ಕೇರಳದ ಹೊಸ ‘ಎನ್‌ಎಚ್‌-66’ರಲ್ಲಿ ಕುಸಿತ; ಮೋದಿ ಸರ್ಕಾರದ ಕಳಪೆ ಕಾಮಗಾರಿಗಳಿಗೆ ಹಿಡಿದ ಕನ್ನಡಿ

Date:

Advertisements

ಕೇರಳದಲ್ಲಿ ನಿರ್ಮಾಣ ಹಂತದಲ್ಲಿರುವ ರಾಷ್ಟ್ರೀಯ ಹೆದ್ದಾರಿ-66ರ ಹಲವು ಭಾಗಗಳಲ್ಲಿ ಮಳೆಗಾಲಕ್ಕೂ ಮೊದಲೇ ಪ್ರಮುಖ ಬಿರುಕುಗಳು ಮತ್ತು ಭಾಗಶಃ ಕುಸಿತಗಳು ಕಂಡುಬಂದಿದ್ದು, ಮಲಾಪ್ಪುರ್ ಜಿಲ್ಲೆಯ ಕೂರಿಯಾಡ್ ಬಳಿ ನಿರ್ಮಾಣದ ಹಂತದಲ್ಲಿರುವ NH-66ರ ಆರು ಪಥದ ಭಾಗದಲ್ಲಿ ಸಣ್ಣ ವಾಹನಗಳ ಸಂಚಾರವನ್ನೂ ಕೂಡ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI) ಈಗಾಗಲೇ ನಿಷೇಧಿಸಿದೆ. 

ಸಮಯ ಕಳೆದಂತೆ ಸ್ಥಳೀಯ ಅಧಿಕಾರಿಗಳು, ಎಂಜಿನಿಯರ್‌ಗಳು ಮತ್ತು ನಿವಾಸಿಗಳು ಯೋಜನೆಯ ಕಾರ್ಯಗತಿಯನ್ನು ಪೂರೈಸುವ ಬಗ್ಗೆ ಗಹನ ಖಾತರಿಯ ಸಮಸ್ಯೆಗಳತ್ತ ಸೂಚಿಸುತ್ತಿದ್ದಾರೆ.

ಮೇ 19ರ ಸೋಮವಾರದಂದು ಮಲಪ್ಪುರಂನ ಕೂರಿಯಾಡ್ ಬಳಿ ನಿರ್ಮಾಣ ಹಂತದಲ್ಲಿರುವ ರಾಷ್ಟ್ರೀಯ ಹೆದ್ದಾರಿಯ ಒಂದು ಭಾಗ ಕುಸಿದು ಬಿದ್ದಿತ್ತು. ಇದುರಿಂದಾಗಿ ಸರ್ವಿಸ್ ರಸ್ತೆ ಮತ್ತು ಪಕ್ಕದ ತಡೆಗೋಡೆಯ ಮೇಲೆ ತೀವ್ರ ಪರಿಣಾಮ ಬೀರಿತು. ಈ ಮೇಲ್ಸೇತುವೆಯನ್ನು ಭತ್ತದ ಗದ್ದೆಯ ಮೇಲೆ ನಿರ್ಮಿಸಲಾಗಿತ್ತು. ರಸ್ತೆ ಕುಸಿದ ಕಾರಣ ತಡೆಗೋಡೆ ಭತ್ತದ ಗದ್ದೆಯ ಮೇಲೆ ಬಿದ್ದಿದ್ದು, ಅಪಾರವಾದ ಗದ್ದೆ ಮುಳುಗಿಹೋಯಿತು. ಅಲ್ಲದೆ ಬೃಹದಾಕಾರದ ಬಿರುಕುಗಳು ಕಂಡುಬಂದವು.

