ಮಲೆನಾಡು ಎಂದೊಂಡನೆ ಎಲ್ಲರ ಕಣ್ಣೆದುರು ಬರುವುದು ಅಲ್ಲಿನ ರಮಣೀಯ ಪ್ರಕೃತಿ ಸೌಂದರ್ಯ. ಅಲ್ಲಿನ ಸುಂದರ ಪರಿಸರಕ್ಕೆ ಮನಸೋಲದವರೇ ಇಲ್ಲ. ಪಟ್ಟಣಗಳಿಂದ ಅಪರೂಪಕ್ಕೆ ಪ್ರವಾಸ ಬರುವವರಿಗೆ ಮಲೆನಾಡು ಭೂಲೋಕದ ಸ್ವರ್ಗವೇ ಸರಿ. ಆದರೆ, ಮೂಲ ಸೌಕರ್ಯಗಳ ಕೊರತೆಯ ನಡುವೆ ವಾಸಿಸುವವರಿಗೆ ಮಲೆನಾಡು ನಿತ್ಯ ನರಕದಂತೆ ಭಾಸವಾಗುವುದು ಸುಳ್ಳಲ್ಲ.
ಮಲೆನಾಡು ಭಾಗದ ಕಾಡಂಚಿನಲ್ಲಿರುವ ಬಹುತೇಕ ಗ್ರಾಮಗಳು ಇಂದಿಗೂ ಮೂಲ ಸೌಕರ್ಯಗಳನ್ನು ಹೊಂದಿಲ್ಲ. ವಿದ್ಯುತ್, ರಸ್ತೆ ಸಂಪರ್ಕ, ಕುಡಿಯುವ ನೀರಿನ ವ್ಯವಸ್ಥೆ, ಅಂಗನವಾಡಿ, ಶಾಲೆ, ಆರೋಗ್ಯ ಕೇಂದ್ರಗಳು ಇಲ್ಲದೆ ಇಂದಿಗೂ ನಿತ್ಯ ಸಮಸ್ಯೆ ಅನುಭವಿಸುವ ಸ್ಥಿತಿ ಇದೆ. ಇಲ್ಲೊಂದು ಕುಗ್ರಾಮ ನಗರದ ಜೊತೆಗೆ ಸಂಪರ್ಕ ಹೊಂದಲು ಹಳ್ಳ, ಹೊಳೆ ದಾಟಬೇಕಿದೆ. ಅದಕ್ಕಾಗಿ ಗ್ರಾಮಸ್ಥರೇ ಮರದ ದಿಮ್ಮಿ, ಕಟ್ಟಿಗೆ, ಹಲಗೆ, ಬಿದಿರು ಬಳಸಿ ಕಾಲುಸಂಕ ನಿರ್ಮಿಸಿಕೊಂಡಿದ್ದಾರೆ. ಅದರ ಮೇಲೆಯೇ ಮಹಿಳೆಯರು, ಮಕ್ಕಳು, ವೃದ್ಧರು ಜೀವ ಕೈಯಲ್ಲಿ ಹಿಡಿದು ಓಡಾಡುತ್ತಾರೆ.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಈ ರೀತಿಯ ಕುಗ್ರಾಮಗಳು ಇರುವುದು ಚಿಕ್ಕಮಗಳೂರು ಜಿಲ್ಲೆಯಲ್ಲಿ. ಕಳಸ ತಾಲೂಕಿನ ಸಂಸೆ ಗ್ರಾಮದ ವ್ಯಾಪ್ತಿಯಲ್ಲಿ ಪುಟ್ಟ ಪುಟ್ಟ ಉಪ ಗ್ರಾಮಗಳಿವೆ. ಆ ಗ್ರಾಮಗಳಲ್ಲಿ ದಶಕಗಳಿಂದ ಗಿರಿಜನರು, ಬುಡಕಟ್ಟು ಸಮುದಾಯದವರು ಹೆಚ್ಚು ನೆಲೆಸಿದ್ದಾರೆ. ಇಲ್ಲಿ ವಾಸಿಸುವ ಗ್ರಾಮಸ್ಥರಿಗೆ ಸರಿಯಾದ ಕುಡಿಯುವ ನೀರಿನ ವೈವಸ್ಥೆ ಇಲ್ಲ, ವಿದ್ಯುತ್ ಸಂಪರ್ಕವಿಲ್ಲ, ಓಡಾಡಲು ಪಕ್ಕಾ ರಸ್ತೆ ಇಲ್ಲ, ಹೀಗೆ ಕನಿಷ್ಟ ಮೂಲ ಸೌಕರ್ಯಗಳೇ ಇಲ್ಲ. ಇವರಿಗೆ ಕಾಲುದಾರಿ ಅಥವಾ ಡಾಂಬರು ರಸ್ತೆ ಇರಲಿ, ಹೊಳೆ ದಾಟಲು ಸೇತುವೆ ಕೂಡ ಇಲ್ಲ.
