ಫಕೀರ್ ಮುಹಮ್ಮದ್ ಕಟ್ಪಾಡಿ ಕಂಡ ಕರಾವಳಿ ಬದುಕು: ಹೇಗಿತ್ತು, ಈಗ ಹೇಗಾಗಿದೆ?

Date:

Advertisements
ಕನ್ನಡ ಕಥಾ ಲೋಕಕ್ಕೆ ಬ್ಯಾರಿ ಮುಸ್ಲಿಮ್ ಸಮುದಾಯದ ನೋವು ನಲಿವುಗಳನ್ನು ಅತ್ಯಂತ ಹೃದಯಸ್ಪರ್ಶಿಯಾಗಿ ಕಟ್ಟಿಕೊಟ್ಟವರಲ್ಲಿ ಫಕೀರ್ ಮುಹಮ್ಮದ್ ಕಟ್ಬಾಡಿ ಮೊದಲಿಗರು. ಅವರು ತಮ್ಮ ಬಾಲ್ಯ ಕಾಲದ ಕರಾವಳಿಯ ಸೌಹಾರ್ದ ಬದುಕನ್ನು ಹಾಗೂ ಅಕ್ಷರ ಇನ್ನಷ್ಟೇ ಕಾಲಿಡುತ್ತಿರುವ ಹೊತ್ತಿನಲ್ಲೂ ಬಹುತ್ವ ಹೇಗೆ ಜನರ ಬದುಕನ್ನು ಸುಂದರವಾಗಿ ಹಿಡಿದಿಟ್ಟಿತ್ತು ಎನ್ನುವುದನ್ನು ಬಿಡಿಸಿಟ್ಟಿದ್ದಾರೆ. ಇತ್ತೀಚೆಗೆ ಹಲ್ಲೆಗಳು, ಕೊಲೆಗಳು, ಕೋಮು ಗಲಭೆಗಳಿಗಾಗಿ ಸುದ್ದಿಯಾಗುತ್ತಿರುವ ಅವಿಭಜಿತ ದಕ್ಷಿಣ ಕನ್ನಡ, ಮತ್ತೆ ಕಳೆದು ಹೋದ ದಿನಗಳ ಕಡೆಗೊಮ್ಮೆ ಮರಳಿ ನೋಡಬೇಕಾಗಿದೆ.

ಭಾಗ- 3

ನಮ್ಮದೇ ಹಬ್ಬ, ಉತ್ಸವ, ಜಾತ್ರೆ

ನಮ್ಮ ಕೋಟೆ ಗ್ರಾಮದಲ್ಲೊಂದು ಮಸೀದಿ ಇದೆ. ಇದು ಕಟಪಾಡಿ ಮಸೀದಿ ಎಂದೇ ಪರಿಚಿತ! ನಮ್ಮ ತಂದೆ ಆ ಮಸೀದಿಯ ಖತೀಬ್/ಮೌಲ್ವಿಯಾಗಿದ್ದರು. ಅಪ್ಪ ಗಾಂಧೀಜಿ, ನೆಹರೂರನ್ನು ಇಷ್ಟಪಡುತ್ತಿದ್ದರು. ಕಾಂಗ್ರೆಸ್ ಪರವಾಗಿದ್ದರು. ಇದರಿಂದಾಗಿ ಹಲವು ಸಲ ತೊಂದರೆಗಳಿಗೆ ಒಳಗಾಗಿದ್ದರು. ತಂದೆಗೆ ಕನ್ನಡದಲ್ಲಿ ಓದು ಬರಹ ತಿಳಿದಿತ್ತು. ಅರೇಬಿಕ್ ಭಾಷೆ ತಕ್ಕಮಟ್ಟಿಗೆ ತಿಳಿದಿತ್ತು. ಇಂಗ್ಲಿಷ್ ಕೂಡ ಕಲಿಯುವ ಆಸಕ್ತಿ ಇತ್ತು. ಕೊರಡ್ಕಲ್ ಶ್ರೀನಿವಾಸ ರಾವ್‌ರವರು ಬರೆದು ತನ್ನ ಮಗ ಡಾ. ವೆಂಕಟರಾವ್ ಕೊರಡ್ಕಲ್‌ರವರ ಹೆಸರಲ್ಲಿ ಪ್ರಕಟಿಸಿದ ‘ಸುಲಭದಲ್ಲಿ ಇಂಗ್ಲಿಷ್’ ಎಂಬ ಪುಸ್ತಕದ ಮೂಲಕ ಇಂಗ್ಲಿಷ್ ಕಲಿಯಲು ಪ್ರಯತ್ನಿಸುತ್ತಿದ್ದರು. ನಮ್ಮಮ್ಮನ ಮಕ್ಕಳಲ್ಲಿ ನಾನು ನಾಲ್ಕನೆಯವ. ನನ್ನ ಮೂವರು ಅಕ್ಕಂದಿರು ಶಾಲೆ ಕಲಿತಿದ್ದರು. ಮಸೀದಿಯ ಪಕ್ಕದಲ್ಲಿಯೇ ಬೋರ್ಡ್ ಹಿಂದೂಸ್ತಾನಿ ಸ್ಕೂಲ್ ಇತ್ತು. ಅಲ್ಲಿ ಇಬ್ಬರು ಶಿಕ್ಷಕರಿದ್ದರು. ಇಬ್ಬರಿಗೂ ಕನ್ನಡ ಮತ್ತು ಉರ್ದು ಬರುತ್ತಿತ್ತು. ಮಕ್ಕಳಿಗೆ ಉರ್ದು, ಕನ್ನಡ ಕಲಿಸುತ್ತಿದ್ದರು. 1ರಿಂದ 5ನೆ ತರಗತಿಯವರೆಗೆ ನಾನು ಅಲ್ಲಿಯೇ ಕಲಿತದ್ದು. ಜೊತೆಗೆ ಬೆಳಗ್ಗೆ ಎಂಟರಿಂದ ಒಂಭತ್ತೂವರೆಯ ತನಕ(ಅಂದರೆ ಶಾಲೆಯ ಸಮಯದ ತನಕ) ಮಸೀದಿಯಲ್ಲಿದ್ದ ಮದ್ರಸಾದಲ್ಲಿ ಧಾರ್ಮಿಕ ಪಾಠವನ್ನು ಎಸ್ಸೆಸ್ಸೆಲ್ಸಿ ತನಕವೂ ತಪ್ಪದೆ ಕಲಿಯುತ್ತಿದ್ದೆ.