Advertisements

ಅದೃಷ್ಟವಷಾತ್‌ ಈ ಕುಸಿತದಲ್ಲಿ ಯಾವುದೇ ಜೀವಹಾನಿಗಳು ಸಂಭವಿಸಿಲ್ಲ. ಆದರೆ ಈ ಘಟನೆಯು 644 ಕಿ.ಮೀ. ಉದ್ದದ ಆರು ಪಥಗಳ ಹೆದ್ದಾರಿಯ ರಚನಾತ್ಮಕ ಸಮಗ್ರತೆಯ ಬಗ್ಗೆ ರಾಜ್ಯಾದ್ಯಂತ ಕಳವಳವನ್ನು ಹುಟ್ಟುಹಾಕಿದೆ. ಇದರಲ್ಲಿ ಹೆಚ್ಚಿನ ಭಾಗವು ಜಲಾವೃತವಾಗಿದ್ದು, ಕಳಪೆ ಭೂಪ್ರದೇಶದ ಮೂಲಕ ಹಾದುಹೋಗುತ್ತದೆ. ಇದಾದ ಒಂದು ದಿನದ ಬಳಿಕ ಕಾಸರಗೋಡಿನಲ್ಲಿ, ಸರ್ವಿಸ್ ರಸ್ತೆಯ ಒಂದು ಭಾಗ ಮುಳುಗಿದ್ದು, ರಸ್ತೆಯಲ್ಲಿ ಗುಂಡಿಗಳು ಕಾಣಿಸಿಕೊಂಡಿವೆ.

ಕೂರಿಯಾಡ್‌ನಲ್ಲಿ ಕುಸಿದ ರಸ್ತೆಯು ಪುನಃಸ್ಥಾಪನೆಗೊಂಡ ಭತ್ತದ ಗದ್ದೆಯ ಮೇಲೆ ನಿರ್ಮಿಸಲ್ಪಟ್ಟಿದ್ದು, ಸರ್ವಿಸ್ ರಸ್ತೆ ಮತ್ತು ತಡೆಗೋಡೆಗೆ ಹಾನಿಯಾಗಿದ್ದು, ನಾಲ್ಕು ವಾಹನಗಳು ಅವಶೇಷಗಳೊಳಗೆ ಸಿಲುಕಿಕೊಂಡಿವೆ. ಆರು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೋಝಿಕ್ಕೋಡ್ ಮತ್ತು ತ್ರಿಶೂರ್‌ನ ಕೆಲವು ಭಾಗಗಳಲ್ಲಿಯೂ ಇದೇ ರೀತಿಯ ಬಿರುಕುಗಳು ಮತ್ತು ರಸ್ತೆ ಹಾನಿಯಾಗಿರುವ ವರದಿಯಾಗಿದ್ದು, ನಿರ್ಮಾಣದ ಗುಣಮಟ್ಟ ಮತ್ತು ಆಯ್ಕೆ ಮಾಡಿದ ಮಾರ್ಗದ ಸೂಕ್ತತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕೇರಳದ ರಾಷ್ಟ್ರೀಯ ಹೆದ್ದಾರಿ ಛಿದ್ರ

ಕುಸಿದ ಭಾಗವು ರಾಷ್ಟ್ರೀಯ ಹೆದ್ದಾರಿ-66 ರ ಕೋಝಿಕ್ಕೋಡ್-ತ್ರಿಶೂರ್ ಮಾರ್ಗದ ಭಾಗವಾಗಿದ್ದು, ಮಲಪ್ಪುರಂನ ಪಣಂಪುಳ ಸೇತುವೆಯಿಂದ ಕೇವಲ 600 ಮೀಟರ್ ದೂರದಲ್ಲಿದೆ. ಕಾಸರಗೋಡು ಜಿಲ್ಲೆಯ ಕಾಞಂಗಾಡ್ ಪ್ರದೇಶದ ಕಲ್ಯಾಣ್ ರಸ್ತೆಯ ಬಳಿಯ ಚೆಂಗಲ ಮತ್ತು ನೀಲೇಶ್ವರ ನಡುವೆ ಈ ಘಟನೆ ಸಂಭವಿಸಿದೆ. ಸರ್ವಿಸ್ ರಸ್ತೆಯ ಒಂದು ಭಾಗ ಕುಸಿದ ನಂತರ ಅಧಿಕಾರಿಗಳು ಆತಂಕಗೊಂಡಿದ್ದಾರೆ.

