ಅಂಗಡಿಯೋ, ಅಂಗನವಾಡಿಯೋ ?
ಒಂದೇ ಕೊಠಡಿಯಲ್ಲಿ ಗ್ಯಾಸ್-ಒಲೆ, ಗ್ಯಾಸ್ ಸಿಲಿಂಡರ್ ಹಾಗೂ ಎಳೆಯ ಮಕ್ಕಳು ; ಮಕ್ಕಳ ಸುರಕ್ಷೆಗೆ ಯಾರು ಹೊಣೆ!?
ಚಿಕ್ಕನಾಯಕನಹಳ್ಳಿ ಪಟ್ಟಣದ 14’ನೇ ವಾರ್ಡ್ ಹಾಗೂ 15’ನೇ ವಾರ್ಡ್’ನ ಎರಡು ಅಂಗನವಾಡಿ ಕೇಂದ್ರಗಳನ್ನು ಪುರಸಭೆಯ ಅಂಗಡಿ ಮಳಿಗೆಗಳಲ್ಲಿ ನಡೆಸಲಾಗುತ್ತಿದೆ!
ಪಟ್ಟಣದ ವೆಂಕಟರಮಣಸ್ವಾಮಿ ದೇವಾಲಯದ ಎದುರಿರುವ ಪುರಸಭೆಯ ಅಂಗಡಿ-ಮಳಿಗೆಯಲ್ಲಿ ನಡೆಸಲಾಗುತ್ತಿರುವ ಈ ಅಂಗನವಾಡಿ ಕೇಂದ್ರಗಳಿಗೆ ಕ್ರಮವಾಗಿ 19 ಹಾಗೂ 21 ಮಂದಿ ಮಕ್ಕಳು ಹಾಜರಾಗುತ್ತಿದ್ದಾರೆ. 10/10 ಅಳತೆಯ ಸಣ್ಣ ಗಾತ್ರದ ಮಳಿಗೆಯಲ್ಲಿ ದೇಶದ ಭವಿಷ್ಯದ ಪ್ರಜೆಗಳನ್ನು ಕುಳ್ಳಿರಿಸಿಕೊಂಡು ಅಂಗನವಾಡಿ ನಡೆಸಬೇಕಾದ ದುಃಸ್ಥಿತಿಗೆ ಸ್ಥಳೀಯ ಆಡಳಿತ ತಲುಪಿರುವುದು ತೀರಾ ಶೋಚನೀಯ ಎಂದು ಸ್ಥಳೀಯರು ಟೀಕಿಸುತ್ತಾರೆ.

10/10 ಅಳತೆಯ ಈ ಅಂಗಡಿ ಮಳಿಗೆಯಲ್ಲೇ ಗ್ಯಾಸ್-ಒಲೆ, ಗ್ಯಾಸ್ ಸಿಲಿಂಡರ್, ತಟ್ಟೆ-ಲೋಟ, ನೀರಿನ-ಕ್ಯಾನು, ಮಕ್ಕಳ ಕಲಿಕಾ ಸಾಮಗ್ರಿ ಹಾಗೂ ಮತ್ತಿತರೆ ಸರಂಜಾಮುಗಳ ಜೊತೆ ಹತ್ತಾರು ಎಳೆಯ ಮಕ್ಕಳನ್ನು ಕೂಡಿಕೊಳ್ಳಲಾಗುತ್ತಿದೆ. ಕನಿಷ್ಟ ಶೌಚಾಲಯದ ಯಾವುದೇ ವ್ಯವಸ್ಥೆಯೂ ಇಲ್ಲಿಲ್ಲ. ನಾಳೆ ಅಕಸ್ಮಾತ್ ಏನಾದರೂ ಅವಘಡ ಘಟಿಸಿದರೆ ಅದಕ್ಕೆ ಹೊಣೆ ಯಾರು ? ಎಂದು ಇಲ್ಲಿನ ಪುರ-ನಿವಾಸಿಗಳು ಆಕ್ರೋಶದಿಂದ ಪ್ರಶ್ನಿಸುತ್ತಾರೆ.

