ಬಸ್ತರ್ ಫೈಲ್ಸ್ | ಬಸವರಾಜು ಹೋಗಿರಬಹುದು, ನಕ್ಸಲ್ ಚಳವಳಿ ಇನ್ನೂ ಜೀವಂತವಿದೆ

Date:

Advertisements

”ಬಾಂಗ್ಲಾದೇಶದಲ್ಲಿ ನಡೆದ ರಕ್ತಸಿಕ್ತ ಹತ್ಯಾಕಾಂಡವು ಜೆಕೊಸ್ಲೊವಾಕಿಯಾದ ಮೇಲೆ ರಷ್ಯಾದ ಆಕ್ರಮಣವನ್ನು ಕಣ್ಮರೆಗೊಳಿಸಿತು. ಅಲೆಂಡೆ ಹತ್ಯೆಯು ಬಾಂಗ್ಲಾದೇಶದ ನರಳಾಟವನ್ನು ಮರೆಮಾಡಿತು. ಸಿನಾಯ್ ಮರುಭೂಮಿಯಲ್ಲಿನ ಯುದ್ಧವು ಅಲೆಂಡೆಯನ್ನು ಜನರು ಮರೆಯುವಂತೆ ಮಾಡಿತು. ಕಾಂಬೋಡಿಯನ್ ಹತ್ಯಾಕಾಂಡವು ಸಿನಾಯ್ಅನ್ನು ಜನ ಮರೆಯುವಂತೆ ಮಾಡಿತು. ಹೀಗೆ, ಅಂತಿಮವಾಗಿ ಎಲ್ಲವನ್ನೂ ಎಲ್ಲರೂ ಮರೆತುಬಿಡುವವರೆಗೆ ಒಂದೊಂದು ಹಿಂಸೆಗಳು ನಡೆಯುತ್ತಲೇ ಇವೆ. ಮುಂದೆಯೂ ನಡೆಯಬಹುದು” –ಇದು ಮಿಲನ್ ಕುಂದೇರಾ ಅವರ ‘ದಿ ಬುಕ್ ಆಫ್ ಲಾಫ್ಟರ್ ಅಂಡ್ ಫರ್ಗೆಟಿಂಗ್’ನಲ್ಲಿನ ಗಮನ ಸೆಳೆವ ಸಾಲುಗಳು. ಅವರ ಹೇಳಿಕೆಯಂತೆಯೇ ಭಾರತವೂ ಸೇರಿ, ಜಗತ್ತಿನಲ್ಲಿ ಒಂದು ಹಿಂಸೆಯನ್ನು ಮರೆಮಾಚಲು ಮತ್ತೊಂದು ಹಿಂಸೆ ನಡೆಯುತ್ತಲೇ ಇದೆ.

ಪ್ರತಿಭಾನ್ವಿತ ಆಕ್ಸ್‌ಫರ್ಡ್ ವಿದ್ವಾಂಸ, ಮಾನವಶಾಸ್ತ್ರಜ್ಞ ವೆರಿಯರ್ ಎಲ್ವಿನ್ ಅವರು ತಮ್ಮ ಗೊಂಡ್ ಪತ್ನಿ ಕೋಸಿಯೊಂದಿಗೆ 1940ರಲ್ಲಿ ಛತ್ತೀಸ್‌ಗಢದ ಬಸ್ತರ್ ಪ್ರದೇಶದಲ್ಲಿರುವ ಬುಡಕಟ್ಟು ಜನಾಂಗದ ಬಗ್ಗೆ ಅಧ್ಯಯನ ಮಾಡಲು ಬಂದಿದ್ದರು. ಆಗ ಆ ಪ್ರದೇಶವು ನಿಜಕ್ಕೂ ಒಂದು ನೈಸರ್ಗಿಕ ಸೊಬಗಿನಿಂದ ಕೂಡಿತ್ತು. ಇಂದ್ರಾವತಿ ನದಿಯ ಚಿತ್ರಕೋಟೆ ಜಲಪಾತವನ್ನು ನೋಡುತ್ತಾ, ಆನಂದಿಸುತ್ತಾ ಅವರು ತಮ್ಮ ಮನೆಯನ್ನು ನಿರ್ಮಿಸಿದರು.