“ಮಳೆಗಾಲದಲ್ಲಿ ನೀರು ನಿಲ್ಲುವ ಭತ್ತದ ಗದ್ದೆಯ ಮೇಲೆ ಈ ಮಾರ್ಗವನ್ನು ನಿರ್ಮಿಸಲಾಗಿದೆ. ಇದು ಮಳೆಗಾಲವೂ ಅಲ್ಲ, ಈಗಲೇ ರಸ್ತೆಗಳು ಕುಸಿಯುತ್ತಿವೆ. ಕಾಮಗಾರಿ ಮಾಡುವ ವೇಳೆ ಈ ಭೂಪ್ರದೇಶದ ಮೇಲೆ ಫ್ಲೈಓವರ್ ನಿರ್ಮಿಸಬೇಕಾಗಿತ್ತು. ಪಣಂಪುಳ ಮತ್ತು ಕಡಲುಂಡಿಪುಳ ನದಿಗಳ ಸಮೀಪವೂ ಕೂಡ ಅಪಾಯ ಎದುರಾಗಬಹುದು. ತಜ್ಞರ ಸಮಿತಿ ಸ್ಥಳಕ್ಕೆ ಭೇಟಿ ನೀಡಿದ್ದು, ಅಧಿಕೃತ ವರದಿಗಾಗಿ ಕಾಯಲಾಗುತ್ತಿದೆ” ಎಂದು ಮಲಪ್ಪುರಂನ ತಿರುರಂಗಡಿ ಪುರಸಭೆಯ ಅಧ್ಯಕ್ಷ ಕೆ ಪಿ ಮುಹಮ್ಮದ್ ಕುಟ್ಟಿ ತಿಳಿಸಿರುವುದಾಗಿ ದಿ ನ್ಯೂಸ್‌ ಮಿನಿಟ್‌ ವರದಿ ಮಾಡಿದೆ.

ಭಾರೀ ಮಳೆಯಿಂದಾಗಿ ಕಣ್ಣೂರಿನ ತಳಿಪರಂಬದಲ್ಲಿನ ನಿರ್ಮಾಣ ಸ್ಥಳಗಳಿಂದ ಕೆಸರು ನೀರು ಮನೆಗಳಿಗೆ ನುಗ್ಗಿದೆ. ಈ ರಸ್ತೆ ಕುಸಿತವು ರಾಜ್ಯದ ಇತರ ಭಾಗಗಳಲ್ಲಿಯೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ತ್ರಿಶೂರ್‌ನ ಚಾವಕ್ಕಾಡ್‌ನಲ್ಲಿ ಹೊಸದಾಗಿ ನಿರ್ಮಿಸಲಾದ ಹೆದ್ದಾರಿಯಲ್ಲಿ ಬಿರುಕು ಬಿಟ್ಟಿರುವ ಚಿತ್ರಗಳು ವೈರಲ್ ಆದ ನಂತರ ನಿವಾಸಿಗಳು ರಸ್ತೆಗಳನ್ನು ತಡೆದು ಪ್ರತಿಭಟನೆ ನಡೆಸಿದರು.

“ಕೂರಿಡ್ ಕುಸಿತದ ಒಂದು ದಿನದ ನಂತರ, ಕಾಸರಗೋಡಿನಲ್ಲಿ ಒಂದು ಸರ್ವಿಸ್ ರಸ್ತೆ ಮುಳುಗಡೆಯಾಗಿದೆ. NH-66ರ ಮಮ್ಮಲಿಪಾಡಿ ಪ್ರದೇಶದ ಉದ್ದಕ್ಕೂ ತೀವ್ರ ಬಿರುಕುಗಳು ಕಾಣಿಸಿಕೊಂಡಿವೆ, ಅವುಗಳಲ್ಲಿ ಹೆಚ್ಚಿನವು ತಗ್ಗು ಪ್ರದೇಶದ ಭತ್ತದ ಗದ್ದೆಗಳನ್ನು ಮುಳುಗಿಸಿವೆ. ಸ್ವಲ್ಪ ದೂರ ಫ್ಲೈಓವರ್ ಇದೆ. ಆದರೆ ಉದ್ದದ ರಸ್ತೆಯನ್ನು ಕಳಪೆ ಭೂಪ್ರದೇಶದಲ್ಲಿ ನಿರ್ಮಿಸಲಾಗಿದೆ” ಎಂದು ಎಡರಿಕೋಡ್ ಪಂಚಾಯತ್ ಅಧ್ಯಕ್ಷ ಜಲೀಲ್ ಹೇಳಿದ್ದಾರೆ.