Advertisements

ಊರಿನಲ್ಲಿದ್ದವರಲ್ಲಿ ಹೆಚ್ಚಿನವರು ಬಡವರು. ಅಲ್ಲಿ ಯಾರೂ ಶ್ರೀಮಂತರಿರಲಿಲ್ಲ. ಸರಳ ಬದುಕು. ನಾನು ಮೊಗವೀರರ ಮಕ್ಕಳೊಂದಿಗೆ ಗಾಳದಲ್ಲಿ ಮೀನು ಹಿಡಿಯಲು ಹೋಗುತ್ತಿದ್ದೆ. ಬಿಲ್ಲವರ ಮಕ್ಕಳೊಂದಿಗೆ ಊರನ್ನು ಕಾಯುತ್ತದೆ ಎಂದು ಹೇಳಲಾಗುವ ಬೊಬ್ಬರ್ಯ ಭೂತದ ಕೋಲಕ್ಕೆ ಹೋಗುತ್ತಿದ್ದೆ. ಆಗಾಗ ನಮ್ಮ ಗ್ರಾಮದಲ್ಲಿ, ಮಟ್ಟು ಅಂಬಾಡಿ ಗ್ರಾಮಗಳಲ್ಲಿ ನಡೆಯುವ ನೇಮ, ಉತ್ಸವ, ಯಕ್ಷಗಾನ ಬಯಲಾಟ ನೋಡಲು ಹೋಗುತ್ತಿದ್ದೆ. ನಮ್ಮ ಗ್ರಾಮಕ್ಕೆ ದೂರದ ಊರುಗಳಿಂದ ಮೇಳಗಳು, ಯಕ್ಷಗಾನ ತಂಡಗಳು ಮುಖ್ಯವಾಗಿ ಸಾಸ್ತಾನದ ಗೂಳಿ ಗರಡಿ ಮೇಳ(ಜನರು ಇದನ್ನು ‘ಪೂಜರ್‍ಲೆ ಮೇಳ’ ಎಂದೂ ಕರೆಯುತ್ತಿದ್ದರು), ಪೆರ್ಡೂರು ಮೇಳ ನಮ್ಮ ಊರಿಗೆ ಬರುತ್ತಿದ್ದವು. ಆಗ ಕಲಾವಿದರು ಯಕ್ಷಗಾನದ ಪಾತ್ರಧಾರಿಗಳು ಮಾತ್ರವಲ್ಲ, ಪ್ರಚಾರ ಮಾಡುವುದು, ಪ್ರಾಯೋಜಕರನ್ನು ಭೇಟಿ ಮಾಡುವುದು, ಬಯಲಾಟದ ಖರ್ಚಿಗಾಗಿ ಧನಸಹಾಯ ಮಾಡುವಂತೆ ಜನರನ್ನು ಕೇಳಿಕೊಳ್ಳುವುದು, ವಂತಿಗೆ ಪಡೆಯಲು ಮನೆಮನೆ ಸುತ್ತುವುದು ಮುಂತಾದ ವ್ಯವಸ್ಥೆಗಳನ್ನು ಮಾಡಬೇಕಾಗಿತ್ತು. ಪೂಜರ್‍ಲೆ ಮೇಳದ ಸೂರಪ್ಪ ಎಂಬ ಕಲಾವಿದ ರಾಕ್ಷಸ, ನಾಯಕ, ಹೆಣ್ಣಿನ ವೇಷ ಎಲ್ಲವನ್ನೂ ಸಮರ್ಥವಾಗಿ ಮಾಡುತ್ತಿದ್ದನೆಂದು ನನ್ನ ನೆನಪು! ಈ ರೀತಿ ನಡೆಯುವ ಸಮಾರಂಭಗಳು, ಮದುವೆಗಳು, ನಮ್ಮ ಗ್ರಾಮದಲ್ಲಿರುವ ಮೆಂಡನ್ ಮೂಲಸ್ಥಾನದ ವರ್ಷಂಪ್ರತಿ ಸಮಾರಂಭಗಳಿಗೆ ನಮ್ಮ ಬಾವಿಯ ನೀರೇ ಆಗಬೇಕಾಗಿತ್ತು. ನಮಗಾಗ ಈ ಆಚರಣೆಗಳು, ಉತ್ಸವಗಳು, ಜಾತ್ರೆಗಳು, ಹಬ್ಬಗಳು ನಮ್ಮದಲ್ಲ ಅನ್ನುವ ಆಲೋಚನೆಯೇ ಇರಲಿಲ್ಲ. ಸಾಂಸ್ಕೃತಿಕ ಚಟುವಟಿಕೆಗಳ ಭಾಗವಾಗಿ ನೋಡಿ, ಭಾಗವಹಿಸಿ ಆನಂದಿಸುತ್ತಿದ್ದೆವು. ನನ್ನ ಒತ್ತಾಯ, ಆಸಕ್ತಿಗೆ ಸಂಪ್ರದಾಯಸ್ಥರಾಗಿದ್ದ ತಂದೆ ತಾಯಿ ಅಡ್ಡಿಯಾಗುತ್ತಿರಲಿಲ್ಲ!