ಪ್ರತಿ ವರ್ಷ ಮಳೆಗಾಲದಲ್ಲಿ ಹಳ್ಳ, ತೊರೆ, ಹೊಳೆಗಳು ಉಕ್ಕಿ ಹರಿಯುತ್ತವೆ. ಕಾಲು ಸಂಕದಲ್ಲಿ ಒಂದು ಬದಿಯಿಂದ ಮತ್ತೊಂದು ಬದಿಗೆ ಸಾಗುವುದು ಕಷ್ಟಕರ. ಹಾಗಾಗಿ ಈ ಭಾಗದ ಜನರು ಸಮಸ್ಯೆಗಳ ನಡುವೆ ನಿತ್ಯ ಹರಸಾಹದ ಪಡುತ್ತಿದ್ದಾರೆ. ತುಂಬಿ ಹರಿಯುವ ಹಳ್ಳ ಕೊಳ್ಳಗಳನ್ನು ದಾಟಲು ತಾತ್ಕಾಲಿಕವಾಗಿ ಗ್ರಾಮಸ್ಥರೇ ಮರದ ಸೇತುವೆ ಅಥವಾ ಸಂಕವನ್ನು ನಿರ್ಮಿಸಿಕೊಂಡು ಓಡಾಡುತ್ತಿದ್ದಾರೆ. ಶಾಲೆಗೆ ತೆರಳುವ ಮಕ್ಕಳು, ರೈತರು ಹೊಲ ಗದ್ದೆಗಳಿಗೆ ಕೃಷಿ ಉಪಕರಣಗಳನ್ನು ಸಾಗಿಸಲು ಸವಾಲು ಎದುರಾಗಿದೆ.

ಶಾಲೆಗೆ ಹೋಗುವ ಮಕ್ಕಳು ಸಂಕವನ್ನು ದಾಟಿ ನಾಲ್ಕಾರು ಕಿ.ಮೀ ದೂರದಲ್ಲಿರುವ ಕಳಸ ಪಟ್ಟಣಕ್ಕೆ ಓದಲು ಹೋಗಬೇಕು. ಕೂಲಿಯನ್ನೆ ಅವಲಂಬಿಸಿರುವ ಕೋಣೆಬೈಲು, ಹಡ್ಲುಮನೆ, ದೇವರಮನೆ, ಸಂಸೆ ಗ್ರಾಮ, ಈಚಲು ಹೊಳೆ, ಕೆಳಕೋಡು ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ಪಟ್ಟಣಕ್ಕೆ ತೆರಳಲು ಮರದ ಸೇತುವೆಯನ್ನೇ ಅವಲಂಬಿಸಿಕೊಂಡಿದ್ದಾರೆ. ಅನಾರೋಗ್ಯ ಸಮಸ್ಯೆಗಳಿದ್ದರೆ ಕಳಸ ಪಟ್ಟಣಕ್ಕೆ ಹೋಗಬೇಕಿದೆ.
ಕೃಷಿಯಿಂದ ಅಷ್ಟಿಷ್ಟು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ರಸ್ತೆ ಸಂಪರ್ಕ ಇಲ್ಲದ ಈ ಊರಿನವರು ರೋಗಿಗಳನ್ನು ಜೋಳಿಗೆಯಲ್ಲೇ ಹೊರಬೇಕಾಗಿರುವುದು ಅನಿವಾರ್ಯವಾಗಿದೆ.