ಆ ವಾರ್ಡುಗಳಲ್ಲಿ ಖಾಲಿ ಇರುವ ಪುರಸಭೆ-ವ್ಯಾಪ್ತಿಯ ಜಾಗವನ್ನು ಗುರ್ತಿಸಿಕೊಟ್ಟರೆ, ಅಲ್ಲಿ ಸುಸಜ್ಜಿತವಾದ ಅಂಗನವಾಡಿ ಕಟ್ಟಡ ನಿರ್ಮಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಆದರೆ, ನಿವೇಶನ ಒದಗಿಸಿಕೊಡುವಂತೆ ಕೋರಿ ಪುರಸಭೆಗೆ ಇಲಾಖೆಯ ಕಡೆಯಿಂದ ಯಾವುದೇ ಅರ್ಜಿ ಬಂದಿಲ್ಲ. ಹಾಗೇನಾದರೂ ಅವರು ಅರ್ಜಿ ನೀಡಿದರೆ, ತಾವು ತ್ವರಿತವಾಗಿ ಖಾಲಿ ಜಾಗ ಗುರ್ತಿಸಿಕೊಡಲು ಬದ್ಧರಿದ್ದೇವೆ ಎಂದು ಮುಖ್ಯಾಧಿಕಾರಿ ಪಿ ಮಂಜಮ್ಮ ಈ-ದಿನ.ಕಾಮ್’ಗೆ ಸ್ಪಷ್ಟಪಡಿಸುತ್ತಾರೆ.
ಮಹಾತ್ಮಗಾಂಧಿ ಶಿಶು-ವಿಹಾರ : ಪಟ್ಟಣದಲ್ಲಿನ 15’ನೇ ವಾರ್ಡಿನ ಮಾರ್ಕೆಟ್ ಪಕ್ಕದಲ್ಲೇ ಇರುವ ‘ಮಹಾತ್ಮಗಾಂಧಿ ಶಿಶು-ವಿಹಾರ’ ಸಂಪೂರ್ಣ ಶಿಥಿಲಗೊಂಡಿದೆ. ಉಪಯೋಗಕ್ಕೆ ಬಾರದೆ ಶಿಥಿಲಾವಸ್ಥೆಯಲ್ಲಿರುವ ಆ ಕಟ್ಟಡವನ್ನು ನೆಲಸಮಗೊಳಿಸಿದರೆ ಅಲ್ಲಿ ಸುವಿಶಾಲವಾದ ಒಂದು ನಿವೇಶನ ಖುಲ್ಲಾ ಆಗಲಿದೆ. ಆಗ, ಅಲ್ಲಿ ಅಂಗನವಾಡಿ ಕಟ್ಟಡ ಹಾಗೂ ನಮ್ಮ-ಕ್ಲಿನಿಕ್ ಎರಡಕ್ಕೂ ಸುಸಜ್ಜಿತವಾದ ಸ್ವಂತ ಕಟ್ಟಡ ನಿರ್ಮಿಸಿಕೊಟ್ಟಂತಾಗುತ್ತದೆ! ಅಷ್ಟಲ್ಲದೆ, ಪಕ್ಕದ 16’ನೇ ವಾರ್ಡಿನಲ್ಲಿ ಈ-ಹಿಂದೆ ‘ಬಾಂಬೆ-ಟಾಯ್ಲೆಟ್ಸ್’ಗಾಗಿ ಮೀಸಲಾಗಿದ್ದ ಸರ್ಕಾರಿ ಜಾಗ ಖಾಲಿಯಿದೆ. ಅಕ್ಕಪಕ್ಕದ ಕೆಲ ಬಲಾಢ್ಯರು ಅದನ್ನು, ದನದ-ಕೊಟ್ಟಿಗೆ ಮತ್ತು ಅಡಿಕೆ-ಶೆಡ್ ತರಹ ಬಳಸಿಕೊಳ್ಳುತ್ತಿದ್ದಾರೆ. ಪುರಸಭೆಯವರು ಅದನ್ನು ತೆರವುಗೊಳಿಸಿಕೊಟ್ಟರೆ ಅಲ್ಲಿಯೂ ಸುಸಜ್ಜಿತವಾದ ಅಂಗನವಾಡಿ-ಕೇಂದ್ರ ಮತ್ತು ನಮ್ಮ-ಕ್ಲಿನಿಕ್ ಎರಡಕ್ಕೂ ಒಂದೇ ಸೂರಿನಡಿ ಸ್ವಂತ ಕಟ್ಟಡ ಕಲ್ಪಿಸಿಕೊಟ್ಟಂತಾಗುತ್ತದೆ ಎಂದು ಕೆಲ ಸ್ಥಳೀಯರು ಸಲಹೆಗಳನ್ನು ನೀಡುತ್ತಾರೆ.

