಿಕೆ ಇತ್ಯಾದಿ.

ಪರಿಸರದ ಪಾಠ

ಮನೆಯ ಪರಿಸರದಲ್ಲಿ ಮಾತಾಡಿಕೊಳ್ಳುವ ಕನ್ನಡದಲ್ಲಿ ಸಾಮಾನ್ಯವಾಗಿ ಮಹಾಪ್ರಾಣ ಧ್ವನಿಗಳು ಇರುವುದಿಲ್ಲ. ಮಕ್ಕಳು ಈ ಪರಿಸರದಿಂದ ಅಂಥದೇ ಮಾತನ್ನು ಕಲಿಯುತ್ತವೆ. ಐದು ವರ್ಷದ ಹೊತ್ತಿಗೆ ಮಕ್ಕಳು ತಮ್ಮ ಕುಟುಂಬದ ಭಾಷಾ ಸಾಮರ್ಥ್ಯದ ಸುಮಾರು 90%ರಷ್ಟನ್ನು ಗಳಿಸಿಕೊಂಡಿರುತ್ತಾರೆ ಎಂದು ಹೇಳುತ್ತಾರೆ ಮನೋಭಾಷಾವಿಜ್ಞಾನಿಗಳು. ಶಾಲೆಗೆ ಬಂದಾಗ ಈ ಅಭ್ಯಾಸವು ಮುಂದುವರೆಯುತ್ತದೆ.

ಶಾಲೆಗೆ ಬಂದನಂತರ ಮಕ್ಕಳು ಶಾಲಾ ಕನ್ನಡ ಅಥವಾ ಗ್ರಂಥಸ್ಥ ಕನ್ನಡವನ್ನು ಕಲಿಯಬೇಕು. ವರ್ಗೀಯ ವ್ಯಂಜನಗಳ ಮಹಾಪ್ರಾಣಗಳನ್ನು, ಅ-ಹ ವ್ಯತ್ಯಾಸಗಳನ್ನು, ಸಂಸ್ಕೃತ ಸ್ವರವಾದ ‘ಋ’ ಮತ್ತು ಅದರ ಕಾಗುಣಿತವನ್ನು (ಕೃ, ಸೃ, ಪೃ, ಹೃ ಇತ್ಯಾದಿ) ಸರಿಯಾಗಿ ಉಚ್ಚರಿಸುವುದನ್ನು ಕಲಿಯಬೇಕು. ಬರಹದಲ್ಲಿ ಅವುಗಳನ್ನು ಸರಿಯಾಗಿ ಬರೆಯಬೇಕು ಎಂದರೆ ಮೂಲದಲ್ಲಿ ಉಚ್ಚಾರಣೆಯೇ ಸರಿಯಾಗಿರಬೇಕಾಗುತ್ತದೆ. ಕನ್ನಡದಲ್ಲಿ ಉಚ್ಚರಿಸಿದಂತೆಯೇ ಬರೆಯುತ್ತೇವೆ, ಬರೆದಿರುವಂತೆಯೇ ಓದುತ್ತೇವೆ.

ಇದನ್ನೂ ಓದಿ ಕೊರೋನಾ ʼಮಹಾಮಾರಿʼ ಅಲ್ಲ; ರೂಪಾಂತರಿ ವೈರಸ್ ಅಪಾಯಕಾರಿಯಾಗಿಲ್ಲ- ವೈದ್ಯರ ಸ್ಪಷ್ಟನೆ

ಕೆಲವು ದಿನ ಶಾಲೆಯಲ್ಲಿ ಇಂಥ ಅಭ್ಯಾಸಗಳನ್ನು ಗಮನಿಸಿ, ಅವುಗಳನ್ನು ಅನಾಯಾಸ ತಿದ್ದುವ ಪ್ರಯತ್ನ ಮಾಡಬೇಕು. ಆದರೂ, ಒತ್ತಾಯಪೂರ್ವಕವಾಗಿ, ಒಬ್ಬೊಬ್ಬ ವಿದ್ಯಾರ್ಥಿ/ನಿಯನ್ನು ಗುರಿಯಾಗಿಸಿಕೊಂಡು, ಎದ್ದುನಿಲ್ಲಿಸಿ ತಿದ್ದುವುದನ್ನು ಖಂಡಿತ ಮಾಡಬಾರದು. ಇದು ಮಕ್ಕಳಲ್ಲಿ ಇದ್ದಬದ್ದ ಆತ್ಮವಿಶ್ವಾಸವನ್ನೂ ಕುಂದಿಸುತ್ತದೆ. ಇದೇ ಹೆಚ್ಚಾದರೆ ಅವರು ಕನ್ನಡ ಕಲಿಯುವುದಿರಲಿ, ಶಾಲೆಯಿಂದಲೇ ದೂರ ಉಳಿಯಬಹುದು.

ಇಲ್ಲಿ ಇನ್ನೂ ದೊಡ್ಡ ಸಮಸ್ಯೆ ಎಂದರೆ ಕಲಿಸುವ ಶಿಕ್ಷಕರಲ್ಲಿಯೇ ಕೆಲವರಿಗೆ ಮಹಾಪ್ರಾಣ ಉಚ್ಚಾರ ಸರಿಯಾಗಿ ಬಾರದೇ ಇರುವುದು. ಹೀಗೇನಾದರೂ ಆದರೆ ಉಚ್ಚಾರಣೆಯ ಸಮಸ್ಯೆಯು ಮುಂದುವರೆದುಕೊಂಡು ಹೋಗುತ್ತದೆ. ಆದ್ದರಿಂದ ಶಿಕ್ಷಕರು ತಮ್ಮ ಸಹೋದ್ಯೋಗಿಗಳ ನೆರವು ಪಡೆದು ತಮ್ಮ ಉಚ್ಚಾರಣೆಯನ್ನು ಸುಧಾರಿಸಿಕೊಳ್ಳಬೇಕು. ಆಸಕ್ತಿ ಇದ್ದರೆ ನಾನು ಬರೆದಿರುವ, ನವಕರ್ನಾಟಕ ಪ್ರಕಾಶನವು ಪ್ರಕಟಿಸಿರುವ ‘ನಿಮ್ಮ ಉಚ್ಚಾರಣೆ ಮತ್ತು ಧ್ವನಿಯನ್ನು ಸುಧಾರಿಸಿಕೊಳ್ಳಿ’ ಎಂಬ ಪುಸ್ತಕವನ್ನು ಅಧ್ಯಯನಿಸಬಹುದು.

WhatsApp Image 2025 05 26 at 10.50.54 AM5
ಪ್ರೊ ಅಬ್ದುಲ್ ರೆಹಮಾನ್ ಪಾಷಾ
ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
+ posts

ಹಿರಿಯ ಭಾಷಾ ವಿಜ್ಞಾನಿ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
ಹಿರಿಯ ಭಾಷಾ ವಿಜ್ಞಾನಿ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನಯಾನ | ಸನಾತನ ಧರ್ಮವು ಶರಣ ಧರ್ಮಕ್ಕೆ ಶರಣಾಗತವಾಗಿದೆ

ಶರಣರು ಸನಾತನ ಬ್ರಾಹ್ಮಣ ಧರ್ಮದ ಷಡ್ದರ್ಶನ ಪರಿಕಲ್ಪನೆಯನ್ನು ಹಾಗೂ ಸಮಯಾದಿ ಶೈವಗಳೆಲ್ಲವನ್ನು...

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

Download Eedina App Android / iOS

X