ಮುಂದಿನ 50 ವರ್ಷಗಳಲ್ಲಿ ಭಾರತದ ಅತ್ಯಂತ ಶ್ರೀಮಂತ ಪ್ರದೇಶವಾದ ಬಸ್ತರ್‌ನಲ್ಲಿ ಬುಡಕಟ್ಟು ಜನಾಂಗವನ್ನು ಕಾಡುಗಳಿಂದ ಹೊರಹಾಕಲಾಯಿತು, ಅವರ ಇರುವಿಕೆಯ ಅವಶೇಷಗಳೂ ಇಲ್ಲದಂತೆ ಮಾಡಲಾಯಿತು. ಬುಡಕಟ್ಟು ಜನಾಂಗವು ಮೂಲಭೂತ ಹಕ್ಕುಗಳಿಗಾಗಿ ಪರಿತಪಿಸುವಂತೆ, ತಮ್ಮ ಬದುಕಿನ ಬವಣೆಗಾಗಿ ಹೋರಾಡುವಂತೆ ಮಾಡಲಾಯಿತು. ಬುಡಕಟ್ಟು ಸಮುದಾಯವು ನರಳುತ್ತಿದ್ದ ಬಸ್ತರ್ ಪ್ರದೇಶಕ್ಕೆ 80ರ ದಶಕದ ಹೊತ್ತಿಗೆ ಮಾವೋವಾದಿಗಳು ಧಾವಿಸಿದರು, ತಮ್ಮ ಕಾರ್ಯಾಚರಣೆಗೆ ನೆಲೆಯನ್ನು ಕಂಡುಕೊಂಡರು. ಗ್ರಾಮಸ್ಥರನ್ನು ಸಶಸ್ತ್ರ ಕಾರ್ಯಾಚರಣೆಗೆ ಸಜ್ಜುಗೊಳಿಸಿದರು. ನಂತರ ನಡೆದದ್ದು ಬದುಕಿಗಾಗಿ ಹೋರಾಡುವವರು ಮತ್ತವರ ಪರವಾಗಿ ನಿಂತವರು ಮತ್ತು ದಮನ ಮಾಡುವವರ ನಡುವಿನ ಕದನ. ಆಡಳಿತ ಸರ್ಕಾರಗಳು ಬಸ್ತರ್ ಪ್ರದೇಶದ ಮೇಲೆ ದಮನಕಾರಿ ಕಾನೂನು, ಕಾರ್ಯಾಚರಣೆಗಳನ್ನು ಹೆಚ್ಚಿಸಿದವು.

Advertisements

ಕಾಲಕಾಲಕ್ಕೆ ಮಾವೋವಾದಿಗಳು ತೀವ್ರವಾಗಿ ದಾಳಿ ನಡೆಸಿದರು, ಪ್ರತೀಕಾರದ ಯುದ್ಧ ಮುಂದುವರೆಯಿತು. ಮಾವೋವಾದಿಗಳನ್ನು ಹತ್ತಿಕ್ಕಲು, ಹತ್ಯೆಗಯ್ಯಲು ಸರ್ಕಾರಗಳು ನಾನಾ ಪೊಲೀಸ್‌, ಸಶಸ್ತ್ರ ಪಡೆಗಳನ್ನು ರೂಪಿಸಿದವು. ಕಳೆದ ತಿಂಗಳವರೆಗೆ ಮಾವೋವಾದಿಗಳ ಮೇಲೆ ಭಾರತೀಯ ಪಡೆಗಳು ದಾಳಿ ನಡೆಸಿವೆ. ಹಲವರನ್ನು ಕೊಂದಿವೆ. ಆ ಹತ್ಯೆಗಳ ಮೂಲಕ ಪ್ರಮುಖ ಪ್ರಗತಿ ಸಾಧಿಸಿರುವುದಾಗಿ ಹೇಳಿಕೊಂಡಿವೆ.

ಬಸವರಾಜು ಹೋಗಿದ್ದಾರೆ – ಆದರೆ ನಕ್ಸಲ್ ಚಳವಳಿ ಉಳಿದಿದೆ

ಪರ್ಯಾಯ ದ್ವೀಪವಾದ ಭಾರತದಲ್ಲಿ, 5,000 ಅಡಿ ಎತ್ತರದಲ್ಲಿರುವ ಕರ್ರೆಗುಟ್ಟಲು ಬೆಟ್ಟಗಳ ಅದ್ಭುತ ಪ್ರದೇಶದಲ್ಲಿ ಭಾರತ ಸರ್ಕಾರವು ಯಶಸ್ವಿ ಗೆಲುವನ್ನು ಕಂಡಿದೆ. ಹಲವು ದಶಕಗಳಿಂದ ಮಾವೋವಾದಿಗಳ ಹೃದಯಭೂಮಿಯಾಗಿರುವ ಬಸ್ತಾರ್‌ನಲ್ಲಿ ಕಳೆದ 21 ದಿನಗಳ ಕಾಲ ನಡೆದ ರಕ್ತಸಿಕ್ತ ‘ಆಪರೇಷನ್ ಬ್ಲಾಕ್ ಫಾರೆಸ್ಟ್’ ಕಾರ್ಯಾಚರಣೆ ನಡೆಸಿ, ಅಬುಜ್ಮದ್‌ನಲ್ಲಿ ಮತ್ತೊಂದು ಮಾರಕ ಎನ್ಕೌಂಟರ್ ನಡೆಸಿದೆ. ವಾಮೋವಾದಿಗಳನ್ನು ನಿರ್ದಯವಾಗಿ ಕೊಂದಿದೆ.