14’ನೇ ವಾರ್ಡ್ ಪುರಸಭಾ ಸದಸ್ಯರಾದ ಸಿ ಬಸವರಾಜು ಹಾಗೂ 15’ನೇ ವಾರ್ಡ್ ಪುರಸಭಾ ಸದಸ್ಯರಾದ ಮಲ್ಲೇಶಯ್ಯ(ಟಿಂಬರ್) ಈರ್ವರೂ ಸೇರಿ ಬಗೆಹರಿಸಬೇಕಾಗಿರುವ ಕೆಲಸ ಇದು. ಸದರಿ ಸದಸ್ಯರಿಬ್ಬರೂ ಇತ್ತ ಗಮನ ಹರಿಸಿ, ನಾಳೆ ಏನಾದರೂ ಅವಘಡ ಸಂಭವಿಸುವ ಮೊದಲೇ ಈ ಸಮಸ್ಯೆಯನ್ನು ಬಗೆಹರಿಸಿದರೆ, ಇಲ್ಲಿನ ಮಕ್ಕಳ ಪೋಷಣೆ ಮತ್ತು ರಕ್ಷಣೆಗಾಗಿ ಸರ್ಕಾರ ಅನುಷ್ಠಾನಗೊಳಿಸಿರುವ ಯೋಜನೆಗಳ ಲಾಭವನ್ನೂ ನಮ್ಮ ಮಕ್ಕಳೂ ಪಡೆಯಬಹುದು ಎಂದು ಇಲ್ಲಿನ ನಿವಾಸಿಗಳು ನಿರೀಕ್ಷೆ ವ್ಯಕ್ತಪಡಿಸುತ್ತಾರೆ.