ಕರಾವಳಿ 2

ಬೇರೆ ಬೇರೆ ಅನ್ನುವ ಅನುಭವ

6ನೆ ಕ್ಲಾಸ್ ಕಲಿಯಲು ನಮ್ಮೂರಿನಿಂದ ಕಟ್ಪಾಡಿ ಪೇಟೆಶಾಲೆಗೆ ಸೇರಿದಾಗ, ನಮ್ಮ ಜಾತಿ ಬೇರೆ, ನಿಮ್ಮ ಜಾತಿ ಬೇರೆ, ಮೇಲು-ಕೀಳು ಎಂಬ ಮಾತುಗಳು ನನ್ನ ಕಿವಿಗಳ ಮೇಲೆ ಬೀಳಲಿಕ್ಕೆ ಶುರುವಾಯಿತು. ನಮ್ಮ ಜಾತಿ ದಲಿತರಿಗಿಂತ ಕೆಳಗಿನ ಐದನೇ ಸ್ಥಾನದ್ದು, ದನ ತಿನ್ನುವ ಜಾತಿ ಎಂದು ಮೇಲ್ಜಾತಿಯ ಹುಡುಗರು ನನಗೆ ಹೇಳುತ್ತಿದ್ದರು!

ಅಪ್ಪನಿಗೆ ಊರ ಇತರ ಧಾರ್ಮಿಕ ನಾಯಕರ ಜೊತೆ ನಿಕಟ ಸಂಪರ್ಕವಿತ್ತು. ಅದರಲ್ಲಿ ಬ್ರಾಹ್ಮಣರೂ ಇದ್ದರು. ಅಪ್ಪನನ್ನು ಗುರುಗಳು(ಗುರುಕುಲು) ಎಂದು ಕರೆಯುತ್ತಿದ್ದರು. ಊರಿನ ಮುಸ್ಲಿಮರು, ಹಿಂದುಳಿದ ಜಾತಿಯ ಜನರು ತಮ್ಮ ಕಷ್ಟಗಳ ಪರಿಹಾರಕ್ಕಾಗಿ ಮಸೀದಿಗೆ ಬರುತ್ತಿದ್ದರು. ಅಪ್ಪ ಅವರ ಕಷ್ಟಗಳನ್ನು ಕೇಳಿಕೊಂಡು ಸಮಾಧಾನ ಪಡಿಸುತ್ತಿದ್ದರು. ಲಕ್ಷದೀಪ, ಮಾಲ್ಡೀವ್ಸ್‌ನಿಂದ ಮಸೀದಿಗೆ ಬರುತ್ತಿದ್ದ ಮುಸಾಫಿರ್(ಪ್ರವಾಸಿ)ಗಳಲ್ಲಿ ಹೆಚ್ಚಿನವರು ಸೂಫಿಗಳಾಗಿದ್ದರು. ಅವರ ಪೈಕಿ ಕೆಲವರು ‘ಇಸ್ಮ್’ (ತೆಲಿಸ್ಮ್) ಮಂತ್ರವಾದಿಗಳೂ ಇದ್ದರು. ಅವರು ಇಂತಹ ಜನರ ಸಂಕಷ್ಟಗಳು, ತೊಂದರೆಗಳಿಗೆ ಪರಿಹಾರ ಸೂಚಿಸುತ್ತಿದ್ದರು. ಫಕೀರ್ ಬಾಬಾ ವಲಿಯುಲ್ಲಾಹರ ದರ್ಗಾದಲ್ಲಿ ವರ್ಷಂಪ್ರತಿ ನಡೆಯುವ ಉರೂಸ್ ಸಮಾರಂಭಕ್ಕೆ ಇವರೆಲ್ಲರೂ ತಪ್ಪದೆ ಹಾಜರಾಗುತ್ತಿದ್ದರು.

ಇದನ್ನು ಓದಿದ್ದೀರಾ?: ಫಕೀರ್ ಮುಹಮ್ಮದ್ ಕಟ್ಪಾಡಿ ಕಂಡ ಕರಾವಳಿ ಬದುಕು: ಹೇಗಿತ್ತು, ಈಗ ಹೇಗಾಗಿದೆ?

ನಮ್ಮೂರಿನ ಉರೂಸಿಗೆ ಹಿಂದೂ-ಮುಸ್ಲಿಮರೆಂಬ ಭೇದವಿಲ್ಲದೆ ಬಹಳ ಜನ ವಿವಿಧ ರೀತಿಯ ಹರಕೆ ಹೊತ್ತುಕೊಳ್ಳುತ್ತಿದ್ದರು. ಉರೂಸ್ ಸಮಾರಂಭದ ಎರಡನೇ ದಿನ ಆಡು/ಕುರಿ ಮಾಂಸದಸಾರು, ತುಪ್ಪದನ್ನ ಊಟವೂ ಇರುತ್ತಿತ್ತು. ಇನ್ನಿತರ ಸಾಮಾನ್ಯ ದಿನಗಳಲ್ಲಿ ಹರಕೆಯ(ನೇರ್ಚ) ಬೆಲ್ಲದ ಗಂಜಿಯನ್ನು ಮಸೀದಿಯ ಅಡುಗೆ ಕೋಣೆ ಯಾ ಚಿಲ್ಲಾದಲ್ಲಿ ದೊಡ್ಡ ತಾಮ್ರದ ಡೇಗ್ ಎಂಬ ಹಂಡೆಯಲ್ಲಿ, ಹರಕೆ ಹೊತ್ತವರು ಅಡುಗೆಯವರಿಂದ ಮಾಡಿಸುತ್ತಿದ್ದರು. ಇದಕ್ಕೆ ಗಂಜಿ ಮಾಲಿದಾ ಪ್ರಸಾದವೆಂದೂ ಹೆಸರಿದೆ. ಬೋಳಂತೆ, ಅಂದರೆ ಬೆಳ್ತಿಗೆ ಅಕ್ಕಿಯಲ್ಲಿ ಮಾಡುವ ನೇರ್ಚದ ಗಂಜಿಯಲ್ಲಿ ಬೆಲ್ಲ, ಕಾಯಿತುರಿ, ಏಲಕ್ಕಿ, ದಾಲ್ಚೀನಿ ಹಾಕಿದ ರುಚಿಯಾದ ದಪ್ಪ ಪಾಯಸ- ಮಸೀದಿಯ ಬಳಿ ಬರುವ ಎಲ್ಲರಿಗೂ ಅದನ್ನು ಹಂಚುತ್ತಿದ್ದರು. ಜನ ಭಕ್ತಿಯಿಂದ ಸ್ವೀಕರಿಸುತ್ತಿದ್ದರು. ಅವರಲ್ಲಿ ಮಸೀದಿಯ ಸಮೀಪದ ಮನೆಗಳಲ್ಲಿ ವಾಸವಿರುವ ಬಡ ಮುಸ್ಲಿಮರು, ಹಿಂದುಗಳು ಹೆಚ್ಚಿನ ಸಂಖ್ಯೆಯಲ್ಲಿರುತ್ತಿದ್ದರು. ಕೆಲವೊಮ್ಮೆ ಈ ಬಡವರ ಮನೆಯವರು ಈ ಆಹಾರಕ್ಕಾಗಿ ಕಾಯುವುದೂ ಇತ್ತು!

