ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಹೊತ್ತಿನಲ್ಲಿಯೂ ಕೆಲವೇ ಕೆಲವು ಸರ್ಕಾರಿ ಶಾಲೆಗಳು ಶಿಕ್ಷಕರ ಇಚ್ಛಾಶಕ್ತಿಯಿಂದ ಅತ್ಯುತ್ತಮವಾಗಿ ನಡೆಯುತ್ತಿವೆ. ಅಂತಹ ಶಾಲೆಗಳಲ್ಲಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿಯ ಅಂಬೇಡ್ಕರ್ ನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೂ ಒಂದು. ಹೆಚ್ಚು ಮಕ್ಕಳು ಕಲಿಯುತ್ತಿರುವ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅನುಸಾರವಾಗಿ ತರಗತಿ ಕೊಠಡಿಗಳಿಲ್ಲ. ಹೀಗಾಗಿ, ಹೆಚ್ಚುವರಿ ಕೊಠಡಿಗಳನ್ನು ಮಂಜೂರು ಮಾಡಬೇಕೆಂದು ಒತ್ತಾಯಿಸಿದ, ಪ್ರತಿಭಟನೆ ನಡೆಸಿದ ಆ ಶಾಲೆಯ ಶಿಕ್ಷಕ ವೀರಣ್ಣ ಮಡಿವಾಳರ ಅವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ನೋಟಿಸ್ ನೀಡಿದ್ದಾರೆ. ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಅಂಬೇಡ್ಕರ್ ನಗರ ಸರ್ಕಾರಿ ಶಾಲೆಗೆ 4 ಕೊಠಡಿಗಳ ಅಗತ್ಯವಿದೆ. ಶಿಕ್ಷಣ ಇಲಾಖೆಯು ಮಕ್ಕಳ ಸಂಖ್ಯೆಯನ್ನು ಪರಿಗಣಿಸಿ 4 ಕೊಠಡಿಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಬೇಕು, ಅನುದಾನ ಬಿಡುಗಡೆ ಮಾಡಬೇಕೆಂದು ಶಿಕ್ಷಕ ವೀರಣ್ಣ ಅವರು ಹಲವು ಬಾರಿ ಇಲಾಖೆ ಇಲಾಖೆಗೆ ಮನವಿ ಸಲ್ಲಿಸಿದ್ದರು. ಆದರೆ, ಅವರ ಮನವಿಗೆ ಇಲಾಖೆಯಿಂದ ಸ್ಪಂದನೆ ದೊರೆತಿರಲಿಲ್ಲ.
ಪರಿಣಾಮವಾಗಿ, ಬೇಸತ್ತ ಶಿಕ್ಷಕ ವೀರಣ್ಣ ಅವರು ಮೇ 27ರಂದು ಅಂಬೇಡ್ಕರ್ ನಗರದಿಂದ ರಾಯಬಾಗ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಕಚೇರಿವರೆಗೆ ಮೌನ ಪ್ರತಿಭಟನಾ ಕಾಲ್ನಡಿಗೆ ಜಾಥಾ ನಡೆಸಿದ್ದರು. ಅಂಬೇಡ್ಕರ್ ಫೋಟೋ ಹಿಡಿದು, ಗಾಂಧಿ ಟೋಪಿ ಧರಿಸಿ, ‘ನಾಲ್ಕು ಕೊಠಡಿಗಳ ಮಂಜೂರಾತಿ ಆಗ್ರಹಿಸಿ, ಆಮರಣಾಂತ ಉಪವಾಸ ಸತ್ಯಾಗ್ರಹ’ ಎಂಬ ಬರಹವಿದ್ದ ಪ್ಲೆಕಾರ್ಡ್ ಹಿಡಿದು ಬಿಇಒ ಕಚೇರಿ ಎದುರು ಪ್ರತಿಭಟನಾ ಧರಣಿ ಕುಳಿತಿದ್ದರು.

ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸಿದ ಕಾರಣಕ್ಕಾಗಿ ಶಿಕ್ಷಕ ವೀರನ್ಣ ಮಡಿವಾಳರ ಅವರಿಗೆ ಬಿಇಒ ನೋಟಿಸ್ ಜಾರಿ ಮಾಡಿದ್ದಾರೆ. “ಸರ್ಕಾರಿ ಶಿಕ್ಷಕನಾಗಿ ನೀವು ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿರುವುದು ಇಲಾಖೆಯ ನೀತಿ-ನಿಯಮಗಳ ಉಲ್ಲಂಘನೆಯಾಗಿದೆ. ಸರ್ಕಾರಿ ನೌಕರನಾಗಿ ಏನೇ ಬೇಡಿಕೆಗಳಿದ್ದರೂ ಮನವಿ ರೂಪದಲ್ಲಿ ಇಲಾಖೆ/ಮೇಲಧಿಕಾರಿಗಳಿಗೆ ತಿಳಿಸಬೇಕೇ ಹೊರತು, ಸರ್ಕಾರಕ್ಕೆ ಸವಾಲು ಹಾಕುವ ರೀತಿ ಇರಬಾರದು. ನೀವು ಧರಣಿ ನಡೆಸಿ, ಏರು ದನಿಯಲ್ಲಿ ಮಾತನಾಡಿರುವುದು ಉದ್ಧಟತನ ಮತ್ತು ಅನಾಕರಿಕತನವಾಗಿದೆ. ನಿಮ್ಮ ವಿರುದ್ಧ ಯಾಕೆ ಕ್ರಮ ಕೈಗೊಳ್ಳಬಾರದು ಎಂಬುದನ್ನು 24 ಗಂಟೆಯೊಳಗೆ ಉತ್ತರಿಸಬೇಕು. ಇಲ್ಲದಿದ್ದರೆ, ಏಕಪಕ್ಷೀಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ ತಿಳಿದಿರಲಿ” ಎಂದು ನೋಟಿಸ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ.
ಇನ್ನು, ನೋಟಿಸ್‌ಗೆ ಪ್ರತಿಕ್ರಿಯಿಸಿರುವ ಶಿಕ್ಷಕ ವೀರಣ್ಣ, “ಕಳೆದ 9 ವರ್ಷಗಳಿಂದ ಅಂಬೇಡ್ಕರ್ ನಗರ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ನಾನಾ ರೀತಿಯ ದಾನಿಗಳ ನೆರವು ಪಡೆದು, ಶಾಲೆಯ ಬೆಳವಣಿಗೆಗೆ ಶ್ರಮಿಸಿದ್ದೇನೆ. ನಮ್ಮ ಶಾಲೆಯ ಅಭಿವೃದ್ಧಿಯನ್ನು ಕಂಡು 2024-25ನೇ ಸಾಲಿನ ಅತ್ಯುತ್ತಮ ಎಸ್‌ಡಿಎಂಸಿ ಶಾಲೆ ಪ್ರಶಸ್ತಿ ಮತ್ತು ಒಂದು ಲಕ್ಷ ನಗದು ಬಹುಮಾನವೂ ಬಂದಿದೆ. ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯು ಶಾಲೆಯ ಕುರಿತು ಸಾಕ್ಷ್ಯಚಿತ್ರ ನಿರ್ಮಿಸಿದೆ. ಇದೆಲ್ಲವೂ ಶಾಲೆ, ಇಲಾಖೆ ಹಾಗೂ ಸರ್ಕಾರಕ್ಕೆ ಹಿರಿಮೆಯ ವಿಚಾರ. ಆದರೆ, ಶಾಲೆಗೆ ಕೊಠಡಿಗಳ ಕೊರತೆ ಇದ್ದು, 4 ಕೊಠಡಿಗಳ ಮಂಜೂರಾತಿ ಕೇಳದರೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಅನಾಗರಿಕತೆ ಎನ್ನುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಶಾಲೆಗೆ ಕೊಠಡಿಗಳ ಮಂಜೂರಾತಿಗಾಗಿ ತಾಲೂಕು, ಇಲ್ಲಾ ಹಂತದ ಅಧಿಕಾರಿಗಳನ್ನು ಹಲವು ಬಾರಿ ಭೇಟಿ ಮಾಡಿ, ಮನವಿ ಸಲ್ಲಿಸಿದ್ದೇನೆ. ಆದರೆ, ಯಾವುದೇ ಸ್ಪಂದನೆ ದೊರೆಯಲಿಲ್ಲ. ಶಾಲೆಯ ಮಕ್ಕಳು ‘ನಮ್ಮನ್ನ ಎಲ್ಲಿ ಕೂರಿಸಿ ಪಾಠ ಮಾಡ್ತೀರಿ ಸರ್? ನಾವು ಮಳೆ, ಬಿಸಿಲು, ಚಳಿಯಲ್ಲಿ ಹೊರಗೆ ಕೂತು ಪಾಠ ಕಲೀಬೇಕಾ?’ ಎಂದಾಗ ಕರುಳು ಹಿಂಡಿದಂತಾಗಿ, ಅನಿವಾರ್ಹವಾಗಿ ಪ್ರತಿಭಟನಾ ಜಾಥಾ ನಡೆಸಬೇಕಾಯಿತು. ಶಾಲೆಯ ಅಗತ್ಯಕ್ಕಾಗಿ ಉಪವಾಸ ಪ್ರತಿಭಟನೆ ನಡೆಸಿದ ನನ್ನನ್ನು ಅಧಿಕಾರಿಗಳು ಶತ್ರುವಿನಂತೆ ನಡೆಸಿಕೊಂಡಿದ್ದಾರೆ. ಏಕವಚನದಲ್ಲಿ ನಿಂದಿಸಿದ್ದಾರೆ. ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ” ಎಂದು ವೀರಣ್ಣ ಆರೋಪಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಒಳಮೀಸಲಾತಿ ಸಮೀಕ್ಷೆ; ಜಾತಿ ಹೇಳಿಕೊಳ್ಳುವ ಸಂಕಟದಲ್ಲಿ ದಲಿತರು
“ಸರ್ಕಾರಿ ಶಾಲೆಗಳು ಸದ್ದಿಲ್ಲದೆ ಸಾಯುತ್ತಿರುವ ಈ ದಿನಮಾನಗಳಲ್ಲಿ ದಮನಿತರು, ದಲಿತರು, ದುರ್ಬಲರು, ಹಿಂದುಳಿದವರು, ಕಟ್ಟಡ ಕಾರ್ಮಿಕರು ಹಾಗೂ ಕೂಲಿ ಕಾರ್ಮಿಕರ ಮಕ್ಕಳು ಓದುತ್ತಿರುವ ಶಾಲೆಯನ್ನು ಅಭಿವೃದ್ಧಿ ಪಡಿಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕೆಂದು ಶ್ರಮಿಸಿದ್ದೇನೆ. ನಮ್ಮ ಶ್ರಮದ ಫಲವಾಗಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ದ್ವಿಗುಣಗೊಂಡಿದೆ. ಇದು ಅನಾಗರಿಕ ವರ್ತನೆಯೇ? ಸರ್ಕಾರಿ ನೌಕರನಾಗಿ ಸರ್ಕಾರಕ್ಕೆ ಘನತೆ ತರುವ ಕೆಲಸ ಮಾಡುವುದು ನನ್ನ ಕರ್ತವ್ಯ, ಅದನ್ನು ನಾನು ನಿರಂತರವಾಗಿ ಮಾಡುತ್ತಿದ್ದೇನೆ. ಹೀಗಾಗಿಯೇ, ಸರ್ಕಾರದಿಂದ ‘ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ’ಯೂ ದೊರೆತಿದೆ. ಅಂತರಾಷ್ಟ್ರೀಯ ಪ್ರಶಸ್ತಿಗಳೂ ಬಂದಿವೆ. ನನಗೆ ಪ್ರಶಸ್ತಿಯೊಂದಿಗೆ ಸಿಕ್ಕ ಎಲ್ಲ ಗೌರವಧನವನ್ನೂ ಶಾಲೆಗಾಗಿಯೇ ವಿನಿಯೋಗಿಸಿದ್ದೇನೆ” ಎಂದು ವಿವರಿಸಿದ್ದಾರೆ.
“ಬಿಸಿಲು, ಮಳೆ, ಗಾಳಿಯಲ್ಲಿ ಕೂತು ಕಲಿಯಬೇಕಾದ ಅನಿವಾರ್ಯತೆ ಯಾವ ಮಕ್ಕಳಿಗೂ ಬರಬಾರದು. ಹಲವು ವರ್ಷಗಳ ನಮ್ಮ ಬೇಡಿಕೆಗೆ ಸ್ಪಂದನೆ ಸಿಗದ ಕಾರಣಕ್ಕೆ ನಾನು ಪ್ರತಿಭಟನೆ ನಡೆಸಿದ್ದೇನೆ. ನನ್ನನ್ನು ನಾನು ಶಿಕ್ಷಿಸಿಕೊಂಡು 15 ಕಿ.ಮೀ ಮೌನ ಕಾಲ್ನಡಿಗೆ ಜಾಥಾ ನಡೆಸಿದ್ದೇನೆ. ಉಪವಾಸ ಸತ್ಯಾಗ್ರಹ ಮಾಡಿದ್ದೇನೆ. ಇದನ್ನು ‘ಅನಾಗರಿಕ’ ವರ್ತನೆಯೆಂದೂ, ಅದಕ್ಕೆ ಕಾರಣ ಕೇಳಿಯೂ ನೋಟೀಸ್ ನೀಡಿರುವುದು ನೋವಿನ ಸಂಗತಿ” ಎಂದಿದ್ದಾರೆ. ಶಾಲೆಗೆ ಕೊಠಡಿಗಳ ಮಂಜೂರಾತಿಗೆ ಆಗ್ರಹಿಸಿದ್ದಾರೆ.