ಲಂಚ ಪಡೆಯುತ್ತಿದ್ದಾಗ ಬಂಧಿಸಲು ಮುಂದಾದ ಲೋಕಾಯುಕ್ತ ಪೊಲೀಸರು ಮತ್ತು ಪಂಚರ ಮೇಲೆ ವಾಹನ ಹತ್ತಿಸಿ ಭ್ರಷ್ಟ ಅಧಿಕಾರಿಯೊಬ್ಬ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಆತನನ್ನು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು ಉತ್ತರ ತಾಲೂಕಿನ ಆಹಾರ ನಿರೀಕ್ಷಕ ಮಹಾಂತೇಗೌಡ ಬಿ ಕಡಬಾಳು ಎಂಬ ಅಧಿಕಾರಿ ಉದ್ದಿಮೆ ಪರವಾನಗಿ ಪರಿಶೀಲನೆ ನಡೆಸಲು ಒಂದು ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಅಲ್ಲದೆ 12,000 ರೂ. ಮುಂಗಡ ಪಡೆದಿದ್ದರು. ಈ ಬಗ್ಗೆ ಉದ್ದಿಮೆದಾರ ರಂಗಧಾಮಯ್ಯ ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡಿದ್ದ ಲೋಕಾಯುಕ್ತ ಪೊಲೀಸರು, ಸಾಕ್ಷ ಸಮೇತ (ರೆಡ್‌ಹ್ಯಾಂಡ್) ಮಹಾಂತೇಗೌಡನನ್ನು ಹಿಡಿಯಲು ಯೋಜನೆ ರೂಪಿಸಿದ್ದರು. ರಂಗಧಾಮಯ್ಯ ಅವರನ್ನು ಮುಂದೆ ಕಳುಹಿಸಿ, ಲೋಕಾಯುಕ್ತ ಹಿಂದಿನಿಂದ ಪೊಲೀಸರು ತೆರಳಿದ್ದರು.
ಶುಕ್ರವಾರ ರಾತ್ರಿ ರಂಗಧಾಮಯ್ಯ ಅವರಿಂದ ಮಹಾಂತೇಗೌಡ 43,000 ರೂ. ಲಂಚ ಪಡೆದುಕೊಳ್ಳುವಾಗ ಲೋಕಾಯುಕ್ತ ಪೊಲೀಸರು ಸ್ಥಳಕ್ಕೆ ಧಾವಿಸಿ, ಅಧಿಕಾರಿಯನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಅಧಿಕಾರಿ ಕಾರು ಏರಿ ಪರಾರಿಯಾಗಲು ಯತ್ನಿಸಿದ್ದು, ಲೋಕಾಯುಕ್ತ ಪೊಲೀಸರತ್ತ ವೇಗವಾಗಿ ವಾಹನ ಚಾಲನೆ ಮಾಡಿದ್ದಾರೆ. 15 ಕಿ.ಮೀ.ವರೆಗೂ ಆರೋಪಿಯನ್ನು ಬೆನ್ನಟ್ಟಿದ ಪೊಲೀಸರು, ನೆಲಮಂಗಲ ಸೊಂಡೆಕೊಪ್ಪ ರಸ್ತೆಯಲ್ಲಿ ಆರೋಪಿಯನ್ನು ಸುತ್ತುವರಿದು, ಬಂಧಿಸಿದ್ದಾರೆ.
”ಮಹಾಂತೇಗೌಡ ಅವರನ್ನು ಲಂಚ ಪಡೆಯುತ್ತಿದ್ದ ಹಣದ ಸಮೇತ ಬಂಧಿಸಲಾಗಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಮತ್ತು ಸರ್ಕಾರಿ ನೌಕರರ ಕೆಲಸಕ್ಕೆ ಅಡ್ಡಿ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ” ಎಂದು ಲೋಕಾಯುಕ್ತದ ಬೆಂಗಳೂರು ನಗರ ಎಸ್ ಪಿ ಕೆ.ವಿ. ಅಶೋಕ್ ತಿಳಿಸಿದ್ದಾರೆ.