ಕಡ್ಡಾಯ ಮತ್ತು ಉಚಿತ ಶಿಕ್ಷಣ(ಆರ್‌ಟಿಇ) ಕಾಯ್ದೆಯಡಿ ಶಾಲೆಗಳ ಆಯ್ಕೆಗೆ ಅರ್ಜಿ ಸಲ್ಲಿಸಿ ಕಳೆದ 15-20 ದಿನಗಳಿಂದಲೂ ಮಕ್ಕಳು ಮತ್ತು ಅವರ ಪೋಷಕರು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. 2025-26ರ ಶೈಕ್ಷಣಿಕ ವರ್ಷದ ಪ್ರವೇಶಾತಿಗಳು ಬಹುತೇಕ ಮುಗಿಯುವ ಹಂತ ತಲುಪಿದ್ದರೂ, ರಾಜ್ಯ ಮತ್ತು ದಾವಣಗೆರೆಯಲ್ಲಿ ಶಿಕ್ಷಣ ಇಲಾಖೆ ಆರ್‌ಟಿಇ ಪ್ರವೇಶಾತಿಯ ಆಯ್ಕೆಪಟ್ಟಿ ಪ್ರಕಟಿಸದೆ ವಿಳಂಬ ಧೋರಣೆ ಅನುಸರಿಸಿರುವುದು ಪೋಷಕರು ಮತ್ತು ಮಕ್ಕಳಲ್ಲಿ ಆತಂಕ ಉಂಟುಮಾಡಿದೆ. ಪ್ರಕಟಣೆಯ ದಿನಾಂಕವನ್ನು ಪದೇಪದೆ ಮುಂದೂಡುತ್ತಿರುವುದು ಕೂಡ ತಮ್ಮ ಮಕ್ಕಳ ಭವಿಷ್ಯದ ಶಿಕ್ಷಣದ ಬಗ್ಗೆ ಪೋಷಕರನ್ನು ಚಿಂತೆಗೀಡು ಮಾಡಿದೆ.

ಆರ್‌ಟಿಇ(ಕಡ್ಡಾಯ ಮತ್ತು ಉಚಿತ ಶಿಕ್ಷಣ) ಇದು ಸಂವಿಧಾನದ ಮೂಲಭೂತ ಆಶಯವಾಗಿದ್ದು, ಶೈಕ್ಷಣಿಕ ಹಕ್ಕು, ಸಂವಿಧಾನದ ಮೂಲಕ ಪ್ರಜಾಪ್ರಭುತ್ವ ಪ್ರಜೆಗಳಿಗೆ ನೀಡಿರುವ ದೊಡ್ಡ ಹಕ್ಕು. ಸ್ವಾತಂತ್ರ್ಯ ಬಂದು ಸಂವಿಧಾನ ಅಳವಡಿಸಿಕೊಂಡು ಬಹುತೇಕ 75 ವರ್ಷಗಳೇ ಕಳೆದಿದ್ದರೂ, ಸಂವಿಧಾನದಲ್ಲಿ ಶಿಕ್ಷಣ ಮೂಲಭೂತ ಹಕ್ಕು ಎಂಬುದನ್ನು ಖಾತ್ರಿಗೊಳಿಸಿದ್ದರೂ ಈ ದೇಶದ ಬಹುತೇಕ ಬಹುಸಂಖ್ಯಾತ ಜನಗಳು ಶಿಕ್ಷಣದಿಂದ ವಂಚಿತರಾಗುತ್ತಲೇ ಬಂದಿದ್ದಾರೆ. ಇದು ಸ್ವಾತಂತ್ರ್ಯ ಮತ್ತು ಸಂವಿಧಾನ ರಚನೆಯ ನಂತರವೂ ಮುಂದುವರೆದಿದ್ದು, ಬಡ, ದಲಿತ, ಹಿಂದುಳಿದ ವರ್ಗದ ಮಕ್ಕಳು ಶಿಕ್ಷಣದಿಂದ ಮುಂಚಿತವಾಗುತ್ತಲೇ ಇದ್ದರು. ಈ ಶೈಕ್ಷಣಿಕ ಅಸಮಾನತೆಯನ್ನು ಹೋಗಲಾಡಿಸಲು ಕೇಂದ್ರ ಸರ್ಕಾರ 2009ರಲ್ಲಿ ಕಡ್ಡಾಯ ಮತ್ತು ಉಚಿತ ಶಿಕ್ಷಣ ಕಾಯ್ದೆಯನ್ನು ಜಾರಿಗೆಗೊಳಿಸಿದ್ದು ಇದರ ಅನ್ವಯ ಸರ್ಕಾರಿ, ಖಾಸಗಿ, ಅನುದಾನ ಅಥವಾ ಅನುದಾನರಹಿತ ಶಾಲೆಗಳಲ್ಲಿ ದುರ್ಬಲ ವರ್ಗದವರಿಗೆ ಶಿಕ್ಷಣಕ್ಕೆ ಕಡ್ಡಾಯ ಮತ್ತು ಉಚಿತ ಪ್ರವೇಶ ದೊರಕಿಸುವುದು ಮತ್ತು 6ರಿಂದ 14 ವರ್ಷದ ಒಳಗಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣವನ್ನು ಒದಗಿಸುವುದು ಇದರ ಗುರಿಯಾಗಿದೆ.