“ಅವೈಜ್ಞಾನಿಕ ಮತ್ತು ಆತುರದ ನಿರ್ಮಾಣದ ಕಾಮಗಾರಿಯೇ ಮೇಲ್ಸೇತುವೆ ಕುಸಿತಕ್ಕೆ ಕಾರಣ. ವಿದೇಶಿ ತಂತ್ರಜ್ಞಾನವೆಂದು ಕರೆಯುವ ವಿಷಯವು ಕೇರಳದ ಮಣ್ಣಿಗೆ ಹೊಂದಿಕೆಯಾಗುವುದಿಲ್ಲ” ಎಂದು ಕೋಝಿಕ್ಕೋಡ್‌ನ ಪರಪ್ಪನಂಗಡಿ ಪುರಸಭೆಯ ಅಧ್ಯಕ್ಷ ಉಸ್ಮಾನ್ ತಿಳಿಸಿದ್ದರೆ, ಈ ಮೇಲ್ಸೇತುವೆಗಳಿಗೆ ಸರಿಯಾದ ಕಾಂಕ್ರೀಟ್ ತಡೆಗೋಡೆಗಳಿಲ್ಲ, ಒಂದರ ಮೇಲೊಂದು ಜೋಡಿಸಲಾದ ಇಟ್ಟಿಗೆಗಳ ಪದರಗಳನ್ನು ಮಾತ್ರ ಒಳಗೊಂಡಿದೆ” ಎಂದು ಸ್ಥಳೀಯ ಪಿಡಬ್ಲ್ಯೂಡಿ ಎಂಜಿನಿಯರ್‌ಗಳೂ ಕೂಡ ಕಳವಳ ವ್ಯಕ್ತಪಡಿಸಿದ್ದಾರೆ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI) ಈ ಮಧ್ಯೆ ಕಳಪೆ ಗುಣಮಟ್ಟದ ಕಾಮಗಾರಿಯ ಆರೋಪಗಳನ್ನು ತಳ್ಳಿಹಾಕಿದ್ದು, “ಇತ್ತೀಚಿನ ಮಳೆಯಿಂದಾಗಿ ಭತ್ತದ ಗದ್ದೆಯ ಕೆಳಗೆ ಮಣ್ಣು ವಿಸ್ತರಣೆಯಾಗಿ, ಒತ್ತಡ ಹೆಚ್ಚಿ ಮೇಲ್ಸೇತುವೆ ಕುಸಿತಕ್ಕೆ ಕಾರಣವಾಗಿರಬಹುದು” ಎಂದು ಯೋಜನಾ ನಿರ್ದೇಶಕ ಅಂಶುಲ್ ಶರ್ಮಾ ಮಾಧ್ಯಮಗಳಿಗೆ ತಿಳಿಸಿದ್ದರು.

“ಮಳೆಯು ಭೂಮಿಯನ್ನು ಮೃದುಗೊಳಿಸಿತು, ಇದರಿಂದಾಗಿ ಬಿರುಕುಗಳು ಉಂಟಾಗಿ ಅಂತಿಮವಾಗಿ ರಸ್ತೆ ಕುಸಿಯಲು ಕಾರಣವಾಗಿದೆ. ನಾವು ಸ್ವತಂತ್ರ ಮೂವರು ಸದಸ್ಯರ ತಜ್ಞರ ಸಮಿತಿಯನ್ನು ರಚಿಸಿದ್ದೇವೆ, ಅವರು ಸ್ಥಳವನ್ನು ಪರಿಶೀಲಿಸಿ ವಿವರವಾದ ವರದಿಯನ್ನು ಸಲ್ಲಿಸುತ್ತಾರೆ” ಎಂದ ಶರ್ಮಾ ಕಳಪೆ ಕಾಮಗಾರಿ ಅಥವಾ ನಿರ್ಲಕ್ಷ್ಯದ ಆರೋಪಗಳನ್ನು ತಳ್ಳಿಹಾಕಿದ್ದಾರೆ.

