ಕನ್ನಡ ಕಥಾ ಲೋಕಕ್ಕೆ ಬ್ಯಾರಿ ಮುಸ್ಲಿಮ್ ಸಮುದಾಯದ ನೋವು ನಲಿವುಗಳನ್ನು ಅತ್ಯಂತ ಹೃದಯಸ್ಪರ್ಶಿಯಾಗಿ ಕಟ್ಟಿಕೊಟ್ಟವರಲ್ಲಿ ಫಕೀರ್ ಮುಹಮ್ಮದ್ ಕಟ್ಪಾಡಿ ಮೊದಲಿಗರು. ಅವರು ತಮ್ಮ ಬಾಲ್ಯ ಕಾಲದ ಕರಾವಳಿಯ ಸೌಹಾರ್ದ ಬದುಕನ್ನು ತೆರೆದಿಟ್ಟಿದ್ದಾರೆ. ಅಕ್ಷರ ಇನ್ನಷ್ಟೇ ಕಾಲಿಡುತ್ತಿರುವ ಹೊತ್ತಿನಲ್ಲೂ ಬಹುತ್ವ ಹೇಗೆ ಜನರ ಬದುಕನ್ನು ಸುಂದರವಾಗಿ ಹಿಡಿದಿಟ್ಟಿತ್ತು ಎನ್ನುವುದನ್ನು ಬಿಡಿಸಿಟ್ಟಿದ್ದಾರೆ. ಇತ್ತೀಚೆಗೆ ಹಲ್ಲೆಗಳು, ಕೊಲೆಗಳು, ಕೋಮು ಗಲಭೆಗಳಿಗಾಗಿ ಸುದ್ದಿಯಾಗುತ್ತಿರುವ ಅವಿಭಜಿತ ದಕ್ಷಿಣ ಕನ್ನಡ, ಮತ್ತೆ ಕಳೆದು ಹೋದ ದಿನಗಳ ಕಡೆಗೊಮ್ಮೆ ಮರಳಿ ನೋಡಬೇಕಾಗಿದೆ.
ಭಾಗ-1
ನಮ್ಮ ಹಾಗೆಯೇ ನೀವು, ನಿಮ್ಮ ಹಾಗೆಯೇ ನಾವು… ನೀರಿಗೆಂತ ಜಾತಿ!
ಕರಾವಳಿಯ ಕಟ್ಪಾಡಿ ಹತ್ತಿರದ ಪುಟ್ಟ ಕೋಟೆ ಗ್ರಾಮ ನನ್ನೂರು. ಆ ಗ್ರಾಮದಲ್ಲಿ ಮುಸ್ಲಿಮರದ್ದು, ಮೂರು ಕುಟುಂಬಗಳಿದ್ದವು. ಅದರಲ್ಲಿ ನಮ್ಮದೂ ಒಂದು. ಅಪ್ಪ ಕಟ್ಪಾಡಿಯ ಜುಮ್ಮಾ ಮಸೀದಿಯ ಖತೀಬ್. ಅಮ್ಮ ಗೃಹಿಣಿ. ಅಪ್ಪನ ಊರು ಹೆಮ್ಮಾಡಿ, ಅಮ್ಮನದು ಬಾರ್ಕೂರು. ಅಲ್ಲಿಂದ ನಾವು ಕಟ್ಪಾಡಿ ಕೋಟೆ ಗ್ರಾಮಕ್ಕೆ ಬಂದದ್ದು. ಚಿಕ್ಕದೊಂದು ಮನೆ ಮಾಡಿಕೊಂಡೆವು. ಅಪ್ಪ ತನ್ನ ಮನೆಗೆ ಜಾಗ ಆಯ್ಕೆ ಮಾಡುವಾಗ ಮುಸ್ಲಿಮರ ಕೇರಿಯನ್ನು ಆಯ್ದುಕೊಳ್ಳದೆ ಕೋಟೆ ಗ್ರಾಮವನ್ನು ಆಯ್ದುಕೊಂಡದ್ದು ನನಗೆ ನೀಡಿದ ದೊಡ್ಡ ಕೊಡುಗೆ ಅಂತ ನಾನು ತಿಳಿದುಕೊಂಡಿದ್ದೇನೆ.
