ತೋಟದಿಂದ ಸುಮಾರು 50,000 ರೂಪಾಯಿ ಮೌಲ್ಯದ ಮಾವಿನ ಹಣ್ಣುಗಳನ್ನು ಕದ್ದ ಶಂಕೆಯಲ್ಲಿ ದುರುಳರು ಕೃಷಿ ಕಾರ್ಮಿಕನಿಗೆ ಥಳಿಸಿ ಕೊಂದ ಘಟನೆ ಗುಜರಾತ್‌ನ ಸೂರತ್ ಜಿಲ್ಲೆಯಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಸುರೇಶ್ ವರ್ಮಾ(48) ಕೊಲೆಯಾದ ಕಾರ್ಮಿ. ಅಶ್ಫಕ್ ರಾಯನ್, ವಿನೋದ್ ಅಗರ್ವಾಲ್, ಮೊಹಮ್ಮದ್ ಉಮರ್, ದಶರಥ್ ಮೌರ್ಯ ಮತ್ತು ಯಾಕೂಬ್ ಅಬ್ದುಲ್ ಗಫರ್ ಬಂಧಿತರು.
ಇದನ್ನು ಓದಿದ್ದೀರಾ? ‘ಪಂಜಾಬ್ 95’ ಸಿನಿಮಾಕ್ಕೆ 120 ಕಡೆ ಕತ್ತರಿ: ಜಸ್ವಂತ್ ಸಿಂಗ್ ಖಲ್ರಾ ಬಗ್ಗೆ ಸರ್ಕಾರ ಹೆದರುತ್ತಿರುವುದೇಕೆ?
ಈ ಬಗ್ಗೆ ಮಾಹಿತಿ ನೀಡಿರುವ ಬಾರ್ಡೋಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ಎಚ್‌ಎಲ್ ರಾಥೋಡ್, “ಈ ಐವರು ಸುರೇಶ್ ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ, ನಂತರ ಅವರ ಶವವನ್ನು ಮೇ 21ರಂದು ಕಾಲುವೆಗೆ ಎಸೆದಿದ್ದಾರೆ” ಎಂದು ತಿಳಿಸಿದ್ದಾರೆ.
“ಅಶ್ಫಕ್ ಮತ್ತು ಇತರರು ಕೆಲವು ಸಮಯದ ಹಿಂದೆ ಬಾರ್ಡೋಲಿಯ ಅಕೋಟಿ ಗ್ರಾಮದಲ್ಲಿ ಮಾವಿನ ತೋಟವನ್ನು ಗುತ್ತಿಗೆಗೆ ತೆಗೆದುಕೊಂಡಿದ್ದರು. ವರ್ಮಾ ಮತ್ತು ಇನ್ನೊಬ್ಬ ಗ್ರಾಮಸ್ಥರನ್ನು ಕಾರ್ಮಿಕರಾಗಿ ನೇಮಿಸಿಕೊಂಡಿದ್ದರು. ಇತ್ತೀಚೆಗೆ, ವರ್ಮಾ ತೋಟದಿಂದ 50,000 ರೂ. ಮೌಲ್ಯದ ಮಾವಿನ ಹಣ್ಣುಗಳನ್ನು ಕದ್ದು ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಗಳಿಗೆ ಶಂಕೆ ವ್ಯಕ್ತವಾಗಿದೆ” ಎಂದು ಎಚ್‌ಎಲ್ ರಾಥೋಡ್ ಹೇಳಿದ್ದಾರೆ.
“ಮೇ 21ರ ರಾತ್ರಿ, ಐವರು ಸುರೇಶ್ ಅವರನ್ನು ಜಮೀನಿನಲ್ಲಿ ಮರಕ್ಕೆ ಕಟ್ಟಿಹಾಕಿ ಪ್ರಜ್ಞೆ ತಪ್ಪುವವರೆಗೂ ಥಳಿಸಿದ್ದಾರೆ. ನಂತರ, ಸುರೇಶ್ ಪತ್ನಿಗೆ ಕರೆ ಮಾಡಿದ ಅಶ್ಫಕ್ ಮಾವಿನ ಹಣ್ಣುಗಳನ್ನು ಕದ್ದು ಪತಿ ಮಾಡಿದ ನಷ್ಟಕ್ಕೆ 50,000 ರೂ. ನೀಡುವಂತೆ ಒತ್ತಾಯಿಸಿದ್ದಾರೆ. ಹಲ್ಲೆಯಿಂದ ಕಾರ್ಮಿಕ ಸಾವನ್ನಪ್ಪಿರುವುದು ತಿಳಿದ ನಂತರ, ಆರೋಪಿಗಳು ಶವವನ್ನು ತಮ್ಮ ಕಾರಿನಲ್ಲಿ ಸಾಗಿಸಿ ಕಮ್ರೆಜ್ ತಾಲ್ಲೂಕಿನ ಕಾಲುವೆಯಲ್ಲಿ ಎಸೆದರು” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ವಿಡಿಯೊ | ಚಾಟಿಯಲ್ಲಿ ಹೊಡೆದುಕೊಂಡು ನಗೆಪಾಟಲಿಗೀಡಾದ ಅಣ್ಣಾಮಲೈ!
ಸುರೇಶ್ ಮನೆಗೆ ಹಿಂತಿರುಗದಿದ್ದಾಗ, ಅವರ ಕುಟುಂಬವು ಬಾರ್ಡೋಲಿ ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದೆ. ಜೊತೆಗೆ ಅಶ್ಫಕ್ 50,000 ರೂಪಾಯಿ ನೀಡುವಂತೆ ಒತ್ತಾಯಿಸಿರುವುದನ್ನೂ ಪೊಲೀಸರಿಗೆ ಸುರೇಶ್ ಕುಟುಂಬಸ್ಥರು ತಿಳಿಸಿದ್ದಾರೆ.
ಈ ವೇಳೆ ಕಾಮ್ರೆಜ್ ಪೊಲೀಸರಿಗೆ ಕಾಲುವೆಯಿಂದ ಗುರುತಿಸಲಾಗದ ಶವ ಪತ್ತೆಯಾಗಿದೆ. ಸುರೇಶ್ ಕುಟುಂಬಸ್ಥರು ಶವ ಸುರೇಶ್ ಅವರದ್ದೇ ಇಂದು ದೃಢಪಡಿಸಿದ ನಂತರ, ಮೇ 31ರಂದು ಕೊಲೆ ಪ್ರಕರಣ ದಾಖಲಿಸಲಾಗಿದೆ. ಸೋಮವಾರ ಐವರನ್ನು ಬಂಧಿಸಲಾಗಿದೆ.
