ಮುಂಗಾರು ಆರಂಭವಾಗಿದ್ದು ರೈತರು ಬಿತ್ತನೆ ಸಂಭ್ರಮದಲ್ಲಿದ್ದಾರೆ. ಬಿತ್ತನೆಗೆ ಬೀಜ, ರಸಗೊಬ್ಬರ ಇತರೆ ಸೌಲಭ್ಯಗಳನ್ನು ಅಣಿ ಗೊಳಿಸುವುದು ವಾಡಿಕೆ. ಆದರೆ ಚಿತ್ರದುರ್ಗದಲ್ಲಿ ರೈತರ ಸೇವಾ ಸಹಕಾರ ಸಂಘಗಳಿಗೆ ನಾಲ್ಕು ವರ್ಷಗಳ ಹಿಂದೆ ತಯಾರಾದ ಕಳಪೆ ಗೊಬ್ಬರವನ್ನು ಸರಬರಾಜು ಮಾಡಿ ರೈತರಿಗೆ ವಿತರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಿರ್ಲಕ್ಷ್ಯ ತೋರಿದ ಚಿತ್ರದುರ್ಗ ಕೃಷಿ ಇಲಾಖೆ ಜಂಟಿ ನಿರ್ದೇಶಕರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮೊಳಕಾಲ್ಮೂರು ತಹಶೀಲ್ದಾರರ ಮೂಲಕ ಮನವಿ ನೀಡಿ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ರೈತ ಮುಖಂಡರು, ರೈತರ ಸೇವಾ ಸಹಕಾರ ಸಂಘಗಳಿಗೆ 2021 ರ ಸಾಲಿನ ಹಿಂದೆ ತಯಾರಾದ ಕಳಪೆ ಗೊಬ್ಬರವನ್ನು ಸರಬರಾಜು ಮಾಡಿ ರೈತರಿಗೆ ವಿತರಿಸಿದ್ದು, ಕೊನೆಹಂತದಲ್ಲಿ ರೈತರಿಗೆ ಕಳಪೆ ಗೊಬ್ಬರ ಕಳೆದ 4 ವರ್ಷಗಳ ಹಿಂದೆ ತಯಾರಿಸಿದ ಗೊಬ್ಬರ ಚೀಲದ ಮೇಲೆ ಹಾಕಿರುವ ದಿನಾಂಕ ನೋಡಿಕೊಂಡಾಗ ರೈತರಿಗೆ ಗೊತ್ತಾಗಿದೆ. ರೈತರು ಗೊಬ್ಬರ ತೆಗೆದುಕೊಂಡು ಹೋಗಿ ಚಿತ್ರದುರ್ಗ ಕೃಷಿ ಇಲಾಖೆ ಜಂಟಿ ನಿರ್ದೇಶಕರನ್ನು ಪ್ರಶ್ನೆ ಮಾಡಿದಾಗ ರೈತರೊಂದಿಗೆ ಅವಾಚ್ಯ ಶಬ್ದಗಳಿಂದ ವ್ಯಂಗ್ಯವಾಗಿ ಮಾತಾಡಿದ್ದು, ರೈತರನ್ನು ಅವಮಾನ ಮಾಡಿದ್ದಾರೆ. ಹಾಗೂ ಹಳೆಯ ಗೊಬ್ಬರ ಎಂದು ಗೊತ್ತಿದ್ದರೂ ರೈತರಿಗೆ ಮೋಸ ವಂಚನೆ ಮಾಡಿರುವ ಜಂಟಿ ಕೃಷಿ ನಿರ್ದೇಶಕರನ್ನು ತಕ್ಷಣವೇ ಅಮಾನತ್ತಿನಲ್ಲಿಟ್ಟು ಕಳಪೆ ಗೊಬ್ಬರ ವಿತರಣೆ ಮಾಡಿರುವುದನ್ನು ತನಿಖೆ ಮಾಡಿಸಬೇಕು, ರೈತರ ಬಗ್ಗೆ ಲಘುವಾಗಿ ಮಾತಾಡಿರುವ ಅಧಿಕಾರಿ ಕ್ಷಮೆ ಯಾಚಿಸಬೇಕೆಂದು ಕೃಷಿ ಸಚಿವರು ಪ್ರಕರಣವನ್ನು ಗಂಭೀರವಾಗಿ ತುರ್ತು ಸಮಗ್ರ ತನಿಖೆಗೆ ಆದೇಶಿಸಬೇಕು ಎಂದು ರೈತ ಸಂಘ ಮುಖಂಡರು ಒತ್ತಾಯಿಸಿದರು.
