ಸಂಶೋಧನೆಗೆ ಅಗತ್ಯ ಸಾಮಗ್ರಿ, ಸಹಾಯಕರು ಇತ್ಯಾದಿ ಬೆಂಬಲವಿಲ್ಲದೆ ನಡೆಸಿದ ತಪಸ್ಸಿಗಾಗಿ ಲಕ್ಷ್ಮಣಯ್ಯ ಕೀರ್ತಿಯನ್ನು ಆಶಿಸಲಿಲ್ಲ. ಹಣ ಸಂಪಾದಿಸುವ ವಣಿಕ ವಿಜ್ಞಾನಿಗಳ ಗುಂಪಿಗೆ ಸೇರಲಿಲ್ಲ. ವಿದೇಶ ವ್ಯಾಸಂಗದ ಆಮಿಷಕ್ಕೂ ಬಲಿಯಾಗಲಿಲ್ಲ. ರಾಗಿಯ ಅಂತರಂಗವನ್ನು ಹೊಕ್ಕು ಅದರ ಗುಣಾವಗುಣಗಳನ್ನು ಅರಿತು ಮೌನ ಕ್ರಾಂತಿಯ ಹರಿಕಾರರಾದರು, ರಾಗಿ ಲಕ್ಷ್ಮಣಯ್ಯರೆಂದು ಲೋಕಖ್ಯಾತಿ ಗಳಿಸಿದರು.
ರಾಗಿ ಲಕ್ಷ್ಮಣಯ್ಯ ಅವರನ್ನು ಮೊದಲು ನೋಡಿದ್ದು ನಮ್ಮ ಶೈಕ್ಷಣಿಕ ಅಧ್ಯಯನ ಪ್ರವಾಸದ ಅಂಗವಾಗಿ ಮಂಡ್ಯದ ವಿ.ಸಿ.ಫಾರಂಗೆ ಭೇಟಿ ನೀಡಿದಾಗ, 1978ರಲ್ಲಿ. ಆಗ ನಾವು ಕೃಷಿ ಪದವಿಯ ಮೂರನೇ ವರ್ಷದಲ್ಲಿದ್ದೆವು. ರಾಜ್ಯದ ನಾನಾ ಕೃಷಿ ಸಂಶೋಧನಾ ಸಂಸ್ಥೆಗಳಿಗೆ, ಕ್ಷೇತ್ರಗಳಿಗೆ ಭೇಟಿ ನೀಡಿ ಕಲಿಯುವುದು ಕಡ್ಡಾಯವಾಗಿತ್ತು. ಪ್ರವಾಸದಲ್ಲಿ ನಮ್ಮ ಮೂಲ ಉದ್ದೇಶವಾದ ಸಂಶೋಧನಾ ತಾಣಗಳಿಗೆ ಭೇಟಿ ನೀಡುವುದರ ಜೋತೆಗೆ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಅವಕಾಶವನ್ನು ಕಲ್ಪಿಸುತ್ತಿತ್ತು. ನಮಗೆ ಎರಡನೆಯದೇ ಹೆಚ್ಚು ಆಕರ್ಷಣೆಯಾಗಿತ್ತು. ಬೆಂಗಳೂರಿನಿಂದ ಹೊರಟ ನಮ್ಮ ತಂಡ ಮೊದಲು ಭೇಟಿ ನೀಡಿದ್ದು ಮಂಡ್ಯದ ವಿ.ಸಿ.ಫಾರಂಗೆ. ಅದು ರಾಗಿ ಮತ್ತು ಭತ್ತದ ತಳಿಗಳ ಸಂಶೋಧನೆಗೆ ಹೆಸರುವಾಸಿಯಾಗಿತ್ತು. ಕೃಷಿ ವಿಶ್ವವಿದ್ಯಾಲಯದ ಪ್ರಮುಖ ಸಂಶೋಧನಾ ಕ್ಷೇತ್ರಗಳಲ್ಲೊಂದಾದ ಮಂಡ್ಯದ ವಿ.ಸಿ ಫಾರಂಗೆ ಬಂದಿಳಿದಾಗ ಎದುರುಗೊಂಡವರು ಅಷ್ಟೇನೂ ಆಕರ್ಷಕವಲ್ಲದ ವ್ಯಕ್ತಿ. ಅವರು ತಮ್ಮನ್ನು ಲಕ್ಷ್ಮಣಯ್ಯ ಎಂದು ಪರಿಚಯಿಸಿಕೊಂಡು ರಾಗಿಯ ವಿವಿಧ ತಳಿಗಳನ್ನು ತೋರಿಸುತ್ತ ಅವುಗಳ ಗುಣಗಳ ಬಗ್ಗೆ ಹೇಳುತ್ತಾ ಹೋದರು. ನಾವೆಲ್ಲ ಯಾಂತ್ರಿಕವಾಗಿ ಟಿಪ್ಪಣಿ ಬರೆದುಕೊಂಡೆವೇ ಹೋರತು ಆ ವ್ಯಕ್ತಿಯ ಬಗ್ಗೆ ಕುತೂಹಲ ಮೂಡಲೇ ಇಲ್ಲ. ನಮಗೆ ಮೈಸೂರು ತಲುಪುವ ಹಂಬಲ. ಆದರೆ ಅವರನ್ನು ಮೊದಲು ನೋಡಿದ ಒಂಬತ್ತು ವರ್ಷದ ನಂತರ ಭೇಟಿಯಾದ ಸಂದರ್ಭದಲ್ಲಿ ನಾನು ಉತ್ಸುಕನಾಗಿದ್ದೆ. ವಿಚಿತ್ರವಾದ ತಳಮಳದಲ್ಲಿದ್ದೆ. ಅವರನ್ನು ಮೊದಲು ಸಂಧಿಸಿದಾಗ ಕುತೂಹಲದಿಂದ ನೋಡುವ ಯಾವ ಒತ್ತಡಗಳೂ ನನಗಿರಲಿಲ್ಲ. ಆದರೆ ಎರಡನೆಯ ಬಾರಿ ಅವರನ್ನು ನೋಡುವ, ಮಾತನಾಡುವ ತವಕದಿಂದ ಹೋದೆ. ಎರಡು ಭೇಟಿಯ ಸಂದರ್ಭಗಳು ವಿಭಿನ್ನವಾಗಿದ್ದವು.
ಅದು 1987. ಆ ವೇಳೆಗೆ ಕೃಷಿ ಪದವಿ ಮುಗಿಸಿ ಪತ್ರಕರ್ತನಾಗಿ ‘ಪ್ರಜಾವಾಣಿ’ಯಲ್ಲಿ ವೃತ್ತಿ ಬದುಕು ಆರಂಭಿಸಿ ನಂತರ ‘ಮುಂಗಾರು’ ಪತ್ರಿಕೆ ಸೇರಿ ಆ ಪ್ರಯೋಗಾಲಯದಿಂದ ಹೊರಬಂದು ಸರ್ಕಾರಿ ನೌಕರಿ ಹಿಡಿದು ಎರಡು ವರ್ಷಗಳಾಗಿದ್ದವು. ಗೆಳೆಯರು ‘ಸುದ್ದಿ ಸಂಗಾತಿ’ ವಾರಪತ್ರಿಕೆಯನ್ನು ಆರಂಭಿಸಿದ್ದರು. ಅದಕ್ಕೆ ನಿಯತವಾಗಿ ಬರೆಯುತ್ತಿದ್ದೆ. ಒಂದು ದಿನ ದೇವನೂರ ಮಹಾದೇವ ಅವರು ಕರೆ ಮಾಡಿ ‘…ಸಂಗಾತಿ’ಗೆ ರಾಗಿ ಲಕ್ಷ್ಮಣಯ್ಯ ಅವರ ಬಗ್ಗೆ ವಿಶೇಷ ಲೇಖನ ಬರೆಯಿರಿ. ಅವರು ಮಧ್ಯಾಹ್ನ ‘…ಸಂಗಾತಿ’ ಕಚೇರಿಯ ಹತ್ತಿರ ಸಿಗುತ್ತಾರೆ ಎಂದು ಹೇಳಿದರು. ತಮ್ಮ ವೃತ್ತಿ ಬದುಕಿನಿಂದ ಮುಕ್ತರಾಗಿದ್ದ ಲಕ್ಷ್ಮಣಯ್ಯ ಅವರ ಅನುಭವವನ್ನು ಕೃಷಿ ಮಂತ್ರಿಗಳಾಗಿದ್ದ ಎಂ.ಪಿ.ಪ್ರಕಾಶ್ ಅವರು ಬಳಸಿಕೊಳ್ಳುವ ಇಚ್ಛೆ ವ್ಯಕ್ತಪಡಿಸಿದ್ದರಂತೆ. ಅದಕ್ಕಾಗಿ ಲಕ್ಷ್ಮಣಯ್ಯ ಬೆಂಗಳೂರಿಗೆ ಬಂದಿದ್ದರು.
ನಿಗದಿಯಾದ ಸಮಯಕ್ಕೆ ತಲುಪಲು ವಿಜಯನಗರದಲ್ಲಿದ್ದ ‘…ಸಂಗಾತಿ’ ಕಚೇರಿಗೆ ಶಿವಾಜಿನಗರದಿಂದ ಬಸ್ ಹಿಡಿದು ಹೊರಟೆ. ನನಗೆ ಹಿಂದೆ ನೋಡಿದ್ದ ಲಕ್ಷ್ಮಣಯ್ಯ ಅವರ ಯಾವ ಚಹರೆಯೂ ನೆನಪಿನಲ್ಲಿ ಉಳಿದಿರಲಿಲ್ಲ. ಆದರೆ ಅವರ ಹೆಸರಿಗೆ ಅಂಟಿಕೊಂಡಿದ್ದ ರಾಗಿಯ ವಿವಿದ ಚಿತ್ರಗಳು ಸುಳಿಯಲಾರಂಭಿಸಿದವು. 1964ರಿಂದ 1970ರವರೆಗಿನ ಅವಧಿ ಅತ್ಯಂತ ಸಂಕಷ್ಟದ ದಿನಗಳು. ಭೀಕರ ಬರಗಾಲ. ಚಿಕ್ಕವನಾದರೂ ಅದರ ಅಮಾನುಷತೆಯ ಪರಿಚಯವಾಗಿತ್ತು. ಬರಗಾಲದ ಭೀಕರತೆಯನ್ನು ಕಂಡ ನಮ್ಮ ಸಂಸಾರ ಕೊನೆಯ ದಾರಿಯಾಗಿ ಬೇರೊಂದು ಅಪರಿಚಿತ ಪ್ರದೇಶಕ್ಕೆ ವಲಸೆ ಬಂತು. ಮೂರನೇ ತರಗತಿಯಲ್ಲಿ ಕಲಿಯುತ್ತಿದ್ದ ನಾನು ನಮ್ಮ ಸಂಸಾರದ ಜೊತೆಯಲ್ಲೇ ಬಂದೆ. ನಮ್ಮ ಪ್ರಧಾನ ಆಹಾರ ರಾಗಿಯಾದರೂ ದೊರೆಯುವುದು ದುರ್ಲಭವಾಗಿತ್ತು. ಸರ್ಕಾರ ಮೆಕ್ಕೆ ಜೋಳವನ್ನು ಪರಿಚಯಿಸಿತ್ತು. ಅದರಲ್ಲಿ ಹಿಟ್ಟು ಮಾಡಲು ಬರುತ್ತಿಲಿಲ್ಲ. ಉಪ್ಪಿಟ್ಟು ಮಾಡಲು ಈರುಳ್ಳಿ, ಎಣ್ಣೆ ಇತ್ಯಾದಿ ದುಬಾರಿ ಪರಿಕರಗಳನ್ನು ಕೊಳ್ಳಲು ಸಾಧ್ಯವಾಗದ ಮಾತು. ಗಂಜಿ ಕಾಯಿಸಿ ಉಪ್ಪು ಸೇರಿಸಿ ಕಡಿಯುವುದೊಂದೇ ಉಳಿದಿದ್ದ ದಾರಿ. ಇದರ ಜೊತೆಗೆ ರೂಪಾಯಿಗೆ ಐದು ಸೇರು ಸಿಗುವ ‘ಆಟಾ ಹಿಟ್ಟು’ ಮಾರುಕಟ್ಟೆಗೆ ಬಂತು. (ಅದು ಕೇರಳದಿಂದ ಬರುತ್ತಿದ್ದ ನೆಲಗೆಣಸಿನ ಹಿಟ್ಟು ಎಂದು ತಿಳಿದದ್ದು ದಶಕದ ನಂತರ). ನೋಡಲು ಸಿಮೆಂಟಿನ ಹುಡಿಯಂತೆ ಕಾಣುತ್ತಿದ್ದ ಆಟಾ ನೂರು ಸೇರಿನ ಚೀಲವನ್ನು ನನ್ನಂತಹ ಬಾಲಕನೊಬ್ಬ ಹೊರಬಹುದಿತ್ತು. ಅದರಿಂದ ಹಿಟ್ಟು ತೊಲಸಿ ಮುದ್ದೆ ಕಟ್ಟವುದು ಆಗದ ಮಾತಾಗಿತ್ತು. ಎಷ್ಟು ಹಿಟ್ಟು ತುಂಬಿದರೂ ಮುದ್ದೆ ಗಟ್ಟಿಯಾಗುತ್ತಿರಲಿಲ್ಲ. ಎಲ್ಲೋ ಒಂದೆರಡು ನಿಲ್ಧಾಣಗಳಲ್ಲಿ ನಿಂತು ತನ್ನ ಕೊನೆಯ ಸ್ಟೇಷನ್ ತಲುಪುವ ಎಕ್ಸ್ ಪ್ರೆಸ್ ರೈಲಿನಂತೆ ಊಟ ಮಾಡಿದ ಅರೆಗಳಿಗೆಯಲ್ಲೇ ಅದು ವಿಸರ್ಜನೆಯಾಗುತ್ತಿತ್ತು. ಇಂಥ ಭಯಾನಕ ಪರಿಸ್ಥಿತಿಯಲ್ಲಿ ರಾಗಿಯ ಹಿಟ್ಟಿನ ನೆನಪೇ ಹೊಟ್ಟೆಯಲ್ಲಿ ಹಸಿವಿನ ಬೆಂಕಿ ಹೊತ್ತಿಸುತ್ತಿತ್ತು. ಅದೊಂದು ಅಮೂಲ್ಯ ಆಹಾರ ಪದಾರ್ಥವಾಗಿತ್ತು.
