ಸದ್ಯ ರಾಜ್ಯದ ಕೃಷಿ ಸಚಿವರಾಗಿರುವ ಎನ್ ಚಲುವರಾಯಸ್ವಾಮಿ ರೈತ ಕುಟುಂಬದ ಹಿನ್ನೆಲೆಯಿಂದ ಬಂದಿರುವವರು. ಹಾಗಾಗಿ, ಸಚಿವರು ಪ್ರಾಮಾಣಿಕ ಕಾಳಜಿ ತೋರಿದರೆ, ಕೃಷಿ ಬೆಳೆಗಳ ಬೆಲೆ ಏರಿಳಿತ ನಿಯಂತ್ರಣ ಮತ್ತು ಸಮತೋಲನಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಕಷ್ಟದ ಕೆಲಸವೇನಲ್ಲ
ಒಂದೊಮ್ಮೆ ಬೆಳೆ ಬೆಳೆಯಲು ಖರ್ಚು ಮಾಡಿದ ಅರ್ಧದಷ್ಟೂ ಬೆಲೆ ಸಿಗದೆ ರಸ್ತೆಯಲ್ಲಿಯೇ ಸಮಾಧಿಯಾಗುತ್ತಿದ್ದ ಟೊಮ್ಯಾಟೊ ಈಗ ಗಗನಕುಸುಮ. ಅದರಲ್ಲೂ, ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರದ ಕೆಲವು ರಾಜ್ಯಗಳಲ್ಲಿ ಟೊಮ್ಯಾಟೊ ಲಭ್ಯತೆ ದುಸ್ತರವಾಗಿದೆ. ಇದಕ್ಕೆ ಪರಿಹಾರವಾಗಿ, ಕರ್ನಾಟಕ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರಗಳಿಂದ ಟೊಮ್ಯಾಟೊ ಖರೀದಿಸಿ, ಹೆಚ್ಚಿನ ಕೊರತೆ ಇರುವ ಪ್ರದೇಶಗಳಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಮುಂದಾಗಿದೆ. ಈಗಾಗಲೇ ಖರೀದಿ ಮತ್ತು ಮಾರಾಟ ಆರಂಭವೂ ಆಗಿದೆ. ಟೊಮ್ಯಾಟೊ ಸಮಸ್ಯೆಗೆ ಇದೇನೂ ಶಾಶ್ವತ ಪರಿಹಾರವಲ್ಲ ನಿಜ. ಆದರೆ, ಕರ್ನಾಟಕ ಸರ್ಕಾರವು ಕನಿಷ್ಠಪಕ್ಷ ಈ ಪ್ರಮಾಣದಲ್ಲಾದರೂ ಪರಿಸ್ಥಿತಿಯ ಗಂಭೀರತೆ ಅರಿಯದಿರುವುದು ವಿಪರ್ಯಾಸ.
