ಫಕೀರ್ ಮುಹಮ್ಮದ್ ಕಟ್ಪಾಡಿ ಕಂಡ ಕರಾವಳಿ ಬದುಕು: ಹೇಗಿತ್ತು, ಈಗ ಹೇಗಾಗಿದೆ?

Date:

Advertisements
ಕನ್ನಡ ಕಥಾ ಲೋಕಕ್ಕೆ ಬ್ಯಾರಿ ಮುಸ್ಲಿಮ್ ಸಮುದಾಯದ ನೋವು ನಲಿವುಗಳನ್ನು ಅತ್ಯಂತ ಹೃದಯಸ್ಪರ್ಶಿಯಾಗಿ ಕಟ್ಟಿಕೊಟ್ಟವರಲ್ಲಿ ಫಕೀರ್ ಮುಹಮ್ಮದ್ ಕಟ್ಬಾಡಿ ಮೊದಲಿಗರು. ಅವರು ತಮ್ಮ ಬಾಲ್ಯ ಕಾಲದ ಕರಾವಳಿಯ ಸೌಹಾರ್ದ ಬದುಕನ್ನು ಹಾಗೂ ಅಕ್ಷರ ಇನ್ನಷ್ಟೇ ಕಾಲಿಡುತ್ತಿರುವ ಹೊತ್ತಿನಲ್ಲೂ ಬಹುತ್ವ ಹೇಗೆ ಜನರ ಬದುಕನ್ನು ಸುಂದರವಾಗಿ ಹಿಡಿದಿಟ್ಟಿತ್ತು ಎನ್ನುವುದನ್ನು ಬಿಡಿಸಿಟ್ಟಿದ್ದಾರೆ. ಇತ್ತೀಚೆಗೆ ಹಲ್ಲೆಗಳು, ಕೊಲೆಗಳು, ಕೋಮು ಗಲಭೆಗಳಿಗಾಗಿ ಸುದ್ದಿಯಾಗುತ್ತಿರುವ ಅವಿಭಜಿತ ದಕ್ಷಿಣ ಕನ್ನಡ, ಮತ್ತೆ ಕಳೆದು ಹೋದ ದಿನಗಳ ಕಡೆಗೊಮ್ಮೆ ಮರಳಿ ನೋಡಬೇಕಾಗಿದೆ.