2009ರಲ್ಲಿ ಜಾರಿಗೆ ತರಲಾದ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಮಕ್ಕಳ ಹಕ್ಕು ಕಾಯ್ದೆ(RTE ಕಾಯ್ದೆ), ಭಾರತದಲ್ಲಿ 6 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯಗೊಳಿಸುತ್ತದೆ. ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಕುಟುಂಬಗಳು, ಅಂಚಿನಲ್ಲಿರುವ ಸಮುದಾಯಗಳು ಮತ್ತು ಅಂಗವಿಕಲರ, ಸಮಾಜದ ಅಶಕ್ತ ಮತ್ತು ದುರ್ಬಲ ವರ್ಗಗಳ ಮಕ್ಕಳಿಗೆ ಶಿಕ್ಷಣದ ಮೀಸಲಾತಿಯಡಿ ಶೇ.25ರಷ್ಟು ಸೀಟುಗಳನ್ನು ಮೀಸಲಿಡುವುದು ಒಂದು ಪ್ರಮುಖ ನಿಬಂಧನೆಯಾಗಿದೆ. ಈ ಮೀಸಲಾತಿಯು 1ನೇ ತರಗತಿಯ ಪ್ರವೇಶಕ್ಕೆ ಅನ್ವಯಿಸಲಿದ್ದು, ಇತ್ತೀಚೆಗೆ ನರ್ಸರಿ ಮಕ್ಕಳ ದಾಖಲಾತಿಗೂ ಅನ್ವಯಿಸುತ್ತದೆ ಎನ್ನಲಾಗಿದೆ. ಹಿಂದಿನ ತರಗತಿಗಳಲ್ಲಿರುವ ಮಕ್ಕಳು ಮುಂದಿನ ತರಗತಿಗೆ ಹೋದಂತೆ ಪ್ರತಿ ವರ್ಷ ಹೊಸ ಮಕ್ಕಳಿಗೆ ಪ್ರವೇಶ ನೀಡಲಾಗುತ್ತದೆ.

ಸಂವಿಧಾನದ 86ನೇ ತಿದ್ದುಪಡಿ ಮತ್ತು RTE ಕಾಯ್ದೆಯು ಶಿಕ್ಷಣದ ಹಕ್ಕನ್ನು ಉಲ್ಲಂಘಿಸದಂತೆ ನೋಡಿಕೊಳ್ಳುವಲ್ಲಿ ನ್ಯಾಯಾಂಗವೂ ಕೆಲವೊಮ್ಮೆ ದೃಷ್ಟಿ ಹಾಯಿಸುತ್ತದೆ. ಈ ಕಾಯ್ದೆಯು ನೆರೆಹೊರೆಯ ಖಾಸಗಿ ಸೇರಿದಂತೆ ಯಾವುದೇ ಸ್ಥಳೀಯ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣಕ್ಕೆ ಪ್ರವೇಶವನ್ನು ಒದಗಿಸುತ್ತದೆ. ತಮ್ಮ ಹತ್ತಿರದ ಅವಕಾಶವಿರುವ ಯಾವುದೇ ಶಾಲೆಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದ್ದು, ಶಾಲೆಗಳಲ್ಲಿ ಸೀಟುಗಳ ಲಭ್ಯತೆಯ ಅನುಸಾರ ಪ್ರವೇಶ ದೊರೆಯಲಿದೆ. ಮಹತ್ವದ ಪಾತ್ರವನ್ನು ವಹಿಸುತ್ತವೆ.