ಇದನ್ನು ಓದಿದ್ದೀರಾ?: 60 ದಿನವಾದರೂ ವಿಪಕ್ಷ ನಾಯಕನ ಆಯ್ಕೆ ಇಲ್ಲ: ಬಸವಳಿದ ರಾಜ್ಯ ಬಿಜೆಪಿ; ಆಸ್ಥೆ ತೋರದ ಮೋದಿ-ಶಾ
ಇಂತಹ ಸನ್ನಿವೇಶದಲ್ಲಿ ನಾವೊಂದು ವಿಚಿತ್ರವನ್ನು ನೋಡಿದೆವು. ನಾವು ಮಾಧ್ಯಮಿಕ ಶಾಲೆಗೆ ನಾಲ್ಕು ಕಿ.ಮೀ. ನಡೆದೇ ಹೋಗಬೇಕಿತ್ತು. ದಾರಿಯಲ್ಲೊಂದು ಕಪಿಲೆಬಾವಿ. ನಮ್ಮ ದಾಹ ತಣಿಸುವ ಮೂಲ. ತೋಟದ ಮಾಲೀಕ ರೇಷ್ಮೆ ಬೆಳೆ ಇಡುತ್ತಿದ್ದರು, ಉಪ್ಪುನೇರಳೆ ಸೊಂಪಾಗಿ ಬೆಳೆಯುತ್ತಿತ್ತು. ಆ ವರ್ಷ ಒಂದೆಡೆ ಅವರು ರಾಗಿ ಪೈರು ನಾಟಿ ಮಾಡಿ ನೀರು ಹಾಯಿಸುತ್ತಿದ್ದರು. ಬೇರೆ ರಾಗಿ ತಳಿಗಳಿಗಿಂತ ಇವು ದಪ್ಪ ತೆಂಡೆಯನ್ನು ಹೊಡೆದವು. ರಾಗಿ ಕಡ್ಡಿ ಪ್ರಾಯಸ್ಥನ ಬೆರಳಿನಷ್ಟು ದಪ್ಪ ಮತ್ತು ಗಟ್ಟಿಯಾಗಿರುವುದು ಕಂಡು ವಿಚಿತ್ರವೆನಿಸಿತು. ಗರಿಗಳೂ ಅದಕ್ಕೆ ತಕ್ಕ ಪ್ರಮಾಣದಲ್ಲಿ ಅಗಲ-ಉದ್ದವಾಗಿದ್ದವು. ನೋಡು ನೋಡುತ್ತಿದ್ದಂತೆ ಐದು ಅಡಿಯ ಬಾಲಕರು ರಾಗಿ ಪಾತಿಯಲ್ಲಿ ಸುಲಭವಾಗಿ ಅಡಗಿಕೊಳ್ಳುವಷ್ಟು ಎತ್ತರಕ್ಕೆ ಬೆಳೆದವು. ವಡೆ ಹೊಡೆಯುವ ಕಾಲ ಇನ್ನೂ ಅಚ್ಚರಿ ತಂದಿತ್ತು. ಅದರ ತೆನೆಯ ಇಲುಕುಗಳು ಅದುವರೆವಿಗೂ ನಾವ್ಯಾರೂ ನೋಡದಷ್ಟು ತೋರವಾಗಿದ್ದವು. ಕಾಳುಗಳು ಸಾಂಪ್ರದಾಯಿಕ ರಾಗಿ ಮತ್ತು ಜೋಳದ ಕಾಳುಗಳ ಮಧ್ಯಸ್ಥರೂಪಿಯಂತಿದ್ದವು. ನಮ್ಮ ಅಚ್ಚರಿ ಕಂಡ ಮಾಲೀಕ ಅದು ‘ಇಂಡಾಪು’ ತಳಿಯೆಂದು ತಾಲೂಕು ಕೃಷಿ ಅಧಿಕಾರಿಯ ಪ್ರೇರಣೆಯಿಂದ ಬೆಳೆಯುತ್ತಿದ್ಧೇನೆಂದು, ಇಳುವರಿ ನಾವ್ಯಾರೂ ಊಹಿಸದಷ್ಟು ಹೆಚ್ಚು ಬರುತ್ತದೆಂದು ಕಣಜ ತುಂಬುವ ಮಾತನಾಡಿದ್ದ. ನಮಗೆ ಇಂಡಾಫ್ ರಾಗಿಯ ತಳಿ ದರ್ಶನ ನೀಡಿದ್ದು ರಾಗಿ ಹಿಟ್ಟು ತುಟ್ಟಿಯೂ, ಅಪರೂಪವೂ ಆಗಿದ್ದ ಸಂಕಷ್ಟದ ಸ್ಥಿತಿಯಲ್ಲಿ. ಆನಂತರದ್ದು ಇತಿಹಾಸ. ಇದನ್ನು ನೆನಪು ಮಾಡಿಕೊಂಡೇ ಅದರ ಜನಕನನ್ನು ಭೇಟಿ ಮಾಡಲು ಹೋಗುತ್ತಿದ್ದ ನನಗೆ ಕುತೂಹಲ, ತಳಮಳ ಶುರುವಾಗಿತ್ತು. ಆದರೆ ನಾನು ಮೊದಲು ಅವರನ್ನು ಭೇಟಿಯಾದಾಗ ಇವೆಲ್ಲ ಯಾಕೆ ಆಗ ಕಾಡಿಸಲಿಲ್ಲ ಎಂಬುದು ಮಾತ್ರ ತಿಳಿದಿಲ್ಲ. ತುಸು ದೀರ್ಘವಾದರೂ ನನ್ನ ಬಾಲ್ಯದ ಅನುಭವಗಳನ್ನು ನಿರೂಪಿಸಲು ಕಾರಣ- ಅದು ಲಕ್ಷ್ಮಣಯ್ಯ ಅವರ ಸಂಶೋಧನೆಯ ಮಹತ್ವವನ್ನು ಗುರುತಿಸುವ ಸಾಧನವೆಂದು ಭಾವಿಸಿರುವುದು.

