11 ವರ್ಷಗಳ ಹಿಂದೆ ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನೈಜ ಆರೋಪಿಗಳನ್ನು ಹಿಡಿಯುವಲ್ಲಿ ಪೊಲೀಸ್ ವ್ಯವಸ್ಥೆ ವಿಫಲವಾಗಿದೆ. ನಿರಪರಾಧಿಯನ್ನೇ ಅಪರಾಧಿಯೆಂದು ಸಾಬೀತು ಮಾಡುವ ಯತ್ನದಲ್ಲಿಯೇ ಪೊಲೀಸ್, ಸಿಐಡಿ, ಸಿಬಿಐ ಸಮಯ ಕಳೆದಿದೆ. ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ನೀಡಿ, ಆರೋಪಿಗಳನ್ನು ಬಂಧಿಸಬೇಕು ಎಂದು ಮೈಸೂರಿನ ಪ್ರಗತಿಪರ ಚಿಂತಕರು, ನಾನಾ ಸಂಘಟನೆಗಳ ಹೋರಾಟಗಾರರು ಆಗ್ರಹಿಸಿದ್ದಾರೆ.
ಸೌಜನ್ಯ ಪ್ರಕರಣವನ್ನು ಎಸ್‌ಐಟಿಗೆ ನೀಡಬೇಕು. ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಮೈಸೂರಿನಲ್ಲಿ ನಾನಾ ಸಂಘಟನೆಗಳು ಪ್ರತಿಭಟನಾ ರ್‍ಯಾಲಿ ನಡೆಸಿವೆ. ಪ್ರತಿಭಟನೆಯಲ್ಲಿ ಮಾತನಾಡಿದ ಸೌಜನ್ಯ ತಾಯಿ ಕುಸುಮಾವತಿ, “ಸೌಜನ್ಯ ಪ್ರಕರಣದಲ್ಲಿ ಸಂತೋಷ್ ರಾವ್ ನಿರಪರಾಧಿಯಾಗಿದ್ದಾರೆ. ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗಡೆ ಅವರ ಸೋದರನ ಮಗ ನಿಶ್ಚಲ್ ಜೈನ್ ಹಾಗೂ ಆತನ ಸ್ನೇಹಿತರಾದ ಉದಯ್ ಜೈನ್, ಮಲಿಕ್ ಜೈನ್ ಮತ್ತು ಧೀರಜ್ ಜೈನ್ ಮೇಲೆ ನಮಗೆ ಅನುಮಾನವಿದೆ ಎಂದು ನಾವು ಮೊದಲಿನಿಂದಲೂ ಹೇಳುತ್ತಲೇ ಇದ್ದೇವೆ. ಆದರೂ, ಸಂತೋಷ್ ರಾವ್‌ನನ್ನು ಜೈಲಿನಲ್ಲಿಟ್ಟಿದ್ದರು. ಇದೀಗ, ಆತ ನಿರಪರಾಧಿಯೆಂದು ಸಿಬಿಐ ಕೋರ್ಟ್ ತೀರ್ಪು ನೀಡಿದೆ. ಈಗಲಾದರೂ, ನೈಜ ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಬೇಕು” ಎಂದು ಒತ್ತಾಯಿಸಿದರು.
“ನನ್ನ ಮಗಳಿಗೆ ನ್ಯಾಯ ಸಿಗಬೇಕೆಂದು ಹೋರಾಟ ನಡೆಯುತ್ತಿದೆ. ಸೌಜನ್ಯಗಾಗಿ ಮೈಸೂರಿನಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ವೀರೇಂದ್ರ ಹೆಗಡೆ ಅವರು ಇಂತಹ ಒಂದು ಸಣ್ಣ ಪ್ರಯತ್ನ ಮಾಡಿದ್ದರೂ, ಇಂತಹ ಪರಿಸ್ಥಿತಿ ಇರುತ್ತಿರಲಿಲ್ಲ. ಅವರು ಜೈನ್‌ಗಳ ರಕ್ಷಣೆಗೆ ನಿಂತಿದ್ದಾರೆ” ಎಂದು ಕುಸುಮಾವತಿ ಆರೋಪಿಸಿದರು.