ಕರ್ನಾಟಕದ ಕೋಲಾರ ಮತ್ತು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಗಳು ಟೊಮ್ಯಾಟೊ ಬೆಳೆಯಲ್ಲಿ ದೇಶದಲ್ಲೇ ಪಾರಮ್ಯ ಮೆರೆಯುತ್ತಿರುವ ಸೀಮೆಗಳು. ಇಲ್ಲಿ ಬೆಳೆಯಲಾಗುವ ಟೊಮ್ಯಾಟೊ, ದೆಹಲಿ ಮತ್ತು ಸುತ್ತಮುತ್ತಲ ಕೆಲವು ರಾಜ್ಯಗಳನ್ನು ಹೊರತುಪಡಿಸಿ ದೇಶಾದ್ಯಂತ ಸಂಚರಿಸುವುದುಂಟು. ಆದರೆ, ಇದೀಗ ಸ್ವತಃ ಟೊಮ್ಯಾಟೊ ಹೆಚ್ಚು ಬೆಳೆಯುವ ರಾಜ್ಯಗಳಲ್ಲೂ ಕೊರತೆ ಉಂಟಾಗಿರುವುದು ಸಮಸ್ಯೆಯನ್ನು ಕಗ್ಗಂಟಾಗಿಸಿದೆ. ಇನ್ನು, ಹವಾಮಾನ ವೈಪರೀತ್ಯದಿಂದಾಗಿ ಉತ್ತರ ಭಾರತದಲ್ಲಿ ಟೊಮ್ಯಾಟೊ ಬೆಳೆಯುವ ಪ್ರಮುಖ ರಾಜ್ಯಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಸಿಕ್ಕಿಲ್ಲ. ಟೊಮ್ಯಾಟೊ ಹೆಚ್ಚು ಬೆಳೆಯುವ ಮಧ್ಯಪ್ರದೇಶದಲ್ಲಿ ಕೂಡ ಕೊರತೆ ತಲೆದೋರಿದೆ. ಜೊತೆಗೆ, ಗಾಯದ ಮೇಲೆ ಬರೆ ಎಳೆದಂತೆ ಮಳೆ ಮತ್ತು ಪ್ರವಾಹದ ಕಾಟ. ಹಾಗಾಗಿ, ಇಡೀ ಉತ್ತರ ಭಾರತ ಟೊಮ್ಯಾಟೊಗಾಗಿ ದಕ್ಷಿಣ ಭಾರತದತ್ತ ಮುಖ ಮಾಡಿದೆ. ಆದರೆ, ಕರ್ನಾಟಕ, ಆಂಧ್ರ ಹಾಗೂ ಮಹಾರಾಷ್ಟ್ರಗಳಲ್ಲಿ ಅಷ್ಟು ಪ್ರಮಾಣದಲ್ಲಿ ಟೊಮ್ಯಾಟೊ ಇದೆಯೇ ಎಂದು ಕೇಳಿದರೆ, ಖಂಡಿತ ಇಲ್ಲ. ಹಾಗಾಗಿಯೇ ಬೆಲೆ ಏರುತ್ತಲೇ ಸಾಗಿದೆ. ಇನ್ನೂ ಎರಡು ತಿಂಗಳು ಬೆಲೆ ಏರಿಕೆ ಚಾಲ್ತಿಯಲ್ಲಿ ಇರಬಹುದು ಎಂಬುದು ಮಾರುಕಟ್ಟೆ ತಜ್ಞರ ಅಂದಾಜು.
ಈ ಸಂಪಾದಕೀಯ ಓದಿದ್ದೀರಾ?: ಮೈಸೂರು ಸ್ಯಾಂಡಲ್ ಸೋಪ್: ಭ್ರಷ್ಟ ಜನಪ್ರತಿನಿಧಿ, ಅಧಿಕಾರಶಾಹಿಗೆ ಬೇಕಿದೆ ಚಾಟಿಯೇಟು
ಇತರೆ ರಾಜ್ಯಗಳ ವಿಷಯ ಬದಿಗಿಡುವ. ಕರ್ನಾಟಕದಲ್ಲಿ ಹೀಗೆ ಒಂದಲ್ಲ ಒಂದು ತರಕಾರಿ ಅಥವಾ ಧಾನ್ಯದ ಅಭಾವ ಸೃಷ್ಟಿಯಾಗುವುದು, ಅದರ ಬೆಲೆ ವಿಪರೀತ ಎನಿಸುವಷ್ಟು ಏರಿ, ಆ ಬಗ್ಗೆ ರಾಶಿ-ರಾಶಿ ಜೋಕುಗಳು ತಯಾರಾಗಿ, ಆಯಕಟ್ಟಿನ ಸ್ಥಾನದಲ್ಲಿ ಕುಳಿತವರೆಲ್ಲ ಆ ಜೋಕುಗಳಿಗೆ ತಲೆದೂಗಿ ಕೈತೊಳೆದುಕೊಳ್ಳುವುದು ಬಹಳ ಹಿಂದಿನಿಂದಲೂ ನಿರ್ವಿಘ್ನವಾಗಿ ನಡೆದುಬಂದಿದೆ. ಪರಿಸ್ಥಿತಿ ಬಹಳ ಗಂಭೀರವಾಯಿತು ಎನ್ನುವಷ್ಟರಲ್ಲಿ ಬೆಲೆ ಮತ್ತೆ ಯಥಾಸ್ಥಿತಿಗೆ ತಲುಪುವುದು ಕೂಡ, ಸಂಬಂಧಿಸಿದವರು ಇಂತಹ ವಿಷಯಗಳನ್ನು ಹಗುರವಾಗಿ ಪರಿಗಣಿಸಲು ಮುಖ್ಯ ಕಾರಣ. ಆದರೆ, ಇಂತಹ ವಿಷಯಗಳನ್ನು ಹೀಗೆಯೇ ಕಡೆಗಣಿಸುತ್ತ ಸಾಗಿದರೆ ಮುಂದೊಂದು ದಿನ ಪರಿಸ್ಥಿತಿ ದುರಂತದೆಡೆಗೆ ಸಾಗುವುದು ನಿಶ್ಚಿತ.
ದಿಢೀರ್ ಬೆಲೆ ಏರಿಕೆಯ ಏಟಿನಿಂದ ತಪ್ಪಿಸಿಕೊಳ್ಳಬೇಕೆಂದರೆ, ಪ್ರತೀ ಬಾರಿಯ ಬೆಳೆವರ್ಷದಲ್ಲಿ ಕರ್ನಾಟಕದಲ್ಲಿ ಬೆಳೆಯುವ, ಅದಕ್ಕಿಂತಲೂ ಹೆಚ್ಚಾಗಿ ಜನಸಾಮಾನ್ಯರು ದಿನನಿತ್ಯ ಬಳಸುವ ಯಾವೆಲ್ಲ ತರಕಾರಿ, ಬೇಳೆಕಾಳಿನ ‘ಕೃಷಿ ಸ್ಥಿತಿಗತಿ’ ಹೇಗಿದೆ ಎಂಬ ವಸ್ತುಸ್ಥಿತಿ ಅಧ್ಯಯನ ಸಾಧ್ಯವಾಗಬೇಕು. ಹವಾಮಾನ ಬದಲಾವಣೆ, ಮಳೆಯ ಏರಿಳಿತ, ಭೂಮಿಯ ಫಲವತ್ತತೆ, ಕೃಷಿ ವಿಧಾನ, ಮಾರುಕಟ್ಟೆಯ ವರ್ತನೆ, ಉಗ್ರಾಣ ವ್ಯವಸ್ಥೆ ಮುಂತಾದವುಗಳನ್ನು ಈ ಅಧ್ಯಯನದಲ್ಲಿ ಪರಿಗಣಿಸಿದರೆ, ಬೆಲೆ ಏರಿಳಿತಗಳನ್ನು ಮೊದಲೇ ಅಂದಾಜಿಸುವುದು ಮತ್ತು ಬರಲಿರುವ ಪರಿಸ್ಥಿತಿ ಎದುರಿಸಲು ತಯಾರಿ ನಡೆಸುವುದು ಬಹಳ ಸುಲಭ.
ಇಂತಹ ವ್ಯವಸ್ಥಿತ ತಯಾರಿಗಳು ಯಾವುದೋ ಒಂದು ಇಲಾಖೆ ಅಥವಾ ಸಂಸ್ಥೆಯದಷ್ಟೇ ಜವಾಬ್ದಾರಿ ಆಗಿಬಿಟ್ಟರೆ ಉತ್ತಮ ಫಲಿತಾಂಶ ಸಿಗುವುದು ಕಷ್ಟ. ಹಾಗಾಗಿ, ನಾನಾ ಇಲಾಖೆಗಳು, ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಿಸಿದ ಸ್ವಾಯತ್ತ ಸಂಸ್ಥೆಗಳು, ರೈತ ಸಂಘಟನೆಗಳು, ಸರ್ಕಾರೇತರ ಸಂಸ್ಥೆಗಳು ಒಟ್ಟುಗೂಡಿದರೆ ಖಂಡಿತ ಚಮತ್ಕಾರಿಕ ಬದಲಾವಣೆ ತರಲು ಸಾಧ್ಯ. ಇಂತಹ ಕ್ರಿಯಾಯೋಜನೆಗಳಿಂದ ಗ್ರಾಹಕರಿಗಿಂತ ಮುಖ್ಯವಾಗಿ ಕೃಷಿಕರಿಗೆ ನೆಮ್ಮದಿ ಮತ್ತು ಬೆಂಬಲ ಸಿಕ್ಕಂತಾಗುತ್ತದೆ. ಏಕೆಂದರೆ, ಬೆಲೆ ಸಿಗಲಿಲ್ಲ ಎಂಬ ಕಾರಣಕ್ಕೆ ಯಾವುದೇ ಬೆಳೆಯನ್ನು ರಾಜಧಾನಿಯ ರಸ್ತೆಗಳಲ್ಲಿ ಸುರಿಯುವ ದುಸ್ಥಿತಿ ತಪ್ಪುತ್ತದೆ. ಸದ್ಯ ರಾಜ್ಯದ ಕೃಷಿ ಸಚಿವರಾಗಿರುವ ಎನ್ ಚಲುವರಾಯ ಸ್ವಾಮಿ ರೈತ ಕುಟುಂಬದ ಹಿನ್ನೆಲೆಯಿಂದ ಬಂದಿರುವವರು. ಹಾಗಾಗಿ, ಸಚಿವರು ಪ್ರಾಮಾಣಿಕ ಕಾಳಜಿ ತೋರಿದರೆ, ಕೃಷಿ ಬೆಳೆಗಳ ಬೆಲೆ ಏರಿಳಿತ ನಿಯಂತ್ರಣ ಮತ್ತು ಸಮತೋಲನಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಕಷ್ಟದ ಕೆಲಸವೇನಲ್ಲ.
ಬರಹಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ
I think the government should start popularizing growing vegetables by giving people basic kits with seeds. This will encourage people to grow their own food. Kerala is doing this through kudumba sree. Nurseries should be given land on lease or minimum rent so plants become cheaper. They can also provide seedlings.
In Thailand for eg they do this. Growing food can teach a bit of humility and also keep the young from being idle .urban land belonging to the govt can be leased to the poor at a nominal rate to grow food. This is done in s. Korea. Small spaces are used to grow food for themselves. There are many things to be done other than just planting sapplings which are not taken proper care of. . Incentives should be given to make dehydrated vegetables tomato powder etc when the farmers don’t get a better price. Some NGO,s are already doing this. and the govt can seek their assistance.
.
ತುಂಬಾ ಒಳ್ಳೆಯ ಸಲಹೆಗಳು. ಆಗಲೇಬೇಕಾದ ಕೆಲಸಗಳಿವು. ರಾಜಕೀಯೇತರ ಕಾರ್ಯಕ್ರಮಗಳಿಗಾಗಿ ಸರ್ಕಾರ ಎಷ್ಟು ಸಮಯ ಖರ್ಚು ಮಾಡಲು ತಯಾರಿದೆ ಎಂಬುದನ್ನು ಕಾದುನೋಡಬೇಕಿದೆ. ನಿಮ್ಮ ಮಾತಿಗಾಗಿ ನನ್ನಿ. ಈ.ದಿನ.ಕಾಮ್ ಜಾಲತಾಣಕ್ಕೆ ಭೇಟಿ ನೀಡಿದ್ದಕ್ಕೆ ಧನ್ಯವಾದ.