ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಪಿಎಸ್ಐ ಶಿವಾನಂದ ಅಂಬಿಗೇರ ತಿಳಿಸಿದರು
ಧಾರವಾಡ ಜಿಲ್ಲೆಯ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮತ್ತೊಬ್ಬರ ಸಂತಸಕ್ಕೆ ನೋವುಂಟು ಮಾಡುವ ಮತ್ತು ಇನ್ನೊಬ್ಬರ ಆಚರಣೆಗೆ ದಕ್ಕೆ ತರುವ ಕೆಲಸಕ್ಕೆ ಮುಂದಾಗಬಾರದು. ಹಬ್ಬಗಳು ಎಲ್ಲರನ್ನೂ ಒಂದುಗೂಡಿಸುವುದಕ್ಕೆ ದಾರಿಯಾಗಬೇಕು.
ಸಾಮಾಜಿಕ ಜಾಲತಾಣದಲ್ಲಿ ಬರುವ ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರ ವಹಿಸಿ. ಅನುಮಾನವಿದ್ದರೆ ಪೊಲೀಸರ ಗಮನಕ್ಕೆ ತನ್ನಿ. ಸುಳ್ಳು ಸುದ್ದಿಗಳಿಂದ ಸಮಾಜದಲ್ಲಿ ಶಾಂತಿ ಕದಡುತ್ತದೆ ಹಾಗಾಗಿ ಸುಳ್ಳು ಸುದ್ದಿಗಳ ಹರಡುವಿಕೆಯನ್ನು ಬುಡಮಟ್ಟ ಕಿತ್ತಾಕಬೇಕು.

ಇನ್ನು ಯಾವುದೇ ಆಚರಣೆಗಳು ಮತ್ತು ಮಹಾತ್ಮರು ಒಂದೇ ಜಾತಿ ಸಮುದಾಯಕ್ಕೆ ಸಿಮೀತವಾಗಬಾರದು. ಅನಾಥ, ತುಳಿತಕ್ಕೊಳಗಾದವರಿಗೆ, ಬಿದ್ದವರಿಗೆ ಮೇಲೆತ್ತುವ ಕಾರ್ಯವು ಶ್ರೇಷ್ಠವಾದ ದಾನವಾಗಿದೆ. ಹಿಂದೂ, ಮುಸ್ಲಿಂ ಹಬ್ಬಗಳನ್ನು ಬಂದುತ್ವದಿಂದ ಆಚರಣೆ ಮಾಡಿ ಎಂದರು.
ಬಕ್ರೀದ್ ಸಾಂತಿ ಸೌಹಾರ್ದತೆಯ ಹಬ್ಬವಾಗಿದ್ದು, ಶಾಂತಿಯುತವಾಗಿ ಆಚರಿಸೋಣ. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಜಾಗೃತವಹಿಸೋಣ. ಕುಂದಗೋಳದಲ್ಲಿ ಯಾವುದೇ ಹಿಂದೂ-ಮುಸ್ಲಿಂ ಘರ್ಷಣೆ ನಡೆದಿಲ್ಲ. ಬಕ್ರಿದ್ ಮೊಹರಂಗೆ ಹಿಂದೂಗಳು ಸಹಕರಿಸುತ್ತೇವೆ. ಮುಸ್ಲಿಂ ಬಾಂಧವರೂ ಹಿಂದೂಗಳ ಹಬ್ಬಗಳಲ್ಲಿ ಸಹಕರಿಸುತ್ತಾರೆ ಎಂದು ಸಭೆಯಲ್ಲಿದ್ದ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಕಿರೇಸೂರ ಮಾತನಾಡಿ, ಬಕ್ರೀದ್ ಹಬ್ಬ ಎಲ್ಲರ ಹಬ್ಬವಾಗಿದೆ. ಅನ್ಯ ಕೋಮಿನವರೂ ಸಹಕರಿಸೋಣ ಎನ್ನುತ್ತಾ, ಪಟ್ಟಣದಲ್ಲಿ ಅನಧಿಕೃತ ಬಾವಚಿತ್ರ, ಧ್ವಜಗಳನ್ನು, ಬ್ಯಾನರ್‌ಗಳನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿದರು. ಭೂದಾನ ಮಾಡಿದ ಅಣ್ಣಾಸಾಹೇಬ ನಾಡಗೇರಿ ಅವರ ಪುತ್ಥಳಿ ಮಾಡಲು ಪೊಲೀಸ್ ಇಲಾಖೆ ಸಹಕರಿಸಬೇಕು ಮತ್ತು ಎಲ್ಲ ಸಮಾಜದವರ ಸಹಕಾರವಿರಲಿ ಎಂದು ವಿನಂತಿಸಿದರು.
ಕುಂದಗೋಳ, ಸಂಶಿ ಹಾಗೂ ವಿವಿಧ ಸಮುದಾಯಗಳ ಮುಖಂಡರು ಇದ್ದರು.