ನನಗೆ ನನ್ನ ಬಾಲ್ಯ, ನಮ್ಮೂರ ಬಗ್ಗೆ ಯೋಚಿಸಿದಾಗೆಲ್ಲ ನನ್ನ ಕಣ್ಣ ಮುಂದೆ ನಿಲ್ಲುವುದು ನನ್ನ ಅಮ್ಮ! ಆಕೆ ಒಂದು ಕ್ಷಣವೂ ಸುಮ್ಮನೆ ಕೂತವಳಲ್ಲ. ಹಾಗೆ ಅವಳನ್ನು ಚಲನಶೀಲವಾಗಿ ಇಟ್ಟಿದ್ದು ನಮ್ಮ ಮನೆಯ ಬಾವಿ ಅನ್ನುವುದು ನನ್ನ ಗ್ರಹಿಕೆ. ನಮ್ಮ ಕೋಟೆಗ್ರಾಮದ ಸುತ್ತ ಉದ್ಯಾವರ ನದಿ ಹರಿಯುತ್ತದೆ. ಮಳೆಗಾಲದಲ್ಲಿ ಈ ನದಿ ಉಕ್ಕಿ ಹರಿಯುತ್ತದೆ. ಉಳಿದ ಬೇಸಿಗೆಕಾಲದಲ್ಲಿ ಇದು ಉಪ್ಪು ನೀರಿನ ಹೊಳೆ. ಹೀಗೆ ಉಪ್ಪು ನೀರು ನಮ್ಮ ಗ್ರಾಮದ ಸುತ್ತಲೂ ಉಕ್ಕಿ ಹರಿಯುವುದರಿಂದಾಗಿ ನಮ್ಮ ಊರಿನ ಬಹುಪಾಲು ಬಾವಿಗಳಲ್ಲಿ ಮಾರ್ಚ್ ತಿಂಗಳಿಂದ ಮಳೆಗಾಲ ಬರುವತನಕ ಸಿಗುವುದು ಉಪ್ಪು ನೀರು ಅಥವಾ ಒಗರು ನೀರು!
ನಮ್ಮ ಮನೆ ಸ್ವಲ್ಪ ಎತ್ತರದ ಪ್ರದೇಶದಲ್ಲಿರುವುದರಿಂದಲೋ ಏನೋ, ನಮ್ಮ ಬಾವಿಯಲ್ಲಿ ಸಿಹಿ ನೀರು ಇದೆ. ಹಾಗಾಗಿ ಊರಿನವರೆಲ್ಲರೂ ಕುಡಿಯುವ ನೀರಿನ ನೆಪದಲ್ಲಿ ನಮ್ಮ ಮನೆಗೆ ಬಂದುಹೋಗುವುದು ಮಾಮೂಲಿನ ಸಂಗತಿಯಾಗಿತ್ತು. ಅದಲ್ಲದೆ, ನಮ್ಮ ಮನೆ ತೆಂಗಿನ ತೋಟದ ಮಧ್ಯದಲ್ಲಿತ್ತು. ನಮ್ಮ ಅಂಗಳದಲ್ಲಿ ಅಮ್ಮ ಬೆಳೆಸಿದ್ದ ಬೆಂಡೆಕಾಯಿ, ಹೀರೇಕಾಯಿ ಮುಂತಾದ ತರಕಾರಿಗಳು, ಹೂವು, ಬಾಳೆ ಎಲೆ, ಕೆಸುವಿನ ಎಲೆ, ಅರಸಿನದ ಎಲೆ ಬೇಕಾದವರೂ ನಮ್ಮ ಮನೆಗೆ ಬರುತ್ತಿದ್ದರು. ಊರಲ್ಲಿರುವ ಮೊಗವೀರರು, ಬಿಲ್ಲವರು, ಬ್ರಾಹ್ಮಣರು, ಕ್ರೈಸ್ತರು ಎಲ್ಲರೂ ನಮಗೆ ಪರಿಚಿತರು.
ಈ ಬಾವಿಕಟ್ಟೆ ನಮ್ಮಮ್ಮನಿಗೆ ಬೇರೆಯದೇ ಆದ ಜಗತ್ತಿನ ಜ್ಞಾನವನ್ನು ಪರಿಚಯಿಸಿದ ತಾಣ. ಬುದ್ಧನಿಗೆ ಅರಳಿಮರದ ಕಟ್ಟೆಇದ್ದಂತೆ, ನಮ್ಮಮ್ಮನಿಗೆ ಬಾವಿಕಟ್ಟೆ ಎಂದರೂ ಅಡ್ಡಿಯಿಲ್ಲ. ಅಲ್ಲಿ ನೀರು ತೆಗೆದುಕೊಂಡು ಹೋಗಲಿಕ್ಕಷ್ಟೇ ಹೆಂಗಸರು ಬರುತ್ತಿರಲಿಲ್ಲ. ಬಂದವರು ಸುಮ್ಮನೆ ಹೋಗುತ್ತಲೂ ಇರಲಿಲ್ಲ. ಎಲೆಯಡಿಕೆ, ಕಾಫಿ-ಟೀ, ತಿಂಡಿ ವಿನಿಮಯ ಎಲ್ಲವೂ ನಡೀತಿತ್ತು. ಸಿಹಿ ನೀರಿಗಾಗಿ ಬರುತ್ತಿದ್ದ ಹೆಚ್ಚಿನವರು ಕೆಳಜಾತಿಯವರು.