ರೈತರು ಬೆಳೆಗೆ ಗೊಬ್ಬರ ಹಾಕುವುದು ಸರಿಯಾದ ಕಾಲ – ಕಾಲಕ್ಕೆ ಬೆಳವಣಿಗೆ, ಉತ್ತಮ ಇಳುವರಿ ಪಡೆಯಲು. ಸರ್ಕಾರದ ಸ್ವಾಮ್ಯದ ಅಧಿಕಾರಿಗಳು, ಸಹಕಾರ ಸಂಘಗಳಲ್ಲಿಯೇ 4 ವರ್ಷದ ಹಳೇ ಗೊಬ್ಬರ ವಿತರಿಸುತ್ತಿರುವುದು ನೋಡಿದರೆ ಈ ಪ್ರಕರಣದಲ್ಲಿ ಭ್ರಷ್ಟರ ಕೈವಾಡವಿರುವುದು ಸ್ಪಷ್ಟವಾಗಿದೆ ಎಂದು ಆರೋಪಿಸಿದರು.

ಇದೇ ಹಳತಾದ ಗೊಬ್ಬರವನ್ನು ಚಿತ್ರದುರ್ಗ ಜಿಲ್ಲೆಯಾದ್ಯಾಂತ ಸಹಕಾರಿ ಸೊಸೈಟಿಗಳಿಗೆ ಕೊಟ್ಟಿರುವ ಗುಮಾನಿಯಿದೆ. ರೈತರಿಗೆ ಗೊತ್ತಾದ ತಕ್ಷಣ ಸರಬರಾಜು ಮಾಡಿರುವ ಕಳೆದ ಗೊಬ್ಬರವನ್ನ ಹಾಕುವ ರೈತರಿಗೆ ಬೆದರಿಕೆ ಹಾಕುವ ಹಂತಕ್ಕೆ ಭ್ರಷ್ಟರು ಯೋಜನೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 4 ವರ್ಷದ ಹಿಂದಿನ ಹಳೇ ಗೊಬ್ಬರ ಸರಬರಾಜು ಮಾಡಿರುವುದನ್ನು ಜಿಲ್ಲೆಯಾದ್ಯಾಂತ ತನಿಖೆ ನಡೆಸಬೇಕು. ಸರಭರಾಜು ಕಂಪನಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.
ಹಳೇ ಗೊಬ್ಬರ ಹಾಕಿ ಬೆಳೆನಷ್ಟವಾಗುತ್ತಿರುವ ರೈತರಿಗೆ ಪರಿಹಾರ ನೀಡಬೇಕು. ಮುಂಗಾರು ಹಂಗಾಮ ಪ್ರಾರಂಭವಾಗಿದ್ದು ಜಿಲ್ಲೆಯಾದ್ಯಾಂತ ಔಷಧ, ಬೀಜ, ಗೊಬ್ಬರಕ್ಕೆ ರೈತರು ಪರದಾಡದಂತೆ ಎಲ್ಲಾ ಅಂಗಡಿಗಳಲ್ಲಿ ದಾಸ್ತಾನು ಮಾಡಬೇಕು ಗುಣಮಟ್ಟದಿಂದ ಕೂಡಿರಬೇಕು. ದಾಸ್ತಾನು ಮತ್ತು ಬೆಲೆ ವಿವರ ಅಂಗಡಿ ಮುಂದೆ ಪ್ರದರ್ಶನಕ್ಕೆ ಹಾಕಿರಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಸಹಾಯಧನ, ಕೃಷಿ ಘಟಕಗಳಿಗೆ ರೈತರ ಅರ್ಜಿ ಆಹ್ವಾನ.
ಈ ವೇಳೆ, ರೈತಸಂಘದ ಮುಖಂಡರಾದ ಬೇಡ ರೆಡ್ಡಿ ಹಳ್ಳಿ ಬಸವರೆಡ್ಡಿ, ಮರ್ಲಹಳ್ಳಿ ರವಿಕುಮಾರ್, ದೊಡ್ಡ ಪಾಪಣ್ಣ, ದೊಡ್ಡ ಸೂರಯ್ಯ, ಚಂದ್ರಣ್ಣ, ದಾನಪ್ಪ, ವೆಂಕಟೇಶ್, ಹೇಮಣ್ಮ, ಮುತ್ತಯ್ಯ, ಮಲ್ಲಯ್ಯ, ರಾಜಣ್ಣ, ಕೋಟಿ ವೀರಣ್ಣ, ಡಿಜಿ ಹಳ್ಳಿ ವೀರಣ್ಣ, ತಿಮ್ಮಪ್ಪ ಸೇರಿದಂತೆ ಹಲವು ಮುಖಂಡರು, ರೈತರು ಭಾಗವಹಿಸಿದ್ದರು.