‘…ಸಂಗಾತಿ’ ಕಚೇರಿಯಲ್ಲಿದ್ದ ಲಕ್ಷ್ಮಣಯ್ಯ ಅವರನ್ನು ಭೇಟಿಯಾದಾಗ ಅಷ್ಟೊಂದು ಸರಳವಾಗಿರುತ್ತಾರೆಂದು ಭಾವಿಸಿರಲಿಲ್ಲ. ನಾನು ಅವರಿಗೆ ಬಹಳ ಹಿಂದೆಯೇ ಪರಿಚಯವಾದವನೆಂಬ ರೀತಿಯಲ್ಲಿ ಮಾತಿಗೆ ತೊಡಗಿದರು. ನಾನೂ ಕೃಷಿ ಪದವೀಧರ ಎಂಬುದು ಅವರ ಪ್ರೀತಿಗೆ ಮತ್ತೊಂದು ಕಾರಣವಾಗಿತ್ತು. ನನ್ನ ಜೊತೆ ಕೃಷಿ ವಿಜ್ಞಾನದ ವಿಷಯಗಳನ್ನು ಸುಲಭವಾಗಿ ಮಾತನಾಡಬಹುದಿತ್ತು. ಹಾಗಾಗಿ ಅವರು ತಮ್ಮ ಬದುಕಿನ ಪಯಣವನ್ನು, ಸಂಶೋಧನೆಯ ಮಜಲುಗಳನ್ನು ಹೇಳುತ್ತಾ ಹೋದರು . ಅದನ್ನು “…ಸಂಗಾತಿ”ಯಲ್ಲಿ ನಂತರ ಅವರು ನಿಧನರಾದ ಸಂದರ್ಭದಲ್ಲಿ ‘ಪ್ರಜಾವಾಣಿ’ ಪತ್ರಿಕೆಗೆ ಲೇಖನಗಳನ್ನು ಬರೆದೆ. ಪ್ರಾಯಶಃ ಸಂಗಾತಿಯಲ್ಲಿ ಬಂದ ಲೇಖನವೇ ಅವರ ವ್ಯಕಿತ್ವವನ್ನು ಸಮಗ್ರ ಕನ್ನಡಿಗರಿಗೆ ಪರಿಚಯಿಸಿದ ಮೊದಲ ಲೇಖನವಿರಬಹುದು. ಆ ಲೇಖನಕ್ಕೆ ಬಂದ ಅಪೂರ್ವ ಪ್ರತಿಕ್ರಿಯೆಯನ್ನು ಕಂಡು ಕನ್ನಡಿಗರು ತಮ್ಮ ಹಸಿವನ್ನು ನೀಗಿಸಿದ ಮಹಾನ್ ವ್ಯಕ್ತಿಯನ್ನು ತಿಳಿಯಲು ಇಷ್ಟು ಕಾಲ ಬೇಕಾಯಿತೇ ಎಂದು ಓದುಗನೊಬ್ಬ ಬರೆದ ಪತ್ರದ ಸಾಲುಗಳು ಇನ್ನೂ ನೆನಪಲ್ಲಿ ಹಸಿರಾಗಿವೆ. ಆ ಎರಡು ಲೇಖನಗಳನ್ನು ಆಧರಿಸಿ ಬರೆದ ಅವರ ನುಡಿ ಚಿತ್ರ ಇಲ್ಲಿದೆ
***
ರಾಗಿತಜ್ಞ ಲಕ್ಷ್ಮಣಯ್ಯನವರು 1982ರಲ್ಲಿ ಕೃಷಿ ಸಂಶೋಧನೆಯಿಂದ ‘ಅಧಿಕೃತ’ವಾಗಿ ನಿವೃತ್ತರಾದರು. ಸಂಶೋಧನೆಯ ಜಗತ್ತಿನಿಂದ ಹೊರಬಂದ ಲಕ್ಷ್ಮಣಯ್ಯ ಗೊಂದಲದಲ್ಲಿ ಬಿದ್ದರು. ಆಗ ತಾನೇ ಬೇಸಾಯದ ಬದುಕು ಬಿಟ್ಟ ಮಣ್ಣಿನ ಮಗನಂತೆ. ಆದರೆ ಮಣ್ಣಿನ ನಂಟನ್ನು ಬಿಡಿಸಿಕೊಳ್ಳಲಾಗದ ದಿಕ್ಕುತಪ್ಪಿದ ಭಾವುಕ ರೈತನಂತಿದ್ದರು. ಹೀಗೆ ಕೊನೆಯವರೆವಿಗೂ ಇದ್ದ ಲಕ್ಷ್ಮಣಯ್ಯ ನಮ್ಮ ನಡುವೆ ಹಿತ್ತಲಗಿಡವಾಗಿದ್ದರು. ಹಳೆಯ ಮೈಸೂರಿನ ಬಹುತೇಕ ಜನರ ಪ್ರಮುಖ ಧಾನ್ಯವಾಗಿದ್ದ ರಾಗಿಯ ಸಮೃದ್ಧಿಗೆ ಕಾರಣವಾಗಿ ಎಲ್ಲರ ತುತ್ತಿನ ಚೀಲವನ್ನು ತುಂಬಲು ಕಾರಣರಾಗಿದ್ದ ಲಕ್ಷ್ಮಣಯ್ಯ ಅಪರಿಚಿತರಾಗಿಯೇ ಬಹಳಷ್ಟು ಕಾಲ ಉಳಿದಿದ್ದರು. ತಾವು ರಾಗಿಯನ್ನು ಒಲಿಸಿ, ಅದನ್ನು ಮಣಿಸಿ, ಮನುಕುಲದ ಹಸಿವೆಯನ್ನು ನೀಗಿಸಿದ ಅವರ ಸಂಶೋಧನಾ ವಿಧಾನಗಳು ತಮ್ಮ ಕಣ್ಣ ಮುಂದೆಯೇ ಕುಸಿಯುತ್ತಿದ್ದರೂ ಅಸಹಾಯಕರಾಗಿದ್ದರು.