ನಮ್ಮೂರಿನ ಬ್ರಾಹ್ಮಣರ ಕೆಲವು ಮನೆಯಂಗಳದ ಬಾವಿಗಳಲ್ಲಿ ಸಿಹಿ ನೀರು ಸಿಗುತ್ತಿತ್ತು. ಆದರೆ ಅವರ ಬಾವಿಯಲ್ಲಿ ಅವರೇ ಸೇದಿ ಇತರರಿಗೆ ಕೊಡಬೇಕಾದ ಕಟ್ಟುನಿಟ್ಟು ಪಾಲಿಸುತ್ತಿದ್ದುದರಿಂದ, ಅದು ಅವರಿಗೆ ತ್ರಾಸದಾಯಕ ಕೆಲಸವಾಗಿರುತ್ತಿತ್ತು. ಪ್ರತೀ ಸಾರಿಯೂ ಅವರಿಗೆ ತೊಂದರೆ ಕೊಡುವುದು ಇಷ್ಟವಿಲ್ಲದ ಕೆಳಜಾತಿಯವರು ಯಾವುದೇ ತಡೆಯಿಲ್ಲದೆ ನಮ್ಮ ಬಾವಿಯ ನೀರು ಕೊಂಡೊಯ್ಯುವ ಸ್ವಾತಂತ್ರ್‍ಯ ಇರುವುದರಿಂದ ಊರಿನ ಹೆಚ್ಚಿನ ಜನರೆಲ್ಲ ನೀರಿಗಾಗಿ ನಮ್ಮ ಮನೆಗೇ ಬರುತ್ತಿದ್ದರು. ಬ್ರಾಹ್ಮಣರು ನೀರಿಗೆ ಬರದಿದ್ದರೂ, ನಮ್ಮ ಅಮ್ಮ ಅಂಗಳದಲ್ಲಿ ಬೆಳೆದ ಬಾಳೆ ಎಲೆ ಮತ್ತು ಕೆಸುವಿನ ಎಲೆ(ಪತ್ರೊಡೆ ಎಲೆ), ದೀಪಾವಳಿಯ ಸಂದರ್ಭದಲ್ಲಿ ಕಡುಬಿಗೆ ಬೇಕಾಗುವ ಅರಸಿನ ಎಲೆಗಾಗಿ ನಮ್ಮ ಮನೆಗೆ ಬರುತ್ತಿದ್ದರು.
ಅಮ್ಮನದು ಒಂದೇ ಫಿಲಾಸಫಿ, ನೀರಿಗೆಂತ ಜಾತಿ? ಅಲ್ಲಾಹ ನಮಗೆ ಕರುಣಿಸಿದ ನೀರು ಎಲ್ಲರಿಗೂ ಸೇರಿದ್ದು ಎನ್ನುವುದು ಆಕೆಯ ಸರಳ ವಾದವಾಗಿತ್ತು. ನೀರಿನ ನೆಪದಲ್ಲಿ ನಮ್ಮ ಮನೆಯ ಬಳಿ ಬರುತ್ತಿದ್ದ ಹೆಂಗಸರು, ಅವರ ಮನೆಯ ಕಷ್ಟ-ಸುಖಗಳನ್ನು ಹೇಳಿಕೊಳ್ಳುತ್ತಿದ್ದರು. ಹಬ್ಬ-ಹರಿದಿನಗಳನ್ನು ಕುರಿತು ಮಾತನಾಡುತ್ತಿದ್ದರು. ಮದುವೆ-ಮುಂಜಿ ಸಮಾರಂಭಗಳಲ್ಲಿ ಮಾಡಿದ್ದ ಖರ್ಚುವೆಚ್ಚಗಳೇ ಮುಂತಾದ ವಿಚಾರಗಳನ್ನು ತಪ್ಪದೆ ವರದಿ ಒಪ್ಪಿಸುತ್ತಿದ್ದರು. ಅಲ್ಲಿ ಅಮ್ಮ ಅವರ ಮನೆಯ ಸ್ಥಿತಿ-ಗತಿ, ಆಚಾರ, ಸಂಪ್ರದಾಯ, ಅಡುಗೆ ತಯಾರಿಸುವ ವಿಧಾನ ಎಲ್ಲವನ್ನು ಕೇಳಿ ತಿಳಿದುಕೊಳ್ಳುತ್ತಿದ್ದಳು. ಆದರೆ ಯಾವುದೇ ಸಂಗತಿಯನ್ನಾಗಲಿ, ಇದು ಬೇಡ, ಇದು ನಮ್ಮದಲ್ಲ, ಅವರದೇ ಬೇರೆ ನಮ್ಮದೇ ಬೇರೆ ಸಂಸ್ಕೃತಿ ಅಂತ ಎಂದೂ ಅಂದವರಲ್ಲ. ಎಲ್ಲವನ್ನು ಕೇಳಿಸಿಕೊಳ್ಳುತ್ತಿದ್ದ ಅಮ್ಮ, ಒಳ್ಳೆಯದನ್ನು ಹೆಕ್ಕಿ ತೆಗೆದು ತನ್ನದಾಗಿಸಿಕೊಳ್ಳುತ್ತಿದ್ದಳು! ಅವರ ಅಡುಗೆ, ತಿಂಡಿಗಳು ಮಾಡುವ ರೀತಿ ತಿಳಿದುಕೊಂಡು ನಮ್ಮ ಮನೆಯಲ್ಲಿ ಮಾಡುವ ತಿಂಡಿಯಲ್ಲಿ, ಅಡುಗೆಯಲ್ಲಿ ಹೊಸ ಆವಿಷ್ಕಾರಗಳು, ಪ್ರಯೋಗಗಳು ನವೀನ ರೂಪವನ್ನು ಪಡೆದುಕೊಳ್ಳುತ್ತಿದ್ದವು.
ಇದನ್ನು ಓದಿದ್ದೀರಾ?: ಕರಾವಳಿಯಲ್ಲಿ ಮಿತಿಮೀರಿದ ಕೋಮುವಾದ; ದೇವರೂ, ಭೂತಗಳೂ ತುಳುನಾಡನ್ನು ತೊರೆದು ಕಡಲಿಗಿಳಿದು ಹೋಗಿವೆಯೇನೋ…
ಮುಖ್ಯವಾಗಿ ಬಿಲ್ಲವರು ಮತ್ತು ಮೊಗವೀರರು ಮಾಡುವ ವಿವಿಧ ರೀತಿಯ ಮೀನಿನ ಪದಾರ್ಥಗಳು, ಸುಕ್ಕ, ಪಲ್ಯಗಳು ಅವುಗಳಲ್ಲಿ ಬಳಸುವ ಸಂಬಾರ ಜೀನಸುಗಳು, ಜೀರಿಗೆ, ಮೆಂತ್ಯ, ಕೊತ್ತಂಬರಿ, ಓಮ, ಸಾಸಿವೆ, ಇಂಗು, ಶುಂಠಿ, ಕಾಳು ಮೆಣಸು, ಊರ ಮೆಣಸು, ಘಾಟಿ ಮೆಣಸು(ಬ್ಯಾಡಗಿ ಮೆಣಸು) ಮುಂತಾದವುಗಳನ್ನು ಬಳಸುವ ಹದ, ರೀತಿ ತಿಳಿದುಕೊಂಡು ಸಾಂಪ್ರದಾಯಿಕ ಬ್ಯಾರಿ ಅಡುಗೆಯಲ್ಲಿ ಹಲವು ರುಚಿಯ, ಸುವಾಸನೆಯ ಆವಿಷ್ಕಾರಗಳು ಉಂಟಾಗುತ್ತಿದ್ದವು. ‘ಹಿಂದುಗಳ ರೀತಿಯ ಅಡುಗೆ’ ಎಂದು ನಮ್ಮಲ್ಲಿ ಕೆಲವರು ಮೂಗುಮುರಿಯುವಂತೆ, ಅವಗಣನೆ ಮಾಡುವ ಗುಣ ನನ್ನಮ್ಮನಲ್ಲಿರಲಿಲ್ಲ! ತನ್ನ ಅಡುಗೆಯ ರುಚಿಯನ್ನು ಹಂಚಿಕೊಂಡು ತಿನ್ನುವ ಮತ್ತು ಇನ್ನೊಬ್ಬರಿಂದ ರುಚಿಯ ವಿಮರ್ಶೆ ಕೇಳುವ ಗುಣ ಅವಳಲ್ಲಿತ್ತು. ಬ್ಯಾರಿ ಅಡುಗೆಗಳಲ್ಲಿ ಮುಖ್ಯವಾಗಿ ಒಂದೊಂದು ಮೀನಿನ ಪದಾರ್ಥದಲ್ಲಿ ಒಂದೊಂದು ರೀತಿ, ಅಂದರೆ ಹೊಳೆ ಮೀನಿನ ವಿಧಗಳಲ್ಲಿ, ಕಾಣೆ, ಪಯ್ಯ, ಕೊಂತಿ, ಮಾಲ ಮುಂತಾದ ಪ್ರತಿಯೊಂದು ಮೀನುಗಳ ಸ್ವಾಧದಲ್ಲಿ ವ್ಯತ್ಯಾಸವಿರುವಂತೆ, ವಿವಿಧ ಸಂಬಾರ ಪದಾರ್ಥಗಳ ಬಳಕೆಯಲ್ಲಿ ವ್ಯತ್ಯಾಸ ಉಂಟಾಗುತ್ತಿತ್ತು. ಕೆಲವು ರೀತಿಯ ಮೀನುಗಳಿಗೆ ಖಾರ ಕಮ್ಮಿ ಯಾ ಜಾಸ್ತಿ, ಸೌಮ್ಯ ರೀತಿಯ ವಿವಿಧ ಸಂಬಾರ ಸಾಮಾನುಗಳ ಬಳಕೆ ಒಂದೆಡೆಯಾದರೆ, ಇನ್ನೊಂದು ತರದಲ್ಲಿ ಕಡಲು ಮೀನಿನ ಪದಾರ್ಥ ಮಾಡುವಾಗ ಬಂಗುಡೆ, ಬಯ್ಗೆ, ಶಾಡೆ, ಅಂಜಾಲು, ಅಡೆಮೀನು, ಬೊಳಂಜೀರು ಮುಂತಾದ ವೈವಿಧ್ಯಮಯ ಮೀನುಗಳ ಸಾರಲ್ಲಿ ಬಳಸಲಾಗುವ ಸಂಬಾರ ಪದಾರ್ಥಗಳಲ್ಲಿ ಬದಲಾವಣೆಗಳು ಮೂಡಿಬಂದವು.
ನೆರೆಹೊರೆಯ ಮನೆಯಲ್ಲಿ ಮಾಡುವ ಮೂಡೆ, ಪತ್ರೊಡೆ, ಗೋಳಿಬಜೆ, ವಡೆ ಮುಂತಾದ ತಿಂಡಿಗಳು ಕೆಲವೊಂದು ನಮ್ಮ ಅಡುಗೆ ಕೋಣೆಯೊಳಗೆ ಪ್ರವೇಶಿಸಿದವು. ನಮ್ಮ ಮನೆಯಲ್ಲಿ ಬಳಕೆ ಮಾಡುವ ಕ್ರಮವು ನೆರೆಹೊರೆಯವರ ಮನೆಯ ಅಡುಗೆಯ ಮನೆಯಲ್ಲೂ ಮುಖ್ಯವಾಗಿ ಈರುಳ್ಳಿ ಬೆಳ್ಳುಳ್ಳಿ, ಲವಂಗ, ಏಲಕ್ಕಿ, ಜಾಯಿಕಾಯಿ ದಾಲ್ಚೀನಿಯ ಬಳಕೆಯ ಮೂಲಕ ಬದಲಾವಣೆಯಾದದ್ದಿದೆ! ನಮ್ಮ ತುಪ್ಪದನ್ನ ‘ನೈಚೋರು’ ಪ್ರತಿಷ್ಠರ ಮನೆಯ ಸಮಾರಂಭಗಳಲ್ಲಿ ಪ್ರವೇಶಿಸಿದ್ದವು. ಅಂತೂ ನಮ್ಮಮ್ಮನ ಪ್ರಯೋಗಗಳು ನಿಗೂಢವಾಗಿ ಹಲವು ಕಡೆ ಹಬ್ಬಿದ್ದು ನನಗೆ ಕಂಡು ಬಂದಿತ್ತು! ನಮ್ಮ ಸಂಬಂಧಿಗಳು, ಅತಿಥಿಗಳು ನಮ್ಮ ಮನೆಯ ಊಟ ತಿಂಡಿಯ ರುಚಿಯ ಬಗ್ಗೆ ಹಲವು ಸಲ ಬಾಯಿತುಂಬ ಹೊಗಳಿದ್ದು ನಾನು ಕೇಳಿದ್ದೆ. ಇದರ ಆವಿಷ್ಕಾರಕ್ಕೆ ಹಿಂದುಗಳ ಅಡುಗೆಯ ಪ್ರಭಾವ ಎಂದು ತಿಳಿದುಬಂದಾಗ ಹಲವರು ಮೂಗುಮುರಿದದ್ದು ಕೂಡ ನಾನು ಕಂಡಿದ್ದೆ! ಆದರೆ ನಿಗೂಢ ರೀತಿಯಲ್ಲಿ ನಮ್ಮ ಕುಟುಂಬದ ಸಂಬಂಧಿಕರ ಅಡುಗೆ ಕೋಣೆಗಳಲ್ಲಿಯೂ ಬದಲಾವಣೆಗಳಾದದ್ದು ನನ್ನ ಅನುಭವಕ್ಕೆ ಬಂದ ವಿಶೇಷವಾಗಿತ್ತು!