ನಕ್ಸಲ್ ಹೋರಾಟವು 58 ಮಂದಿ ಕಾರ್ಯಕರ್ತರನ್ನು ಕಳೆದುಕೊಂಡಿದೆ. ಜೊತೆಗೆ, ಗಮನಾರ್ಹ ನಷ್ಟವಾಗಿ ಭಾರತ ಕಮ್ಯುನಿಸ್ಟ್ ಪಕ್ಷದ (ಮಾವೋವಾದಿ) ಉನ್ನತ ನಾಯಕ ನಂಬಲ ಕೇಶವರಾವ್ ಅಲಿಯಾಸ್ ಬಸವರಾಜು ಅವರನ್ನು ಕಳೆದುಕೊಂಡಿದೆ.

70 ವರ್ಷ ವಯಸ್ಸಿನ ಬಸವರಾಜು ಅವರು ಆ ನಿರ್ಜನ ಬೆಟ್ಟಗಳಲ್ಲಿ ಹೋರಾಟದ ಕದನದಲ್ಲಿದ್ದರು ಎಂಬುದು ಅಸಂಭವ. ಬಸವರಾಜು ಅವರ ನಿಕಟವರ್ತಿಯಾಗಿದ್ದ ಓರ್ವ ಮಾವೋವಾದಿ ಕಾರ್ಯಕರ್ತ ಇತ್ತೀಚೆಗೆ ಮುಖ್ಯವಾಹಿನಿಗೆ ಬಂದಿದ್ದರು. ಅವರು ಶರಣಾಗತಿ ಹೆಸರಿನಲ್ಲಿ ಮುಖ್ಯವಾಹಿನಿಗೆ ಬಂದಿದ್ದರಿಂದಲೇ ಪೊಲೀಸರು ಬಸವರಾಜು ಅವರಿದ್ದ ನೆಲೆಯನ್ನು ತಲುಪಲು ಸಾಧ್ಯವಾಗಿರಬಹುದು ಎಂಬ ಅಭಿಪ್ರಾಯಗಳು ಬಲವಾಗಿವೆ.

ಈ ಬಾರಿ, ಭಾರತೀಯ ಪಡೆಗಳ ಕಾರ್ಯತಂತ್ರವು ಮಾವೋವಾದಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಳ್ಳುವ ಬದಲು ನಾಯಕರನ್ನು ಗುರಿಯಾಗಿಸಿಕೊಂಡಿತ್ತು. ಛತ್ತೀಸ್‌ಗಢ, ತೆಲಂಗಾಣ ಹಾಗೂ ಮಹಾರಾಷ್ಟ್ರದಾದ್ಯಂತ 54 ಮಾವೋವಾದಿಗಳನ್ನು ಬಂಧಿಸಲಾಗಿದೆ. 84 ಮಂದಿ ತಾವಾಗಿಯೇ ಮುಖ್ಯವಾಹಿನಿಗೆ ಬಂದು, ಬಂಧನಕ್ಕೊಳಗಾಗಿದ್ದಾರೆ ಎಂದು ಸರ್ಕಾರ ಹೇಳಿಕೊಂಡಿದೆ.

ಮಾವೋವಾದಿ ಹೋರಾಟಗಾರರ ನಿಜವಾದ ಶಕ್ತಿ, ಪ್ರಭಾವ ಮತ್ತು ವಿಸ್ತರಣೆ ಹೆಚ್ಚಾಗಿ ಯಾರಿಗೂ ತಿಳಿದಿರಲು ಸಾಧ್ಯವಿಲ್ಲ. ಭಾರತೀಯ ಭದ್ರತಾ ಪಡೆಗಳಿಗೆ ಆ ಬಗ್ಗೆ ಅರಿಯವುದು ಅಷ್ಟು ಸುಲಭವೂ ಅಲ್ಲ. ಆದಾಗ್ಯೂ, ಇತ್ತೀಚೆಗೆ, ನಡೆದ ಭೀಕರ ಕಾರ್ಯಾಚರಣೆ ಮತ್ತು ಎನ್‌ಕೌಂಟರ್‌ಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದ 2026ರ ವೇಳೆಗೆ ನಕ್ಸಲ್ ಹೋರಾಟವನ್ನು ನಿರ್ನಾಮ ಮಾಡುವ ಪ್ರತಿಜ್ಞೆಗೆ ಹತ್ತಿರವಾಗುತ್ತಿದ್ದಾರೆ ಎಂಬ ಊಹೆಯನ್ನು ದೇಶದಲ್ಲಿ ಬಿತ್ತಿವೆ.