ಭಾಗ-2

ಪತ್ರೊಡೆಗೆ ಹೊಸ ಆವಿಷ್ಕಾರ

ನಮ್ಮ ಊರಿನ ಬ್ರಾಹ್ಮಣರ ಹೆಂಗಸರೂ ನಮ್ಮ ಮನೆಗೆ ಬಾಳೆ ಎಲೆ ಮತ್ತು ಕೆಸುವಿನ ಎಲೆಗಾಗಿ ಬರುತ್ತಿದ್ದರು. ಬಾಳೆ ಎಲೆ ಊಟಕ್ಕಾದರೆ, ಕೆಸುವಿನ ಎಲೆ ಪತ್ರೊಡೆ ಮಾಡುವುದಕ್ಕೆ. ಹಾಗೆ ಅವರು ನಮ್ಮ ತೋಟಕ್ಕೆ ಬಂದು ಕಿತ್ತುಕೊಂಡು ಹೋಗುವಾಗ, ನನ್ನ ಅಮ್ಮ ಅವರನ್ನೂ ಬಿಡುತ್ತಿರಲಿಲ್ಲ. ಕೆಸುವಿನ ಎಲೆಯಲ್ಲಿ ಮಾಡುವ ಪತ್ರೋಡೆಗೆ ಏನೇನು ಹಾಕುತ್ತೀರಾ ಎಂದು ಕೇಳಿ ತಿಳಿದುಕೊಳ್ಳುತ್ತಿದ್ದಳು. ಬ್ರಾಹ್ಮಣ ಹೆಂಗಸರ ಸಂಪರ್ಕದಲ್ಲಿ ನಮ್ಮಮ್ಮ ಕಲಿತ ಪತ್ರೊಡೆಯಲ್ಲಿ ತಂದ ಆವಿಷ್ಕಾರ ಮಾತ್ರ ವಿಶೇಷ ರೀತಿಯದೆಂದು ಎನಿಸಲ್ಪಟ್ಟಿತ್ತು! ಅಮ್ಮ ಮಾಡುತ್ತಿದ್ದ ಪತ್ರೊಡೆ ರುಚಿ, ಆಕಾರದಲ್ಲಿ ಬದಲಾಗಿತ್ತು! ಆದರೆ ಅದು ಬದಲಾವಣೆ ಹೊಂದಿ, ಅಂದರೆ ಅದರಲ್ಲಿ ಅಕ್ಕಿ, ಬೆಳ್ಳುಳ್ಳಿ, ಮೆಣಸು, ಖಾರ, ಬೆಲ್ಲ, ಜೀರಿಗೆ, ಕೊತ್ತಂಬರಿ, ಮಸಾಲೆ ಹಾಕಿದ ಅರೆಪು ಎಲೆಗೆ ಹಚ್ಚಿ ಸುರುಳಿ ಮಾಡಿ ಹಬೆಯಲ್ಲಿ ಬೇಯಿಸಿ, ನಂತರ ಸುರುಳಿಗಳನ್ನು ಉರುಟಾಗಿ ಕತ್ತರಿಸಿ ಎಣ್ಣೆಯಲ್ಲಿ ಹುರಿದು ಒಗ್ಗರಣೆ ಹಾಕಿ ಅದಕ್ಕೆ ಬೇರೆಯೇ ತರದ ರೂಪ, ರುಚಿ ಪಡೆದುಕೊಂಡು ಬ್ಯಾರಿ ಅಡುಗೆಯ ಛಾಪು ಬರುವಂತೆ ಮಾಡಿಕೊಂಡಿದ್ದಳು! ಬ್ರಾಹ್ಮಣರು ಸಾಮಾನ್ಯವಾಗಿ (ಹೆಚ್ಚಾಗಿ) ಊಟಕ್ಕೆ ಪಲ್ಯದ ಥರ ಮಾಡಿದರೆ, ಅಮ್ಮ ಅದನ್ನು ಬೆಳಗ್ಗಿನ ನಾಷ್ತಾಕ್ಕೆ ತಿಂಡಿಯಾಗಿಸಿ ಹೊಸ ರುಚಿಯನ್ನಾಗಿ ಮಾರ್ಪಾಡು ಮಾಡಿಕೊಂಡಿದ್ದಳು!

Advertisements

ಬ್ರಾಹ್ಮಣರ ಹೆಂಗಸರು ಅಮ್ಮನೊಂದಿಗೆ ಸ್ನೇಹವೇನೋ ಇಟ್ಟುಕೊಂಡಿದ್ದರಾದರೂ ನಮ್ಮ ಮನೆಯ ನೀರನ್ನೂ ಕೂಡ ಮುಟ್ಟುತ್ತಿರಲಿಲ್ಲ. ಜಗಲಿಯಲ್ಲಿ ಕೂತು ಅದೂ ಇದೂ ಮಾತಾಡಿ ಹೋಗುತ್ತಿದ್ದರು. ಒಮ್ಮೊಮ್ಮೆ ಅವರ ಪೈಕಿ ಸುಶೀಲಮ್ಮ ಎನ್ನುವವರು ನಮ್ಮನ್ನು ಕೆಣಕುವುದೂ ಇತ್ತು! ‘ನೀವು ಮಾಂಸ ಎಲ್ಲ ತಿನ್ನುತ್ತೀರಲ್ಲ? ನಾಯಿ, ಬೆಕ್ಕಿನ ಮಾಂಸವನ್ನೆಲ್ಲ ಯಾಕೆ ತಿನ್ನುವುದಿಲ್ಲ?’ ಎಂದೊಮ್ಮೆ ನನ್ನೊಂದಿಗೆ ಕೇಳಿದ್ದರು. ‘ನೀವು ಸೊಪ್ಪು, ತರಕಾರಿ ಎಲ್ಲ ತಿನ್ನುತ್ತೀರಲ್ಲಾ? ಹಾಗಾದರೆ, ಹುಲ್ಲು, ಸೋಗೆ, ಬೇಲಿಯ ಪೊದೆ, ಕಾಯಿಗಳನ್ನೆಲ್ಲ ಯಾಕೆ ತಿನ್ನುವುದಿಲ್ಲ?’ ಎಂದಿದ್ದೆ. ನಾ ಹಾಗೆ ಹೇಳಿದ್ದಕ್ಕೆ ಅಮ್ಮ ತರಾಟೆಗೆ ತೆಗೆದುಕೊಂಡು, ‘ವಯಸ್ಸಲ್ಲಿ ಹಿರಿಯರೊಂದಿಗೆ ಹಾಗೆಲ್ಲ ಮಾತಾಡಕೂಡದು’ ಎಂದು ಜೋರು ಮಾಡಿದ್ದಳು! ಅಮ್ಮ ಹಬ್ಬದ ದಿನಗಳಲ್ಲಿ ಸುಶೀಲಮ್ಮನಿಗೆ ಬಾಳೆಹಣ್ಣು, ಕಿತ್ತಲೆ ಹಣ್ಣು, ಸೇಬು ತರಿಸಿ ಕೊಡುತ್ತಿದ್ದಳು. ಉಳಿದ ನೆರೆಹೊರೆಯವರಿಗೆ ತಾನು ಮಾಡಿದ ಪಾಯಸ, ರೊಟ್ಟಿ, ತುಪ್ಪದನ್ನ(ನೈಚೋರು), ಕೋಳಿ ಸಾರು ಕೊಡುತ್ತಿದ್ದಳು. ಅವರು ಕೂಡ ಮನೆಯಲ್ಲಿ ಮಾಡಿದ ತಿಂಡಿ, ಅವಲಕ್ಕಿ, ಬೆಲ್ಲ, ಹುರಿಕಡಲೆ ಮುಂತಾದುವನ್ನು ತಮ್ಮ ಹಬ್ಬಗಳ ಸಂದರ್ಭದಲ್ಲಿ ಕೊಡುತ್ತಿದ್ದರು.

sddefault 5

ತೌಬಾ ಬೋಧನೆ

ಇನ್ನು ರಂಜಾನ್ ಹಬ್ಬದ ದಿನಗಳಲ್ಲಿ ಮುಸ್ಲಿಂ ಹೆಂಗಸರನ್ನು ಸೇರಿಸಿಕೊಂಡು ಪ್ರತಿ ಶುಕ್ರವಾರ ತೌಬಾ ಮಾಡುವುದನ್ನು ಹೇಳಿಕೊಡುತ್ತಿದ್ದಳು. ಈ ಐದತ್ತು ಹೆಂಗಸರು ಬಂದವರು ಸೇರಿ ರಾತ್ರಿ ತರಾವಿ ನಮಾಜ್ ಕೂಡ ಮಾಡುತ್ತಿದ್ದರು. ಇಲ್ಲಿಯೂ ಅಮ್ಮನದು ಅದೇ ಚಾಳಿ! ನಮಾಜಿಗೆ ಬರುತ್ತಿದ್ದವರಿಂದ ವಿವಿಧ ರೀತಿಯ ಅಡುಗೆಗಳನ್ನು ಕೇಳಿ ತಿಳಿದುಕೊಳ್ಳುತ್ತಿದ್ದಳು. ತನಗೆ ಗೊತ್ತಿರುವ ಬೇರೆ ರೀತಿಯ ಖಾದ್ಯಗಳನ್ನು, ಮುಖ್ಯವಾಗಿ ರಮಜಾನಿನ ಉಪವಾಸದ ಇಫ್ತಾರ್ ಮತ್ತು ಸಹರಿಗೆ ಒಗ್ಗುವ ಅಡುಗೆಗಳ ಮಾದರಿಯನ್ನು ಅವರಿಗೆ ಹೇಳಿಕೊಡುತ್ತಿದ್ದಳು.

