ಬೆಂಗಳೂರಿನ ಬೆನ್ನಿಗಾನಹಳ್ಳಿ ಮೇಲ್ಸೇತುವೆಯಲ್ಲಿ ರೈಲ್ವೆ ದುರಸ್ತಿ ಕಾಮಗಾರಿ ನಡೆಯುತ್ತಿರುವುದರಿಂದ ನಗರದ ಬೆನ್ನಿಗಾನಹಳ್ಳಿ ಮತ್ತು ಕೆ ಆರ್ ಪುರಂ ಮಾರ್ಗದಲ್ಲಿ ಆಗಸ್ಟ್‌ವರೆಗೆ ಸಂಚಾರ ದಟ್ಟಣೆ ಉಂಟಾಗಬಹುದು.
ನಗರದ ಕೆ ಆರ್ ಪುರಂ, ಮಹದೇವಪುರ ಹಾಗೂ ಮಾರತ್ತಹಳ್ಳಿಗೆ ನಿತ್ಯ ಸಂಚರಿಸುವ ವಾಹನ ಸವಾರರು ಇದರಿಂದ ಪರದಾಡುವ ಸಾಧ್ಯತೆ ಇದೆ.
ವಾಹನ ಸವಾರರು ಕಸ್ತೂರಿ ನಗರದಿಂದ ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದ ಕಡೆಗೆ ಎಡ ತಿರುವು ಪಡೆದು ಹೊರವರ್ತುಲ ರಸ್ತೆಯ ಸರ್ವೀಸ್ ರಸ್ತೆ ಬಳಸಿ ಹಳೆ ಮದ್ರಾಸ್ ರಸ್ತೆಯಲ್ಲಿರುವ ಟಿನ್ ಫ್ಯಾಕ್ಟರಿ ಜಂಕ್ಷನ್‌ಗೆ ತೆರಳಬೇಕು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಹಳೆ ಮದ್ರಾಸ್ ರಸ್ತೆ ಮೂಲಕ ನಗರದ ಕಡೆಯಿಂದ ಕೆ.ಆರ್.ಪುರದ ಕಡೆಗೆ ಸಂಚರಿಸುವ ವಾಹನಗಳನ್ನು ಹಳೇ ಮದ್ರಾಸ್ ರಸ್ತೆ ಸದಾನಂದ ನಗರ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು, ಸದಾನಂದ ನಗರ ರಸ್ತೆ, ಬೈಯ್ಯಪ್ಪನಹಳ್ಳಿ ರೈಲ್ವೆ ನಿಲ್ದಾಣ ಜಂಕ್ಷನ್, ಕಸ್ತೂರಿ ನಗರದ ಮುಖಾಂತರ ಹೊರ ವರ್ತುಲ ರಸ್ತೆಯ ಸರ್ವೀಸ್ ರಸ್ತೆ ಮೂಲಕ ಕೆ.ಆರ್.ಪುರದ ಕಡೆಗೆ ಸಂಚರಿಸಲು ಅನುವು ಮಾಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಹೆಬ್ಬಾಳ ಸರ್ವೀಸ್ ರಸ್ತೆಯಲ್ಲಿ ಮುಂದಿನ ವಾರ ಸಂಚಾರ ಆರಂಭ ಸಾಧ್ಯತೆ
ಹಳೇ ಮದ್ರಾಸ್ ರಸ್ತೆಯ ಬೆನ್ನಿಗಾನಹಳ್ಳಿ ಬಳಿ ಬೈಯ್ಯಪ್ಪನಹಳ್ಳಿ ರೈಲ್ವೆ ನಿಲ್ದಾಣದಿಂದ ಹೊಸೂರು ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಮಾರ್ಗದ ಮೇಲ್ಸೇತುವೆ ವಿಸ್ತರಣೆ ಮತ್ತು ಆರ್.ಸಿ.ಸಿ ಬಾಕ್ಸ್ ಅಳವಡಿಕೆ ಕಾಮಗಾರಿ ನಡೆಯುತ್ತಿದೆ.