ತನ್ನ ವಿಚಾರಗಳನ್ನು ಗೆಳೆಯರು, ಪರಿಚಿತರೊಂದಿಗೆ ಹಂಚಿಕೊಂಡು, ಇತರರದನ್ನು ತನ್ನದಾಗಿಸಿಕೊಳ್ಳುವ ಗುಣ ಅವಳಲ್ಲಿದ್ದ ಉತ್ತಮ ಮಟ್ಟದ ಸಾಂಸ್ಕೃತಿಕ ಲಕ್ಷಣ ಅಂತ ನನಗೆ ಈಗ ಅನ್ನಿಸುತ್ತಿದೆ.
ಔಷಧಿಯ ಚಮತ್ಕಾರ!
ಅಮ್ಮ ಒಂದು ರೀತಿಯಲ್ಲಿ ನಾಟಿ ವೈದ್ಯೆಯೂ ಆಗಿದ್ದಳು. ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ಬರುವ ಸಣ್ಣ ಪುಟ್ಟ- ಕೆಮ್ಮು, ನೆಗಡಿ, ಜ್ವರ, ಹೊಟ್ಟೆನೋವು, ಬೇಧಿಯಂತಹ ಕಾಯಿಲೆಗಳಿಗೆ ಕಷಾಯದ ಮದ್ದು ಮಾಡುತ್ತಿದ್ದಳು. ಅದು ಆಯುರ್ವೇದವೋ, ಯುನಾನಿಯೋ ಏನೆಂದು ಅವಳಿಗೇ ಗೊತ್ತಿರಲಿಲ್ಲ. ತನ್ನ ಹಿರಿಯರಿಂದ ದೊರಕಿದ ತಿಳಿವಳಿಕೆಯಿಂದ ತಯಾರಿಸಿದ ಪುಟ್ಟ ಗುಳಿಗೆಗಳು! ಅದನ್ನು ಬಾಲಗ್ರಹದ ಮಾತ್ರೆ ಎಂದು ಹೇಳುತ್ತಿದ್ದಳು! ಶುಂಠಿ, ತುಳಸಿ, ಸಂಬಾರಬಳ್ಳಿ, ತುಂಬೆರಸ ಮುಂತಾದ ಸಾಮಾನ್ಯವಾಗಿ ತಮ್ಮ ಮನೆಯಂಗಳದಲ್ಲಿ ಜನರು ಬೆಳೆವ ಥರಾವರಿ ಸೊಪ್ಪನ್ನೇ ಬಳಸಿ ಮಾಡುವ ರಸದಲ್ಲಿ ಮಾತ್ರೆಯನ್ನು ಅರೆದು ಮಕ್ಕಳಿಗೆ ಕೊಡಲು ಹೇಳುತ್ತಿದ್ದಳು. ತಂದೆ ಮಸೀದಿಯ ಖತೀಬ್/ಇಮಾಮ್ ಆದುದರಿಂದ ಅವರನ್ನು ಊರಿನ ಜನರೆಲ್ಲ ‘ಮಸೀದಿಯ ಗುರುಗಳು’ ಅಂತಲೇ ಕರೆಯುತ್ತಿದ್ದರು. ಹಾಗಾಗಿ ಅಮ್ಮ ಕೊಡುವ ಮದ್ದಿಗೆ ಒಂದು ರೀತಿಯ ನಿಗೂಢ ಪವಾಡದ ಗುಣ ಬಂದಿತ್ತು! ಅಮ್ಮನನ್ನು ಸುತ್ತಮುತ್ತಲಿನ ಜನ ಗೌರವ ಭಾವನೆಯಿಂದ ಕಾಣುತ್ತಿದ್ದರು. ನಮ್ಮ ಮನೆಯಲ್ಲಿ ಅವಳ ಕಹಿಯಾದ ಔಷಧಿಯ ಪ್ರಯೋಗಗಳು ಮಕ್ಕಳಾದ ನಮ್ಮ ಮೇಲೆ ನಡೆಯುತ್ತಿದ್ದವು! ಬೆಳಗ್ಗೆ ವಾರಕ್ಕೊಮ್ಮೆ ಬರಿ ಹೊಟ್ಟೆಯಲ್ಲಿ ಕಡೆಂಜಿ ಕಾಯಿಯ ಸೊಪ್ಪಿನ ಕಹಿ ಕಷಾಯ, ತಿಂಗಳಿಗೊಮ್ಮೆ ಒಳ್ಳೆದ ಕೊಡಿಯ ಸೊಪ್ಪನ್ನು ಅರೆದು ಮಾಡಿದ ರಸ, ಜೀರಿಗೆ ಕಷಾಯ, ಓಮ ಕಷಾಯ ಇವೆಲ್ಲ ನಾಟಿ ಕಹಿ ಔಷಧಿಗಳ ಪ್ರಯೋಗಕ್ಕೆ ಮಕ್ಕಳಾದ ನಾವು ತುತ್ತಾಗುತ್ತಿದ್ದೆವು!
ಇದನ್ನು ಓದಿದ್ದೀರಾ?: ಹುಟ್ಟಿದ ದಿನವೇ ದಫನವಾದ ಈ ಅಬ್ದುಲ್ ರಹ್ಮಾನ್ ಯಾರು? ಇಲ್ಲಿದೆ ಪೂರ್ತಿ ವಿವರ
ಅಮ್ಮನ ಇನ್ನೊಂದು ಗುಣವೆಂದರೆ, ಮದುವೆ-ಮುಂಜಿಗಳಿಗೆ, ಹಬ್ಬ-ಹರಿದಿನಗಳಿಗೆ ತನ್ನ ಬಳಿ ಇದ್ದ ಬಂಗಾರದ ಒಡವೆಗಳನ್ನು ನೆರೆಹೊರೆಯ ಬಡ ಹೆಂಗಸರಿಗೆ ಹಾಕಿಕೊಳ್ಳಲು ಕೊಡುತ್ತಿದ್ದುದು. ಸಮಾರಂಭ ಮುಗಿದ ಕೂಡಲೇ ಅವರು ತಪ್ಪದೆ ಹಿಂದೆ ತಂದು ಕೊಡುತ್ತಿದ್ದರು. ನಮ್ಮಮ್ಮನ ಬಳಿ ಹಳೆ ಕಾಲದ ಬ್ಯಾರಿ ಸಾಂಪ್ರದಾಯಿಕ ಶೈಲಿಯ ಗೆಜೆತಿಕ್, ಅವ್ಲು ಮಾಲೆ, ಐದೆಳೆಯ ಸರ ಮುಂತಾದ ಆಭರಣಗಳಿದ್ದವು. ನಮ್ಮೂರಲ್ಲಿ ಯಾರದೇ ಮದುವೆಯಾದರೂ, ಹೊಸ ಜೋಡಿ ಮನೆಗೆ ತಪ್ಪದೆ ಬರುತ್ತಿತ್ತು. ತಿಂಡಿ ತಿಂದು, ಚಾ ಕಾಫಿ ಇಲ್ಲವೇ ಶರಬತ್ತು ಕುಡಿದು ಅಮ್ಮನ ಆಶೀರ್ವಾದ ಪಡೆದು ಹೋಗುತ್ತಿದ್ದರು. ಇದು ಅಮ್ಮನಿಗೆ ಬಹಳ ಸಂಭ್ರಮದ ಜೊತೆಗೆ ಹೆಮ್ಮೆಯ ವಿಷಯವಾಗಿತ್ತು.