ಅಮ್ಮ ಎಲ್ಲ ಜಾತಿಯ ಹೆಂಗಸರ ಜೊತೆ ಮಾತನಾಡುವ, ಬೆರೆಯುವ ಗುಣ ಹಲವು ಸಂಪ್ರದಾಯಸ್ಥ ಬ್ಯಾರಿ ಹೆಂಗಸರಿಗೆ ಸರಿ ಕಾಣುತ್ತಿರಲಿಲ್ಲ. ಮಸೀದಿಯ ಖಾಜಿಯವರ ಪತ್ನಿಯಾಗಿ ಹೀಗೆ ನೆರೆಹೊರೆಯ ಹಿಂದೂ ಹೆಂಗಸರೊಂದಿಗೆ ಬೆರೆಯುವ ಗುಣದ ಬಗ್ಗೆ ಸಾಕಷ್ಟು ಟೀಕೆಗೂ ಕೊಂಕು ಮಾತುಗಳಿಗೂ ಗುರಿಯಾದದ್ದಿದೆ. ಅದಕೆಲ್ಲ ತಲೆಕೆಡಿಸಿಕೊಳ್ಳದ ನಮ್ಮಮ್ಮ, ಇದರಲ್ಲೆಂತ ಜಾತಿ ಗೀತಿ ಎಂದು ನಿರ್ಲಕ್ಷಿಸಿ ಸುಮ್ಮನಾಗುತ್ತಿದ್ದರು. ಅವರಿಗೆ ಸಹಜವಾಗಿ ಈ ಗುಣ ಅವರ ರಕ್ತದಲ್ಲಿಯೇ ಬೆರೆತಿತ್ತು ಅಂತ ಕಾಣುತ್ತದೆ. ಅದಕ್ಕೆ ಕಾರಣ ಅಮ್ಮ ಕೃಷಿ ಕುಟುಂಬದಿಂದ ಬಂದದ್ದು ಎನ್ನುವುದು ನನ್ನ ಗ್ರಹಿಕೆ.

ತವರಿನ ಪ್ರಭಾವ

ಅಮ್ಮನ ಊರು ಬಾರ್ಕೂರು ಎಂದೆನಲ್ಲ, ಅಲ್ಲಿ ಅವರದು ಅಣ್ಣಂದಿರು, ತಮ್ಮಂದಿರು, ಅವರ ಹೆಂಡತಿ ಮಕ್ಕಳು ಸೇರಿದ ದೊಡ್ಡ ಸಂಸಾರ, ಕೃಷಿಕರ ಮನೆ. ಜಮೀನಿತ್ತು. ಭತ್ತ, ಕಬ್ಬು, ಮೆಣಸು, ಹುರುಳಿ, ಉದ್ದು, ಹೆಸರು ಬೆಳೆಯುತ್ತಿದ್ದರು. ದೊಡ್ಡ ತೆಂಗಿನತೋಟವಿತ್ತು, ತರಕಾರಿ ಬೆಳೆಯುತ್ತಿದ್ದರು. ಮನೆಯಷ್ಟೇ ದೊಡ್ಡ ಹಟ್ಟಿ ಇತ್ತು. ಅದರಲ್ಲಿ ಹಲವಾರು ದನಕರುಗಳು, ಉಳುವ ಎತ್ತುಗಳು, ಗಾಡಿಗೆ ಕಟ್ಟುವ ಎತ್ತುಗಳು, ಹಾಲಿಗಾಗಿ ಹಸು, ಎಮ್ಮೆ ಕಟ್ಟಿದ್ದರು. ಎತ್ತಿನಗಾಡಿ ಇತ್ತು. ಒಂದು ಕಡೆಯಿಂದ ಇನ್ನೊಂದುಕಡೆ ಪ್ರಯಾಣಿಸಲು ಬಳಸಲಾಗುತ್ತಿತ್ತು. ಆಗೆಲ್ಲ ಮನೆಯಾಳುಗಳು ಅದರೊಳಗೆ ಹುಲ್ಲಿನ ಮೆತ್ತೆ ಮಾಡಿ ಮೇಲೆ ಚಾಪೆ ಹಾಸಿ ಮನೆಯವರು ಕೂತು ಆರಾಮವಾಗಿ ಪ್ರಯಾಣ ಮಾಡುವ ವ್ಯವಸ್ಥೆ ಮಾಡುತ್ತಿದ್ದರು. ಆಗಮಾತ್ರ ಗಾಡಿಗೆ ಕಮಾನಿನಾಕಾರದ ಮಾಡು ಮೂಡುತ್ತಿತ್ತು. ಗಾಡಿಯೆಳೆಯುವ ಎತ್ತುಗಳ ಕೊಂಬುಗಳಿಗೆ ಬಣ್ಣಬಣ್ಣದ ಗೊಂಡೆಗಳು, ಕುತ್ತಿಗೆಗೆ ಗಲ್‌ಗಲ್ ಎನ್ನುವ ಕಂಚಿನ ಗಂಟೆಗಳು, ಹೂವಿನ ಮಾಲೆ ಹಾಕಲಾಗುತ್ತಿತ್ತು! ಇವನ್ನೆಲ್ಲ ನೋಡಿಕೊಳ್ಳುವುದಕ್ಕೆ ನಾಲ್ಕಾರು ಆಳುಗಳಿದ್ದರು. ಈ ವಾತಾವರಣದಲ್ಲಿ ಬೆಳೆದಿದ್ದ ಅಮ್ಮನಿಗೆ ಕೃಷಿ ಗೊತ್ತಿತ್ತು, ಮಾತ್ರವಲ್ಲ ಆ ಕೆಲಸಗಳಲ್ಲಿ ಆಸಕ್ತಿ ಇತ್ತು. ತವರಿನಲ್ಲಿ ಕಲಿತದ್ದನ್ನು ಬಿಡಬಾರದು ಎಂದು ಅಮ್ಮ, ಇಲ್ಲಿಯೂ ಅದನ್ನು ಮುಂದುವರೆಸಿದ್ದಳು.