ರಾಗಿ-ಹಸುವಿನಷ್ಟೇ ಸಾತ್ವಿಕವಾದ, ಆದರೆ ಮನುಷ್ಯನಷ್ಟೇ ಸಂಕೀರ್ಣವಾದ ಬೆಳೆ. ಅದು ಎಂದಿಗೂ ಪರಕೀಯ ಪರಾಗಸ್ಪರ್ಶಕ್ಕೆ ತೆರೆದುಕೊಳ್ಳದ ಸಂಪ್ರದಾಯವಾದಿ ಬೆಳೆ. ಇದನ್ನು ಅಭಿವೃದ್ಧಿಪಡಿಸಲು 1913ರಿಂದಲೇ ಪ್ರಯೋಗಗಳು ಪ್ರಾರಂಭವಾಗಿದ್ದರೂ ಫಲಕಾರಿಯಾಗಲಿಲ್ಲ.
1948ರಲ್ಲಿ ಲಕ್ಷ್ಮಣಯ್ಯನವರು ಮಂಡ್ಯದ ವಿ.ಸಿ. ಫಾರ್ಮ್ ಗೆ(ವಿಶ್ವೇಶ್ವರಯ್ಯ ಕಾಲುವೆ ಫಾರ್ಮ್) ಕಿರಿಯ ಸಸ್ಯ ವಿಜ್ಞಾನಿಯಾಗಿ ಸೇರಿದರು. ಹಳೇ ಮೈಸೂರಿನ ಪ್ರಮುಖ ಬೆಳೆಯಾಗಿದ್ದರೂ ರಾಗಿ ಇನ್ನೂ ಉಪೇಕ್ಷೆಗೊಳಗಾಗಿದ್ದ ಬೆಳೆ. ಅದರ ಸಂಕೀರ್ಣತೆಯಿಂದಾಗಿ ಅಭಿವೃದ್ಧಿಪಡಿಸುವ ಗಂಭೀರ ಯತ್ನವನ್ನು ಯಾರೂ ಮಾಡಿರಲಿಲ್ಲ. ಆದರೆ ರಾಗಿಯ ಹೊಲದ ನಡುವೆಯೇ ಬೆಳೆದು ಬಂದಿದ್ದ ಲಕ್ಷ್ಮಣಯ್ಯನವರಿಗೆ ಅದರ ಆಕರ್ಷಣೆಯಿಂದ ಹೊರಬರಲಾಗಲಿಲ್ಲ.
ಪ್ರಪಂಚದ ಬಹುತೇಕ ಸಂಶೋಧನೆಗಳು ಅಚಾನಕವಾಗಿ ಘಟಿಸಿದಂಥವು. ಲಕ್ಷ್ಮಣಯ್ಯನವರ ವಿಷಯದಲ್ಲಿಯೂ ಹಾಗೆಯೇ ಆಯಿತು. ರಾಗಿಯ ‘ಸಂಪ್ರದಾಯವಾದಿ’ ಗುಣ ಅರಿತಿದ್ದ ಅವರು ಅದನ್ನು ಮಣಿಸಲು ಸಿದ್ಧರಾದರು. ಅನೇಕ ವರ್ಷಗಳ ತರುವಾಯ ‘ವಿಶೇಷ ಸಂಪರ್ಕ ತಂತ್ರ’ (ಸ್ಪೆಷಲ್ ಕಾಂಟ್ಯಾಕ್ಟ್ ಟೆಕ್ನಿಕ್) ಬಳಸಿ ಅದರ ಸಂಪ್ರದಾಯ ಗುಣವನ್ನು ಮುರಿದರು. ರಾಗಿ ಪರಕೀಯ ಪರಾಗಸ್ಪರ್ಶಕ್ಕೆ ತೆರೆದುಕೊಂಡಿತು. ತಕ್ಷಣ ಫಲ ನೀಡಿತು.
ಈ ಪ್ರಯತ್ನ ಫಲ ನೀಡಿದ ನಂತರ ಲಕ್ಷ್ಮಣಯ್ಯನವರಿಗೆ ರಾಗಿ ಅಭಿವೃದ್ಧಿಯ ಹೊಸ ಜಾಡೊಂದು ಕಾಣಿಸಿತು. ಆ ಜಾಡನ್ನೇ ಹಿಡಿದು ಅವರು ಸಂಶೋಧನೆ ಮುಂದುವರಿಸಿದರು.
ಯಾವುದೇ ಹೊಸತನ, ಕ್ರಿಯಾಶೀಲತೆಯನ್ನು ಟೀಕಿಸುವುದು, ಅಂಥ ಗುಣಗಳನ್ನು ರೂಢಿಸಿಕೊಂಡ ವ್ಯಕ್ತಿಯನ್ನು ನಿರುತ್ಸಾಹಗೊಳಿಸುವುದು ಈ ದೇಶದ ಮಣ್ಣಿನ ಗುಣ. ಲಕ್ಷ್ಮಣಯ್ಯನವರು ಪಾಲಿಗೂ ಈ ಟೀಕೆ, ನಿರುತ್ಸಾಹದ ಪ್ರತಿಕ್ರಿಯೆಗಳು ಹೊರತಾಗಲಿಲ್ಲ. ಎಲ್ಲಾ ಬಗೆಯ ಸಂಕುಚಿತ ಮನೋವಿಕಾರದ ವ್ಯಕ್ತಿಗಳ ಪಾಲಿಗೆ ಕಿವುಡಾದ ಲಕ್ಷ್ಮಣಯ್ಯ ಯಾರೊಬ್ಬ ಸಹಾಯಕರ ನೆರವಿಲ್ಲದೆ ಅವ್ಯಾಹತವಾಗಿ, ಏಕಾಂಗಿಯಾಗಿ ಪ್ರಯೋಗ ಮುಂದುವರೆಸಿದರು. 1951ರಿಂದ 1964ರವರೆಗೆ ಅರುಣಾ, ಉದಯ, ಅನ್ನಪೂರ್ಣ, ಕಾವೇರಿ, ಶಕ್ತಿ ಮುಂತಾದ ಸುಧಾರಿತ ದೇಶೀಯ ತಳಿಗಳು ಲಕ್ಷ್ಮಣಯ್ಯನವರ ಟಂಕಸಾಲೆಯಿಂದ ಹೊರಬಂದವು. ರಾಜ್ಯದಲ್ಲಿ ಇದರಿಂದ ರಾಗಿಯ ಇಳುವರಿ ಶೇ. 50ರಷ್ಟು ಹೆಚ್ಚಾಯಿತು.
