ಪರೀಕ್ಷೆ ಬರೆಯುವಾಗ ನಕಲು ಮಾಡಿ, ಸಿಕ್ಕಿಬಿದ್ದ ವಿದ್ಯಾರ್ಥಿಯೊಬ್ಬ ಮನನೊಂದು ಕಾಲೇಜಿನ 8ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಪಿಇಎಸ್ ಕಾಲೇಜಿನಲ್ಲಿ ನಡೆದಿದೆ.
ಆದಿತ್ಯ ಪ್ರಭು (19) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ. ಇವರು ಮೂಲತಃ ಮಂಗಳೂರಿನವರು. ಬೆಂಗಳೂರಿನ ಪಿಇಎಸ್ ಕಾಲೇಜಿನಲ್ಲಿ ಬಿ.ಟೆಕ್ ಸೆಕೆಂಡ್ ಸೆಮಿಸ್ಟರ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು.
ಏನಿದು ಘಟನೆ?
ಬೆಂಗಳೂರಿನ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆದಿತ್ಯ ಪ್ರಭು ಬಿ.ಟೆಕ್ ವಿದ್ಯಾಭ್ಯಾಸ ಮಾಡುತ್ತಿದ್ದರು. ಪರೀಕ್ಷೆಯ ಸಮಯದಲ್ಲಿ ಮೊಬೈಲ್ ನೋಡಿಕೊಂಡು ಕಾಪಿ ಮಾಡುತ್ತಿದ್ದನು. ಇದನ್ನು ಗಮನಿಸಿದ ಉಪನ್ಯಾಸಕರು ವಿದ್ಯಾರ್ಥಿಯ ಮೊಬೈಲ್ ಕಿತ್ತುಕೊಂಡು ಪರೀಕ್ಷಾ ಕೊಠಡಿಯಿಂದ ಹೊರಗೆ ಕಳುಹಿಸಿದ್ದಾರೆ.
ಬಳಿಕ ಆದಿತ್ಯ ಅವರ ತಾಯಿಗೆ ಕರೆ ಮಾಡಿ ಮಗ ಪರೀಕ್ಷೆ ವೇಳೆ ನಕಲು ಮಾಡುತ್ತಿದ್ದ ಬಗ್ಗೆ ದೂರು ನೀಡಿದ್ದಾರೆ. ಇದರಿಂದ ಮನನೊಂದ ವಿದ್ಯಾರ್ಥಿ ಕಾಲೇಜಿನ ಎಂಟನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಜುಲೈ 17, 18ರಂದು ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ
ನಡೆದ ಘಟನೆಯನ್ನು ಪೊಲೀಸರು ಮೃತ ವಿದ್ಯಾರ್ಥಿಯ ಪೋಷಕರಿಗೆ ತಿಳಿಸಿದ್ದಾರೆ. ಮೃತ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮರಣೋತ್ತರ ಪರೀಕ್ಷೆಯನ್ನು ನಡೆಸಿದ ನಂತರ ಪೋಷಕರಿಗೆ ಹಸ್ತಾಂತರ ಮಾಡಲಾಗುವುದು ಎಂದು ದಕ್ಷಿಣ ವಲಯದ ಡಿಸಿಪಿ ಕೃಷ್ಣಕಾಂತ್ ಮಾಹಿತಿ ನೀಡಿದ್ದಾರೆ.