ಈ ದಿನ ಸಂಪಾದಕೀಯ | ಡಬಲ್ ಇಂಜಿನ್ ಸರ್ಕಾರದಲ್ಲೂ ಬಿಹಾರ ಬಸವಳಿದಿದೆ

Date:

Advertisements
2025ರ ವಿಧಾನಸಭಾ ಚುನಾವಣೆಗೆ ಬಿಹಾರ ಸಿದ್ಧವಾಗುತ್ತಿದೆ. ಪ್ರಧಾನಿ ಮೋದಿ ಅವರು ಬಿಹಾರದತ್ತ ಮುಖಮಾಡಿದ್ದಾರೆ. ನಾನಾ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡುವುದರ ಜೊತೆಗೆ, ಪರೋಕ್ಷವಾಗಿ ಚುನಾವಣಾ ಪ್ರಚಾರವನ್ನೂ ಆರಂಭಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಮೇ 29, 30ರಂದು ಬಿಹಾರ ಪ್ರವಾಸ ಕೈಗೊಂಡಿದ್ದರು. ಪಾಟ್ನಾದಲ್ಲಿ ಬೃಹತ್ ರೋಡ್‌ ಶೋ ಕೂಡ ನಡೆಸಿದರು. ಇದೇ ಸಮಯದಲ್ಲಿ, ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ #ModiFailsBihar ಅಭಿಯಾನವು ಟ್ರೆಂಡಿಂಗ್‌ನಲ್ಲಿತ್ತು. ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಹಲವಾರು ಬಿಹಾರಿಗರು ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೋದಿ ಕಾರ್ಯವೈಖರಿಯನ್ನು ಟೀಕಿಸಿದ್ದಾರೆ. ಕಳೆದ 11 ವರ್ಷದಲ್ಲಿ ಡಬ್ಬಲ್ ಇಂಜಿನ್‌ ಸರ್ಕಾರದಿಂದ ಯಾವುದೇ ಉಪಯೋಗವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಹಾರದಲ್ಲಿನ ಕಳಪೆ ರಸ್ತೆಗಳು, ಉದ್ಯೋಗಾವಕಾಶಗಳ ಕೊರತೆ, ಶಿಕ್ಷಣ ಕ್ಷೇತ್ರಕ್ಕೆ ಕಡಿಮೆ ಅನುದಾನ, ಮಳೆಗಾಲದಲ್ಲಿ ಕುಸಿದು ಬೀಳುತ್ತಿರುವ ಸೇತುವೆಗಳು ಮತ್ತು ಕಳೆಪೆ ಕಾಮಗಾರಿ, ಬಡತನ, ಆರೋಗ್ಯ ಸೌಲಭ್ಯಗಳ ಕೊರತೆಯಂತಹ ಮೂಲ ಸಮಸ್ಯೆಗಳ ಬಗ್ಗೆ ಬಿಹಾರಿಗರು ಗಮನ ಸೆಳೆದಿದ್ದಾರೆ.

ಪ್ರಧಾನಿ ಮೋದಿ ಅವತು ತಮ್ಮ ತವರು ರಾಜ್ಯ ಗುಜರಾತ್‌ನತ್ತ ಹೆಚ್ಚಿನ ಒಲವು ಹೊಂದಿದ್ದಾರೆ. ನಾನಾ ಅಭಿವೃದ್ಧಿ ಮತ್ತು ಆದ್ಯತೆಯ ಯೋಜನೆಗಳು ಗುಜರಾತ್‌ಗೆ ಹೋಗುತ್ತಿವೆ. ಗುಜರಾತ್ ಬೆಳೆಯುತ್ತಿರುವಾಗ ಬಿಹಾರ ಇನ್ನೂ ಹಿಂದುಳಿದಿದೆ. ಮೋದಿ ಸರ್ಕಾರ ಬಿಹಾರವನ್ನು ಕಡೆಗಣಿಸಿದೆ ಎಂದು ಬಿಹಾರಿ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisements

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಸೆಣಸಾಟ ಸೇನೆಯದು, ಮೆರೆದಾಟ ಮೋದಿಯದು!