ಮಹಾತ್ಮಗಾಂಧಿ ಶಿಶುವಿಹಾರ ಶಿಥಿಲಾವಸ್ಥೆಗೆ ಸಂದು ನಾಲ್ಕಕ್ಕಿಂತ ಹೆಚ್ಚಿನ ವರ್ಷಗಳಾದವು. ಬಾಲ್ಯಕಾಲದಿಂದಲೂ ಮಹಾತ್ಮಗಾಂಧಿ ಶಿಶು-ವಿಹಾರವನ್ನು ನೋಡುತ್ತಾ ಬೆಳೆದವರು ನಾವು. ಪಟ್ಟಣದಲ್ಲಿ ಒಂದು ಪ್ರಮುಖವಾದ ‘ಲ್ಯಾಂಡ್-ಮಾರ್ಕ್’ ಆಗಿದ್ದ ಶಿಶು-ವಿಹಾರ ಈಗ ಶಿಥಿಲಗೊಂಡು ಒಳಗಡೆಯಿಂದಲೇ ಕುಸಿಯುತ್ತಿದೆ. ಅದರ ಮಹತ್ತತೆ ಹಾಗೂ ಪ್ರಾಮುಖ್ಯತೆಯನ್ನು ಕನಿಷ್ಟ ಅರಿಯದ ಕೆಲಮಂದಿ-ಸ್ಥಳೀಯರು, ಅದನ್ನು ಕಸದ ತಿಪ್ಪೆಯನ್ನಾಗಿ ಪರಿವರ್ತಿಸಿಟ್ಟಿದ್ದಾರೆ. ರಾತ್ರಿಯ ಕತ್ತಲಲ್ಲಿ ಶಿಥಿಲಗೊಂಡ ಶಿಶು-ವಿಹಾರದ ಕಟ್ಟಡದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತವೆ ಎಂದು ಸ್ಥಳೀಯರು ದೂರುತ್ತಾರೆ. ಇದು ಎಷ್ಟು ನಿಜವೋ, ಅದೆಷ್ಟು ಊಹಾಪೋಹವೋ ಸ್ಪಷ್ಟ-ಗೊತ್ತಿಲ್ಲ. ಆದರೆ, ತನ್ನ ಮೂಲಸ್ವರೂಪ ಮತ್ತು ಮಹತ್ತತೆಯನ್ನು ಕಳೆದುಕೊಂಡು, ಇಷ್ಟೆಲ್ಲಾ ಅಪಚಾರಗಳ ಅಡ್ಡೆಯಾಗಿ ಹಾನಿಗೊಳಗಾಗಿರುವ ಈ ಶಿಶು-ವಿಹಾರದ ಕಟ್ಟಡವನ್ನು ನೆಲಸಮಗೊಳಿಸಿ ಅದರ ನಿವೇಶನವನ್ನು ಖುಲ್ಲಾ ಮಾಡಿಕೊಟ್ಟರೆ, ಅಲ್ಲಿ ಸುಸಜ್ಜಿತವಾದ ಅಂಗನವಾಡಿ ಕಟ್ಟಡ ನಿರ್ಮಿಸಲು ಮುಂದಡಿಯಿಟ್ಟಂತಾಗುತ್ತದೆ ಎಂದು ಪುರಸಭಾ ಸದಸ್ಯ ಮಹಮದ್ ಹುಸೇನ್’ ಅಭಿಪ್ರಾಯಪಡುತ್ತಾರೆ.

ದೇಶದ ಭವಿಷ್ಯದ ಪ್ರಜೆಗಳಾದ ಇಲ್ಲಿನ ಎಳೆಯ ಕಂದಮ್ಮಗಳನ್ನು, ಅಂಗಡಿ-ಮಳಿಗೆಯ ಕೊಠಡಿಯಲ್ಲಿ ಕುಳ್ಳಿರಿಸಿಕೊಂಡು ನಡೆಸಲಾಗುತ್ತಿರುವ ಅಂಗನವಾಡಿ-ಕೇಂದ್ರವನ್ನು ತೋರುತ್ತಾ ಆಕ್ರೋಶಿತರಾದ ಸಾಮಾಜಿಕ ಕಾರ್ಯಕರ್ತ ಭೀಮಬಂಧು-ಪ್ರವೀಣ್, ಇಲ್ಲಿನ ನಿವಾಸಿಗಳು ಹಾಗೂ ಇಲ್ಲಿನ ಮಕ್ಕಳೊಂದಿಗೆ ಸ್ಥಳೀಯ ಆಡಳಿತ ಮತ್ತು ಇಲಾಖೆಗಳು