ದೂರದ ಲಕ್ಷದ್ವೀಪದಿಂದ ಧರ್ಮಪ್ರಚಾರಕ್ಕಾಗಿಯೋ, ಪ್ರವಾಸಿಗರಾಗಿಯೋ, ವ್ಯಾಪಾರಕ್ಕಾಗಿಯೋ ಮಂಗಳೂರು ಬಂದರಕ್ಕೆ ಹಡಗುಗಳಿಂದ ಬರುತ್ತಿದ್ದ ಸೂಫಿಗಳು, ಮೌಲ್ವಿ, ಮಂತ್ರವಾದಿಗಳು ನಮ್ಮ ಮಸೀದಿಗೂ ಬರುತ್ತಿದ್ದರು. ಹಸಿರು ಪೇಟ, ಹಸಿರು ಬಟ್ಟೆ ಧರಿಸುತ್ತಿದ್ದರು. ಇವರಲ್ಲಿ ಕೆಲವರು ತಂದೆಗೆ ಪರಿಚಿತ ವ್ಯಕ್ತಿಗಳು ನಮ್ಮ ಮನೆಗೆ ಊಟಕ್ಕೆ ಬರುತ್ತಿದ್ದರು. ಅವರ ಪ್ರವಚನಗಳೂ ಮಸೀದಿಯಲ್ಲಿ ನಡೆಯುತ್ತಿತ್ತು. ಇದರ ಪ್ರಭಾವ ಊರವರ ಮೇಲೆ ಗಾಢವಾಗಿತ್ತು! ಎಲ್ಲರೂ ನಮ್ಮವರು, ನಮ್ಮಂತೆಯೇ ಇರುವವರು ಎಂಬುದು ಇವರ ಮುಖ್ಯ, ಬೋಧನೆಯಾಗಿತ್ತು. ಸರಳ ಬದುಕಿನ ಸೂಫಿಗಳು ಅಲೆಮಾರಿಗಳು. ಎಲ್ಲರ ಒಳಿತನ್ನು ಬಯಸುವವರು. ನಮ್ಮ ತಂದೆ ಆಗಾಗ ಹೇಳುವ ಅವರಿಗೆ ಸಂಬಂಧಿಸಿದ ಕತೆಗಳನ್ನು ಕೇಳಿ ಬೆಳೆದ ನನಗೆ ಸೂಫಿಗಳ ಬಗ್ಗೆ ಆಸಕ್ತಿ ಹುಟ್ಟಲು ಕಾರಣವಾಗಿತ್ತು.

ಮೊಗವೀರ ತಾಂಡೇಲರು ತಮ್ಮ ಬಲೆಗೆ ಮೀನು ಬೀಳಲಿಲ್ಲವೆಂಬ ಕಾರಣಕ್ಕೆ ನಮ್ಮ ತಂದೆಯ ಬಳಿ ಬಂದು ತಮ್ಮ ಬವಣೆಗಳನ್ನು ಹೇಳುವರು. ಒಂದು ಸಲ ಪ್ರಾರ್ಥನೆ ಮಾಡಿ ಗುರುಗಳೇ ಎಂದು ಕೇಳಿಕೊಳ್ಳುತ್ತಿದ್ದರು. ಅವರಲ್ಲೊಬ್ಬ ಕಾಂಪರಣ್ಣ ಅಂತ. ಊರ ಗುರಿಕಾರರಲ್ಲಿ ಒಬ್ಬ. ಅವನು ಮಾರಿ ಬಲೆಯ ತಾಂಡೇಲನೂ ಆಗಿದ್ದ. ಅವನು ತಂದೆಯ ಬಳಿಗೆ ಬಂದು, ‘ಬಲೆಗೆ ಮೀನು ಬೀಳ್ತಿಲ್ಲ, ನೀವೊಂದು ಪ್ರಾರ್ಥನೆ ಮಾಡಿ’ ಎಂದು ಕೇಳಿಕೊಂಡಿದ್ದ. ದೀವ್‌ನಿಂದ ಬರುವ ಮೌಲ್ವಿಗಳು ಭವಿಷ್ಯ ಕೂಡ ಹೇಳುತ್ತಿದ್ದರು. ನಮ್ಮ ತಂದೆ ಕಾಂಪರಣ್ಣನ ಸಮಸ್ಯೆಯನ್ನು ಈ ಮೌಲ್ವಿಗಳ ಮುಂದಿಟ್ಟಾಗ, ಅವರು ದೀಪ ಹಚ್ಚಿ, ಅಲ್ಲಿಗೆ ಬಂದ ಯಾರಾದರೊಬ್ಬ ಹುಡುಗನನ್ನು ಕೂರಿಸಿ, ಒಂದು ಕಪ್ಪು ವಸ್ತ್ರವನ್ನು ಹೊದಿಸಿ, ಬೆಳಕನ್ನು ನೋಡಲು ಹೇಳುತ್ತಿದ್ದರು. ಆತ ಬೆಳಕಿನಿಂದ ಒಬ್ಬ ವ್ಯಕ್ತಿ ಹೊರಬಂದ, ಬೋಟ್‌ನ ಬಲೆ ಇಡುವ ಜಾಗದಲ್ಲಿ ಏನೋ ಹೂತಿಟ್ಟು ಹೊರಟುಹೋದ ಎಂದೆಲ್ಲ ಹೇಳತೊಡಗಿದ್ದ! ಮರುದಿನ ಮೌಲ್ವಿಯವರು ಬೋಟ್ ನಿಲ್ಲಿಸುವ ಜಾಗಕ್ಕೆ ಕಾಂಪರಣ್ಣನನ್ನು ಕರೆದುಕೊಂಡು ಹೋಗಿ ಏನನ್ನೋ ಅಗೆದು ತೆಗೆಸಿದ್ದರೆಂದು ಹೇಳುವುದು ಕೇಳಿದ್ದೆ.