ಬಿಹಾರದ ಹಿಂದುಳಿಯುವಿಕೆಗೆ ಮೋದಿ ಸರ್ಕಾರ ಮಾತ್ರವೇ ಕಾರಣವಲ್ಲ ಎಂಬುದು ವಾಸ್ತವವೇ ಆಗಿದ್ದರೂ, ಕಳೆದ 11 ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ. ಈ ಅವಧಿಯಲ್ಲಿ ಬಿಜೆಪಿಯ ಮಿತ್ರ ಪಕ್ಷ ಜೆಡಿಯು ನಾಯಕ ನಿತೀಶ್‌ ಕುಮಾರ್ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ನಿತೀಶ್‌ ಸರ್ಕಾರದಲ್ಲಿ 2 ವರ್ಷವನ್ನು ಹೊರತುಪಡಿಸಿದರೆ, ಉಳಿದ 9 ವರ್ಷ ಬಿಜೆಪಿಯೂ ಪಾಲು ಪಡೆದಿದೆ. ಹೀಗಿದ್ದರೂ, ಈ 11 ವರ್ಷಗಳಲ್ಲಿ ಬಿಹಾರಕ್ಕೆ ಮೋದಿ ಸರ್ಕಾರದಿಂದ ವಿಶೇಷವಾದ ಕೊಡುಗೆಗಳೇನೂ ಇಲ್ಲ. ಇದೇ ಬಿಹಾರಿಗರ ಆಕ್ರೋಶಕ್ಕೆ ಪ್ರಮುಖ ಕಾರಣ.

ಬಿಹಾರ, ಒಂದು ಕಾಲದಲ್ಲಿ ಭಾರತದ ಸಾಂಸ್ಕೃತಿಕ ಮತ್ತು ಬೌದ್ಧಿಕ ಕೇಂದ್ರವಾಗಿತ್ತು. ಅತ್ಯಂತ ಹೆಚ್ಚು ಖನಿಜ ಸಂಪತ್ತನ್ನು ಹೊಂದಿತ್ತು. ಕಲ್ಲಿದ್ದಲು ಮತ್ತು ಕಬ್ಬಿಣವು ರಾಜ್ಯದ ಪ್ರಮುಖ ಖನಿಜ ಸಂಪತ್ತಾಗಿದ್ದವು. ಬೃಹತ್ ಪ್ರಮಾಣದ ಖನಿಜಗಳನ್ನು ಹೊಂದಿದ್ದರೂ, ಅವುಗಳ ಲಾಭ ಬಿಹಾರಕ್ಕೆ ಹೆಚ್ಚು ದೊರೆಯಲಿಲ್ಲ. ಅವುಗಳಿಂದ ಹೆಚ್ಚು ಲಾಭವನ್ನು ಕೇಂದ್ರ ಸರ್ಕಾರ ಪಡೆದುಕೊಳ್ಳುತ್ತಿತ್ತು. 2000ನೇ ವರ್ಷದಲ್ಲಿ ಬಿಹಾರವನ್ನು ವಿಭಜಿಸಿ ಜಾರ್ಖಂಡ್‌ ರಾಜ್ಯದ ಉದಯವಾಯಿತು. ಖನಿಜ ಸಂಪತ್ತು ಜಾರ್ಖಂಡ್‌ ಪಾಲಾದರೆ, ಜನಸಂಖ್ಯೆಯ ಒತ್ತಡ ಬಿಹಾರದ ಪಾಲಿಗೆ ಉಳಿಯಿತು.

ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯದಲ್ಲಿ ಮಾನವ ಶಕ್ತಿಯನ್ನು ಬಳಸಿಕೊಂಡು, ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ರಾಜಕೀಯ ಇಚ್ಛಾಶಕ್ತಿಯ ಕೊರತೆ ಬಿಹಾರವನ್ನು ಆಳಿದವರಲ್ಲಿತ್ತು. ಜೊತೆಗೆ, ರಾಜಕೀಯ ಅಸ್ಥಿರತೆಯೂ ಬಿಹಾರವನ್ನು ಹಿಂದುಳಿಯುವಂತೆ ಮಾಡುವಲ್ಲಿ ಪ್ರಮುಖ ಕೊಡುಗೆ ನೀಡಿತ್ತು.

ಕಳೆದ 70 ವರ್ಷಗಳಲ್ಲಿ, ಬಿಹಾರವು 40ಕ್ಕೂ ಹೆಚ್ಚು ಬಾರಿ ಮುಖ್ಯಮಂತ್ರಿಗಳ ಬದಲಾವಣೆಯನ್ನು ಕಂಡಿದೆ. ಪದೇ ಪದೆ ಮುಖ್ಯಮಂತ್ರಿಗಳು, ಸರ್ಕಾರಗಳ ಬದಲಾವಣೆಯಿಂದಾಗಿ ದೀರ್ಘಕಾಲದ ಯೋಜನೆಗಳ ಅನುಷ್ಠಾನದಲ್ಲಿ ತೊಡಕು ಅನುಭವಿಸುತ್ತಿದ್ದವು. ಜೊತೆಗೆ, 1990ರ ನಂತರದ ರಾಜಕಾರಣವು ರಾಜ್ಯಕ್ಕೆ ‘ಜಂಗಲ್ ರಾಜ್’ ಎಂಬ ಹಣೆಪಟ್ಟಿಯನ್ನು ಕಟ್ಟಿತು. ರಾಜ್ಯದಲ್ಲಿ, ಭ್ರಷ್ಟಾಚಾರ, ಕಾನೂನು-ಸುವ್ಯವಸ್ಥೆಯ ಕುಸಿತ ಹಾಗೂ ಕಳಪೆ ಆಡಳಿತವು ರಾಜ್ಯವನ್ನು ಹಿಂದಕ್ಕೆ ದೂಡಿತು.

2005ರ ನಂತರದ ಈ 20 ವರ್ಷಗಳಲ್ಲಿ 9 ತಿಂಗಳನ್ನು (2014-05-20ರಿಂದ 2025-02-22) ಹೊರತುಪಡಿಸಿ ನಿತೀಶ್‌ ಕುಮಾರ್ ಅವರೇ ಬಿಹಾರದ ಮುಖ್ಯಮಂತ್ರಿಯಾಗಿದ್ದಾರೆ. ಆದಾಗ್ಯೂ, 8 ಬಾರಿ ಸರ್ಕಾರವನ್ನು ಬದಲಿಸಿದ್ದಾರೆ. ಅದರಲ್ಲಿ, ಕಳೆದ 5 ವರ್ಷಗಳಲ್ಲಿ ನಾಲ್ಕು ಬಾರಿ ತಮ್ಮ ಮೈತ್ರಿಯನ್ನು ಬಿಜೆಪಿಯಿಂದ ಆರ್‌ಜೆಡಿಗೆ, ಆರ್‌ಜೆಡಿಯಿಂದ ಬಿಜೆಪಿಗೆ ಬದಲಿಸಿದ್ದಾರೆ. ಈ ರಾಜಕೀಯ ಪಲ್ಲಟವು ರಾಜ್ಯದಲ್ಲಿ ರಾಜಕೀಯ ಚರ್ಚೆಗಳ ಮೇಲೆ ಗಮನ ಸೆಳೆಯಿತೇ ಹೊರತು, ಅಭಿವೃದ್ಧಿ ಕೆಲಸಗಳ ಮೇಲೆ ಗಮನ ಹರಿಸಲಿಲ್ಲ.

ಪರಿಣಾಮವಾಗಿ, ಬಿಹಾರವು ಇಂದಿಗೂ ಅತ್ಯಂತ ಹಿಂದುಳಿದ ರಾಜ್ಯಗಳಲ್ಲಿ ಒಂದು ಎಂಬ ಹಣೆಪಟ್ಟಿಯನ್ನು ಭದ್ರವಾಗಿ ಕಟ್ಟಿಕೊಂಡಿದೆ. ಬಿಹಾರದಲ್ಲಿ ಶಿಕ್ಷಣವು ಹಿಂದುಳಿದಿದೆ. 2021ರ ಅಂಕಿಅಂಶಗಳ ಪ್ರಕಾರ, ಸಾಕ್ಷರತೆಯಲ್ಲಿ ರಾಷ್ಟ್ರೀಯ ಸರಾಸರಿಯು 74.4% ಇದ್ದರೆ, ಬಿಹಾರದಲ್ಲಿ 61.8% ಇದೆ. ಗುಣಮಟ್ಟದ ಶಿಕ್ಷಣದ ಕೊರತೆಯಿಂದ ಯುವಜನರು ಹೊಸ ಕಲಿಕೆಯಿಂದ ವಂಚಿತರಾಗಿದ್ದಾರೆ. ಕೌಶಲ್ಯ ತರಬೇತಿಗಳ ಅವಕಾಶಗಳು ಸೀಮಿತವಾಗಿವೆ. ಅಲ್ಲಿನ ಯುವಜನರು ಕೂಲಿ ಕೆಲಸಗಳನ್ನು ಹರಸಿ ದೆಹಲಿ, ಮುಂಬೈ ಹಾಗೂ ಬೆಂಗಳೂರಿನಂತಹ ನಗರಗಳಿಗೆ ವಲಸೆ ಹೋಗುವಂತೆ ಮಾಡಿದೆ.

