- ₹35 ಲಕ್ಷ ವಂಚನೆ ಮಾಡಿರುವ ಆರೋಪದಡಿ ದೂರು ದಾಖಲು
- ಇವೆಂಟ್ ಮ್ಯಾನೇಜ್‌ಮೆಂಟ್ ಹೆಸರಿನಲ್ಲಿ ₹20 ಲಕ್ಷ ವಂಚನೆ
ನಟ, ನಿರ್ದೇಶಕ ಮಾಸ್ಟರ್ ಆನಂದ ಪುತ್ರಿ ಹಾಗೂ ಬಾಲನಟಿ ವಂಶಿಕಾ ಹೆಸರು ಬಳಸಿ ಲಕ್ಷಾಂತರ ರೂಪಾಯಿ ಮೋಸ ಮಾಡಿರುವ ಆರೋಪದ ಮೇಲೆ ಬಂಧಿತಳಾಗಿರುವ ನಿಶಾ ನರಸಪ್ಪಳನ್ನು ಪೊಲೀಸರು ತೀವೃ ವಿಚಾರಣೆ ನಡೆಸುತ್ತಿದ್ದಾರೆ. ಇದೇ ವೇಳೆ ಹಲವಾರು ಮಂದಿ ಈಕೆಯ ವಿರುದ್ಧ ದೂರು ನೀಡಲು ಸದಾಶಿವನಗರ ಪೊಲೀಸ್ ಠಾಣೆಗೆ ಬರುತ್ತಿದ್ದಾರೆ.
ನಿಶಾ ನರಸಪ್ಪ ವಿರುದ್ಧ ನಗರದ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ₹35 ಲಕ್ಷ ವಂಚನೆ ಮಾಡಿರುವ ಆರೋಪದಡಿ ದೂರು ದಾಖಲಾಗಿದೆ.
ಹಣವನ್ನು ಇನ್ವೆಸ್ಟ್ ಮಾಡಿದರೆ ಹೆಚ್ಚಿನ ಲಾಭಾಂಶ ಬರುತ್ತದೆ ಎಂದು ಜನರಿಗೆ ಹೇಳಿ ನಿಶಾ ನರಸಪ್ಪ ನಂಬಿಸುತ್ತಿದ್ದಳು. ಮೊದಲು ಲಾಭಾಂಶದ ಹಣವನ್ನು ನೀಡಿ ಎರಡರಷ್ಟು ಹಣವನ್ನು ಪಡೆದು ವಂಚನೆ ಮಾಡುತ್ತಿದ್ದಳು.
ಇವೆಂಟ್ ಮ್ಯಾನೇಜ್‌ಮೆಂಟ್ ಹೆಸರಿನಲ್ಲಿ ತಾರಾ ಎಂಬುವವರಿಗೆ ನಿಶಾ ನರಸಪ್ಪ ₹20 ಲಕ್ಷ ವಂಚನೆ ಮಾಡಿರುವ ಆರೋಪದ ಮೇಲೆ ಕಳೆದ ತಿಂಗಳು ಯಲಹಂಕ ನ್ಯೂ ಟೌನ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ವಂಚನೆ ಆರೋಪದಡಿ ಈಕೆಯ ವಿರುದ್ಧ ಕೋಣನಕುಂಟೆ ಹಾಗೂ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ವಂಚನೆ ದೂರುಗಳು ದಾಖಲಾಗಿವೆ.
ಈ ಸುದ್ದಿ ಓದಿದ್ದೀರಾ? ಕಳ್ಳತನ ಮಾಡಿ ಶೋಕಿ ಜೀವನ ನಡೆಸುತ್ತಿದ್ದ ನಾಲ್ವರ ಬಂಧನ
ನಿಶಾ ಮೂಲತಃ ರಾಮನಗರದವರು. ಬೆಂಗಳೂರಿನ ದೊಡ್ಡ ಮಾಲ್‌ಗಳಲ್ಲಿ ಇವೆಂಟ್ ಮ್ಯಾನೆಜ್‌ಮೆಂಟ್ ಮಾಡುತ್ತಿದ್ದಳು. ನಗರದ ಹೊರವಲಯದಲ್ಲಿನ ರೆಸಾರ್ಟ್‌ಗಳಲ್ಲಿ ಫೋಟೋ ಶೂಟ್ ಮಾಡುವ ಮೂಲಕ ಪೋಷಕರಿಗೆ ವಂಚನೆ ಎಸಗುತ್ತಿದ್ದಳು. ಮಕ್ಕಳಷ್ಟೇ ಅಲ್ಲದೇ ಹಲವಾರು ಜನರಿಗೆ ಇವೆಂಟ್ ಮ್ಯಾನೇಜ್‌ಮೆಂಟ್ ಹೆಸರಿನಲ್ಲಿ ಲಕ್ಷಾಂತರ ಹಣ ವಂಚನೆ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.