ಮನರೇಗಾ ಹಗರಣಕ್ಕೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ ಜಾಮೀನು ಪಡೆದ ತಕ್ಷಣ ಗುಜರಾತ್ ಬಿಜೆಪಿ ಸಚಿವ ಬಚುಭಾಯ್ ಖಬಾದ್ ಅವರ ಪುತ್ರನನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಕಳೆದ ತಿಂಗಳು ಬೆಳಕಿಗೆ ಬಂದ 71 ಕೋಟಿ ರೂ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ(MGNREGA) ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಗುಜರಾತ್ ರಾಜ್ಯ ಪಂಚಾಯತ್ ಮತ್ತು ಕೃಷಿ ಸಚಿವರ ಪುತ್ರ ಕಿರಣ್ ಖಬಾದ್ ಅವರನ್ನು ಬಂಧಿಸಲಾಗಿತ್ತು.
ಇದನ್ನು ಓದಿದ್ದೀರಾ? ಲೋಕಸಭಾ ಚುನಾವಣೆ | ಮೋದಿ ಕಿ ಗ್ಯಾರಂಟಿ v/s ಕಾಂಗ್ರೆಸ್ ನ್ಯಾಯ್ ಗ್ಯಾರಂಟಿ
“ಮೊದಲ ಎಫ್‌ಐಆರ್‌ನಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ನಂತರ ಗುರುವಾರ ರಾತ್ರಿ ಕಿರಣ್ ಖಬಾದ್ ಅವರನ್ನು ಬಂಧಿಸಲಾಯಿತು. ದಾಹೋದ್ ಪೊಲೀಸರು ದಾಖಲಿಸಿದ ಹೊಸ ಪ್ರಕರಣದಲ್ಲಿ ಬಂಧಿಸಲಾಗಿದೆ.
ಕಿರಣ್ ಸೇರಿದಂತೆ ಕೆಲವು ಏಜೆನ್ಸಿಗಳು ಮನರೇಗಾ ಅಡಿಯಲ್ಲಿ ಅವರಿಗೆ ನಿಗದಿಪಡಿಸಿದ ಕೆಲಸವನ್ನು ಪೂರ್ಣಗೊಳಿಸದೆ ಸರ್ಕಾರದಿಂದ ಹಣ ಮಾತ್ರ ಪಡೆದಿವೆ” ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್ ಸಿನ್ಹಾ ಭಂಡಾರಿ ಹೇಳಿದರು.
ಮನರೇಗಾ ಅಡಿಯಲ್ಲಿ ದಾಹೋದ್‌ನ ಲಾವೇರಿಯಾ ಗ್ರಾಮದಲ್ಲಿ ಪೂರ್ಣ ಕೆಲಸ ಮಾಡದಿದ್ದರೂ ಏಜೆನ್ಸಿಗಳಿಗೆ 18.41 ಲಕ್ಷ ರೂ.ಗಳನ್ನು ಪಾವತಿಸಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಜಿಲ್ಲಾ ಗ್ರಾಮೀಣಾಭಿವೃದ್ಧಿ ಸಂಸ್ಥೆ(ಡಿಆರ್‌ಡಿಎ) ನಡೆಸಿದ ಒಟ್ಟು 71 ಕೋಟಿ ರೂ.ಗಳ ಹಗರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವು ಮಂದಿ ವಿರುದ್ಧ ವಂಚನೆ, ನಂಬಿಕೆ ದ್ರೋಹದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಎರಡು ವಾರಗಳ ಹಿಂದೆ ಬಿಜೆಪಿ ಸಚಿವರ ಪುತ್ರ ಕಿರಣ್ ಮತ್ತು ಅವರ ಸಹೋದರ ಬಲವಂತ್ ಅವರನ್ನು ಬಂಧಿಸಲಾಗಿತ್ತು.
ಏಜೆನ್ಸಿಯು 2021 ಮತ್ತು 2024ರ ನಡುವೆ ಮಾಡಬೇಕಾದ ಕೆಲಸವನ್ನು ಪೂರ್ಣಗೊಳಿಸದೆಯೇ ಕೆಲಸ ಪೂರ್ಣವಾಗಿದೆ ಎಂದು ನಕಲಿ ಪ್ರಮಾಣಪತ್ರ, ದಾಖಲೆಗಳನ್ನು ಸಲ್ಲಿಸಿ ಹಣ ಪಡೆದುಕೊಂಡಿದೆ. ಬಲವಂತ್ ಮತ್ತು ಕಿರಣ್ ಈ ಏಜೆನ್ಸಿಯ ಮಾಲೀಕರು. ಅವರಿಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು. ಗುರುವಾರವಷ್ಟೇ ಸ್ಥಳೀಯ ನ್ಯಾಯಾಲಯ ಜಾಮೀನು ನೀಡಿತ್ತು. ಇದೀಗ ಮತ್ತೆ ಬಂಧಿಸಲಾಗಿದೆ.
