ಮಂಗಳೂರು-ತಿರುವನಂತಪುರ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಅವಧಿ ಮುಗಿದ ತಂಪು ಪಾನೀಯಗಳನ್ನು ಪ್ರಯಾಣಿಕರಿಗೆ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ತನಿಖೆ ನಡೆಸಲು ಕೇರಳ ಮಾನವ ಹಕ್ಕುಗಳ ಆಯೋಗ ಆದೇಶಿಸಿದೆ.
ಇತ್ತೀಚೆಗೆ, ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಅವಧಿ ಮೀರಿದ ತಂಪು ಪಾನೀಯಗಳನ್ನು ಪ್ರಯಾಣಿಕರಿಗೆ ಪೂರೈಕೆ ಮಾಡಲಾಗಿದೆ ಎಂದು ವರದಿಯಾಗಿತ್ತು. ಆ ವರದಿಗಳನ್ನು ಆಧರಿಸಿ ತನಿಖೆ ನಡೆಸುವಂತೆ ಪಾಲಕ್ಕಾಡಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ ಆಯೋಗವು ಆದೇಶಿಸಿದೆ. 15 ದಿನಗಳ ಒಳಗೆ ತನಿಖಾ ವರದಿ ಸಲ್ಲಿಸುವಂತೆ ಸೂಚಿಸಿದೆ.
ಪ್ರಯಾಣಿಕರಿಗೆ ನೀಡಲಾಗಿದ್ದ ತಂಪು ಪಾನೀಯ ಬಾಟಲಿಗಳ ಮೇಲೆ ತಯಾರಿಕೆಯ ದಿನಾಂಕ 2023ರ ಸೆಪ್ಟೆಂಬರ್ 25 ಎಂದಿದ್ದು, ಬಳಕೆಗೆ ಯೋಗ್ಯ ಅವಧಿಯು 2024ರ ಸೆಪ್ಟೆಂಬರ್ 25 ಎಂದಿತ್ತು. ಆದರೂ, ಅವುಗಳನ್ನು ವಿತರಿಸಲಾಗಿದೆ ಎಂದು ಪ್ರಯಾಣಿಕರೊಬ್ಬರು ದೂರು ನೀಡಿದ್ದರು. ಅವರ ದೂರನ್ನು ಆಹಾರ ಪೂರೈಕೆ ಸಿಬ್ಬಂದಿ ಕಡೆಗಣಿಸಿದ್ದರು ಎಂದು ವರದಿಯಾಗಿದೆ.