ಆದರೆ, 1967ರಲ್ಲಿ ಉತ್ತರ ಬಂಗಾಳದ ಚಹಾ ತೋಟಗಳಲ್ಲಿ ಹುಟ್ಟಿ, ದೇಶದ 20 ರಾಜ್ಯಗಳಲ್ಲಿ ಹರಡಿ, 50 ವರ್ಷಗಳಿಗೂ ಹೆಚ್ಚು ಕಾಲ ಸರ್ಕಾರಿ ಮಿಲಿಟರಿ ಕಾರ್ಯಾಚರಣೆಗಳು, ಎನ್‌ಕೌಂಟರ್‌ಗಳನ್ನು ಎದುರಿಸಿ ಬದುಕುಳಿದು ಬಂದಿರುವ ನಕ್ಸಲ್ ಚಳವಳಿಗೆ ಇನ್ನೊಂದು ವರ್ಷದಲ್ಲಿ ಮರಣಶಾಸನ ಬರೆಯಬಹುದೇ? ಅದು ಸಾಧ್ಯವೇ?

ನಕ್ಸಲ್ ವಿಜಯಗಳು ಮತ್ತು ನಷ್ಟಗಳು

ನಕ್ಸಲ್ ಚಳವಳಿಯು ಗಣನೀಯವಾಗಿ ದುರ್ಬಲಗೊಂಡಿದ್ದರೂ, ನಾರಾಯಣಪುರ, ಬಿಜಾಪುರ ಹಾಗೂ ದಂತೇವಾಡ ಜಿಲ್ಲೆಗಳ ಅರಣ್ಯ ಪ್ರದೇಶದಲ್ಲಿ ಸಂಘಟನೆಯು ಹೆಚ್ಚಾಗಿ ಸಕ್ರಿಯವಾಗಿದೆ.

ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ(ಪಿಎಲ್‌ಜಿಎ)ಯ ಬೆಟಾಲಿಯನ್-1ರ ಕಮಾಂಡರ್ ಇನ್ ಚೀಫ್ ಹಿಡ್ಮಾ ಅವರು ಇನ್ನೂ ತಲೆಮರೆಸಿಕೊಂಡಿದ್ದಾರೆ. ಅವರು ಎಲ್ಲಿ ಅಡಗಿದ್ದಾರೆ ಎಂಬುದರ ಬಗ್ಗೆ ಯಾವುದೇ ಸುಳಿವಿಲ್ಲ.

ಬಸವರಾಜು ನೇತೃತ್ವದಲ್ಲಿ ಕಳೆದ ದಶಕದಲ್ಲಿ ನಡೆದ ಅತ್ಯಂತ ಬೃಹತ್ ದಾಳಿಗಳಿಗೆ ಹಿಡ್ಮಾ ಅವರು ಕಾರಣರೆಂದು ಹೇಳಲಾಗಿದೆ. ಅಂತಹ ದಾಳಿಗಳ ಪೈಕಿ, 2010ರಲ್ಲಿ ಚಿಂತಲ್ನಾರ್‌ನಲ್ಲಿ ನಡೆದ 76 ಸಿಆರ್‌ಪಿಎಫ್ ಸಿಬ್ಬಂದಿಯ ಹತ್ಯೆ ಮತ್ತು 2013ರಲ್ಲಿ ಜಿರಾಮ್ ಘಾಟಿಯಲ್ಲಿ ಕಾಂಗ್ರೆಸ್‌ ನಾಯಕನ ಮೇಲಿನ ದಾಳಿ ಪ್ರಮುಖವಾದವು.

ಇತ್ತೀಚಿಗೆ, ಸಿಪಿಐ(ಮಾವೋವಾದಿ)ನ ‘ದಂಡಕಾರಣ್ಯ ವಿಶೇಷ ವಲಯ ಸಮಿತಿ’ಯು ಹೆಚ್ಚಿನ ಸಂಖ್ಯೆಯ ನಕ್ಸಲ್ ಕಾರ್ಯಕರ್ತರು ಪೊಲೀಸರ ಎದುರು ಶರಣಾಗಿದ್ದಾರೆ ಎಂಬುದನ್ನು ಒಪ್ಪಿಕೊಂಡಿದೆ. ಅವರ ಶರಣಾಗತಿಯಿಂದಲೇ ರಾಜ್ಯ ಪಡೆಗಳು ನಕ್ಸಲ್ ಹೋರಾಟಗಾರರ ನೆಲೆಗಳನ್ನು ಸುತ್ತವರೆದು 27 ಕಾರ್ಯಕರ್ತರನ್ನು ಬಲಿ ತೆಗೆದುಕೊಳ್ಳಲು ಸಹಾಯ ಮಾಡಿದೆ ಎಂದು ಹೇಳಲಾಗಿದೆ.