ಉರುಸ್ 1

ಒಂದು ವಾರದ ನಂತರ ಕಾಂಪರಣ್ಣ ಮನೆಗೆ ಬಂದು, ನನ್ನ ಕಷ್ಟ ಕಳೆಯಿತು. ನನ್ನ ಬಲೆಗೆ ಮೀನು ಬಿದ್ದವು ಎಂದು ಒಂದು ಬುಟ್ಟಿ ತುಂಬ ಬಂಗುಡೆ, ಬೂತಾಯಿ ಮೀನುಗಳನ್ನು ತಂದುಕೊಟ್ಟಿದ್ದ. ಅಷ್ಟೇ ಅಲ್ಲ ದೀವಿನ ಮಂತ್ರವಾದಿ ಮೌಲ್ವಿಗೆ ಶಾಲು ಹೊದಿಸಿ, ಕೈ ಮುಗಿದು ಕಾಣಿಕೆ ಹಣ ನೀಡಿಹೋಗಿದ್ದ. ಇದಿಷ್ಟೆ ಅಲ್ಲ ದನಕರುಗಳಿಗೆ ತೊಂದರೆಯಾದರೂ ಬಂದು ಅಪ್ಪನ ಬಳಿ ಪ್ರಾರ್ಥನೆ ಮಾಡಿಸುತ್ತಿದ್ದರು. ಅಪ್ಪನಿಗೆ ಪವಾಡ, ಮೂಢನಂಬಿಕೆಗಳಲ್ಲಿ ವಿಶ್ವಾಸವಿರಲಿಲ್ಲ. ಆದರೆ ಜನರ ಒಳಿತಿಗಾಗಿ, ಅವರವರ ನಂಬಿಕೆ ಅವರಿಗೆ ಎಂದು ಸುಮ್ಮನಾಗುತ್ತಿದ್ದರು. ಅವರ ದೇವರು ಬೇರೆ, ನಮ್ಮ ದೇವರು ಬೇರೆ ಅನ್ನುವುದು ನನ್ನ ತಿಳಿವಳಿಕೆಗೆ ಬಂದದ್ದು ದೊಡ್ಡವನಾದ ಮೇಲೆ. ಚಿಕ್ಕವನಿದ್ದಾಗ ದೇವರಲ್ಲಿ ಭಯಭಕ್ತಿ ಮೂಡಿತ್ತು. ಆದರೆ ಅದು ಇತರರ ನಂಬಿಕೆಯನ್ನು ಹೀಗೆಳವ, ಭೇದಭಾವ ಹುಟ್ಟಿಸುವ ಮಟ್ಟಕ್ಕೆ ಬೆಳೆದಿರಲಿಲ್ಲ.

ಹಾಗೆ ನೋಡಿದರೆ, ನಾವು ಮಾಡುವ ಕೆಲಸಗಳು, ದೇವರ ಭಕ್ತಿಆಚರಣೆಗಳು ಬೇರೆಯಾಗಿರಬಹುದು. ಆದರೆ ನಮ್ಮ ಹಾಗೆಯೇ ನೀವು; ನಿಮ್ಮ ಹಾಗೆಯೇ ನಾವು ಎನ್ನುವುದು ಎಲ್ಲಾ ಕಾಲಕ್ಕೂ ಸಲ್ಲುವ ಸತ್ಯವಾಗಿ ಗೋಚರಿಸುತ್ತಿತ್ತು. ಕುರಾನ್‌ನ ಬೋಧನೆಯೂ ಇದೇ ಆಗಿತ್ತು- ‘ಲೆಕುಂ ದೀನುಕುಂ ವಲ್‌ಯೆದೀನ್’ ನಿಮ್ಮ ಧರ್ಮ ನಿಮಗೆ ನಮ್ಮ ಧರ್ಮ ನಮಗೆ!

ಬಾಕ್ಸ್-1

ಬಪ್ಪ ಬ್ಯಾರಿಯ ಅಂತಃಕರಣ

ನಾನು ಮೂಲ್ಕಿಯ ಕಾರ್ನಾಡ್ ಶಾಖೆಯ ಮೆನೇಜರಾಗಿದ್ದಾಗ, 1993-94ರಲ್ಲಿ ಎಂದು ನನ್ನ ನೆನಪು! ಬಪ್ಪನಾಡು ದುರ್ಗಾಪರಮೇಶ್ವರಿ ದೇವಾಲಯದ ಉತ್ಸವದ ಸಂದರ್ಭದಲ್ಲಿ ದೇವಸ್ಥಾನದವರು ಸರ್ವಧರ್ಮ ಸಮನ್ವಯದ ಸಲುವಾಗಿ ಒಂದು ಸಮಾರಂಭವನ್ನು ಏರ್ಪಡಿಸಿದ್ದರು. ಅಲ್ಲಿಗೆ ಬನ್ನಂಜೆ ಗೋವಿಂದಾಚಾರ್ಯರಂತಹ ಪಂಡಿತರೂ ಸೇರಿ ಎಲ್ಲ ಧರ್ಮದವರು ಬಂದಿದ್ದರು. ನನ್ನನ್ನು ಮುಸ್ಲಿಮರ ಪರವಾಗಿ ಮಾತಾಡಲು ಆಹ್ವಾನಿಸಿದ್ದರು.

ಅಲ್ಲಿ ಬಪ್ಪ ಬ್ಯಾರಿಯ ಬಗ್ಗೆ ಅಲ್ಲಿನ ಹಿರಿಯರು ತಿಳಿಸಿದ ಕತೆಯನ್ನು ಹೇಳಿದ್ದೆ. ಅದು ಹೀಗಿದೆ- ಅಕ್ಕಿ ವ್ಯಾಪಾರಿಯಾಗಿ ಸಮುದ್ರ ಮಾರ್ಗದಲ್ಲಿ ಹಡಗಿನ ಮೂಲಕ ದೇಶ, ಪರದೇಶಗಳಲ್ಲಿ ಸಂಚರಿಸುತ್ತಿದ್ದ ಬಪ್ಪ ಬ್ಯಾರಿ ಎಂಬ ಒಬ್ಬ ವ್ಯಾಪಾರಿ ಒಮ್ಮೆ ಊರಿಗೆ ಹಿಂತಿರುಗಿ ಬರುವಾಗ ಸಮುದ್ರ ತೀರದಲ್ಲೊಂದು ಮೂರ್ತಿ ಕಾಣ ಸಿಗುತ್ತದೆ. ಅದನ್ನವರು ಅಲ್ಲಿಯೇ ಬಿಟ್ಟು ಬರಬಹುದಾಗಿತ್ತು, ವಿಗ್ರಹರಾಧನೆ ಮುಸ್ಲಿಮರಿಗೆ ನಿಷಿದ್ಧ ಎಂದು ಅವರು ತಿಳಿಯದಿರುವವರಲ್ಲ. ಆದರೆ ಆತ ಹಾಗೆ ಮಾಡದೆ ಅದನ್ನು ತಂದು ಮನೆಯಲ್ಲಿಟ್ಟುಕೊಂಡ. ರಾತ್ರಿ ಆತನಿಗೆ ನಿದ್ದೆ ಹತ್ತಲಿಲ್ಲ. ಏನೋ ತಳಮಳ. ಧರ್ಮಕ್ಕೆ ಅಪಚಾರ ಮಾಡಿದೆನೇನೋ ಎಂಬ ಭಯ! ಮರುದಿನ ಬೇಗ ಎದ್ದು ಊರಿನ ಪರಿಚಿತ ಬ್ರಾಹ್ಮಣರನ್ನು ಕಂಡು ಸಿಕ್ಕ ಮೂರ್ತಿಯ ಬಗ್ಗೆ ಹೇಳಿದರು. ಅದಕ್ಕೆ ಆತ ಇದು ನನಗೆ ಬೇಡ, ಇದೆಲ್ಲ ದಿನಾ ಖರ್ಚಿನ ಬಾಬತ್ತು. ನನ್ನಂತಹ ಬಡವನಿಗೆ ದಿನವೂ ಪೂಜೆಗೆ ಬೇಕಾದ ನೈವೇದ್ಯ ಎಲ್ಲ ಮಾಡುವುದು ಸಾಧ್ಯವಾಗದು. ಇದು ಎಲ್ಲಿ ಸಿಕ್ಕಿತೋ ಅಲ್ಲಿಯೇ ಇಟ್ಟು ಬನ್ನಿ ಎಂದು ಸಲಹೆ ನೀಡಿದರು.

ಇದನ್ನು ಓದಿದ್ದೀರಾ?: ಫಕೀರ್ ಮುಹಮ್ಮದ್ ಕಟ್ಪಾಡಿ ಕಂಡ ಕರಾವಳಿ ಬದುಕು: ಹೇಗಿತ್ತು, ಈಗ ಹೇಗಾಗಿದೆ? – ಭಾಗ 2

ಬಪ್ಪ ಬ್ಯಾರಿ, ಅದಕ್ಕಾಗುವ ಖರ್ಚುವೆಚ್ಚವನ್ನು ನಾನು ಕೊಡುತ್ತೇನೆ, ನೀವು ಇದನ್ನು ತೆಗೆದುಕೊಂಡು ಹೋಗಿ ಬೇಕಾದ ವ್ಯವಸ್ಥೆ ಮಾಡಿ ಎಂದರಂತೆ. ಆಗ ಆ ಬ್ರಾಹ್ಮಣ ಈ ಮೂರ್ತಿಗೊಂದು ಗುಡಿ ಕಟ್ಟಬೇಕು, ಅದಕ್ಕೆ ಜಾಗ ಬೇಕು, ಪೂಜೆ ಪುರಸ್ಕಾರಕ್ಕೆ ದುಡ್ಡು ಖರ್ಚಾಗುತ್ತದೆ ಎಂದ. ಆಗ ಬಪ್ಪಬ್ಯಾರಿ, ಗುಡಿ ಕಟ್ಟಲು ತಮ್ಮ ಜಾಗವನ್ನು ಕೊಟ್ಟು, ಗುಡಿ ಕಟ್ಟಿಸಿಕೊಟ್ಟು, ಪೂಜೆಯ ಖರ್ಚನ್ನೂ ವಹಿಸಿಕೊಂಡರಂತೆ.

ಮುಸ್ಲಿಮನಾಗಿದ್ದ ಬಪ್ಪ ಬ್ಯಾರಿಯ ಅಂತಃಕರಣ ಭಾರತೀಯರಿಗೆ ಸಹಜವಾದುದಾಗಿತ್ತು. ಕುರಾನ್ ಹೇಳುವ, ‘ನನ್ನ ನಂಬಿಕೆ ನನ್ನದು, ನಿನ್ನ ನಂಬಿಕೆ ನಿನ್ನದು’ ಎನ್ನುವುದನ್ನು ಪಾಲಿಸಿದವರು. ನಂಬಿಕೆಗೆ ಧಕ್ಕೆ ತರಲಿಲ್ಲ.

ಅದೇ ಅರಬಸ್ಥಾನದಲ್ಲಿ ಬಪ್ಪ ಬ್ಯಾರಿ ಹುಟ್ಟಿದವರಾಗಿರುತ್ತಿದ್ದರೆ, ಮೂರ್ತಿ ಪೂಜೆ ನಿಷಿದ್ಧವಾಗಿರುವುದರಿಂದ. ಅದನ್ನು ಅವರು ಒಂದು ವಸ್ತುವೆಂದು ಪರಿಗಣಿಸಿ ಅಲ್ಲೇ ಬಿಟ್ಟುಬಿಡುತ್ತಿದ್ದರು. ಆದರೆ ಬಪ್ಪ ಬ್ಯಾರಿ ತಾನು ಮುಸ್ಲಿಮನಾಗಿ ಮೂರ್ತಿ ಪೂಜೆಯ ವಿರೋಧಿಯಾಗಿದ್ದರೂ ಹಾಗೆ ಮಾಡಲಿಲ್ಲ. ಅದಕ್ಕೆ ಕಾರಣ ಭಾರತೀಯವಾಗಿದ್ದ ಆತನ ಅಂತಃಕರಣ. ನಮ್ಮ ಉಡುಗೆ-ತೊಡುಗೆ, ಆಚಾರ-ವಿಚಾರ, ಸಂಪ್ರದಾಯ-ಸಂಸ್ಕೃತಿಗಳೆಲ್ಲವೂ ಭಾರತೀಯ. ನಮ್ಮ ಕುಟುಂಬ ವ್ಯವಸ್ಥೆ, ಕೆಲವೊಂದು ಆಚರಣೆಗಳು ಶುದ್ಧ ಭಾರತೀಯವಾದದ್ದು.

bappanadu2 26 1482745063

ಇದೊಂದೇ ಅಲ್ಲ, ಇದೇ ರೀತಿಯ ಕತೆಗಳ ಉದಾಹರಣೆಗಳು ಬೇಕಾದಷ್ಟಿವೆ. ಹಾಜಿ ಅಬ್ದುಲ್ಲಾ ಎನ್ನುವವರು ಉಡುಪಿಯ ರಥಬೀದಿಯ ಲಕ್ಷದೀಪೋತ್ಸವಕ್ಕೆ ಎಣ್ಣೆಯನ್ನು ದಾನವಾಗಿ ಕೊಟ್ಟಿದ್ದು, ದೇವಸ್ಥಾನಗಳಿಗೆ, ಮಸೀದಿಗಳಿಗೆ ದಾನ, ಉಂಬಳಿ ಕೊಟ್ಟಿರುವುದರ ಉದಾಹರಣೆ ದಕ್ಷಿಣಕನ್ನಡದ ನೆಲದಲ್ಲಿ ಹಲವಾರಿವೆ. ಹೇಳುತ್ತಾ ಹೋದರೆ ಮುಗಿಯುವುದಿಲ್ಲ. ಇದೆಲ್ಲ ಭಾರತೀಯವಾದ ಅಂತಃಕರಣಕ್ಕೆ ಸಂಬಂಧಿಸಿದ್ದು. ಇದು ಯಾರೂ ಉಪದೇಶಿಸುವ ಮೂಲಕ ಅಥವಾ ಬಲವಂತವಾಗಿ ಹೇಳಿಕೊಟ್ಟು ಬಂದದ್ದಲ್ಲ, ಹೇರಿದ್ದು ಕೂಡ ಅಲ್ಲ, ತಾನೇ ತಾನಾಗಿ ಪ್ರಕೃತಿ ಸಹಜವಾಗಿ ಹುಟ್ಟಿ ಬೆಳೆದು ಬಂದದ್ದು. ಬದುಕಿನಷ್ಟೇ ಸಹಜವಾದದ್ದು. ಇದನ್ನೇ ಅಂದು ಬನ್ನಂಜೆಯವರೂ ತನ್ನ ಪ್ರವಚನದಲ್ಲಿ ಮುಂದುವರೆಸಿದ್ದರು. ಪ್ರವಾಸದಲ್ಲಿದ್ದಾಗ ಮಾಧ್ವ ಯತಿಗಳು ಮತ್ತು ಮುಸ್ಲಿಮರೊಂದಿಗಿದ್ದ ಭಾವನಾತ್ಮಕ ಸಂಬಂಧಗಳ ಬಗ್ಗೆ ಉದಾಹರಿಸಿದ್ದರು.