ಅರಣ್ಯ ಇಲಾಖೆಯಿಂದ ಅಡ್ಡಿ
ಸ್ಥಳೀಯ ನಿವಾಸಿಗಳು ಈ ದಿನ.ಕಾಮ್ ಜೊತೆಗೆ ಮಾತನಾಡಿ, “ಕುದುರೆಮುಖ ರಾಷ್ಟ್ರೀಯ ಉದ್ಯಾನದ ನಡುವೆ ಈ ರಸ್ತೆಯು ಅರ್ಧ ಕಿ.ಮೀ ಹಾದು ಹೋಗುತ್ತದೆ. ಹಾಗಾಗಿ ನಮ್ಮ ಗ್ರಾಮಗಳಿಗೆ ರಸ್ತೆ ನಿರ್ಮಿಸಲು ಅರಣ್ಯ ಇಲಾಖೆಯ ಆಕ್ಷೇಪವಿದೆ. ಇತ್ತೀಚಿಗಷ್ಟೇ ಕಳಸ ತಾಲೂಕಿನ ಸಂಸೆ ಗ್ರಾಮದ ಕಳಕೋಡು ಬಳಿಯ ಈಚಲಹೊಳೆಯ ವೃದ್ಧೆಯನ್ನು ಅನಾರೋಗ್ಯದ ಕಾರಣ ಜೋಳಿಗೆಯಲ್ಲಿ ಹೊತ್ತುಕೊಂಡು ಬರಲಾಯಿತು ಈ ವಿಚಾರ ತಾಲೂಕಿನಾದ್ಯಂತ ಪ್ರಚಾರವಾಯಿತು. ಕುದುರೆಮುಖ ಉದ್ಯಾನದ ಕಾರಣಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಎಲ್ಲದಕ್ಕೂ ಕಿರಿಕಿರಿ ಮಾಡುತ್ತಾರೆ. ಇದರಿಂದ ಯಾವ ಮೂಲ ಸೌಕರ್ಯವೂ ಇಲ್ಲ. ಕಳೆದ ವರ್ಷವೂ ಇಂತಹುದೇ ಘಟನೆ ನಡೆದಿತ್ತು, ಇದೀಗ ಮತ್ತೆ ಸಂಭವಿಸಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | 40 ಜನರಿರುವ ಕಾಡಂಚಿನ ಗ್ರಾಮಕ್ಕೆ ರಸ್ತೆಯೇ ಇಲ್ಲ; ವೃದ್ಧರು, ರೋಗಿಗಳನ್ನು ಹೆಗಲ ಮೇಲೆ ಹೊರುವ ದುಃಸ್ಥಿತಿ
ಅರಣ್ಯ ಇಲಾಖೆ ಒಪ್ಪಿಗೆ ಕೊಟ್ಟರೆ ರಸ್ತೆ ನಿರ್ಮಾಣ
ಸಂಸೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಈ ರವಿಕುಮಾರ್ ಅವರು ಈದಿನ.ಕಾಮ್ ಜೊತೆಗೆ ಮಾತನಾಡಿ, “ಗ್ರಾಮದಲ್ಲಿ ಕಂದಾಯ ಭೂಮಿ ಇಲ್ಲವೆಂದು ಅರಣ್ಯ ಇಲಾಖೆಯವರಿಗೆ ಹೇಳಿದರೂ ರಸ್ತೆ ಕಾಮಗಾರಿ ಮಾಡಲು ಸ್ಥಳಕ್ಕೆ ಹೋದಾಗ ಕಾಮಗಾರಿ ನಡೆಸಲು ಅರಣ್ಯ ಇಲಾಖೆಯವರು ಅವಕಾಶ ಕೊಡಲಿಲ್ಲ. ಮಲೆನಾಡಿನ ಗ್ರಾಮಗಳು ಗುಡ್ಡಗಾಡು ಪ್ರದೇಶಗಳಾಗಿರುವುದರಿಂದ ಈ ಪಂಚಾಯಿತಿ ವ್ಯಾಪ್ತಿಯಲ್ಲಿ 56 ಸಾವಿರ ಎಕರೆ ಪ್ರದೇಶವಿದೆ. ಅದರಲ್ಲಿ 20 ಸಾವಿರ ಎಕರೆ ಪ್ರದೇಶ ರಾಷ್ಟೀಯ ಉದ್ಯಾನವನಕ್ಕೆ ಒಳಪಟ್ಟಿದೆ. ಅವರು ಒಪ್ಪಿಗೆ ಕೊಟ್ಟರೆ ಕಾಲೋನಿಗಳಿಗೆ ರಸ್ತೆ ನಿರ್ಮಿಸಲು ಪಂಚಾಯಿತಿಯಿಂದ ಕೂಡಲೇ ಕೆಲಸ ನಿರ್ವಹಿಸುತ್ತೇವೆ” ಎಂದು ತಿಳಿಸಿದರು.


ಗಿರಿಜಾ ಎಸ್ ಜಿ
ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ, ಮಹಿಳಾ ಪರ ಹೋರಾಟಗಾರ್ತಿ.