ಈ ಯಶಸ್ಸು ಲಕ್ಷ್ಮಣಯ್ಯನವರ ಸಂಶೋಧನಾ ದಾಹವನ್ನು ತಣಿಸಲಿಲ್ಲ. ರಾಗಿಯ ಮೂಲದೇಶ ಆಫ್ರಿಕಾ ಎಂಬ ಅಂಶ ಹೊಳದದ್ದೇ ತಡ, ಆ ಮೂಲ ದೇಶದ ರಾಗಿಯ ಗುಣಗಳನ್ನು ದೇಶೀಯ ರಾಗಿಗೆ ಅಳವಡಿಸುವ ವಿಚಾರವನ್ನು ತಲೆಯಲ್ಲಿ ತುಂಬಿಕೊಂಡರು. ರಾಕ್‌ಫೆಲ್ಲರ್ ಫೌಂಡೇಷನ್ ಮೂಲಕ ಆಫ್ರಿಕಾ ರಾಗಿಯ ಬೀಜ ತರಿಸಿದರು. ಇಂಡಿಯಾ ಮತ್ತು ಆಫ್ರಿಕದ ಎರಡೂ ತಳಿಗಳ ಸಂಕರ ಪ್ರಯೋಗಗಳನ್ನು ಕೈಗೊಂಡರು. 1964ರಲ್ಲಿ ಈ ಎರಡೂ ತಳಿಗಳ ನಂತರ ‘ಇಂಡೋ-ಆಫ್ರಿಕನ್ ಬ್ರೀಡ್’ ಅಥವಾ ಈಗ ಜನಪ್ರಿಯವಾದ ಇಂಡಾಫ್-1 ತಳಿ ಬಿಡುಗಡೆ ಮಾಡಿದರು. ಅನಂತರ ಅವ್ಯಾಹತವಾಗಿ ಇಂಡಾಫ್-9ರವರೆಗೆ ಸಂಕರ ತಳಿಯ ಸರಣಿ ಬಿಡುಗಡೆಗೊಂಡವು. ವಿವಿಧ ಹವಾಮಾನ ಪ್ರದೇಶಗಳಿಗೆ ಹೋದುವ ಮತ್ತು ವಿವಿಧ ಅವಧಿಗಳ ತಳಿಗಳಿಂಧ ರೈತರಿಗೆ ಆಯ್ಕೆಗಳ ಸಾಧ್ಯತೆ ಹೆಚ್ಚಾಯಿತು.ಇದರಿಂದ ರಾಗಿಯ ಇಳುವರಿ ಶೇ. 250ರಷ್ಟು ಅಧಿಕವಾಯಿತು.
ಇದು ರಾಗಿಯ ‘ತೆನೆ’ಯ ಮರೆಯಲ್ಲಿ ‘ಲಕ್ಷ್ಮಣಯ್ಯನವರು ಮಾಡಿದ ಮಹತ್ಸಾಧನೆ’.
ರಾಗಿ ಈ ದೇಶದ ದುಡಿಮೆಯ ಜನರ ಪ್ರತೀಕ. ಈ ಸಂಸ್ಕೃತಿಯ ಪ್ರತಿನಿಧಿ. ಕಾಲಜ್ಞಾನಿ ಕನಕರಿಂದ ಹೊಗಳಿಕೆ ಪಡೆದ ‘ಕರಿ’ಬಣ್ಣದ ‘ನರೆದೆಲಗ’. 1969ರ ನಂತರ ಪಂಜಾಬ್‌ನಲ್ಲಿ ನಡೆದ ‘ಬಿಳಿ’ ಬಣ್ಣದ ಗೋಧಿಯ ಅಧಿಕ ಇಳುವರಿ ‘ಹಸಿರು ಕ್ರಾಂತಿ’ಯಾಗಿ ಗಮನ ಸೆಳೆಯಿತು. ತಳಿ ವಿಜ್ಞಾನಿ ನಾರ್ಮನ್ ಬೊರ್ಲಾಗ್ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ದಕ್ಕಿತು. ಆದರೆ ಅದಕ್ಕೂ ಹಿಂದೆ ನಡೆದ ಕಪ್ಪುಬಣ್ಣದ ರಾಗಿಯ ಅಧಿಕ ಇಳುವರಿ ‘ಮೌನ ಕ್ರಾಂತಿ’ಯಾಗಿ ಮೂಲೆ ಸೇರಿತು.
ಈ ಮೌನ ಕ್ರಾಂತಿಯ ಹರಿಕಾರ ಲಕ್ಷ್ಮಣಯ್ಯ ಮೈಸೂರು ತಾಲ್ಲೂಕಿನ ಹಾರೋಹಳ್ಳಿ ಗ್ರಾಮದ ಬಡ ದಲಿತ ರೈತ ಕುಟುಂಬದಲ್ಲಿ (15.5.1921ರಲ್ಲಿ) ಜನಿಸಿದರು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎಸ್‌ಸಿ. (1946) ಪದವಿ ಮುಗಿಸಿದರು. 1948ರಲ್ಲಿ ಮಂಡ್ಯದ ವಿ.ಸಿ. ಫಾರಂಗೆ ಕಿರಿಯ ಸಹಾಯಕ ಸಂಶೋಧನಾ ಸಸ್ಯ ವಿಜ್ಞಾನಿಯಾಗಿ ಸೇರಿ ತಮ್ಮ ಸೇವಾವಧಿಯನ್ನು ಅಲ್ಲೇ ಮುಗಿಸಿದರು. ಲಕ್ಷ್ಮಣಯ್ಯನವರು ಮಾಡಿದ್ದು ಸೇವೆ ಎನ್ನುವುದಕ್ಕಿಂತ ತಪಸ್ಸು ಎನ್ನುವುದೇ ಸೂಕ್ತ.