ಇಷ್ಟೆಲ್ಲಾ ಅನುಕೂಲತೆ ಇದ್ದರೂ ಇದು ಮಕ್ಕಳಿಗೆ ದೊರಕುವಲ್ಲಿ ವಿಳಂಬವಾಗುತ್ತಿದ್ದು, ಪ್ರಸ್ತುತ ಶೈಕ್ಷಣಿಕ ವರ್ಷದ ಆರ್‌ಟಿಇ ಸೀಟುಗಳ ಹಂಚಿಕೆ ಪಟ್ಟಿ ಪ್ರಕಟವಾಗದಿರುವುದು ಮಕ್ಕಳ, ಪೋಷಕರ ಆತಂಕ ಹೆಚ್ಚಿಸಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚು ಕಮ್ಮಿ ದಾಖಲಾತಿ ಪ್ರಕ್ರಿಯೆ ಮುಗಿಯುತ್ತಿರುವ ಅಂಚಿಗೆ ನಿಂತಿವೆ. ಇತ್ತ ಬಯಸಿದ ಶಾಲೆಯಲ್ಲಿ ಸೀಟು ಸಿಗದೆ, ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರವೇಶ ದಾಖಲಾತಿ ಮುಕ್ತಾಯಗೊಳಿಸಿದರೆ ಉತ್ತಮ ಶಾಲೆ ಮತ್ತು ಶಿಕ್ಷಣ ಸಿಗದೇ ವಿದ್ಯಭ್ಯಾಸ ಕುಂಠಿತವಾಗುವ ಆತಂಕ ಹುಟ್ಟಿಸಿದೆ. ಪಟ್ಟಿ ಪ್ರಕಟವಾಗದಿರುವುದು ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು ಎಂಬುದು ಶೈಕ್ಷಣಿಕ ತಜ್ಞರ ಕಳವಳವಾಗಿದೆ.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಫಲಿತಾಂಶ ಕುಂಠಿತ ಸರ್ಕಾರಿ ಶಾಲೆ, ಖಾಸಗಿ ಶಿಕ್ಷಣ ಸಂಸ್ಥೆಗಳ ದುಬಾರಿ ಶುಲ್ಕದ ಮೇಲೆ ಕ್ರಮಕ್ಕೆ ರೈತ ಸಂಘ ಆಗ್ರಹ.
ಕಂಪ್ಯೂಟರ್ ಸೆಂಟರ್‌ನಲ್ಲಿ ಆರ್‌ಟಿಇ ಅರ್ಜಿಯ ಪ್ರಕಟಣೆ ಪರಿಶೀಲಿಸಲು ಬಂದ ಪೋಷಕರೊಬ್ಬರು, “ಅರ್ಜಿ ಸಲ್ಲಿಸಿ ಶಾಲೆಯ ದಾಖಲಾತಿ ಪಟ್ಟಿ ಪ್ರಕಟಿಸುವುದನ್ನು ಕಾಯುತ್ತಿದ್ದೇವೆ. ಮೊದಲಿಗೆ ಮೇ 17ರಂದು ಪಟ್ಟಿ ಬಿಡುಗಡೆಯಾಗುತ್ತದೆಂದು ಹೇಳಿ, ಮೇ 22ಕ್ಕೆ ನಿಗದಿಪಡಿಸಿದ್ದರು. ಈಗ ಮೇ 30ಕ್ಕೆ ಮುಂದೂಡಲಾಗಿದೆ. ನಿರೀಕ್ಷಿತ ಆಯ್ಕೆಯ ಶಾಲೆಯಲ್ಲಿ ಸೀಟು ಸಿಗಬಹುದು ಎನ್ನುವ ಆಶಾಭಾವದೊಂದಿಗೆ ಕಾಯುತ್ತಿದ್ದೇವೆ. ಖಾಸಗಿ ಶಾಲೆಗಳು ಒಂದಾದ ಮೇಲೆ ಒಂದರಂತೆ ದಾಖಲಾತಿಯನ್ನು ಸಂಪೂರ್ಣಗೊಳಿಸಿ ನಿಲ್ಲಿಸುತ್ತಿದ್ದಾರೆ. ಅಕಸ್ಮಾತ್ ಸೀಟು ಸಿಗದಿದ್ದರೆ ಮುಂದೇನು ಎನ್ನುವ ಪ್ರಶ್ನೆ ಹುಟ್ಟಿದೆ. ಆದ್ದರಿಂದ ಶಿಕ್ಷಣ ಇಲಾಖೆ ಶೀಘ್ರಪಟ್ಟಿ ಬಿಡುಗಡೆ ಮಾಡಬೇಕು” ಎಂದು ಆತಂಕ ವ್ಯಕ್ತಪಡಿಸಿದರು.

