ವಿಚಕ್ಷಣಾ ಇಲಾಖೆಯ ಅಧಿಕಾರಿಗಳು ದಾಳಿಗೆ ಹದರಿ ಇಂಜಿನಿಯೊಬ್ಬರು ತಾವು ವಾಸಿಸುತ್ತಿರುವ ಫ್ಲ್ಯಾಟ್‌ನಿಂದ 500 ರೂ. ನೋಟುಗಳ ಕಂತೆಗಳನ್ನು ಸುರಿದಿರುವ ಘಟನೆ ಒಡಿಶಾದಲ್ಲಿ ನಡೆದಿದೆ.
ಒಡಿಶಾದ ಗ್ರಾಮೀಣಾಭಿವೃದ್ಧಿ ಇಲಾಖೆಯ ಮುಖ್ಯ ಇಂಜಿನಿಯರ್ ಬೈಕುಂಠ ನಾಥ್ ಸಾರಂಗಿ ಎಂಬವರ ಫ್ಲ್ಯಾಟ್ ಮೇಲೆ ಒಡಿಶಾ ವಿಚಕ್ಷಣಾ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಧಿಕಾರಿಗಳು ತಮ್ಮ ಫ್ಲ್ಯಾಟ್‌ಗೆ ಬರುತ್ತಿರುವುದನ್ನು ಕಂಡ ಇಂಜಿನಿಯರ್ ನೋಟುಗಳ ಕಂತೆಯನ್ನು ತಮ್ಮ ಫ್ಲ್ಯಾಟ್‌ನಿಂದ ಹೊರಗೆ ಸುರಿದಿದ್ದಾರೆ.
ಸಾರಂಗಿ ಅವರು ತಮ್ಮ ಆದಾಯಕ್ಕೂ ಮೀರಿದ ಸಂಪತ್ತನ್ನು ಹೊಂದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸಾರಂಗಿ ಅವರಿಗೆ ಸಂಬಂಧಿಸಿದ ನಿವಾಸಿಗಳು ಮತ್ತು ಇತರ ಏಳು ಸ್ಥಳಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಸುಮಾರು 2.1 ಕೋಟಿ ರೂ. ನಗದನ್ನು ವಶಕ್ಕೆ ಪಡೆದಿದ್ದಾರೆ.
ವಿಚಕ್ಷಣಾ ಅಧಿಕಾರಿಗಳು ತನ್ನ ಫ್ಲ್ಯಾಟ್‌ಗೆ ಧಾವಿಸುತ್ತಿರುವುದನ್ನು ಗಮನಿಸಿದ ಸಾರಂಗಿ, 500 ರೂ. ಮುಖಬೆಲೆಯ ನೋಟುಗಳ ಕಂತೆಗಳನ್ನು ಕಿಟಕಿಯಿಂದ ಹೊರಹಾಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಶಕ್ಕೆ ಪಡೆದ 2.1 ಕೋಟಿ ರೂ. ಹಣದಲ್ಲಿ 1 ಕೋಟಿ ರೂ. ನಗದು ಸಾರಂಗಿ ಅವರ ಭುವನೇಶ್ವರ ಫ್ಲ್ಯಾಟ್‌ನಲ್ಲಿ ಪತ್ತೆಯಾಗಿದೆ. ಉಳಿದ 1.1 ಕೋಟಿ ರೂ. ಹಣವನ್ನು ಅಂಗುಲ್‌ನಲ್ಲಿರುವ ಸಾರಂಗಿ ಅವರ ಮತ್ತೊಂದು ನಿವಾಸದಿಂದ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.