ಸಂಶೋಧನೆಗೆ ಅಗತ್ಯ ಸಾಮಗ್ರಿ, ಸಹಾಯಕರು ಇತ್ಯಾದಿ ಬೆಂಬಲವಿಲ್ಲದೆ ನಡೆಸಿದ ತಪಸ್ಸಿಗಾಗಿ ಲಕ್ಷ್ಮಣಯ್ಯ ಕೀರ್ತಿಯನ್ನು ಆಶಿಸಲಿಲ್ಲ. ಹಣ ಸಂಪಾದಿಸುವ ವಣಿಕ ವಿಜ್ಞಾನಿಗಳ ಗುಂಪಿಗೆ ಸೇರಲಿಲ್ಲ. ವಿ.ಸಿ. ಫಾರ್ಮ್ ನಲ್ಲಿ 12 ವರ್ಷ ಸೇವೆ ಸಲ್ಲಿಸಿದ ನಂತರ ಮೆಣಸು ಸಂಶೋಧನಾ ಅಧಿಕಾರಿಯಾಗಿ ಮುಂಬಡ್ತಿ ನೀಡಿದರೂ ಮಣಿಯದೆ ರಾಗಿಯ ಸಂಶೋಧನೆಗೇ ಅಂಟಿಕೂತರು. ವಿದೇಶ ವ್ಯಾಸಂಗದ ಆಮಿಷಕ್ಕೂ ಬಲಿಯಾಗಲಿಲ್ಲ. ಮಕ್ಕಳ ವಿದ್ಯಾಭ್ಯಾಸದ ನೆಪದಲ್ಲೂ ವಿ.ಸಿ. ಫಾರ್ಮ್ ಬಿಡಲಿಲ್ಲ. ರಾಗಿಯ ಅಂತರಂಗವನ್ನು ಹೊಕ್ಕು ಅದರ ಗುಣಾವಗುಣಗಳನ್ನು ಅರಿತು ಅಲ್ಲಿಯೇ ಸಾರ್ಥಕ್ಯ ಪಡೆದರು.
ಇಂಥ ದೇಶೀಯ, ಅಪ್ಪಟ ಮಣ್ಣಿನ ವಿಜ್ಞಾನಿಗೆ 1982ರಲ್ಲಿ ನಿವೃತ್ತಿಯಾಯಿತು. ವಿಶ್ವವಿದ್ಯಾಲಯ ಕಾಟಾಚಾರಕ್ಕೆ ಎರಡು ವರ್ಷ ಅವರ ಸೇವೆಯನ್ನು ವಿಸ್ತರಿಸಿತು. “ಆ ಎರಡು ವರ್ಷ ನನ್ನ ಜೀವನದ ಅತ್ಯಂತ ಕಹಿ ಅವಧಿ. ಅಷ್ಟು ವರ್ಷ ದುಡಿದ ನನ್ನನ್ನು ಅಧಿಕಾರಿಗಳು ಅನಗತ್ಯ ವ್ಯಕ್ತಿಯಂತೆ ಕಂಡರು. ನನ್ನ ಕಣ್ಣೆದುರೇ ಶುದ್ಧ ತಳಿಗಳು ನಾಶವಾಗುವುದನ್ನು ಕಂಡಾಗಲೂ ಅಸಹಾಯಕನಾಗಿದ್ದೆ” ಎಂದು ಲಕ್ಷ್ಮಣಯ್ಯ 1987ರಲ್ಲಿ ‘ಸಂಗಾತಿ’ಗಾಗಿ ಮಾಡಿದ ಸಂದರ್ಶನದ ಸಮಯದಲ್ಲಿ ಹೇಳಿದ್ದರು.
“ಮಾತುಬಾರದ ರಾಗಿಯನ್ನು ಅಭಿವೃದ್ಧಿಪಡಿಸುವುದು ಸುಲಭ. ಆದರೆ ಮಾತುಬಲ್ಲ ಈ ಮನುಷ್ಯರನ್ನು ಅಭಿವೃದ್ಧಿಪಡಿಸುವುದು ಬಹು ಕಷ್ಟ” ಎನ್ನುತ್ತಿದ್ದ ಲಕ್ಷ್ಮಣಯ್ಯನವರು ರಾಜ್ಯದಲ್ಲಿ ರಾಗಿ ಬೆಳೆಯ ವಿನ್ಯಾಸವೊಂದನ್ನು ರೂಪಿಸಿದ್ದರು. ಕರ್ನಾಟಕದಲ್ಲಿ ರಾಗಿ ಬೆಳೆಯುವ ವಿವಿಧ ಪ್ರದೇಶಗಳ ಹವಾಮಾನ, ಮಳೆ ವಿನ್ಯಾಸ ಮತ್ತು ನೀರಾವರಿ ಲಭ್ಯತೆಯನ್ನು ಆಧರಿಸಿ ಈ ಬೆಲೆ ವಿನ್ಯಾಸವನ್ನು ಅವರು ರೂಪಿಸುತ್ತಿದ್ದರು. ಇದರಿಂದ ಕೆಲವೇ ಪ್ರದೇಶಗಳಲ್ಲಿ ರಾಜ್ಯಕ್ಕೆ ಅಗತ್ಯವಾದಷ್ಟು ರಾಗಿಯನ್ನು ಬೆಳೆಯಬಹುದೆಂದು ಅಂದಾಜಿಸಿದ್ದರು. ಆ ಮೂಲಕ ಲಭ್ಯವಾಗುವ ಭೂಮಿಯಲ್ಲಿ ಇತರೆ ಬೆಳೆಗಳಿಗೆ ಅವಕಾಶ ದಕ್ಕುತ್ತಿತ್ತು. ಆಗ ಅಧಿಕಾರದಲ್ಲಿದ್ದ ಕೇಂದ್ರ ರಾಜಕೀಯ ನಾಯಕರು ಈ ಬಗ್ಗೆ ಆಸಕ್ತಿ ತೋರಿಸಿದ್ದರು. ಅವರ ಸಂಶೋಧನೆ ಮುಂದುವರಿಕೆಗೆ ಆಶ್ವಾಸನೆ ಸಹ ನೀಡಿದ್ದರು. ಆ ನಂತರ ಕೃಷಿ ಸಚಿವ ಎಂ.ಪಿ.ಪ್ರಕಾಶ್ ಅವರೂ ಸಹ ಇವರ ಅನುಭವವನ್ನು ಸೂಕ್ತವಾಗಿ ಬಳಸಿಕೊಳ್ಳುವ ಇಚ್ಛೆ ವ್ಯಕ್ತಪಡಿಸಿದ್ದರು. ಯಾವುದೂ ಫಲಕಾರಿಯಾಗಲಿಲ್ಲ.