ಕೈ ಕಸುಬಿನ ಆಕರ್ಷಣೆ
ನಾನು ಮೊದಲೇ ಹೇಳಿದಂತೆ ಬಿಡುವಿನಲ್ಲಿ ಅಮ್ಮ ಸುಮ್ಮನೆ ಕೂರುವವಳಲ್ಲ! ತನ್ನ ಸ್ವಭಾವಕ್ಕೆ ತಕ್ಕಂತೆ ಅಮ್ಮನಿಗೆ ಕರಕುಶಲ ವಸ್ತುಗಳನ್ನು ತಯಾರಿಸುವುದರಲ್ಲಿ ಆಸಕ್ತಿ ಇತ್ತು. ಬುಟ್ಟಿ, ಚಾಪೆ, ಊಟಕ್ಕೆ ಕೂರುವಾಗ ನೆಲಕ್ಕೆ ಹಾಸುವ ಬ್ಯಾರಿ ಸಂಪ್ರದಾಯದ ‘ಸುಪುರ’ ಎಂಬ ಉರುಟಿನ ಚಾಪೆ, ಈಗಿನ ಚೀಲದಂತೆ ಹಿಂದೆ ಬಳಸಲಾಗುತ್ತಿದ್ದ ಮುಂಡಗನ ಎಲೆಗಳಿಂದ ಮಾಡುವ ‘ಜಂಬುಲಿ’, ಕಾಲೊರೆಸುವ ಚಾಪೆ ಹೆಣೆಯುವುದನ್ನು ತನ್ನ ತವರಿನಲ್ಲಿ ನಮ್ಮಜ್ಜಿಯಿಂದ ಕಲಿತಿದ್ದಳು. ಮಾರುಕಟ್ಟೆಗೆ ಮಾರಲು ಬರುವ ನಮ್ಮ ಕಡೆ ಬ್ಯಾರಿ ಚಾಪೆಗಳೆಂಬ ಹೆಸರಿನ ಮುಂಡಗನ ಒಲಿಯಿಂದ ಮಾಡುವ ಚಾಪೆಗಳು ಇರುತ್ತವೆ. ಅವುಗಳನ್ನು ಮುಂಡಗನ (ಬೇಲಿಗಳಲ್ಲಿ ಸಾಮಾನ್ಯ ಕಂಡುಬರುವ ಕೇದಗೆ ಹೂವಿನ ಗಿಡಗಳ ಪೊದೆ) ಎಲೆಗಳಿಂದ ತಯಾರಿಸಲಾಗುತ್ತದೆ. ಇದು ಬ್ಯಾರಿಗಳ ಚಾಪೆ ಎಂದೇ ಇದಕ್ಕೆ ಹೆಸರು. ಗೊಡ್ಡರ ಚಾಪೆಗಳಿಗೆ ಮಾರುಕಟ್ಟೆಯಲ್ಲಿ ಮೊದಲನೆ ಸ್ಥಾನವಾದರೆ, ಬ್ಯಾರಿಗಳ ಚಾಪೆಗೆ ಗುಣಮಟ್ಟದಲ್ಲಿ, ಬೆಲೆಯಲ್ಲಿ ಎರಡನೆಯ ಸ್ಥಾನ!

ಇದನ್ನೂ ಅಷ್ಟೇ, ಅಮ್ಮ ಅವಳಿಗಾಗಿ ಕಲಿತು ಮಾಡಿಕೊಂಡಿದ್ದಲ್ಲ. ತಮಗೆ ಗೊತ್ತಿದ್ದ ಬುಟ್ಟಿ, ಚಾಪೆ ಹೆಣೆಯುವುದನ್ನು, ಕಾಲು ಒರೆಸುವ ಚಾಪೆಗಳನ್ನು ತಯಾರಿಸುವುದನ್ನು ಆಸಕ್ತಿ ಇರುವ ನೆರೆಮನೆಯ ಹೆಂಗಸರಿಗೂ ಕಲಿಸುತ್ತಿದ್ದಳು. ಮನೆಯಲ್ಲಿಯೇ ಮಾಡಿಕೊಳ್ಳುವುದರಿಂದ ಖರ್ಚು ಕಡಿಮೆಗೊಳಿಸುವ ವಿಧಾನವೂ ಆಗಿತ್ತಲ್ಲ? ಹಾಗಾಗಿ ಊರಿನ ಹೆಂಗಸರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಅಮ್ಮನನ್ನು ಅವಲಂಬಿಸಿದ್ದರು.
(ಮುಂದುವರೆಯುವುದು)
ನಿರೂಪಣೆ: ಬಸವರಾಜು ಮೇಗಲಕೇರಿ