ಏನೇ ಇರಲಿ, ಭಾರತೀಯ ಪಡೆಗಳು ನಕ್ಸಲ್ ಹೋರಾಟಗಾರರ ಅಜೇಯ ಅಡಗುತಾಣಗಳಿಗೆ ನುಗ್ಗಿ ಆ ಪ್ರದೇಶದಲ್ಲಿ ನಕ್ಸಲ್‌ ಕಾರ್ಯಕರ್ತರನ್ನು ಹುಡುಕಿ ಕೊಂದಿವೆ. ತಮಗಿದ್ದ ತಡೆಗೋಡೆಗಳನ್ನು ದಾಳಿ ಮುನ್ನುಗ್ಗಿವೆ. ಆದರೆ, ಮುಂದೇನು?

ಗಣಿಗಾರಿಕೆ ಸಮಸ್ಯೆ ಹಾಗೆಯೇ ಉಳಿದಿದೆ

ಛತ್ತೀಸ್‌ಗಢವು ಭಾರತದ ‘ಖನಿಜಗಳ ಹೃದಯ’ ಎಂದು ಎಲ್ಲರಿಗೂ ತಿಳಿದಿದೆ. ಇದು ಇಡೀ ದೇಶದಲ್ಲಿರುವ ಕಬ್ಬಿಣದ ಅದಿರಿನ ನಿಕ್ಷೇಪಗಳಲ್ಲಿ 19% ನಿಕ್ಷೇಪಗಳನ್ನು ಹೊಂದಿದೆ. ಜೊತೆಗೆ, ಸುಣ್ಣದ ಕಲ್ಲು, ಬಾಕ್ಸೈಟ್, ಗ್ರಾಫೈಟ್, ಡಾಲಮೈಟ್, ಗ್ಲಾಕೋನೈಟ್ ಹಾಗೂ ತವರ ಅದಿರು ಸೇರಿದಂತೆ 28 ಖನಿಜಗಳನ್ನು ತನ್ನ ಒಡಲೊಳಗೆ ಇಟ್ಟುಕೊಂಡಿದೆ.

ರಾಜ್ಯದಲ್ಲಿ 20,798 ಗಣಿಗಾರಿಕೆ ಯೋಜನೆಗಳು ಸಕ್ರಿಯವಾಗಿವೆ. ಬಸ್ತಾರ್‌ ಜಿಲ್ಲೆಯಲ್ಲಿರುವ 51 ಖನಿಜ ಗುತ್ತಿಗೆಗಳ ಪೈಕಿ, 36 ಖಾಸಗಿ ಕಂಪನಿಗಳಿಂದ ನಡೆಸಲ್ಪಡುತ್ತಿವೆ. ಹೆಚ್ಚುವರಿಯಾಗಿ, ರಾಜ್ಯದಲ್ಲಿ 39 ಕಲ್ಲಿದ್ದಲು ಗಣಿಗಳು ಇವೆ. ಈ ಎಲ್ಲ ಗಣಿಗಾರಿಕೆಗಳು ಛತ್ತೀಸ್‌ಗಢವನ್ನು ಅಗೆದು, ತೋಡುತ್ತಿವೆ.

ಈ ಲೇಖನ ಓದಿದ್ದೀರಾ?: ‘ಆಪರೇ‍ಷನ್ ಸಿಂಧೂರ’ದಲ್ಲಿವೆ ಹಲವು ವೈಫಲ್ಯಗಳು: ಇಲ್ಲಿದೆ ಪೂರ್ಣ ಮಾಹಿತಿ

ವಿಶ್ವದ ಅತಿದೊಡ್ಡ ಕಲ್ಲಿದ್ದಲು ಗಣಿಗಳಲ್ಲಿ ಎರಡು ಗಣಿಗಳು ‍ಛತ್ತೀಸ್‌ಗಢದಲ್ಲೇ ಇವೆ. 2023-24ರಲ್ಲಿ ಭಾರತ ಸರ್ಕಾರದ ಗಣಿ ಸಚಿವಾಲಯ ನೀಡಿದ ದತ್ತಾಂಶದ ಪ್ರಕಾರ, ಛತ್ತೀಸ್‌ಗಢದಲ್ಲಿ 4.3 ಕೋಟಿ ಟನ್ ಕಬ್ಬಿಣದ ಅದಿರು ಉತ್ಪಾದನೆ ಮಾಡಲಾಗುತ್ತಿದೆ.