ನಡೆದುಕೊಳ್ಳುತ್ತಿರುವ ರೀತಿಯನ್ನು ಕಟುವಾಗಿ ಟೀಕಿಸುತ್ತಾರೆ. ಈ ವಿಷಯದಲ್ಲಿ ಭೀಮ-ಬಂಧುಗಳು ಹಾಗೂ ಅಹಿಂದ-ಬಂಧುಗಳು ಒಟ್ಟಾಗಿ ಕ್ರಿಯಾಶೀಲಗೊಳ್ಳಬೇಕಾದ ತುರ್ತನ್ನು ವಿವರಿಸಿದ ಅವರು, ಶಿಥಿಲಗೊಂಡಿರುವ ‘ಮಹಾತ್ಮಗಾಂಧಿ ಶಿಶು-ವಿಹಾರ’ದ ಕಟ್ಟಡ ಅವಶೇಷವನ್ನು ಅಲ್ಲಿಂದ ತೆರವುಗೊಳಿಸಿ, ಆ ನಿವೇಶನದಲ್ಲಿ ಸುಸಜ್ಜಿತವಾದ ಒಂದು ಕಟ್ಟಡ ನಿರ್ಮಿಸಿ, ಒಂದೇ ಸೂರಿನಡಿ ಅಂಗನವಾಡಿ ಕೇಂದ್ರ, ನಮ್ಮ-ಕ್ಲಿನಿಕ್ ಹಾಗೂ ಒಂದು ಸಾರ್ವಜನಿಕ ಗ್ರಂಥಾಲಯವನ್ನು ಸ್ಥಾಪಿಸಬೇಕು. ಮತ್ತದಕ್ಕೆ, ‘ಮಹಾತ್ಮಗಾಂಧಿ ಶಿಶು-ವಿಹಾರ’ ಅಂತಲೇ ಮತ್ತೆ ನಾಮಕರಣ ಮಾಡಬೇಕು ಎಂದು ಭೀಮಬಂಧು-ಪ್ರವೀಣ್ ಒತ್ತಾಯಿಸುತ್ತಾರೆ.
ಜಿಲ್ಲೆಯಲ್ಲಿ ತುರ್ತಾಗಿ ಅಗತ್ಯವಿರುವ ಅಂಗನವಾಡಿ ಕೇಂದ್ರಗಳ ಕಟ್ಟಡ-ನಿರ್ಮಾಣಕ್ಕೆ ಸಂಬಂಧಿಸಿದಂತೆ ಆಕ್ಷನ್-ಪ್ಲಾನ್ ಹಾಗೂ ಡಿಪಿಆರ್ ಸಿದ್ಧಪಡಿಸಿ ಸರ್ಕಾರಕ್ಕೆ ಈಗಾಗಲೇ ಸಲ್ಲಿಸಲಾಗಿದೆ. ತುಮಕೂರು ಜಿಲ್ಲೆಯ ಒಟ್ಟು 164 ಕಟ್ಟಡಗಳ ನಿರ್ಮಾಣಕ್ಕೆ ಸರ್ಕಾರದಿಂದ ಅನುಮೋದನೆ ದೊರೆತಿದೆ. ತಾಲ್ಲೂಕುವಾರು ಅಗತ್ಯವಿರುವ ಅಂಗನವಾಡಿ ಕಟ್ಟಡಗಳ ಅನುಸಾರ ಅವುಗಳ ನಿರ್ಮಾಣಕ್ಕೆ ಇನ್ನು ಕೆಲವೇ ದಿನಗಳಲ್ಲಿ ಟೆಂಡರ್ ಕರೆಯಲಾಗುವುದು. ಈ ಎಲ್ಲ ಪ್ರಕ್ರಿಯೆಯನ್ನು ಕರ್ನಾಟಕ ಸರ್ಕಾರದ ಪರವಾಗಿ ‘ಹ್ಯಾಬಿಟ್ಯಾಟ್-ಕ್ರೈಸ್ ಸಂಸ್ಥೆ’ ನಿರ್ವಹಿಸಲಿದೆ. ತುಮಕೂರು ಜಿಲ್ಲೆಯ ಪ್ರಸ್ತುತ 164 ಕಟ್ಟಡಗಳ ನಿರ್ಮಾಣದ ಟೆಂಡರ್-ಪ್ರಕ್ರಿಯೆ ಮತ್ತು ನಿರ್ಮಾಣ ಉಸ್ತುವಾರಿ ಎಲ್ಲವೂ ಅದರದ್ದೇ ಆಗಿರಲಿದೆ ಎಂದು ಜಿಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿ ದಿನೇಶ್ ವಿವರಿಸಿದ್ದಾರೆ.