ಬಾಕ್ಸ್- 2

ಕಟಪಾಡಿಯ ಸಂತ ಫಕೀರ್ ಬಾಬಾ ತೋರಿದ ಮಾನವೀಯತೆ

ಕಟ್ಪಾಡಿಯ ಫಕೀರ್ ಸಾಹಿಬ್ ವಲಿಯುಲ್ಲಾಹ್ ಎಂದೇ ಮುಸ್ಲಿಮ್‌ವಲಯದಲ್ಲಿ ಪರಿಚಯವಿರುವ ಕಟಪಾಡಿಯ ಫಕೀರ್ ಬಾಬಾ ವಲೀಯುಲ್ಲಾಹ್ ಇಲ್ಲಿಯ ಹಿರಿಯರ ಹೇಳಿಕೆಯಂತೆ ಹದಿಮೂರು ಯಾ ಹದಿನಾಲ್ಕನೆಯ ಶತಮಾನದ ಸೂಫಿ ಸಂತರು. ಈ ನೆಲದ ಗುಣವೋ ಅಥವಾ ಸೂಫಿ ವಲಿಯುಲ್ಲಾಹರ ಗುಣವಿಶೇಷವೋ ಈ ಸಂತ ಕೂಡ ಜಾತಿ ಧರ್ಮಕ್ಕಿಂತ ಮಾನವೀಯತೆಯಲ್ಲಿ ಹೆಚ್ಚು ಆಸಕ್ತಿ ತೋರಿದವರು. ಇವರು ದೀವಿನ ಕಡೆಯಿಂದ ಫಕೀರ್ ಅಥವಾ ಬಡ ಪ್ರವಾಸಿಯಾಗಿ ಇಲ್ಲಿಗೆ ಬಂದರೆಂದು ಹಿರಿಯರು ಹೇಳಿದ್ದನ್ನು ಕೇಳಿದ್ದೆ. ಈಗಿನ ಆಧುನಿಕ ಮಸೀದಿಯ ಕಟ್ಟಡ ಇರುವ ಜಾಗದಲ್ಲೇ ಹಂಚಿನ ಮಾಡಿನ ಚಿಕ್ಕ ಮಸೀದಿ ಇತ್ತು. ಇಲ್ಲಿಗೆ ಫಕೀರ್ ಬಾಬಾ ಬರುವಾಗ ಮಸೀದಿಯ ಆವರಣದ ಪಕ್ಕದ ನೆರೆಹೊರೆಯಲ್ಲಿದ್ದ ಬಡ ಹಿಂದೂ ಮುಸ್ಲಿಮರ ಮಧ್ಯೆ ವಾಂತಿ ಬೇಧಿಯ ರೋಗ ಹಬ್ಬಿತ್ತಂತೆ! ಇಲ್ಲಿ ದಿನವೂ ಒಬ್ಬರಲ್ಲ ಒಬ್ಬರು ಸಾವಿಗೀಡಾಗುತ್ತಿದ್ದರು. ಇದನ್ನು ತಿಳಿದ ಫಕೀರ್ ಬಾಬಾರು ಹಿಂದು, ಮುಸ್ಲಿಮ್ ಎಂಬ ಭೇದವಿಲ್ಲದೆ ಮನೆ ಮನೆಗೆ ಹೋಗಿ ಭಯಭೀತರಾಗಿದ್ದ ಜನರಿಗೆ ಧೈರ್ಯ ತುಂಬಿ ಸಮಾಧಾನ ಪಡಿಸುತ್ತಿದ್ದರಂತೆ. ದಿನೇ ದಿನೇ ರೋಗ ಉಲ್ಬಣಿಸುತ್ತಿತ್ತೇ ಹೊರತು ಕಮ್ಮಿಯಾಗುವ ಸೂಚನೆ ಕಂಡುಬರಲಿಲ್ಲ! ಫಕೀರ್ ಬಾಬಾ ಮಸೀದಿಯಲ್ಲೇ ಕೂತು ಹಗಲು ರಾತ್ರಿ ಎನ್ನದೆ ದೇವರ ಪ್ರಾರ್ಥನೆಯಲ್ಲಿ ಮಗ್ನರಾದರು ಎನ್ನಲಾಗುತ್ತದೆ.

ಕೊನೆಗೆ ರೋಗ ಅವರ ಮೈಮೇಲೆ ಬಂತು ಅನ್ನುವುದಕ್ಕಿಂತ ಹಿರಿಯರು ಹೇಳುವಂತೆ ಪ್ರಾರ್ಥನೆಯ ಮೂಲಕ ತನ್ನ ಮೈ ಮೇಲೆ ಬರಿಸಿಕೊಂಡರು! ಕೆಲವೇ ದಿನಗಳಲ್ಲಿ ಶಕ್ತಿ ಕಳಕೊಂಡ ಬಾಬಾರು ಮಸೀದಿಯೊಳಗೆಯೇ ವಾಂತಿ ಬೇಧಿ ಮಾಡಿಕೊಳ್ಳತೊಡಗಿದರು. ಮಸೀದಿಯ ಮೇಲ್ವಿಚಾರಕರು, ಊರವರು ಅವರನ್ನು ಮಸೀದಿಯಿಂದ ಹೊರಹಾಕಿದರಂತೆ! ಅಲ್ಲಿಯೇ ತೀರಿಕೊಂಡರು! ಅವರು ಮಾಡಿದ ವಾಂತಿ ಬೇಧಿ ಗಂಧದ ಸುವಾಸನೆ ಮೂಡತೊಡಕಿತು ಮತ್ತು ಊರಲ್ಲಿ ಹಬ್ಬಿದ್ದ ಜನರು ವಾಂತಿಬೇಧಿಯಿಂದ ಮುಕ್ತರಾಗಿ ಆರೋಗ್ಯ ವಂತರಾದರು ಎಂದು ಹಿರಿಯರು ಹೇಳುತ್ತಾರೆ. ಆದುದರಿಂದಲೇ ಹಿಂದುಗಳು ಮುಸ್ಲಿಮರು ಇಲ್ಲಿ ಒಂದಾಗಿ ದರ್ಗಾ ಪ್ರಾರ್ಥನೆಗೆ ನಿಯಾಜ್ (ನೇರ್ಚ) ಹರಕೆ ಇಟ್ಟು ಇಂದಿಗೂ ಆಗಮಿಸುತ್ತಾರೆ ಎಂದು ಹೇಳುತ್ತಾರೆ!

ನಿರೂಪಣೆ: ಬಸವರಾಜು ಮೇಗಲಕೇರಿ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಉಡುಪಿ | ಬ್ರಹ್ಮಾವರ ಪೊಲೀಸ್ ಠಾಣೆಯ 500ಮೀ ವಾಪ್ತಿಯಲ್ಲಿ ಆ.22ರವರೆಗೆ ನಿಷೇಧಾಜ್ಞೆ: ಜಿಲ್ಲಾಧಿಕಾರಿ

ಬ್ರಹ್ಮಾವರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 177/2025ಕ್ಕೆ ಸಂಬಂಧಿಸಿದಂತೆ ಸಕ್ರಿಯ ಹಿಂದೂ...

ರಸ್ತೆ ತುಂಬಾ ತಗ್ಗು ಗುಂಡಿಗಳದ್ದೇ ಕಾರುಬಾರು; ಸವಾರರ ಜೀವಕ್ಕೆ ‘ಗ್ಯಾರಂಟಿ’ಯೇ ಇಲ್ಲ!

ರಾಯಚೂರಿನ ಅನ್ವರಿ - ಹಟ್ಟಿ ಚಿನ್ನದ ಗಣಿ ಪಟ್ಟಣಕ್ಕೆ ಹೋಗುವ ಮುಖ್ಯ...

Download Eedina App Android / iOS

X