ನಿರಪರಾಧಿ ಸಂತೋಷ್ ರಾವ್ ಅವರ ಅಣ್ಣ ಸಂಜಯ್ ರಾವ್ ಮಾತನಾಡಿ, “ಸೌಜನ್ಯ ಪರವಾಗಿ ಎಲ್ಲಿಯೇ ಹೋರಾಟ ನಡೆದರೂ ನಾನು ಭಾಗಿಯಾಗುತ್ತೇನೆ. ಸೌಜನ್ಯಗೆ ನ್ಯಾಯ ಸಿಗಬೇಕು. ಸೌಜನ್ಯ ಪ್ರಕರಣದಲ್ಲಿ ಪೊಲೀಸರು ಅಮಾಯಕನಾದ ನನ್ನ ತಮ್ಮನನ್ನು ಸಿಲುಕಿಸಿ ದೌಜನ್ಯ ಎಸಗಿದರು. ನಮ್ಮ ಕುಟುಂಬದ ಬದುಕೇ ಛಿದ್ರವಾಗಿದೆ. ಪ್ರಕರಣದ ನೈಜ ಅಪರಾಧಿಗಳಿಗೆ ಶಿಕ್ಷೆಯಾಗಲೇಬೇಕು” ಎಂದರು.
ಈ ಸುದ್ದಿ ಓದಿದ್ದೀರಾ?: ಸಂತೋಷ್ ನಿರಪರಾಧಿಯಾದರೆ, ಆರೋಪಿಗಳು ಯಾರು?; ಸೌಜನ್ಯ ಹತ್ಯೆ – ಧರ್ಮಸ್ಥಳದಲ್ಲಿನ ಅಧರ್ಮ: ಈದಿನ.ಕಾಮ್ ಸಾಕ್ಷಾತ್ ವರದಿ
ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮಾತನಾಡಿ, “ಸೌಜನ್ಯ ಪ್ರಕರಣವನ್ನು ಪೊಲೀಸ್, ಸಿಐಡಿ ಮತ್ತು ಸಿಬಿಐ ಹಳ್ಳ ಹಿಡಿಸಿವೆ. ಅವರೆಲ್ಲರೂ ಭ್ರಷ್ಟರಾಗಿದ್ದಾರೆ. ಪ್ರಕರಣವನ್ನು ಎಸ್‌ಐಟಿ ತನಿಖೆಗೆ ನೀಡಬೇಕು. ನಿಷ್ಟಾವಂತ ಅಧಿಕಾರಿಗಳನ್ನು ಎಸ್‌ಐಟಿಗೆ ನೇಮಿಸಬೇಕು. ನಿಷ್ಪಕ್ಷಪಾತದಿಂದ ತನಿಖೆ ನಡೆಸಿ, ಸೌಜನ್ಯಗೆ ನ್ಯಾಯ ಕೊಡಿಸಬೇಕು” ಎಂದು ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಹಲವಾರು ಹೋರಾಟಗಾರರು, “ಧರ್ಮಸ್ಥಳದಲ್ಲಿರುವ ಹಿಂದು ದೇವಾಲಯವನ್ನು (ಮಂಜುನಾಥ ದೇವಾಲಯ) ಜೈನ ಕುಟುಂಬ ತಮ್ಮದು ಎನ್ನುತ್ತಿದೆ. ಸರ್ಕಾರ ದೇವಾಲಯವನ್ನು ತನ್ನ ವಶಕ್ಕೆ ಪಡೆದು, ಮುಜರಾಯಿ ಇಲಾಖೆಯ ಅಧೀನಕ್ಕೆ ಕೊಡಬೇಕು” ಎಂದು ಒತ್ತಾಯಿಸಿದರು.