ಗಣಿಬಾಧಿತ ಪ್ರದೇಶಾಭಿವೃದ್ಧಿ ನಿಧಿ ಯೋಜನೆಯಡಿ ತಾಲ್ಲೂಕಿನಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ಅದರಲ್ಲಿ, ಚಿಕ್ಕನಾಯಕನಹಳ್ಳಿ ಪಟ್ಟಣವೊಂದರಲ್ಲೇ 12 ಕಟ್ಟಡಗಳು ನಿರ್ಮಾಣ ಆಗಬೇಕಿವೆ! ಮಿಕ್ಕವು ವಿವಿಧ ಗ್ರಾಮಗಳಲ್ಲಿ ನಿರ್ಮಾಣಗೊಳ್ಳಬೇಕಾಗಿವೆ. ಪಟ್ಟಣದಲ್ಲಿ ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿರುವ ಅಥವಾ ಅಂಗಡಿ-ಮಳಿಗೆಗಳಲ್ಲಿ ನಡೆಸಲಾಗುತ್ತಿರುವ ಎಲ್ಲ ಕೇಂದ್ರಗಳಿಗೂ ಶೀಘ್ರದಲ್ಲೇ ಸ್ವಂತ ಕಟ್ಟಡ ನಿರ್ಮಿಸಿಕೊಡಲಾಗುವುದು ಎಂದು ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹೊನ್ನಪ್ಪ’ ತಿಳಿಸಿದ್ದಾರೆ.
l

ಸದರಿ ವಾರ್ಡ್’ಗಳಲ್ಲಿ ಅಂಗನವಾಡಿ ಕೇಂದ್ರಕ್ಕೆ ಅಗತ್ಯವಾದ ಕಟ್ಟಡ ನಿರ್ಮಿಸಲು ಜಾಗದ ಸಮಸ್ಯೆಯಿದೆ. ಶಿಥಿಲಗೊಂಡಿರುವ ‘ಮಹಾತ್ಮಗಾಂಧಿ ಶಿಶು-ವಿಹಾರ’ ಕಟ್ಟಡವನ್ನು ತೆರವುಗೊಳಿಸಿ ಅಲ್ಲಿ ನೂತನವಾಗಿ ಸುಸಜ್ಜಿತವಾದ ಒಂದು ಕಟ್ಟಡ ನಿರ್ಮಿಸಿಕೊಡಲಾಗುವುದು. ಹಾಗೂ ಸಾರ್ವಜನಿಕರು ಪದೇ ಪದೇ ಹೇಳುತ್ತಿರುವ ‘ಬಾಂಬೆ-ಟಾಯ್ಲೆಟ್ಸ್’ನ ಖಾಲಿ ಜಾಗ ಒತ್ತುವರಿ ಆಗಿದ್ದರೆ, ಅದನ್ನೂ ತೆರವುಗೊಳಿಸಿ ಶೀಘ್ರವಾಗಿ ಅಂಗನವಾಡಿ-ಕೇಂದ್ರ ಒದಗಿಸಿಕೊಡುವ ವ್ಯವಸ್ಥೆ ಮಾಡುತ್ತೇನೆ ಎಂದು ಜೆಡಿಎಲ್-ಪಿ ನಾಯಕ ಹಾಗೂ ಶಾಸಕ ಸಿ ಬಿ ಸುರೇಶ್ ಬಾಬು’ರವರು, ಈ-ದಿನ.ಕಾಮ್’ಗೆ ತಿಳಿಸಿದ್ದಾರೆ.