ಶಿಕ್ಷಣ, ಉದ್ಯೋಗ, ಆರೋಗ್ಯ, ಮೂಲ ಸೌಕರ್ಯ ಹಾಗೂ ಅಭಿವೃದ್ಧಿ ಯೋಜನೆಗಳಲ್ಲಿ ಕೇಂದ್ರ ಸರ್ಕಾರವು ಬಿಹಾರವನ್ನು ನಿರ್ಲಕ್ಷಿಸಿದೆ. ಕೇಂದ್ರದಿಂದ ಸಾಕಷ್ಟು ಅನುದಾನ ದೊರೆಯದೇ ಇರುವುದು ಅಭಿವೃದ್ಧಿಗೆ ತೊಡಕಾಗಿದೆ. ಬಿಹಾರಕ್ಕೆ ಒದಗಿಸಲಾಗುತ್ತಿರುವ ರಾಜ್ಯಾಭಿವೃದ್ಧಿ ವೆಚ್ಚವು 2000ನೇ ವರ್ಷದಲ್ಲಿ ತಲಾ (ಬಿಹಾರದ ಪ್ರತಿಯೊಬ್ಬ ಪ್ರಜೆ) 7,935 ರೂ. ಆಗಿತ್ತು. ಈಗ, 3,633 ರೂ.ಗೆ ಕುಸಿದಿದೆ.

ಇದನ್ನು ಓದಿದ್ದೀರಾ?: ಕೊಲೆ ಕೃತ್ಯಗಳಲ್ಲಿ ಮಕ್ಕಳ ಭಾಗವಹಿಸುವಿಕೆ ಗಂಭೀರ ಮತ್ತು ಆಘಾತಕಾರಿ!

2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೇರಿದ ಮೋದಿ ನೇತೃತ್ವದ ಬಿಜೆಪಿ ಬಿಹಾರಕ್ಕೆ ಭಾರೀ ಚುನಾವಣಾ ಭರವಸೆಗಳನ್ನು ನೀಡಿತ್ತು. 2015 ಮತ್ತು 2020ರ ಬಿಹಾರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಬಿಹಾರಕ್ಕೆ 1.25 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್ ನೀಡುವುದಾಗಿ ಮೋದಿ ಘೋಷಿಸಿದ್ದರು. ಆದರೆ, ಆ ಭರವಸೆ ಇನ್ನೂ ಈಡೇರಿಲ್ಲ. 13 ಕೋಟಿ ಜನಸಂಖ್ಯೆ ಹೊಂದಿರುವ ಬಿಹಾರಕ್ಕೆ ಗುಜರಾತ್‌ನಂತಹ ರಾಜ್ಯಗಳಿಗೆ ಸಿಗುವಂತಹ ರೈಲು ಸೌಲಭ್ಯಗಳು ಇನ್ನೂ ದೊರೆತಿಲ್ಲ.

ಈ ನಡುವೆ, 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತವನ್ನು ಪಡೆಯಲಾಗದೆ, ಬಿಹಾರದ ಜೆಡಿಯು ಮತ್ತು ಆಂಧ್ರದ ಟಿಡಿಪಿ ಕೃಪೆಯಿಂದ ಮೋದಿ ಮತ್ತೆ ಪ್ರಧಾನಿಯಾಗಿದ್ದಾರೆ. ಅವರ ಋಣಭಾರ ಹೊತ್ತಿರುವ ಮೋದಿ, ಕಳೆದ ತಮ್ಮ ಕೇಂದ್ರ ಬಜೆಟ್‌ನಲ್ಲಿ ಒಂದಷ್ಟು ಹೆಚ್ಚಿನ ಮೊತ್ತವನ್ನು ಬಿಹಾರಕ್ಕೆ ನೀಡಿದ್ದಾರೆ. ಆದರೆ, ಬಿಹಾರಕ್ಕೆ ಮೋದಿ ನೀಡಿದ್ದ ಭರವಸೆಗಳಿಗೂ ಕೊಡಲಾದ ಅನುದಾನಕ್ಕೂ ಅಂತಹ ಸಾಮ್ಯತೆ ಇಲ್ಲ ಎಂಬುದು ಬಿಹಾರಿಗರ ವಾದ.