ಮಲಪ್ಪುರಂ ಲೋಕಸಭಾ ಸಂಸದ ಇ ಟಿ ಮೊಹಮ್ಮದ್ ಬಶೀರ್ ಅವರು, ಗುತ್ತಿಗೆ ವಹಿಸಿಕೊಂಡಿದ್ದ ಕೆಎನ್‌ಆರ್ ನಿರ್ಮಾಣ ಕಂಪೆನಿಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ ಎಂದಿದ್ದಾರೆ.

ಕೇರಳದ ರಾಷ್ಟ್ರೀಯ ಹೆದ್ದಾರಿ 1

“ಯೋಜನೆಗೆ ಸಂಬಂಧಿಸಿದ ಇಬ್ಬರು ಉನ್ನತ ಅಧಿಕಾರಿಗಳಾದ ನಿರ್ಮಾಣ ಯೋಜನಾ ವ್ಯವಸ್ಥಾಪಕ ಎಂ ಅಮರನಾಥ್ ರೆಡ್ಡಿ ಮತ್ತು ತಂಡದ ನಾಯಕ ರಾಜ್ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ” ಎಂದು ಐಎಎನ್ಎಸ್ ತಿಳಿಸಿದೆ.

ಕುಸಿತದ ನಂತರ, ಕೋಲಾಪ್ಪುರಂ-ಕಕ್ಕಾಡ್ ಮಾರ್ಗದ ಮೂಲಕ ಕೋಝಿಕ್ಕೋಡ್ ಮತ್ತು ತ್ರಿಶೂರ್ ನಡುವಿನ ಸಂಚಾರಕ್ಕೆ ತೀವ್ರ ತೊಂದರೆಯಾಗಿದ್ದು, ಖಾಸಗಿ ಬಸ್ಸುಗಳು, ಆಟೋರಿಕ್ಷಾಗಳು ಮತ್ತು ಬೈಕ್‌ಗಳು ಸೇರಿದಂತೆ ವಾಹನಗಳು ಕಿರಿದಾದ ಸರ್ವಿಸ್‌ ರಸ್ತೆಗಳ ಮೂಲಕ ಸಂಚರಿಸಿವೆ. ಇದರಿಂದಾಗಿ ತುಂಬಾ ತೊಂದರೆಗಳುಂಟಾಗುವುದರ ಜತೆಗೆ ತಡವಾಗುತ್ತಿದೆ. ಬೃಹತ್ ವಾಹನಗಳು‌ ಈ ಪ್ರದೇಶದಲ್ಲಿ ಪ್ರವೇಶಿಸುವುದನ್ನು ನಿರ್ಬಂಧಿಸುವಂತೆ ಸ್ಥಳೀಯ ಸಂಚಾರ ನಿಯಂತ್ರಣ ಸಮಿತಿಯು ಮೋಟಾರು ವಾಹನ ಇಲಾಖೆಯನ್ನು(ಎಂವಿಡಿ) ಒತ್ತಾಯಿಸಿದೆ.

ಹೆದ್ದಾರಿ ಅಧಿಕೃತವಾಗಿ ತೆರೆದ ನಂತರವೇ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳು, ಆಟೋಗಳು ಮತ್ತು ಪಾದಚಾರಿಗಳ ಮೇಲೆ ಔಪಚಾರಿಕ ನಿರ್ಬಂಧಗಳನ್ನು ಜಾರಿಗೊಳಿಸಲಾಗುತ್ತದೆ. ಆದರೂ, ಹೊಸ ನಿಯಮಗಳೊಂದಿಗೆ ಫಲಕಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ. ಉಲ್ಲಂಘನೆಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ದಂಡ ವಿಧಿಸಲು ಸಿಸಿಟಿವಿ ಕ್ಯಾಮೆರಾಗಳನ್ನು ನಿಯೋಜಿಸಲು MVD ಯೋಜಿಸಿದೆ.

