ಬೆಂಗಳೂರು ಅರಮನೆ ಮೈದಾನದ ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ನಿಂದ ಸದ್ಯಕ್ಕೆ ತಾತ್ಕಾಲಿಕ ರಿಲೀಫ್ ದೊರೆತಿದೆ.
ಬೆಂಗಳೂರಿನ ಬಳ್ಳಾರಿ ರಸ್ತೆ ಮತ್ತು ಜಯಮಹಲ್ ರಸ್ತೆಗಳ ವಿಸ್ತರಣೆಗಾಗಿ ಸ್ವಾಧೀನಪಡಿಸಿಕೊಂಡಿರುವ ಅರಮನೆ ಮೈದಾನದ 15.39 ಎಕರೆಗೆ ₹3,400 ಕೋಟಿ ಮೌಲ್ಯದ ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕುಗಳ (ಟಿಡಿಆರ್) ಪ್ರಮಾಣಪತ್ರಗಳನ್ನು ಮೈಸೂರಿನ ರಾಜವಂಶಸ್ಥರಿಗೆ ಕೂಡಲೇ ಹಸ್ತಾಂತರಿಸುವಂತೆ ಸುಪ್ರೀಂ ಕೋರ್ಟ್ ಆದೇಶಕ್ಕೆ ಗುರುವಾರ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.
ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ತ್ರಿಸದಸ್ಯ ಪೀಠ ಈ ಆದೇಶ ನೀಡಿದ್ದು, ಮರುಪರಿಶೀಲನಾ ಅರ್ಜಿಯ ಮುಂದಿನ ವಿಚಾರಣೆಯನ್ನು ಜುಲೈ 21ಕ್ಕೆ ಹಾಗೂ ಮುಖ್ಯ ಸಿವಿಲ್ ಅರ್ಜಿಯ ವಿಚಾರಣೆಯನ್ನು ಆಗಸ್ಟ್ 18ಕ್ಕೆ ನಿಗದಿಪಡಿಸಿದೆ.
ರಸ್ತೆಗಳ ವಿಸ್ತರಣೆಗಾಗಿ ಸ್ವಾಧೀನಪಡಿಸಿಕೊಂಡಿರುವ ಅರಮನೆ ಮೈದಾನದ 15.36 ಎಕರೆಗೆ ₹3,400 ಕೋಟಿ ಮೌಲ್ಯದ ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕು (ಟಿಡಿಆರ್) ಪ್ರಮಾಣಪತ್ರಗಳನ್ನು ಮೈಸೂರಿನ ರಾಜವಂಶಸ್ಥರಿಗೆ ಕೂಡಲೇ ಹಸ್ತಾಂತರಿಸುವಂತೆ ಸುಪ್ರೀಂ ಕೋರ್ಟ್ ಮೇ 22ರಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಇದರಿಂದಾಗಿ, ಟಿಡಿಆರ್ ನೀಡಿಕೆಯಿಂದ ತಪ್ಪಿಸಿಕೊಳ್ಳಲು ನಾನಾ ಕಸರತ್ತು ನಡೆಸಿದ್ದ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ಟಿಡಿಆರ್ ಪ್ರಮಾಣಪತ್ರಗಳನ್ನು ಮೈಸೂರಿನ ರಾಜವಂಶಸ್ಥರಿಗೆ ಕೂಡಲೇ ಹಸ್ತಾಂತರಿಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹೊಸದಾಗಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ರಾಜ್ಯ ಸರ್ಕಾರದ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸುತ್ತಿದ್ದು, ಗುರುವಾರ ಅರ್ಜಿ ವಿಚಾರಣೆ ನಡೆಯಿತು. ಕರ್ನಾಟಕ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಕೆ ಶಶಿ ಕಿರಣ್ ಶೆಟ್ಟಿ ಮತ್ತು ಹೆಚ್ಚುವರಿ ಅಡ್ವೊಕೇಟ್ ಜನರಲ್ ನಿಶಾಂತ್ ಪಾಟೀಲ್ ವಿಚಾರಣೆಗೆ ಹಾಜರಾಗಿದ್ದರು.