ನಮ್ಮ ಮನೆಯಲ್ಲಿ ಅಮ್ಮ ದನ, ಕರುಗಳನ್ನು ಸಾಕಿದ್ದಳು. ಹಾಲು ಕರೆದು ಮಾರುತ್ತಿದ್ದಳು. ಆದರೆ ಅವಳದೊಂದು ನಿಯಮವಿತ್ತು. ಅದೇನೆಂದರೆ ಹಾಲಿಗೆ ನೀರು ಬೆರೆಸಬಾರದೆಂಬುದು. ಹಾಗಾಗಿ ನಮ್ಮ ಮನೆಯದು ಗಟ್ಟಿಹಾಲು. ಮಕ್ಕಳಿರುವ ಮನೆಯವರೆಲ್ಲ ಈ ಗಟ್ಟಿಹಾಲು ಪಡೆಯಲು ನಮ್ಮ ಮನೆಗೆ ಬರುತ್ತಿದ್ದರು. ಅದರಲ್ಲಿ ನನಗೆ ಪಾಠ ಹೇಳುತ್ತಿದ್ದ ಮೇಸ್ಟ್ರುಗಳು ಕೂಡ ಇದ್ದರು. ನನಗೀಗಲೂ ನೆನಪಿದೆ, ನಾನು ಹೈಸ್ಕೂಲಿಗೆ ಹೋಗುತ್ತಿದ್ದಾಗಲೂ ಬಿಡುವಿನಲ್ಲಿ ಮೇಯಿಸಲು ದನಗಳನ್ನು ಪಳ್ಳಿ ಗುಡ್ಡೆಗೆ ಅಟ್ಟಿಕೊಂಡು ಹೋಗುತ್ತಿದ್ದೆ. ಬಿಡುವಿದ್ದಾಗ ಅಕ್ಕನೊಂದಿಗೆ ಗದ್ದೆ ಬಯಲಿಗೆ ಹುಲ್ಲು ಕೊಯ್ದು ತರಲು ಹೋಗುತ್ತಿದ್ದೆ. ಅದು ನಮ್ಮ ಬದುಕಿನ ಭಾಗವೇ ಆಗಿತ್ತು. ಅಮ್ಮ ಕೃಷಿ ಕುಟುಂಬದಿಂದ ಬಂದವಳಾದ್ದರಿಂದ ದನದ ಮಾಂಸ ತಿನ್ನುತ್ತಿರಲಿಲ್ಲ. ಮನೆಯಲ್ಲೂ ಮಾಡುತ್ತಿರಲಿಲ್ಲ. ಅಪ್ಪ, ಹೊರಗಿನವರು ಊಟಕ್ಕೆ ಕರೆದಾಗ ಹೋಗಿ ತಿಂದು ಬರುತ್ತಿದ್ದರೇ ಹೊರತು ಮನೆಗೆ ತರುತ್ತಿರಲಿಲ್ಲ. ಅವಳು ತನ್ನ ಕೃಷಿಕ ಕುಟುಂಬದಲ್ಲಿನ ಆಚರಣೆಯಂತೆ ಬತ್ತದ ಕೊಯ್ಲು ಮುಗಿದ ನಂತರ ಹೊಸ ಅಕ್ಕಿ ಮನೆಯಲ್ಲಿ ಅಡುಗೆ ಮಾಡುವಾಗ ಹೊಸತುಣ್ಣುವ ಹಬ್ಬ ಮಾಡುತ್ತಿದ್ದಳು. ಹಲವು ವಿಧದ ತರಕಾರಿಗಳ ವಿಶೇಷ ಅಡುಗೆಯೊಂದಿಗೆ, ಅಪರೂಪಕ್ಕೆ ಒಮ್ಮೊಮ್ಮೆ ಬಲ್ಯಾನದ ಮೀನು ಸಿಕ್ಕರೆ ಮೀನಿನ ಸಾರನ್ನೂ ಮಾಡುತ್ತಿದ್ದಳು! ತಪ್ಪದೆ ಆಚರಿಸುತ್ತಿದ್ದಳು. ಹೊಸತುಣ್ಣುವ ಹಬ್ಬ ಮಾಡದೆ ಹೊಸ ಅಕ್ಕಿ ಅಡುಗೆ ಕೋಣೆಯೊಳಗೆ ಬರಲು ಬಿಡುತ್ತಿರಲಿಲ್ಲ. ಇವೆಲ್ಲದಕ್ಕೂ ಕಡು ಸಂಪ್ರದಾಯಸ್ಥ ಮುಸ್ಲಿಮರೆನಿಸಿದ್ದ ನಮ್ಮಪ್ಪನ ಬೆಂಬಲ ಅವಳಿಗಿದ್ದೇ ಇರುತ್ತಿತ್ತು.

