ಆಸ್ಟ್ರೇಲಿಯಾದ ಸ್ಟಾರ್ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಅವರು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ಮುಂದುವರೆಯುವುದಾಗಿ ತಿಳಿಸಿದ್ದಾರೆ. 2027ರ ಏಕದಿನ ವಿಶ್ವಕಪ್ ತಂಡದಲ್ಲಿ ತಮಗೆ ಸ್ಥಾನ ಸಿಗದು ಎಂಬುದು ತಿಳಿಯುತ್ತಿದ್ದಂತೆಯೇ ಮ್ಯಾಕ್ಸ್ವೆಲ್ ನಿವೃತ್ತಿ ಘೋಷಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದ ಬಲಗೈ ಬ್ಯಾಟ್ಸ್‌ಮನ್, ‘ನನ್ನ ಸ್ಥಾನಕ್ಕೆ ಬೇರೆಯವರನ್ನು ಆಯ್ಕೆ ಮಾಡಲು ಇದು ಸೂಕ್ತ ಸಮಯ’ ಎಂದಿದ್ದಾರೆ.
ಇದನ್ನು ಓದಿದ್ದೀರಾ? ವಿರಾಟ್ ಕೊಹ್ಲಿ ಬೆನ್ನಲ್ಲೇ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ನಾಯಕ ರೋಹಿತ್ ಶರ್ಮಾ
“ಆಸ್ಟ್ರೇಲಿಯಾ ತಂಡದ ಆಯ್ಕೆ ಸಮಿತಿ ಮುಖ್ಯ ಜಾರ್ಜ್ ಬೈಲಿ ಜೊತೆ ಮಾತನಾಡಿದ್ದೇನೆ. 2027ರ ಏಕದಿನ ವಿಶ್ವಕಪ್ ಬಗ್ಗೆ ಚರ್ಚಿಸಿದೆವು. 2027ರವರೆಗೆ ನನ್ನನ್ನು ತಂಡದಲ್ಲಿ ಮುಂದುವರೆಸುತ್ತಾರೆ ಎಂದೆನಿಸುತ್ತಿಲ್ಲ. ನನ್ನ ಸ್ಥಾನಕ್ಕೆ ಬೇರೆಯವರನ್ನು ಆಯ್ಕೆ ಮಾಡಲು ಇದು ಸೂಕ್ತ ಸಮಯ. ಇದೇ ಕಾರಣದಿಂದ ನಿವೃತ್ತಿ ಘೋಷಿಸುತ್ತಿರುವೆ” ಎಂದು ಮ್ಯಾಕ್ಸ್ವೆಲ್ ಹೇಳಿದ್ದಾರೆ.
36 ವರ್ಷದ ಮ್ಯಾಕ್ಸ್ವೆಲ್ 149 ಏಕದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾವನ್ನು ಪ್ರತಿನಿಧಿಸಿದ್ದಾರೆ. 2023ರಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಶ್ರೇಷ್ಠ ಏಕದಿನ ಪಂದ್ಯಗಳಲ್ಲಿ ಒಂದನ್ನು ಆಡಿದ್ದಾರೆ. ಈವರೆಗೆ 3149 ಎಸೆತಗಳನ್ನು ಎದುರಿಸಿರುವ ಅವರು ಒಟ್ಟು 3990 ರನ್ ಕಲೆಹಾಕಿದ್ದಾರೆ. ಒಂದು ದ್ವಿಶತಕ, 4 ಶತಕ ಮತ್ತು 23 ಅರ್ಧಶತಕಗಳನ್ನು ಬಾರಿಸಿದ್ದಾರೆ.
