ಮುಂಗಾರು ಆರಂಭವಾಗುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಭಾರೀ ಮಳೆಯಾಗುತ್ತಿದೆ. ಅವೈಜ್ಞಾನಿಕ ಕಾಮಗಾರಿಯಿಂದಾಗಿ ಅಲ್ಲಲ್ಲಿ ರಸ್ತೆಗಳು ಜಲಾವೃತಗೊಂಡಿದೆ. ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿಯಿಡೀ ಎಡೆಬಿಡದೆ ಸುರಿದ ಮಳೆಯಿಂದಾಗಿ ಒಟ್ಟು ಎಂಟು ಮಂದಿ ಸಾವನ್ನಪ್ಪಿದ್ದಾರೆ. ಭಾರೀ ಮಳೆ ಹಿನ್ನೆಲೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಉಳ್ಳಾಲ ತಾಲ್ಲೂಕಿನಲ್ಲಿ ಶುಕ್ರವಾರ ಬೆಳಗಿನ ಜಾವ ಸಂಭವಿಸಿದ ಪ್ರತ್ಯೇಕ ಭೂಕುಸಿತಗಳಲ್ಲಿ ವೃದ್ಧ ಮಹಿಳೆ ಮತ್ತು ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಇತ್ತೀಚೆಗೆ ಉಳ್ಳಾಲ ತಾಲೂಕಿನ ಮಂಜನಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊಂಟೆಪದವು ಸಮೀಪದ ಕೋಡಿ ಎಂಬಲ್ಲಿ ಗುಡ್ಡ ಕುಸಿದು ಎರಡು ಮನೆಗಳ ಮೇಲೆ ಬಿದ್ದು ಪ್ರೇಮ ಕಾಂತಪ್ಪ ಪೂಜಾರಿ(50) ಎಂಬ ಮಹಿಳೆ ಮೃತಪಟ್ಟಿದ್ದಾರೆ. ಅವರ ಇಬ್ಬರು ಮೊಮ್ಮಕ್ಕಳು ಆರ್ಯನ್ (3) ಮತ್ತು ಆರುಷ್ (2) ಸಾವನ್ನಪ್ಪಿದ್ದಾರೆ.
ಇದನ್ನು ಓದಿದ್ದೀರಾ? ಗ್ರೌಂಡ್ ರಿಪೋರ್ಟ್ | ಹಠಾತ್ ನೆರೆ: ಕಂಗಾಲಾದ ಕರಾವಳಿ ಜನತೆ; ಗುಡ್ಡ ಕುಸಿತದಿಂದ ನಾಲ್ವರು ಮೃತ್ಯು
ಇನ್ನು ದೇರಳಕಟ್ಟೆ ಸಮೀಪದ ಬೆಳ್ಮ ಗ್ರಾಮದ ಕಾನಕರೆ ಎಂಬಲ್ಲಿ ಭಾರೀ ಮಳೆಯಿಂದಾಗಿ ಮನೆಯ ಹಿಂಬದಿಯ ತಡೆಗೋಡೆ ಕುಸಿದು ಫಾತಿಮ ನಈಮ(10) ಎಂಬ ಬಾಲಕಿ ಸಾವನ್ನಪ್ಪಿದ್ದಾಳೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಅಂಗನವಾಡಿ ಮತ್ತು ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಮೇ 30ರಂದು ಜಿಲ್ಲಾಡಳಿತ ರಜೆ ಘೋಷಿಸಿದೆ. ಜೊತೆಗೆ ಪಿಯು ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ.
ಶುಕ್ರವಾರ ನಡೆದ ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಮೀನುಗಾರರು ಸೇರಿದಂತೆ ಮೂವರು ಪುರುಷಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಪಲ್ಗುಣಿ ನದಿಯಲ್ಲಿ ಹಾಕಿದ್ದ ಮೀನುಗಾರಿಕಾ ಬಲೆಯನ್ನು ತೆಗೆಯಲು ಬೆಳಗಿನ ಜಾವ 1 ಗಂಟೆ ಸುಮಾರಿಗೆ ಹೊರಟಿದ್ದ ತೋಟ ಬೆಂಗ್ರೆಯ ಯಶವಂತ್ ಕರ್ಕೇರ(52) ಮತ್ತು ಕಮಲಾಕ್ಷ ಸಾಲಿಯಾನ್(47) ಎಂದು ಗುರುತಿಸಲಾದ ಇಬ್ಬರು ಮೀನುಗಾರರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.
ಇದನ್ನು ಓದಿದ್ದೀರಾ? ದಕ್ಷಿಣ ಕನ್ನಡ | ಭಾರೀ ಮಳೆ; ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಣೆ
ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದು ಘಟನೆಯಲ್ಲಿ, ಮೂಡಬಿದ್ರಿ ತಾಲ್ಲೂಕಿನ ವಾಲ್ಪಾಡಿ ಗ್ರಾಮದ 35 ವರ್ಷದ ರೈತ ಗುರುಪ್ರಸಾದ್ ಭಟ್ ಅವರು ಚೆಕ್ ಡ್ಯಾಂ ಮೇಲೆ ಹಾಕಲಾಗಿದ್ದ ಮರದ ಹಲಗೆ ಕೊಚ್ಚಿಹೋಗಿ ಸಾವನ್ನಪ್ಪಿದ್ದಾರೆ.
ಭೂಕುಸಿತದಿಂದ ಸಾವನ್ನಪ್ಪಿದವರಿಗೆ ತಲಾ ಐದು ಲಕ್ಷ ರೂ. ಪರಿಹಾರವನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಘೋಷಿಸಿದರು. ಜಿಲ್ಲೆಯಲ್ಲಿ ಮಳೆ ಪರಿಸ್ಥಿತಿಯನ್ನು ಪರಿಶೀಲಿಸಲು ವಿಶೇಷ ಅಧಿಕಾರಿಯನ್ನು ನೇಮಿಸುವಂತೆ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಸರ್ಕಾರವನ್ನು ಒತ್ತಾಯಿಸಿದರು.