2019 ರಿಂದ 2025ರ ಏಪ್ರಿಲ್‌ವರೆಗೆ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗುಡ್ಡ ಕುಸಿತ ಸೇರಿದಂತೆ ಒಟ್ಟು 59 ಪ್ರಮುಖ ದೋಷಗಳ ಘಟನೆಗಳು ದಾಖಲಾಗಿವೆ. ದೇಶದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗುರುತಿಸಲಾದ ಒಟ್ಟು 13,795 ಬ್ಲ್ಯಾಕ್‌ ಸ್ಪಾಟ್‌ಗಳಲ್ಲಿ ಕೇವಲ 5,036 ಬ್ಲ್ಯಾಕ್‌ ಸ್ಪಾಟ್‌ಗಳ ಮೇಲೆ ಮಾತ್ರ ದೀರ್ಘಾವಧಿಯ ತಿದ್ದುಪಡಿ ಪೂರ್ಣಗೊಂಡಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸಂಸತ್ತಿಗೆ ತಿಳಿಸಿತ್ತು.

ಈ 59 ರಾಷ್ಟ್ರೀಯ ಹೆದ್ದಾರಿ ಕುಸಿತಗಳಲ್ಲಿ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು(17) ನ್ಯೂನತೆಗಳು ದಾಖಲಾಗಿವೆ. ನಂತರ ರಾಜಸ್ಥಾನದಲ್ಲಿ ಏಳು ಕಡೆ, ಉತ್ತರಪ್ರದೇಶದಲ್ಲಿ ಮೂರು ಕಡೆ, ಉತ್ತರಾಖಂಡದೊಂದಿಗೆ ಯುಪಿ ಮಾರ್ಗದಲ್ಲಿ ಇನ್ನೂ ಮೂರು ದಾಖಲಾಗಿರುವ ದತ್ತಾಂಶವಿದೆ.

ಬುಂದೇಲ್‌ಖಂಡ್‌ ರಾಷ್ಟ್ರೀಯ ಹೆದ್ದಾರಿ
ಬುಂದೇಲ್‌ಖಂಡ್‌ ರಾಷ್ಟ್ರೀಯ ಹೆದ್ದಾರಿ ಕುಸಿತ

ಜುಲೈ 2022ರಲ್ಲಿ ಉತ್ತರ ಪ್ರದೇಶದ ಬುಂದೇಲ್‌ಖಂಡ್ ರಾಷ್ಟ್ರೀಯ ಹೆದ್ದಾರಿಯನ್ನು ಮೋದಿ ಉದ್ಘಾಟಿಸಿದ ಒಂದು ವಾರದೊಳಗೆ ಕೆಲವು ಭಾಗಗಳು ಕುಸಿದಿದ್ದವು. ಸುಮಾರು 14,850 ಕೋಟಿ ರೂ. ವೆಚ್ಚದಲ್ಲಿ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ನಿರ್ಮಿಸಲಾಗಿತ್ತು. ಆದರೆ ಕೇವಲ 5 ದಿನಗಳು ಸುರಿದ ಮಳೆಗೆ ರಸ್ತೆಯು ಹಲವು ಕಡೆ ಇಬ್ಬಾಗವಾಯಿತು.

ಅಕ್ಟೋಬರ್ 2022ರಲ್ಲಿ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಯನ್ನು ಮೋದಿ ಉದ್ಘಾಟಿಸಿದ್ದರು. ತಿಂಗಳುಗಳ ಬಳಿಕ ಲಕ್ನೋ ಮತ್ತು ಘಾಜಿಪುರವನ್ನು ಸಂಪರ್ಕಿಸುವ 341 ಕಿಮೀ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಯ ಕೆಲವು ಭಾಗಗಳು ಛಿದ್ರವಾದವು.

ಪೂರ್ವಾಂಚಲ್‌ ಹೆದ್ದಾರಿ
ಪೂರ್ವಾಂಚಲ್‌ ಹೆದ್ದಾರಿ ಕುಸಿತ
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

Download Eedina App Android / iOS

X