- ಟ್ರೇಡ್ ಲೈಸೆನ್ಸ್ ಚೆಕ್ ಮಾಡಲು ಮಹಾಂತೇಗೌಡ ₹1 ಲಕ್ಷ ಲಂಚಕ್ಕೆ ಬೇಡಿಕೆ
- ಮುಂಗಡ ಹಣವನ್ನು ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದ ಆರೋಪಿ
ಟ್ರೇಡ್ ಲೈಸೆನ್ಸ್ ಚೆಕ್ ಮಾಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆಹಾರ ನಿರೀಕ್ಷಕ ಒಬ್ಬರನ್ನು ಲೋಕಾಯುಕ್ತ ಪೊಲೀಸರು 15 ಕಿ.ಮೀ ಬೆನ್ನತ್ತಿ ಬಂಧಿಸಿದ್ದಾರೆ.
ಬೆಂಗಳೂರಿನ ತಹಶೀಲ್ದಾರ ಕಚೇರಿಯಲ್ಲಿ ಮಹಾಂತೇಗೌಡ ಬಿ ಕಡಬಾಳು ಎಂಬುವವರು ಆಹಾರ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ರಂಗದಾಮಯ್ಯ ಎಂಬುವವರ ಟ್ರೇಡ್ ಲೈಸೆನ್ಸ್ ಚೆಕ್ ಮಾಡಲು ಮಹಾಂತೇಗೌಡ ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ ₹43 ಸಾವಿರ ನಗದು ಹಣವನ್ನು ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಈ ಬಗ್ಗೆ ಉದ್ದಿಮೆದಾರ ರಂಗಧಾಮಯ್ಯ ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡಿದ್ದ ಲೋಕಾಯುಕ್ತ ಪೊಲೀಸರು, ಸಾಕ್ಷ ಸಮೇತ (ರೆಡ್‌ಹ್ಯಾಂಡ್) ಮಹಾತಂತೇಗೌಡನನ್ನು ಹಿಡಿಯಲು ಯೋಜನೆ ರೂಪಿಸಿದ್ದರು. ರಂಗಧಾಮಯ್ಯ ಅವರನ್ನು ಮುಂದೆ ಕಳುಹಿಸಿ, ಲೋಕಾಯುಕ್ತ ಪೊಲೀಸರು ಹಿಂದಿನಿಂದ ತೆರಳಿದ್ದರು.
ಲೋಕಾಯುಕ್ತ ದಾಳಿ ಮಾಡುತ್ತಿದ್ದಂತೆ ಆಹಾರ ನಿರೀಕ್ಷಕ ಮಹಾಂತೇಗೌಡ ಬಿ ಕಡಬಾಳು ತಪ್ಪಿಸಿಕೊಂಡು ತನ್ನ ಕಾರಿನಲ್ಲಿ ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಆರೋಪಿಯನ್ನು ಬೆನ್ನತ್ತಿದ್ದ ಪೊಲೀಸರು ಬರೋಬ್ಬರಿ 15 ಕಿ.ಮೀ ವಾಹನದಲ್ಲಿ ಚೇಸ್ ಮಾಡಿ ನೆಲಮಂಗಲದ ಸೊಂಡೆಕೊಪ್ಪ ರಸ್ತೆ ಬಳಿ ಅಡ್ಡಹಾಕಿದ್ದರು. ಆದರೂ ಆರೋಪಿ ತಪ್ಪಿಸಿಕೊಳ್ಳಲು ಅಧಿಕಾರಿಗಳ ಮೇಲೆ ವಾಹನ ಚಲಾಯಿಸಲು ಪ್ರಯತ್ನಿಸಿದ್ದರು. ಪೊಲೀಸರು ಮತ್ತೊಂದು ಕಾರನ್ನು ಬಳಸಿ ಆರೋಪಿಯನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮೆಟ್ರೋ ಪ್ರಯಾಣಿಕರಿಗಾಗಿ ಶೀಘ್ರದಲ್ಲಿಯೇ ‘ಮೆಟ್ರೋ ಮಿತ್ರಾ’ ಆಟೋ ಸೇವೆ ಆರಂಭ
ಅಲ್ಲದೇ ಆರೋಪಿಯು ಲೋಕಾಯುಕ್ತ ದಾಳಿಯಾಗುತ್ತಿದ್ದಂತೆ ತಪ್ಪಿಸಿಕೊಂಡಿದ್ದಾರೆ. ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸದಂತೆ ತಡೆದಿದ್ದಾರೆ. ಜತೆಗೆ ಹಲ್ಲೆ ಮಾಡಲಾಗಿದೆ ಎಂದು ಅಧಿಕಾರಿಯ ವಿರುದ್ಧ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
“ಮಹಾಂತೇಗೌಡ ಅವರನ್ನು ಲಂಚ ಪಡೆಯುತ್ತಿದ್ದ ಹಣದ ಸಮೇತ ಬಂಧಿಸಲಾಗಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಮತ್ತು ಸರ್ಕಾರಿ ನೌಕರರ ಕೆಲಸಕ್ಕೆ ಅಡ್ಡಿ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ” ಎಂದು ಲೋಕಾಯುಕ್ತದ ಬೆಂಗಳೂರು ನಗರ ಎಸ್ ಪಿ ಕೆ.ವಿ. ಅಶೋಕ್ ತಿಳಿಸಿದ್ದಾರೆ.