ಇದನ್ನು ಓದಿದ್ದೀರಾ?: ಫಕೀರ್ ಮುಹಮ್ಮದ್ ಕಟ್ಪಾಡಿ ಕಂಡ ಕರಾವಳಿ ಬದುಕು: ಹೇಗಿತ್ತು, ಈಗ ಹೇಗಾಗಿದೆ?

ಆದರೆ ಈಗ ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಬ್ಯಾರಿಗಳು ದನ ಸಾಕುವ ಹಾಗಿಲ್ಲ. ದನ ಮೇಯಿಸಲು ಕೊಂಡುಹೋಗುವುದು ಈಗ ಸಾಧ್ಯವಾಗದು. ದನಗಳನ್ನು ಮೇಯಿಸಲು ಅಟ್ಟಿಕೊಂಡು ಹೋದಾಗ ಕಸಾಯಿಖಾನೆಗೆ ಕೊಡಲು ಹೋಗುತ್ತಿಯಾ ಎಂದು ಹೊಡೆದು ಬಡಿದು ಗಲಾಟೆ ನಡೆದ ಹಲವು ಘಟನೆಗಳು ನಮ್ಮ ಕರಾವಳಿಯಲ್ಲಿ ನಡೆದು ಭಯ ಹುಟ್ಟಿಸಿದೆ! ಬಡಮುಸ್ಲಿಮರು ಹಸುಗಳನ್ನು ಸಾಕಿ ಹಾಲು ಕರೆದು ಮಾರಾಟ ಮಾಡುವುದು, ಹೈನುಗಾರಿಕೆ(ಪೈರಿನ ವ್ಯಾಪಾರ)ಯಲ್ಲಿ ತೊಡಗುವುದು ಅಪಾಯಕರವೆಂದು ಕಂಡುಕೊಂಡು ಕೃಷಿಕರು ಕೂಡ ಹಸು ಕರುಗಳನ್ನು ಸಾಕುವುದನ್ನು ಬಿಟ್ಟುಬಿಟ್ಟಿದ್ದಾರೆ!