ಈ ಬೃಹತ್ ಪ್ರಮಾಣದ ಖನಿಜವನ್ನು ಸಾಗಿಸಲು, ಕಳೆದ ತಿಂಗಳು ಬಸ್ತಾರ್‌ ಜಿಲ್ಲೆಯಲ್ಲಿ ಹೊಸ ‘ರೌಘಾಟ್-ಜಗದಲ್‌ಪುರ್’ ರೈಲು ಮಾರ್ಗ ಯೋಜನೆಯನ್ನು ಮಂಜೂರು ಮಾಡಲಾಗಿದೆ. 140 ಕಿಲೋಮೀಟರ್ ಉದ್ದದ ಈ ಯೋಜನೆಯು ನಕ್ಸಲ್ ಸಕ್ರಿಯ ತಾಣವನ್ನು ದಾಟಬೇಕು. 3,500 ಕೋಟಿ ರೂ. ವೆಚ್ಚದ ಈ ಯೋಜನೆಯು ಜಗದಲ್‌ಪುರದಿಂದ ರಾಯ್‌ಪುರಕ್ಕೆ ಸಂಪರ್ಕ ಸಾಧಿಸಲು ನೆರವಾಗುತ್ತದೆ. ರಾಯ್‌ಪುರದಿಂದ ಮುಂಬೈ-ಹೌರಾ ರೈಲ್ವೆ ಮಾರ್ಗವನ್ನು ಸಂಪರ್ಕಿಸುತ್ತದೆ. ಈ ಯೋಜನೆಯು ದೇಶದ ಉತ್ತರ ಮತ್ತು ಪಶ್ಚಿಮ ಭಾಗಗಳ ನಡುವಿನ ಸಂಪರ್ಕವನ್ನು ಸುಗಮಗೊಳಿಸುತ್ತದೆ. ಮಾತ್ರವಲ್ಲ, ಸರಕು ಸಾಗಣೆಯಲ್ಲಿ ಭಾರತೀಯ ರೈಲ್ವೇ ಗಳಿಸುತ್ತಿರುವ ಆದಾಯದಲ್ಲಿ 18% ಪಾಲು ಹೊಂದಿರುವ ರಾಜ್ಯವು, ಹೊಸ ಮಾರ್ಗದಿಂದ ಮತ್ತಷ್ಟು ಹೆಚ್ಚು ಆದಾಯ ನೀಡುತ್ತದೆ. ಆದರೆ, ಪರಿಸರ ಸಂಪತ್ತನ್ನು ನಾಶ ಮಾಡುತ್ತದೆ ಮತ್ತು ಸ್ಥಳೀಯ ನಿವಾಸಿಗಳನ್ನು ಬೀದಿಪಾಲು ಮಾಡುತ್ತದೆ.

ಗಂಭೀರ ಮತ್ತು ಗಮನಾರ್ಹ ವಿಚಾರವೆಂದರೆ, ಈ ಯೋಜನೆಯ ಅನುಷ್ಠಾನಕ್ಕೆ ಮಾವೋವಾದಿ ಹೋರಾಟಗಾರರು ಸರ್ಕಾರಕ್ಕೆ ಸವಾಲಾಗಿದ್ದಾರೆ. ಯೋಜನೆಯ ಮಾರ್ಗವು ಮಾವೋವಾದಿಗಳ ಸಕ್ರಿಯ ತಾಣವನ್ನು ಹಾದುಹೋಗಬೇಕಿದೆ. ಜೊತೆಗೆ, ನೈಸರ್ಗಿಕ ಸಂಪನ್ಮೂಲಗಳು, ಖನಿಜಗಳ ದೋಚುವಿಕೆಗೆ ಸರ್ಕಾರಗಳ ಧಾವಂತದ ವಿರುದ್ಧ ಸ್ಥಳೀಯ ಆದಿವಾಸಿ ಪ್ರತಿರೋಧವು ಗಟ್ಟಿಯಾಗಿದೆ. ಆದಿವಾಸಿಗಳ ಪ್ರತಿರೋಧವನ್ನು ಹತ್ತಿಕ್ಕಲು ಹವಣಿಸುತ್ತಿರುವ ಸರ್ಕಾರಗಳಿಗೆ ಮಾವೋವಾದಿಗಳು ಎದುರಾಗಿ ನಿಂತಿದ್ದಾರೆ. ಹೀಗಾಗಿ, ಮಾವೋವಾದಿಗಳನ್ನು ಆ ಪ್ರದೇಶದಿಂದ ತೆರವುಗೊಳಿಸುವುದು ಸರ್ಕಾರಗಳಿಗೆ ಅಗತ್ಯವಾಗಿದೆ.

