ಕರಾವಳಿ ನಗರವಾದ ಮಂಗಳೂರಿನಲ್ಲಿ ನಡೆಯುತ್ತಿರುವ ಹಲವಾರು ಬೆಳವಣಿಗೆಗಳ ಮಧ್ಯೆಯೇ ಕುಡುಪು ಪ್ರದೇಶದಲ್ಲಿ ಸಂಘಪರಿವಾರದ ಗುಂಪಿನಿಂದ ಹತ್ಯೆಗೊಳಗಾಗಿದ್ದ ಕೇರಳದ ಅಶ್ರಫ್ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ.
ಕುಡುಪು ಆಶ್ರಫ್ ಗುಂಪುಹತ್ಯೆ ಪ್ರಕರಣದ ಇಬ್ಬರು ಆರೋಪಿಗಳಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಅಶ್ರಫ್ ಗುಂಪುಹತ್ಯೆ ಪ್ರಕರಣದ 10ನೇ ಆರೋಪಿ ರಾಹುಲ್ ಮತ್ತು 20ನೇ ಆರೋಪಿ ಸುಶಾಂತ್‌ಗೆ ಜಾಮೀನು ಮಂಜೂರಾಗಿದೆ. ಇಬ್ಬರು ಆರೋಪಿಗಳ ಹೆಸರು ಎಫ್‌ಐಆರ್‌ನಲ್ಲಿ ಉಲ್ಲೇಖವಿಲ್ಲ ಎಂಬ ಕಾರಣವನ್ನು ನೀಡಿ ಜಾಮೀನು ಕೋರಲಾಗಿತ್ತು.
ಏನಿದು ಪ್ರಕರಣ?
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಕುಡುಪು ಬಳಿ ಕಳೆದ ಏಪ್ರಿಲ್ 27ರಂದು ಕ್ರಿಕೆಟ್ ಆಡುತ್ತಿದ್ದ ಗುಂಪೊಂದು ಕೇರಳದ ವಯನಾಡ್ ಮೂಲದ ಅಶ್ರಫ್‌ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಘಟನೆಯಲ್ಲಿ ಸ್ಥಳದಲ್ಲೇ ಅಶ್ರಫ್ ಮೃತಪಟ್ಟಿದ್ದ.
ಆ ಬಳಿಕ ಆರೋಪಿಗಳ ಜೊತೆಗೆ ಕೈಜೋಡಿಸಿದ್ದ ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಅಪರಿಚಿತ ಶವ ಪತ್ತೆಯಾಗಿದೆ ಎಂದು ದೂರು ದಾಖಲಿಸಿಕೊಂಡಿದ್ದರು. ಆದರೆ, ಈ ಬಗ್ಗೆ ನಿರಂತರ ಒತ್ತಡ ಹೆಚ್ಚಳವಾಗುತ್ತಿದ್ದಂತೆಯೇ ಇದು ಗುಂಪು ಹತ್ಯೆ ಎಂಬ ಸತ್ಯ ಹೊರಗೆ ಬಂದಿತ್ತು.
ಇದನ್ನು ಓದಿದ್ದೀರಾ? ಮಂಗಳೂರು | ಯಾರೇ ಆದರೂ ಪ್ರಚೋದನೆ ಮಾಡಿದಲ್ಲಿ ಕ್ರಮ ಕೈಗೊಳ್ಳಿ: ಮುಸ್ಲಿಂ ಮುಖಂಡರಿಂದ ಸಚಿವರಿಗೆ ಮನವಿ
ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರಿನಲ್ಲಿ ‘ಪಾಕಿಸ್ತಾನ ಪಾಕಿಸ್ತಾನ’ ಬೊಬ್ಬೆ ಹೊಡೆದಿದ್ದೇ ಈ ಘಟನೆಗೆ ಕಾರಣ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖ ಮಾಡಲಾಗಿತ್ತು. ಘಟನೆಗೆ ಸಂಬಂಧಪಟ್ಟಂತೆ ಪೊಲೀಸರು ಈವರೆಗೆ 23 ಮಂದಿಯನ್ನು ಬಂಧಿಸಿದ್ದರು. ಪ್ರಮುಖ ಆರೋಪಿ ಎನ್ನಲಾಗಿರುವ ಬಿಜೆಪಿಯ ಮಾಜಿ ಕಾರ್ಪೋರೇಟರ್‌ನ ಪತಿ ಪಿಸ್ತೂಲ್ ರವಿ ಎಂಬಾತ ತಲೆಮರೆಸಿಕೊಂಡಿದ್ದಾನೆ.
ಈ ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿದ್ದ ಮಂಗಳೂರು ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್ ಶಿವಕುಮಾರ್ ಕೆ ಆರ್, ಹೆಡ್‌ಕಾನ್‌ಸ್ಟೇಬಲ್ ಚಂದ್ರ ಪಿ. ಮತ್ತು ಪೊಲೀಸ್ ಕಾನ್‌ಸ್ಟೇಬಲ್ ಯಲ್ಲಾಲಿಂಗ ಅವರನ್ನು ಅಮಾನತುಗೊಳಿಸಲಾಗಿತ್ತು.