10/10 ಅಳತೆಯ ಸಣ್ಣಗಾತ್ರದ ಇಕ್ಕಟ್ಟಿನ ಅಂಗಡಿ-ಮಳಿಗೆಯಲ್ಲಿ ನಡೆಯುತ್ತಿರುವ ಅಂಗನವಾಡಿ-ಕೇಂದ್ರಕ್ಕೆ ತಮ್ಮ ಮನೆ-ಮಕ್ಕಳನ್ನು ಕಳಿಸಲು ಪೋಷಕರು ಹಿಂಜರಿಯುತ್ತಿದ್ದಾರೆ. ಗ್ಯಾಸ್-ಒಲೆ, ಗ್ಯಾಸ್-ಸಿಲಿಂಡರ್’ಗಳನ್ನು ಇಟ್ಟುಕೊಂಡು ಪೋಷಣ್ ಅಭಿಯಾನದ ಅನೇಕ ಬಗೆಯ ಅಡುಗೆ-ಕೆಲಸಗಳನ್ನು ಮಾಡಲಾಗುತ್ತಿರುವ ಅದೇ ಕೊಠಡಿಯಲ್ಲಿ ಮಕ್ಕಳಿಗೆ ತರಗತಿಗಳನ್ನೂ ಅನಿವಾರ್ಯ ನಡೆಸಲಾಗುತ್ತಿದೆ. ಕನಿಷ್ಟ ಶೌಚಾಲಯದ ಯಾವುದೇ ವ್ಯವಸ್ಥೆಯೂ ಇಲ್ಲಿಲ್ಲ. ಅಂಗನವಾಡಿ-ಕೇಂದ್ರಗಳ ಇಂಥ ದುಃಸ್ಥಿತಿಯನ್ನು ಕಂಡ ಕೆಲ-ಪೋಷಕರು, ತಮ್ಮ ಮಕ್ಕಳ ಸುರಕ್ಷೆಯ ಬಗ್ಗೆ ಪ್ರಶ್ನೆ ಎತ್ತುತ್ತಿದ್ದಾರೆ! ಹೀಗಾಗಿ, ತಮ್ಮ ಮಕ್ಕಳನ್ನು ಈ ಅಂಗನವಾಡಿ-ಕೇಂದ್ರಕ್ಕೆ ಕಳಿಸಲು ಹಿಂಜರಿಯುತ್ತಿದ್ದಾರೆ. ಇದರಿಂದಾಗಿ, ಮಕ್ಕಳ ಪೋಷಣೆ ಮತ್ತು ರಕ್ಷಣೆಗಾಗಿ ಜಾರಿಯಲ್ಲಿರುವ ಸರ್ಕಾರದ ಅನೇಕ ಮಹತ್ವಾಕಾಂಕ್ಷಿ ಯೋಜನೆಗಳ ಲಾಭದಿಂದ ಆ ಮಕ್ಕಳು ವಂಚಿತರಾಗುತ್ತಿದ್ದಾರೆ. ಸ್ಥಳೀಯ ಆಡಳಿತ ಇಷ್ಟು ಸಣ್ಣಮಟ್ಟದ ಸೌಕರ್ಯವನ್ನೂ ಸಣ್ಣ-ಮಕ್ಕಳಿಗೆ ಒದಗಿಸಿಕೊಡಲಾಗದಷ್ಟು ದುಃಸ್ಥಿತಿಗೆ ತಲುಪಿದೆಯೇ…. ಎಂದು ಸಾರ್ವಜನಿಕರು ಅಸಮಾಧಾನಗೊಂಡಿದ್ದಾರೆ.
ವರದಿ – ಸಂಚಲನ, ಚಿಕ್ಕನಾಯಕನ ಸೀಮೆಯಿಂದ