ಭವಿಷ್ಯದಲ್ಲಿ ಇನ್ನೂ ಹಲವು ಗಣಿಗಾರಿಕೆಗಳು ಬಸ್ತರ್‌ ಪ್ರದೇಶದಲ್ಲಿ ಆರಂಭವಾಗಲಿವೆ. ಅವುಗಳಲ್ಲಿ ಈ ಹಿಂದೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಅದಾನಿ ಗ್ರೂಪ್‌ನ ‘ಬೈಲದಿಲಾ ಗಣಿ’ಯೂ ಒಂದು.

ಈ ಪ್ರದೇಶದಲ್ಲಿ ನೈಸರ್ಗಿಕ ಸಂಪತ್ತನ್ನು ನಾಶ ಮಾಡ ಹೊರಟಿರುವ ಗಣಿಗಾರಿಕೆಗಳ ವಿರುದ್ಧ ಪ್ರತಿಭಟಿಸುವ ಎಲ್ಲರನ್ನೂ ಮಾವೋವಾದಿ ಎಂದು ಹಣೆಪಟ್ಟಿ ಕಟ್ಟಲಾಗುತ್ತಿದೆ. ಅಲ್ಲದೆ, ಗಣಿ ಕಂಪನಿಗಳು 9 ಬುಡಕಟ್ಟು ನಿವಾಸಿಗಳಿಗೆ ಒಬ್ಬರು (9:1) ಎಂಬ ಅನುಪಾತದಲ್ಲಿ ಭದ್ರತಾ ಸೈನಿಕರನ್ನು ಪ್ರಾಯೋಜಿಸುತ್ತಿವೆ ಎಂದು ಹೇಳಲಾಗಿದೆ. ಹೀಗಾಗಿ, ಆದಿವಾಸಿಗಳಿಗೆ ಮಾವೋವಾದಿ ಹಣೆಪಟ್ಟಿ ಕಟ್ಟಿ, ಅಮಾಯಕರನ್ನೂ ಬಲಿ ಪಡೆಯುವುದು ಅಪಾಯವಿದೆ ಎಂದು ಹೇಳಲಾಗುತ್ತಿದೆ.

ಬ್ರಿಟಿಷ್ ಅರಣ್ಯ ನೀತಿಗಳ ವಿರುದ್ಧ ಬಸ್ತಾರ್ ಅತ್ಯಂತ ಉಗ್ರ ಪ್ರತಿರೋಧ ತೋರಿಸಿತ್ತು. ಗುಂಡಾ ಧುರ್ ನೇತೃತ್ವದ ಭೂಮ್ಕಾಲ್ ದಂಗೆಯ ಇತಿಹಾಸವು ಬಸ್ತರ್ ಕಾಡುಗಳಲ್ಲಿ ಈಗಲೂ ಜೀವಂತವಾಗಿ ಪ್ರಜ್ವಲಿಸುತ್ತಿದೆ.

ಬ್ರಿಟಿಷ್‌ ಆಡಳಿತದಲ್ಲಿ (ಒಂದು ಶತಮಾನ) ಅರಂಭವಾದ ಸರ್ಕಾರದ ವಿರುದ್ದದ ದಂಗೆಯು ಈಗಲೂ ಮುಂದುವರೆದಿದೆ. ಆ ಭೂಮಿಯ ಮೊದಲ ವಾರಸುದಾರರು, ನಾಗರಿಕರಾದ ಆದಿವಾಸಿಗಳು ತಮ್ಮ ಅಸ್ತಿತ್ವ ಮತ್ತು ನೈಸರ್ಗಿಕ ಸಂಪತ್ತಿನ ಉಳಿವಿಗಾಗಿ ಸರ್ಕಾರಗಳ ಜೊತೆಗೆ ಸಂಘರ್ಷ ನಡೆಸುತ್ತಿದ್ದಾರೆ. ಕಳೆದ 50 ವರ್ಷಗಳಿಂದ ವಾಮೊವಾದಿಗಳು ಅವರ ಜೊತೆಗೂಡಿದ್ದಾರೆ.

ಹೊಸ ಗಣಿಗಾರಿಕೆಗಳು ಆರಂಭವಾದರೆ, ಗೋದಾವರಿ ನದಿಗೆ ಅಣೆಕಟ್ಟಿನ ಕಾರಣದಿಂದಾಗಿ ತಮ್ಮ ಮನೆಗಳನ್ನು ಕಳೆದುಕೊಂಡ ಡೋರ್ಲಾ ಬುಡಕಟ್ಟು ಜನಾಂಗದವರು ನಿರ್ಗತಿಕರಾದಂತೆ, ಹೊರಹಾಕಲ್ಪಟ್ಟಂತೆ ತಮ್ಮನ್ನೂ ಹೊರದಬ್ಬಲಾಗುತ್ತದೆ ಎಂಬ ಆತಂಕ ಬಸ್ತರ್ ಪ್ರದೇಶದ ಆದಿವಾಸಿಗಳಲ್ಲಿದೆ. ಅಭಿವೃದ್ದಿ ಯೋಜನೆಗಳಿಗಾಗಿ ಸ್ಥಳಾಂತರಗೊಳಿಸಲ್ಪಟ್ಟ ಬೃಹತ್ ಸಂಖ್ಯೆಯ ಜನರಲ್ಲಿ, ವಿರಳ ಸಂಖ್ಯೆಯ ಜನರಿಗೆ ಮಾತ್ರವೇ ಪುನರ್ವಸತಿ ದೊರೆತಿದೆ ಎಂಬುದನ್ನು ಸ್ವತಂತ್ರ ಅಂತಾರಾಷ್ಟ್ರೀಯ ಮೇಲ್ವಿಚಾರಣಾ ವರದಿಗಳು ಬಹಿರಂಗ ಪಡಿಸಿವೆ. ಆದಾಗ್ಯೂ, ನಕ್ಸಲ್ ಸಕ್ರಿಯ ಪ್ರದೇಶಗಳಿಂದ ಸ್ಥಳಾಂತರಗೊಂಡ ಜನರಿಗೆ ಯಾವುದೇ ಪುನರ್ವಸತಿ, ಸರ್ಕಾರಿ ದಾಖಲೆ ಅಥವಾ ನೋಂದಣಿ ನೀಡಲಾಗಿಲ್ಲ ಎಂಬ ಆರೋಪಗಳೂ ಇವೆ.

ಬಸ್ತರ್ ಪ್ರದೇಶದಲ್ಲಿ ಆದಿವಾಸಿ, ಬುಡಕಟ್ಟು ಸಮುದಾಯದ ಹಕ್ಕುಗಳಿಗಾಗಿ, ಅವರ ಉಳಿವಿಗಾಗಿ ಮಾವೋವಾದಿ ಹೋರಾಟಗಾರರು ಜೀವ-ಜೀವನ ಪಣಕ್ಕಿಟ್ಟು ಹೋರಾಟ ನಡೆಸುತ್ತಿದ್ದಾರೆ. ಜೊತೆಗೆ, ಸರ್ಕಾರದೊಂದಿಗೆ ಮಾತುಕತೆ ನಡೆಸಿ, ಸಶಸ್ತ್ರವನ್ನು ತ್ಯಜಿಸಿ, ಮುಖ್ಯವಾಹಿನಿಗೆ ಬರಲು ಸಿದ್ದರಿದ್ದಾರೆ. ನಕ್ಸಲರು ತುಳಿದಿದ್ದ ಹಾದಿ ತಪ್ಪಿರಬಹುದು. ಆದರೆ, ಉದ್ದೇಶ ಸಮಾಜಪರವಾದದ್ದು. ಹೀಗಾಗಿ, ಅವರೊಂದಿಗೆ ಮಾತುಕತೆ ನಡೆಸಿ, ಅವರನ್ನು ಮುಖ್ಯವಾಹಿನಿಗೆ ಕರೆ ತರುವುದು, ಗೌರವದಿಂದ ನಡೆಸಿಕೊಳ್ಳುವುದು ಸರ್ಕಾರಗಳ ಆದ್ಯತೆಯಾಗಬೇಕು. ನಕ್ಸಲರನ್ನು ಮುಖ್ಯವಾಹಿನಿಗೆ ತರುವಲ್ಲಿ ಕರ್ನಾಟಕವು ಮಾದರಿ ಹಾಕಿಟ್ಟಿದೆ. ಅದೇ ಮಾದರಿಯನ್ನು ಎಲ್ಲ ರಾಜ್ಯಗಳು ಅಳವಡಿಸಿಕೊಳ್ಳುವುದು ಉತ್ತಮ!

ಮೂಲ: ದಿ ಕ್ವಿಂಟ್
ಕನ್ನಡಕ್ಕೆ: ಸೋಮಶೇಖರ್ ಚಲ್ಯ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

Download Eedina App Android / iOS

X