ಲಕ್ಷ್ಮಣಯ್ಯನವರ ಸಂಶೋಧನೆ ವಿಶಿಷ್ಟವಾದದ್ದು. ಪ್ರಯೋಗಕ್ಕೆ ಮಣಿಯದ ರಾಗಿಯನ್ನು ಬಗ್ಗಿಸಿ ದಶಕಗಳ ಕಾಲ ಏಕಾಂಗಿಯಾಗಿ ಹೋರಾಡಿ ಹೊಸ ಹೊಸ ಅಧಿಕ ಇಳುವರಿಯ ತಳಿ ಶೋಧಿಸಿದ ಅವರು ಅಜ್ಞಾತರಾಗಿಯೇ ಉಳಿದರು. ಈ ಬಗ್ಗೆ 1987ರಲ್ಲಿ ‘…ಸಂಗಾತಿ’ ಪತ್ರಿಕೆಯಲ್ಲಿ ಬರೆದ ಲೇಖನದಲ್ಲಿ ನೂರಾರು ಡಾಕ್ಟರೇಟ್‌ಗಳಿಗೆ ಸರಿಸಮಾನವಾಗುವಷ್ಟು ಸಂಶೋಧನೆ ಮಾಡಿರುವ ವಿಜ್ಞಾನಿಗೆ ಒಂದು ಗೌರವ ಡಾಕ್ಟರೇಟ್ ಕೊಡಲು ಕೃಷಿ ವಿಶ್ವವಿದ್ಯಾಲಯಕ್ಕೆ ಸಾಧ್ಯವಾಗದಿರುವುದನ್ನು ಉಲ್ಲೇಖಿಸಿದೆ. ಅಷ್ಟೇ ಅಲ್ಲ, ಮನುಕುಲದ ವಿನಾಶಕ್ಕೆ ದಾರಿತೋರುವ ಅಣುವಿಜ್ಞಾನದ ‘ರಾಮಣ್ಣ’ರಿಗೆ ಸಿಗುವ ಮಾನ ಸಮ್ಮಾನವಾಗುತ್ತಿದ್ದು ಹಸಿವಿನ ಜ್ವಾಲೆಯನ್ನು ನಂದಿಸಿ ಒಂದು ನಾಡಿನ ಜನರ ತುತ್ತಿನ ಚೀಲವನ್ನು ‘ಲಕ್ಷ್ಮಣ’ರ ಶ್ರಮಕ್ಕೆ ಇಲ್ಲಿ ಬೆಲೆ ಇಲ್ಲದಿರುವ ವ್ಯಂಗ್ಯವನ್ನು ಅಲ್ಲಿ ಗುರುತಿಸಲಾಗಿತ್ತು. ಕನಿಷ್ಠ ಅಷ್ಟೊಂದು ತಳಿ ಬಿಡುಗಡೆ ಮಾಡಿದ ಲಕ್ಷ್ಮಣಯ್ಯನವರ ಹೆಸರನ್ನು ಒಂದು ತಳಿಗಾದರೂ ಕೃಷಿ ವಿಶ್ವವಿದ್ಯಾಲಯ ಇಡಬಹುದಿತ್ತು.
ಕಾಕತಾಳೀಯವೆಂಬಂತೆ ಈ ಲೇಖನ ಪ್ರಕಟವಾದ ನಂತರ 1988ರಲ್ಲಿ ಕೃಷಿ ವಿಶ್ವವಿದ್ಯಾನಿಲಯ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಅವರ ಋಣಭಾರವನ್ನು ಕಡಿಮೆ ಮಾಡಿಕೊಂಡಿತು. ಆದರೆ ಎಂದೂ ನಿವೃತ್ತಿ ಬಯಸದ ಲಕ್ಷ್ಮಣಯ್ಯನವರ ಆಸಕ್ತಿಯನ್ನು ಬಳಸಿಕೊಳ್ಳಲು, ಸರ್ಕಾರ, ಕೃಷಿ ವಿಶ್ವವಿದ್ಯಾನಿಲಯ ಎರಡೂ ಮುಂದೆ ಬರಲಿಲ್ಲ.
ಲಕ್ಷ್ಮಣಯ್ಯನವರು ನಿವೃತ್ತಿಯ ನಂತರ ಪೊನ್ನಂಪೇಟೆಯಲ್ಲಿದ್ದ ತಮ್ಮ ಮಗನ ಮನೆಯಲ್ಲಿ ಮಡಕೆಗಳಲ್ಲೇ ರಾಗಿಯನ್ನು ಬೆಳೆಸಿ ಸಂಶೋಧನೆ ಮುಂದುವರಿಸುತ್ತಿದ್ದರು. ಆ ಸಂಶೋಧನೆಯ ಫಲವಾಗಿ ಹೊರಬಂದದ್ದು ಎಲ್-5 ರಾಗಿ ತಳಿ.
1993ರ ಮೇ 14ರಂದು ಅವರು ಕ್ಯಾನ್ಸರ್‌ಗೆ ಬಲಿಯಾದರು. ಅವರ ಸಾವಿನಿಂದ ಸಂಶೋಧನೆ ಬಡವಾಯಿತು. ರಾಗಿ ತಳಿಗಳು ತಮ್ಮ ಜನಕನನ್ನು ಕಳೆದುಕೊಂಡವು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು 2010ರಲ್ಲಿ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಿ ಗೌರವಿಸಿತು. ರೈತ ಮುಖಂಡರಾದ ಮಂಡ್ಯ ಜಿಲ್ಲೆಯ ಕೆ. ಬೋರಯ್ಯನವರ ಅಧ್ಯಕ್ಷತೆಯಲ್ಲಿ ಸ್ಥಾಪನೆಯಾಗಿರುವ ‘ರಾಗಿ ಲಕ್ಷ್ಮಣಯ್ಯ ಸ್ಮಾರಕ ಸಮಿತಿ’ಯು ಅವರ ಹೆಸರಿನಲ್ಲಿ ಸ್ಮಾರಕ ಉಪನ್ಯಾಸಗಳನ್ನು ಪ್ರತಿವರ್ಷ ಅವರ ಜನ್ಮದಿನದಂದು (ಮೇ 15) ಏರ್ಪಡಿಸುತ್ತ ಅವರ ನೆನಪನ್ನು ಅಮರವಾಗಿಡಲು ಶ್ರಮಿಸುತ್ತಿದೆ.


ಡಾ. ಕೆ. ಪುಟ್ಟಸ್ವಾಮಿ
ಲೇಖಕ, ಪತ್ರಕರ್ತ. ಪತ್ರಕರ್ತರಾಗಿ, ಕರ್ನಾಟಕ ಸರಕಾರದ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ಭೂಮಿಕ್, ಸಹಸ್ರಬುದ್ಧೆ, ಭೀರೇಂದ್ರ ಭಟ್ಟಾಚಾರ್ಯ, ಎಚ್.ಜಿ.ವೇಲ್ಸ್, ಜೂಲ್ಸ್ ವರ್ನ್ ಮತ್ತು ಲ್ಯ್ ವ್ಯಾಲೆಸ್ ಮುಂತಾದವರ ಕೃತಿಗಳನ್ನು ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪರಿಸರ ಪ್ರಶಸ್ತಿ, ರಾಷ್ಟ್ರಪತಿಗಳು ಕೊಡಮಾಡುವ ಸ್ವರ್ಣ ಕಮಲ ಮುಂತಾದ ಪ್ರಶಸ್ತಿಗಳು ಸಂದಿವೆ.