ಬ್ಯಾಂಕ್ ನೌಕರನಾಗಿ ಕೆಲಸಕ್ಕೆ ಸೇರಿದ ಮೇಲೆ ವರ್ಗಾವಣೆ ಹೊಂದಿ ಹಲವು ಊರುಗಳನ್ನು ಸುತ್ತಬೇಕಾಗುತ್ತಿದ್ದ (‘ಹೋದಲ್ಲೆಲ್ಲ ಬಿಡಾರ ಹೂಡುವ ಅಲೆಮಾರಿಗಳಂತೆ’ ಎಂದು ಅಮ್ಮ ಹೇಳುತ್ತಿದ್ದಳು!) ನಾನು ಹದಿನೈದು ದಿನಕ್ಕೊಂದು ಸಲ ಊರಿಗೆ ಹೋಗುತ್ತಿದ್ದೆ. ಕಾರ್ಯಬಾಹುಳ್ಯದ ಕಾರಣದಿಂದ ಅದು ತಿಂಗಳಿಗೊಂದು ಸಲವಾಗುತ್ತಿತ್ತು. ನಾನು ಊರಿಗೆ ಬರುವುದನ್ನೇ ಕಾದಿರುತ್ತಿದ್ದ ನಮ್ಮ ಉಮ್ಮ (ಅಮ್ಮ), ಊರಿನಲ್ಲಿ ಆ ಅವಧಿಯಲ್ಲಿ ನಡೆದ ಹುಟ್ಟು, ಸಾವು, ಮದುವೆ, ಉತ್ಸವ ಮುಂತಾದ ಅಷ್ಟೂ ಸಮಾಚಾರಗಳನ್ನು ಚಾಚೂತಪ್ಪದೆ ವರದಿಯೊಪ್ಪಿಸುತ್ತಿದ್ದಳು. ನನಗದನ್ನು ತಿಳಿಯುವ ಆಸಕ್ತಿ ಇರುವುದು ಅವಳಿಗೆ ತಿಳಿದಿತ್ತು. ಆ ವಿವರಗಳು ಹೇಗಿದ್ದವೆಂದರೆ, ನಾನೇ ಊರಿನಲ್ಲಿದ್ದರೂ ಅಷ್ಟು ವಿಷಯಗಳನ್ನು ಖುದ್ದು ಕಂಡು, ಕೇಳಿರಲು ಸಾಧ್ಯವಾಗದಷ್ಟು ಇರುತ್ತಿತ್ತು!

unnamed 8

ಬಾವಿಯ ನೀರು ಕುಡಿದು ಬೆಳೆದವರು!

ಈಗ ನಾನು ಊರಿಗೆ ಹೋದರೆ, ಬೀದಿಯಲ್ಲಿ ಸಿಗುವ, ಎದುರಾಗುವ ಜನ ನಿಮ್ಮ ಬಾವಿಯ ನೀರು ಕುಡಿದು, ನಿಮ್ಮ ಅಮ್ಮನ ಕೈ ಊಟ ತಿಂದು ಬೆಳೆದವರು ನಾವು ಎಂದು ಪರಿಚಯಿಸಿಕೊಳ್ಳುತ್ತಾರೆ. ಅದನ್ನು ಕೇಳಿದಾಗ ಹೃದಯತುಂಬಿ ಬರುತ್ತದೆ. ಆ ರೀತಿ ಎಲ್ಲರೊಂದಿಗೆ ಒಂದಾಗುವ ಅಮ್ಮನ ಗುಣ ವಿಶೇಷವಾದದ್ದು. ನಾನು ಬಾಲಕನಾಗಿದ್ದಾಗ ನಮ್ಮ ಗ್ರಾಮದಲ್ಲಿ ಜಾತಿ ಧರ್ಮದ ಪರಿವೆಯೇ ಇರುತ್ತಿರಲಿಲ್ಲ. ಕರ್ನಾಟಕದ ಕಡಲತಡಿಯ ಜಿಲ್ಲೆಯಲ್ಲಿ ಕೊಡುಕೊಳೆಯ, ಎಲ್ಲರೊಂದಿಗೆ ಬೆರೆಯುವ ಗುಣ ಪ್ರಕೃತಿದತ್ತವಾಗಿತ್ತು. ಸಂಪ್ರದಾಯಸ್ಥ ಮುಸ್ಲಿಮರು ಐದು ಬಾರಿ ನಮಾಜ್ ಮಾಡುವುದು, ಹಿಂದೂಗಳು ದೇವಸ್ಥಾನಕ್ಕೆ ಹೋಗುವುದು, ಪರಸ್ಪರರ ಪೂಜಾಸ್ಥಳಗಳಿಗೆ ಭೇಟಿ ಮಾಡುವುದು ನೇರ್ಚ, ಹರಕೆ ಹೇಳಿಕೊಳ್ಳುವುದು, ಉತ್ಸವ, ಉರೂಸ್, ಕಂಬಳಗಳಲ್ಲಿ ಭಾಗವಹಿಸುವುದು ಸಾಮಾನ್ಯವಾಗಿತ್ತು. ಮಾತ್ರವಲ್ಲ ಸಹಜವೆನಿಸಲ್ಪಟ್ಟಿತ್ತು! ಊಟ, ತಿಂಡಿ, ಉಡುಪು, ಕೆಲವೊಂದು ಆಚರಣೆಗಳು ಒಂದೇ ಥರ ಇದ್ದವು. ಮಾಡುವ ರೀತಿಯಲ್ಲಿ ಕೆಲವೊಂದರಲ್ಲಿ ಭಿನ್ನತೆ ಇದ್ದರೂ ಅದು ಸಹಜವೆನಿಸಲ್ಪಡುತ್ತಿತ್ತು. ತನ್ನ ತವರಿಗೆ ಬಿಟ್ಟು ಇನ್ನೆಲ್ಲೂ ಹೋಗದೆ ತನ್ನ ಮನೆವಾರ್ತೆಯಲ್ಲಿ ಮುಳುಗಿರುತ್ತಿದ್ದ ನಮ್ಮಮ್ಮನಲ್ಲಿಗೆ ಬರುತ್ತಿದ್ದ ಹೆಂಗಸರು ‘ನಾವು ನಿಮ್ಮ ಹಾಗೆಯೇ, ನೀವು ನಮ್ಮ ಹಾಗೆಯೇ’ ಎಂದು ಮಾತಿನ ಮಧ್ಯೆ ಹೇಳುತ್ತಿರುವುದು ನಾನು ಹಲವು ಬಾರಿ ಕೇಳಿದ್ದೆ. ತಂದೆಯ ಬಳಿ ಬರುತ್ತಿದ್ದ ಗಂಡಸರು ಎಲ್ಲರೂ ‘ನೀವು ನಾವು(ಬದುಕುತ್ತಿರುವುದು) ಒಂದೇ ಥರ’ ಎನ್ನುತ್ತಿದ್ದರು.