ಈಗ, 2025ರ ವಿಧಾನಸಭಾ ಚುನಾವಣೆಗೆ ಬಿಹಾರ ಸಿದ್ಧವಾಗುತ್ತಿದೆ. ಪ್ರಧಾನಿ ಮೋದಿ ಅವರು ಬಿಹಾರದತ್ತ ಮುಖಮಾಡಿದ್ದಾರೆ. ನಾನಾ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡುವುದರ ಜೊತೆಗೆ, ಪರೋಕ್ಷವಾಗಿ ಚುನಾವಣಾ ಪ್ರಚಾರವನ್ನೂ ಆರಂಭಿಸಿದ್ದಾರೆ. ‘ಬಿಜೆಪಿ-ಜೆಡಿಯು’ ಡಬಲ್ ಇಂಜಿನ್ ಸರ್ಕಾರದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ‘ನಿಮ್ಮ ಡಬಲ್ ಇಂಜಿನ್ ಸರ್ಕಾರ ಕಳೆದ 10 ವರ್ಷಗಳಲ್ಲಿ ಬಿಹಾರಕ್ಕೆ ಯಾವ ಕೊಡುಗೆಯನ್ನೂ ಕೊಟ್ಟಿಲ್ಲ. ರಾಜ್ಯದಲ್ಲಿ ಉದ್ಯೋಗ ಸೃಷ್ಟಿಯಾಗಿಲ್ಲ. ವಲಸೆ ನಿಂತಿಲ್ಲ. ಉತ್ತಮ ಶಿಕ್ಷಣ ದೊರೆಯುತ್ತಿಲ್ಲ. ಮೂಲ ಸೌಕರ್ಯಗಳು ಕಾಣುತ್ತಿಲ್ಲ’ವೆಂದು ಬಿಹಾರಿಗರು ಆಕ್ರೋಶಗೊಂಡಿದ್ದಾರೆ.

ಆ ಕಾರಣದಿಂದಲೇ ಕಳೆದ 2 ದಿನಗಳಲ್ಲಿ #ModiFailsBihar ಅಭಿಯಾನವು ದೇಶದ ಗಮನ ಸೆಳೆದಿದೆ. ಮೋದಿ ಅವರನ್ನು ಕೇಂದ್ರೀಕರಿಸಿ ಖಂಡಿಸುತ್ತಿದೆ. ಆಳುವವರಿಗೆ ಬಿಹಾರವನ್ನು ಮುಂದೆ ತರಲು ಈಗಲೂ ಅವಕಾಶವಿದೆ. ಕೈಗಾರಿಕೀಕರಣ, ಆಹಾರ ಸಂಸ್ಕರಣ, ಜವಳಿ ಹಾಗೂ IT ಕ್ಷೇತ್ರಗಳಿಗೆ ಕೇಂದ್ರ-ರಾಜ್ಯ ಸರ್ಕಾಗಳು ಒತ್ತುಕೊಟ್ಟು, ಅಭಿವೃದ್ಧಿ ಮಾಡಬಹುದಾಗಿದೆ. ಹೆಚ್ಚಿನ ಉದ್ಯೋಗ ಸೃಷ್ಟಿಸಲು ಅವಕಾಶಗಳಿವೆ. ರೇಷ್ಮೆ ಉದ್ಯಮವನ್ನು ವಿಸ್ತರಿಸಬಹುದಾಗಿದೆ. ರಾಜ್ಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಕೌಶಲ್ಯ ತರಬೇತಿಯನ್ನು ನೀಡಬಹುದಾಗಿದೆ. ರಸ್ತೆ, ಸೇತುವೆ ಹಾಗೂ ಆರೋಗ್ಯ ಕೇಂದ್ರಗಳ ಮೇಲೆ ಹೆಚ್ಚಿನ ಹೂಡಿಕೆ ಮಾಡಬೇಕಿದೆ. ಇದೆಲ್ಲದಕ್ಕಿಂತ ಮುಖ್ಯವಾಗಿ ಆಳುವವರಲ್ಲಿ ಇಚ್ಛಾಶಕ್ತಿ ಮೂಡಬೇಕಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X