ಮುಸ್ಲಿಂ ಯುವಕ ಅಬ್ದುಲ್ ರಹೀಂ ಅವರ ಬರ್ಬರವಾಗಿ ಹತ್ಯೆ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಆಕ್ರೋಶ ಭುಗಿಲೆದ್ದಿದೆ. ಮಂಗಳೂರು, ಬಂಟ್ವಾಳ, ಸುರತ್ಕಲ್‌ನಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಸುರತ್ಕಲ್‌ನಲ್ಲಿ ಬಸ್‌ಗೆ ಕಲ್ಲು ತೂರಾಟ ನಡೆಸಿರುವ ಘಟನೆ ವರದಿಯಾಗಿದೆ.
ಮಂಗಳವಾರ ಸಂಜೆ, ಬಂಟ್ವಾಳ ತಾಲೂಕಿನ ಇರಾ ಕೋಡಿ ಪ್ರದೇಶದಲ್ಲಿ ಅಬ್ದುಲ್ ರಹೀಂ ಅವರ ಮೃತದೇಹ ಪತ್ತೆಯಾಗಿತ್ತು. ಅವರನ್ನು ಕೋಮುವಾದಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅವರ ಹತ್ಯೆಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಬುಧವಾರ ರಹೀಂ ಅವರ ಮೃತದೇಹದ ಅಂತಿಮ ಯಾತ್ರೆ ನಡೆದಿದೆ. ಅಂತಿಮ ಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗಿಯಾಗಿದ್ದಾರೆ. ಮಂಗಳೂರಿನ ಬಿ.ಸಿ ರೋಡ್, ಫರಂಗಿಪೇಟೆಯಲ್ಲಿ ಅಘೋಷಿತ ಬಂದ್ ವಾತಾವರಣ ಸೃಷ್ಟಿಯಾಗಿದೆ. ಎಲ್ಲ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಲಾಗಿದೆ.
ಉಳ್ಳಾಲ ತಾಲೂಕಿನ ಕುತ್ತಾರಿನಿಂದ ಮಂಗಳೂರಿನ ನಂತೂರು, ಪಡೀಲ್ ಅಡ್ಯಾರ್ ಅರ್ಕುಳ, ಫರಂಗಿಪೇಟೆ, ಬಿ.ಸಿ.ರೋಡ್ ಮಾರ್ಗವಾಗಿ ಅಂತಿಮ ಯಾತ್ರೆ ಸಾಗಿದೆ. ರಹೀಂ ಅವರ ನಿವಾಸ ಕುರಿಯಾಳ ಗ್ರಾಮದ ಇರಾಕೋಡಿಯಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆಗಳು ನಡೆದಿವೆ.
ಇದೇ ವೇಳೆ, ನೂರಾರು ಜನರು ಬಿ.ಸಿ ರೋಡ್ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ಕೋಮು ರಾಜಕಾರಣ ಮತ್ತು ಸರ್ಕಾರದ ವೈಫಲ್ಯಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.