ಸಾಮರಸ್ಯ, ಸಹಬಾಳ್ವೆ, ಸೌಹಾರ್ದ ಎನ್ನುವ ಘೋಷಣೆಗಳು ನಮ್ಮೂರಿಗೆ ಅಗತ್ಯವೇ ಇರಲಿಲ್ಲ! ನಮ್ಮೂರವರ ಬದುಕಿನಲ್ಲಿ ಸಹಜಗುಣವಾಗಿ ಬೆರೆತುಹೋಗಿತ್ತು. ಒಂದಂತೂ ಸ್ಪಷ್ಟವಾಗಿತ್ತು- ನಮ್ಮ ಹಾಗೆಯೇ ನೀವು; ನಿಮ್ಮ ಹಾಗೆಯೇ ನಾವು ಎನ್ನುವುದು ಪ್ರಕೃತಿಸಹಜವಾಗಿತ್ತು!

(ಮುಂದುವರೆಯುವುದು)

ನಿರೂಪಣೆ: ಬಸವರಾಜು ಮೇಗಲಕೇರಿ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಉಡುಪಿ | ಬ್ರಹ್ಮಾವರ ಪೊಲೀಸ್ ಠಾಣೆಯ 500ಮೀ ವಾಪ್ತಿಯಲ್ಲಿ ಆ.22ರವರೆಗೆ ನಿಷೇಧಾಜ್ಞೆ: ಜಿಲ್ಲಾಧಿಕಾರಿ

ಬ್ರಹ್ಮಾವರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 177/2025ಕ್ಕೆ ಸಂಬಂಧಿಸಿದಂತೆ ಸಕ್ರಿಯ ಹಿಂದೂ...

ರಸ್ತೆ ತುಂಬಾ ತಗ್ಗು ಗುಂಡಿಗಳದ್ದೇ ಕಾರುಬಾರು; ಸವಾರರ ಜೀವಕ್ಕೆ ‘ಗ್ಯಾರಂಟಿ’ಯೇ ಇಲ್ಲ!

ರಾಯಚೂರಿನ ಅನ್ವರಿ - ಹಟ್ಟಿ ಚಿನ್ನದ ಗಣಿ ಪಟ್ಟಣಕ್ಕೆ ಹೋಗುವ ಮುಖ್ಯ...

Download Eedina App Android / iOS

X