2002ರಲ್ಲಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಬಿಲ್ಕಿಸ್ ಬಾನೊ ಅವರ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಅವಧಿಗೂ ಮುಂಚೆ ಕಳೆದ ವರ್ಷ ಬಿಡುಗಡೆ ಮಾಡಲಾದ ಎಲ್ಲ 11 ಆರೋಪಿಗಳ ಕ್ಷಮಾದಾನವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಅಂತಿಮ ವಿಚಾರಣೆಯನ್ನು ಆಗಸ್ಟ್ 7ರಂದು ಪ್ರಾರಂಭಿಸುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ.
ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಉಜ್ಜಲ್ ಬುಯಾನ್ ನೇತೃತ್ವದ ಪೀಠವು ಮನವಿಗಳನ್ನು ಪೂರ್ಣಗೊಂಡಿರುವುದನ್ನು ಹಾಗೂ ಎಲ್ಲ ಅಪರಾಧಿಗಳಿಗೆ ಪತ್ರಿಕೆ ಪ್ರಕಟಣೆಗಳ ಮೂಲಕ ಅಥವಾ ನೇರವಾಗಿ ನೋಟಿಸ್ ನೀಡಲಾಗಿದೆಯೇ ಎಂಬುದನ್ನು ಗಮನಿಸಿತು.
“ಬಿಲ್ಕಿಸ್ ಬಾನೊ ಪ್ರಕರಣದ ವಿಷಯದಲ್ಲಿ ಮನವಿಗಳು ಪೂರ್ಣಗೊಂಡಿವೆ ಮತ್ತು ಎಲ್ಲ ಪ್ರಕರಣಗಳಲ್ಲಿನ ಎಲ್ಲ ಪ್ರತಿವಾದಿಗಳಿಗೆ ಪತ್ರಿಕೆ ಪ್ರಕಟಣೆಗಳು ಅಥವಾ ನೇರವಾಗಿ ನೋಟಿಸ್ ನೀಡಲಾಗಿದೆ ಎಂದು ನಾವು ಭಾವಿಸುತ್ತೇವೆ. ನಾವು ಆಗಸ್ಟ್ 7ರಂದು ಅಂತಿಮ ವಿಚಾರಣೆಗೆ ವಿಷಯವನ್ನು ಪಟ್ಟಿ ಮಾಡುತ್ತೇವೆ. ಎಲ್ಲ ಕಕ್ಷಿದಾರರು ಸಂಕ್ಷಿಪ್ತವಾಗಿ ಲಿಖಿತ ಸಲ್ಲಿಕೆಗಳು, ಸಾರಾಂಶಗಳು ಹಾಗೂ ದಿನಾಂಕದ ಪಟ್ಟಿಯನ್ನು ಸಲ್ಲಿಸಬೇಕು” ಎಂದು ಪೀಠ ಹೇಳಿದೆ.
ಮೇ 9 ರಂದು, ಸ್ಥಳೀಯ ಪೋಲೀಸರು ಬೀಗ ಹಾಕಿರುವ ಮನೆ ಮತ್ತು ಫೋನ್ ಸ್ವಿಚ್ಡ್ ಆಫ್ ಸೇರಿದಂತೆ ನೋಟಿಸ್ ನೀಡಲು ಸಾಧ್ಯವಾಗದ ಅಪರಾಧಿಗಳ ವಿರುದ್ಧ ಗುಜರಾತಿ ಮತ್ತು ಇಂಗ್ಲಿಷ್ ಸೇರಿದಂತೆ ಸ್ಥಳೀಯ ಪತ್ರಿಕೆಗಳಲ್ಲಿ ನೋಟಿಸ್ ಪ್ರಕಟಿಸಲು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು.
ಎಲ್ಲ 11 ಅಪರಾಧಿಗಳಿಗೆ ಗುಜರಾತ್ ಸರ್ಕಾರವು ವಿನಾಯಿತಿ ನೀಡಿ ಕಳೆದ ವರ್ಷ ಆಗಸ್ಟ್ 15 ರಂದು ಅವಧಿಗೆ ಮುನ್ನವೇ ಬಿಡುಗಡೆಗೊಳಿಸಿತು. ದೋಷಮುಕ್ತಿಗೊಳಿಸಿರುವುದನ್ನು ಪ್ರಶ್ನಿಸಿ ಬಿಲ್ಕಿಸ್ ಬಾನೊ ಅವರು ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿ, ಜೆಡಿಎಸ್ ಮತ್ತು ಪ್ರಾದೇಶಿಕ ಅಸ್ಮಿತೆ
ಅಪರಾಧಿಗಳಿಗೆ ದೋಷಮುಕ್ತಿಗೊಳಿಸಿರುವುದನ್ನು ಪ್ರಶ್ನಿಸಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಸಿಪಿಎಂ ನಾಯಕಿ ಸುಭಾಷಿಣಿ ಅಲಿ, ಸ್ವತಂತ್ರ ಪತ್ರಕರ್ತೆ ರೇವತಿ ಲಾಲ್, ಲಖನೌ ವಿಶ್ವ ವಿದ್ಯಾನಿಲಯದ ಮಾಜಿ ಉಪಕುಲಪತಿ ರೂಪ್ ರೇಖಾ ವರ್ಮಾ ಸೇರಿದಂತೆ ಹಲವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಗೋಧ್ರಾ ರೈಲು ಬೆಂಕಿ ಘಟನೆಯ ನಂತರ ಭುಗಿಲೆದ್ದ ಗಲಭೆಯ ಸಂದರ್ಭದಲ್ಲಿ ಬಾನುವಿನ ಮೇಲೆ ಬಿಡುಗಡೆಗೊಂಡಿರುವ ಆರೋಪಿಗಳು ಸಾಮೂಹಿಕ ಅತ್ಯಾಚಾರವೆಸಗಿದ್ದರು. ಆ ಸಂದರ್ಭದಲ್ಲಿ ಆಕೆಗೆ 21 ವರ್ಷ ವಯಸ್ಸಾಗಿತ್ತು. ಅಲ್ಲದೆ 5 ತಿಂಗಳ ಗರ್ಭಿಣಿಯಾಗಿದ್ದಳು. ಗಲಭೆಯಲ್ಲಿ ಸಾವನ್ನಪ್ಪಿದ ಏಳು ಕುಟುಂಬ ಸದಸ್ಯರಲ್ಲಿ ಆಕೆಯ ಮೂರು ವರ್ಷದ ಮಗಳು ಸೇರಿದ್ದಳು.