ಈ ಬಗ್ಗೆ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೊಟ್ರಪ್ಪ ಈ ದಿನ.ಕಾಮ್‌ಗೆ ಪ್ರತಿಕ್ರಿಯೆ ನೀಡಿದ್ದು, “ಆರ್‌ಟಿಇ(RTE) ಸೀಟುಗಳ ಹಂಚಿಕೆ ಪ್ರಕ್ರಿಯೆಯು ಸೆಂಟ್ರಲೈಸ್ ಆಗಿ ಬೆಂಗಳೂರಿನ ಇಲಾಖೆ ಕಚೇರಿಯಿಂದಲೇ ನಿರ್ಧಾರಿತವಾಗುತ್ತದೆ. ಮಕ್ಕಳ ದಾಖಲಾತಿಗೆ ಸಂಬಂಧಪಟ್ಟಂತೆ ವಯೋಮಿತಿಯ ಸಮಸ್ಯೆಯಿಂದಾಗಿ ಅರ್ಜಿ ಸಲ್ಲಿಸಲು ಹೆಚ್ಚಿನ ಕಾಲಾವಕಾಶ ನೀಡಲಾಗಿತ್ತು. ಹಾಗಾಗಿ 21ರಂದು ಪ್ರಕಟವಾಗಬೇಕಿದ್ದ ಸೀಟು ಹಂಚಿಕೆ ಪ್ರಕ್ರಿಯೆ ಮೇ 30ಕ್ಕೆ ನಿಗದಿಯಾಗಿದೆ. ಇದೇ ಮೇ 29ರಂದು ಹಂಚಿಕೆ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದು, ಇದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಯೇ ಲಾಟರಿ ಮೂಲಕ ನಡೆಯುತ್ತದೆ. ಇದರಲ್ಲಿ ನಮ್ಮ ಪಾತ್ರವೇನೂ ಇರುವುದಿಲ್ಲ. ಹಂಚಿಕೆಯಾದ ಪಟ್ಟಿ ಪಡೆದು ದಾಖಲಾತಿಯ ಮೇಲುಸ್ತುವಾರಿಯನ್ನು ನಾವು ನೋಡಿಕೊಳ್ಳುತ್ತೇವೆ. ಇದೇ 30ರಂದು ಸೀಟು ಹಂಚಿಕೆ ಪ್ರಕಟವಾಗುವ ಖಚಿತತೆ ಇದೆ” ಎಂದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ನರಸೀಪುರ ಸರ್ಕಾರಿ ಶಾಲೆಗೆ ಮೂಲಭೂತ ಸೌಕರ್ಯ ಕಲ್ಪಿಸಿ, ಶಾಲೆ ಮುಚ್ಚದಂತೆ ಕ್ರಮವಹಿಸಿ; ಎಐಡಿಎಸ್‌ಓ
ಅಂತಿಮವಾಗಿ ಈಗಲಾದರೂ ಶಿಕ್ಷಣ ಇಲಾಖೆ ಜರೂರಾಗಿ ಮತ್ತೆ ದಿನಾಂಕ ಮುಂದೂಡದೆ, ಈಗ ನಿಗದಿಪಡಿಸಿರುವ ದಿನಾಂಕಕ್ಕೆ ಸೀಟುಗಳ ಹಂಚಿಕೆ ಪ್ರಕ್ರಿಯೆಯನ್ನು ಪ್ರಕಟಿಸಿ ಪೋಷಕರ, ಮಕ್ಕಳ ಶಿಕ್ಷಣದ ಆತಂಕವನ್ನು ನಿವಾರಿಸಬೇಕೆಂಬುದು ಆರ್‌ಟಿಇ(RTE) ಅರ್ಜಿ ಸಲ್ಲಿಸಿರುವ ದಾವಣಗೆರೆ ಪೋಷಕರು, ಸಾರ್ವಜನಿಕರ ಕಳಕಳಿಯಾಗಿದೆ.

ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು