ಬಳ್ಳಾರಿ ನಗರ ಸುಂದರೀಕಣ ಮತ್ತು ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ನಗರದ ಹೃದಯ ಭಾಗದಲ್ಲಿರುವ ಡಾ. ರಾಜ್ ಕುಮಾರ್ ಉದ್ಯಾನವನ್ನು ಬಳ್ಳಾರಿ ನಗರ ಅಭಿವೃದ್ಧಿ ಪ್ರಾಧಿಕಾರ(ಬುಡಾ) ವತಿಯಿಂದ ಅಂದಾಜು 3.5ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ.
ಬುಡಾ ವತಿಯಿಂದ 3.5ಕೋಟಿ ರೂಪಾಯಿ ವೆಚ್ಚದಲ್ಲಿ ಎರಡು ಕಡೆ ವೀಕ್ಷಣೆ ಕೇಂದ್ರ, ಸೇತುವೆ ನಿರ್ಮಾಣ, ಕ್ಯಾಂಟೀನ್ ವ್ಯವಸ್ಥೆ, ಕೆರೆಯಲ್ಲಿ ಈಗ ಇರುವ ನೀರು ತೆಗೆದು ಹೊಸ ನೀರು ಬಿಡಲಾಗುತ್ತದೆ. ಚಿಲ್ಡ್ರನ್ ಪ್ಲೇ ಏರಿಯಾ ನಿರ್ಮಾಣ ಮಾಡಲಾಗುತ್ತಿದ್ದು, ಬೋಟಿಂಗ್ ಸೌಲಭ್ಯ ಇರಲಿದೆ.
ಉದ್ಯಾನದ ಸುತ್ತ ಮುತ್ತ ಹಸಿರು ಗಿಡ ಮರಗಳು ಹೂವಿನ ಬಳ್ಳಿಗಳಿಂದ ಅಲಂಕಾರ ಮಾಡಿದಂತೆ ಕಾಣುತ್ತದೆ. ಉದ್ಯಾನದಲ್ಲಿ ಆಸನ ವ್ಯವಸ್ಥೆ ಇದೆ. ಓಪನ್ ಜಿಮ್ ನಿರ್ಮಾಣ ಮಾಡಲಾಗಿದೆ. ಮಹಾತ್ಮ ಗಾಂಧಿ ಮತ್ತು ಡಾ.ರಾಜ್ ಕುಮಾರ್ ಪ್ರತಿಮೆಗಳು ನೋಡುಗರ ಗಮನ ಸೆಳೆಯುತ್ತವೆ.
ಉದ್ಯಾನಕ್ಕೆ ನಿತ್ಯ ಬೆಳಗ್ಗೆ ವಾಯುವಿಹಾರಕ್ಕೆ ಬರುವವರು, ರಜೆ ದಿನ, ಹಬ್ಬದ ದಿನಗಳಲ್ಲಿ ಶಾಲೆ-ಕಾಲೇಜು ವಿದ್ಯಾರ್ಥಿಗಳು ಹೀಗೆ ನೂರಾರು ಸಾರ್ವಜನಿಕರು ದಿನವೂ ಬರುತ್ತಾರೆ. ಆದರೆ, ಈ ಹಿಂದೆ ಡಾ.ರಾಜ್ ಕುಮಾರ್ ಉದ್ಯಾನದಲ್ಲಿ ಮೂಲಸೌಕರ್ಯಗಳು ಇಲ್ಲದಿರುವ ಬಗ್ಗೆ, ಉದ್ಯಾನವನದಲ್ಲಿ ಸ್ವಚ್ಛತೆ ಇಲ್ಲದಿರುವ ಕುರಿತು, ಕುಡಿಯುವ ನೀರು ಇಲ್ಲದಿರುವ ಕುರಿತು ಹಾಗೂ ಉದ್ಯಾನ ನಿರ್ವಹಣೆಯ ಅವ್ಯವಸ್ಥೆಯ ಬಗ್ಗೆ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಉದ್ಯಾನ ನಿರ್ವಣೆಯ ಅವ್ಯವಸ್ಥೆ ಕುರಿತು ವರದಿಯಾದ ಬಳಿಕ ಇದೀಗ ಅಭಿವೃದ್ಧಿ ಕಾರ್ಯಗಳು ಜರುಗಿದ್ದು, ಅಂದಾಜು 3.5ಕೋಟಿ ರೂಪಾಯಿ ವೆಚ್ಚದಲ್ಲಿ ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ.
ಡಾ. ರಾಜ್ ಕುಮಾರ್ ಉದ್ಯಾನ ನಿರ್ಮಾಣಕ್ಕೆ ಮೊದಲ ಬಾರಿಗೆ ಆಲೋಚಿಸಿದವರು ಈ ಹಿಂದಿನ ಜಿಲ್ಲಾಧಿಕಾರಿ ಗೌರಿ ಎಸ್ ತ್ರಿವೇದಿ. ಅವರ ಅವಧಿಯಲ್ಲಿ ಪಾರ್ಕ್ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಗದಗ | ಮಹಿಳೆಯರ ಸ್ವಾವಲಂಬನೆ ಹಾಗೂ ಸ್ವಾತಂತ್ರ್ಯ ಬದುಕಿಗೆ ಮನರೇಗಾ ಆಸರೆ: ಎಡಿಪಿಸಿ ಕಿರಣಕುಮಾರ
ಡಾ. ರಾಜ್ ಕುಮಾರ್ ಉದ್ಯಾನದ ಉದ್ಘಾಟನೆ 2010ರಲ್ಲಿ ನಡೆದಾಗ ಪಾರ್ವತಮ್ಮ ರಾಜ್ ಕುಮಾರ್ ಕುಟುಂಬದವರು ಆಗಮಿಸಿದ್ದರು. ಮಾಜಿ ಸಚಿವರುಗಳಾದ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ ಮತ್ತು ಮಾಜಿ ಸಚಿವ ಶ್ರೀರಾಮುಲು ಉಪಸ್ಥಿತರಿದ್ದರು.
ನಗರದಲ್ಲಿನ ಕೆಲವರು ರಜೆ ದಿನಗಳಲ್ಲಿ ಕುಟುಂಬ ಸಮೇತರಾಗಿ ಬಂದು ಎಂಜಾಯ್ ಮಾಡಿ ಹೋಗ್ತಾರೆ ಹಾಗೂ ಶಾಲೆ ಕಾಲೇಜು ವಿದ್ಯಾರ್ಥಿಗಳಿಗೆ, ಪ್ರೇಮಿಗಳಿಗೆ, ಸ್ನೇಹಿತರಿಗೆ ಡಾ. ರಾಜ್ ಕುಮಾರ್ ಉದ್ಯಾನವನ ನೆಚ್ಚಿನ ತಾಣವಾಗಿದ್ದು ಪ್ರೇಮ ನಿವೇದನೆ, ಹುಟ್ಟುಹಬ್ಬ ಆಚರಣೆ ಈ ಉದ್ಯಾನದಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ.