ಕಲಬುರಗಿ ಜಿಲ್ಲಾಧಿಕಾರಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ವಿಧಾನ ಪರಿಷತ್ ಮುಖ್ಯ ಸಚೇತಕ, ಬಿಜೆಪಿ ನಾಯಕ ಎನ್.ರವಿಕುಮಾರ್ ವಿರುದ್ಧ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಕಲಬುರಗಿ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಜಗತ್ ವೃತ್ತದವರೆಗೆ ಪ್ರತಿಭಟನೆ ನಡೆಸಿ, ಬಿಜೆಪಿ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ವಿರುದ್ಧ ಘೋಷಣೆ ಕೂಗಿದರು.
ಈ ವೇಳೆ ಮಾತನಾಡಿದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೇಣುಕಾ ಸಿಂಗೆ, ಉತ್ತಮ ರೀತಿಯಲ್ಲಿ ಚುನಾವಣೆ ನಿರ್ವಹಣೆ ಮೂಲಕ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಅವರು ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆದಿದ್ದಾರೆ. ಅಂತಹ ಅಧಿಕಾರಿಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಬಿಜೆಪಿ ನಾಯಕ ಎನ್.ರವಿಕುಮಾರ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಬಿಜೆಪಿಯವರು ಒಂದು ಸಮುದಾಯದ ವಿರುದ್ಧ ಮಾತನಾಡುವುದು ನಿಲ್ಲಿಸಬೇಕು. ಜಿಲ್ಲಾಧಿಕಾರಿ ವಿರುದ್ಧ ಅವಹೇಳನಕಾರಿ ಮಾತನಾಡಿದ ಎಂಎಲ್ಸಿ ಎನ್.ರವಿಕುಮಾರ್ ಸದಸ್ಯತ್ವ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಶೇಹನಾಜ್ ಅಖ್ತರ್, ಬಸಮ್ಮ, ಶಿಲ್ಪಾ, ಸೈರಾ ಬಾನು, ತಹೆನಿಯತ್, ಜೇಬಾ ತಬಸ್ಸುಮ್, ಅಮೀನಾ ಪಟೇಲ್, ಶೈಖ್ ಸಮರೀನ್, ಶೈಖ್ ಫಾತೀಮಾ, ಕಮಲಾ, ರಾಜ್ ಮಾಬೀ ಸೇರಿದಂತೆ ಮತ್ತಿತರರಿದ್ದರು.
ಇದನ್ನೂ ಓದಿ : ಬಸವಕಲ್ಯಾಣಕ್ಕೆ ನೂತನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಂಜೂರು