ಟೆಸ್ಲಾದ ಕಾರುಗಳು, ವಿಶೇಷವಾಗಿ 35,000 ಡಾಲರ್‌ಗಿಂತ ಹೆಚ್ಚಿನ ಬೆಲೆಯ ಉನ್ನತ ಮಾದರಿಗಳು, ಭಾರತದ ಸಾಮಾನ್ಯ ಗ್ರಾಹಕರ ಖರೀದಿ ಸಾಮರ್ಥ್ಯಕ್ಕಿಂತ ದುಬಾರಿಯಾಗಿವೆ. ಇದೇ ಕಾರಣಕ್ಕಾಗಿ, ಟೆಸ್ಲಾ ದೊಡ್ಡ ಬಂಡವಾಳ ಹೂಡಿಕೆಗೆ ಹಿಂದೇಟು ಹಾಕಿರಬಹುದು.
ಭಾರತದಲ್ಲಿ ಟೆಸ್ಲಾ ಕಾರು ಉತ್ಪಾದನೆಗೆ ಸಂಬಂಧಿಸಿದಂತೆ ಟೆಸ್ಲಾ ಮಾಲೀಕ ಎಲಾನ್ ಮಸ್ಕ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವೆ ನಡೆದ ಮಾತುಕತೆಗಳು ಜೋರಾಗಿ ಸದ್ದು ಮಾಡಿದ್ದವು. ಆದರೆ ಈಗ ಕೇಂದ್ರ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರ ಇತ್ತೀಚಿನ ಹೇಳಿಕೆ ಟೆಸ್ಲಾ ಭಾರತ ಪ್ರವೇಶವಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದೆ. ‘ಟೆಸ್ಲಾ ಕಂಪನಿಯು ಭಾರತದಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಆಸಕ್ತಿಯನ್ನು ತೋರಿಲ್ಲ, ಬದಲಾಗಿ ಕೇವಲ ಎರಡು ಮಳಿಗೆಗಳನ್ನು ತೆರೆಯಲು ಯೋಜನೆಯನ್ನು ಹೊಂದಿದೆ’ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಕೇಂದ್ರ ಮಂತ್ರಿಯ ಹೇಳಿಕೆಯು ಭಾರತದ ಎಲೆಕ್ಟ್ರಿಕ್ ವಾಹನ (ಇವಿ) ಮಾರುಕಟ್ಟೆಯಲ್ಲಿ ಟೆಸ್ಲಾದ ಭವಿಷ್ಯದ ಯೋಜನೆಗಳ ಕುರಿತಾದ ಮಾತುಕತೆಗಳಿಗೆ ಸದ್ಯಕ್ಕೆ ತೆರೆ ಎಳೆದಂತಿದೆ.
ಆದರೆ, ಈ ವಿಷಯವು ಕೇವಲ ಕುಮಾರಸ್ವಾಮಿಯವರ ಹೇಳಿಕೆಗೆ ಮಾತ್ರ ಸೀಮಿತವಾಗಿಲ್ಲ. ಇದರ ಹಿಂದಿನ ಘಟನೆಗಳು, ಟೆಸ್ಲಾದ ಭಾರತದ ಪ್ರವೇಶದ ಕುರಿತಾದ ಚರ್ಚೆಗಳು, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಟೆಸ್ಲಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಲಾನ್ ಮಸ್ಕ್‌ರವರ ಸಭೆಗಳು, ಭಾರತದ ಇವಿ ನೀತಿಗಳು ಮತ್ತು ಟೆಸ್ಲಾದ ಉತ್ಪಾದನಾ ಘಟಕದಿಂದ ದೇಶಕ್ಕೆ ಸಿಗಬಹುದಾದ ಆರ್ಥಿಕ ಲಾಭಗಳು ಮತ್ತು ಉದ್ಯೋಗಾವಕಾಶಗಳಿಗೂ ಸಂಬಂಧವನ್ನು ಚಾಚಿದೆ.
ಹಲವು ವರ್ಷಗಳಿಂದ ಟೆಸ್ಲಾ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ. 2015ರಿಂದಲೇ ಎಲಾನ್ ಮಸ್ಕ್ ಭಾರತದಲ್ಲಿ ಟೆಸ್ಲಾದ ಕಾರುಗಳನ್ನು ಪರಿಚಯಿಸುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದರು. ಆದರೆ, ಭಾರತದಲ್ಲಿ ವಿದೇಶಿ ತಯಾರಿಕೆಯ ವಾಹನಗಳ ಮೇಲಿನ ಶೇಕಡಾ 100ರಷ್ಟು ಆಮದು ಸುಂಕವು ಟೆಸ್ಲಾದ ಯೋಜನೆಗಳಿಗೆ ಪ್ರಮುಖ ಅಡ್ಡಿ ಎಂದು ಹೇಳಲಾಗುತ್ತಿತ್ತು. 2023ರ ಜೂನ್‌ನಲ್ಲಿ ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆದ ಒಂದು ಸಭೆಯಲ್ಲಿ ಎಲಾನ್ ಮಸ್ಕ್ ಮತ್ತು ಪ್ರಧಾನಮಂತ್ರಿ ಮೋದಿ ಭಾರತದಲ್ಲಿ ಟೆಸ್ಲಾದ ಸಂಭಾವ್ಯ ಕಾರ್ಯಾಚರಣೆಗಳ ಬಗ್ಗೆ ಚರ್ಚಿಸಿದ್ದರು. ಈ ಸಭೆಯ ನಂತರ ಮಸ್ಕ್ ತಾನು ಟೆಸ್ಲಾದ ಕಾರುಗಳನ್ನು ಭಾರತದಲ್ಲಿ ಶೀಘ್ರದಲ್ಲೇ ಲಭ್ಯಗೊಳಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು.
ಈ ನಡುವೆ ಕೇಂದ್ರ ಸರ್ಕಾರ 2024ರ ಮಾರ್ಚ್‌ನಲ್ಲಿ ಎಲೆಕ್ಟ್ರಿಕ್ ವಾಹನ ತಯಾರಕರಿಗೆ ಪ್ರೋತ್ಸಾಹಕವಾಗಿ ಒಂದು ಹೊಸ ಇವಿ ನೀತಿಯನ್ನು ಜಾರಿಗೊಳಿಸಿತು. ಈ ನೀತಿಯಡಿಯಲ್ಲಿ, ಕನಿಷ್ಠ 500 ಮಿಲಿಯನ್ ಡಾಲರ್‌ಗಳ (ಅಂದಾಜು 4,150 ಕೋಟಿ ರೂಪಾಯಿಗಳ) ಹೂಡಿಕೆಯನ್ನು ಮಾಡಿ, ಮೂರು ವರ್ಷಗಳ ಒಳಗೆ ಸ್ಥಳೀಯ ಉತ್ಪಾದನಾ ಘಟಕವನ್ನು ಸ್ಥಾಪಿಸುವ ಕಂಪನಿಗಳಿಗೆ ಶೇಕಡಾ 15ರಷ್ಟು ಕಡಿಮೆ ಆಮದು ಸುಂಕದ ರಿಯಾಯಿತಿಯನ್ನು ನೀಡಲಾಗುವುದು ಎಂದು ಹೇಳಲಾಗಿತ್ತು. ಈ ನೀತಿಯನ್ನು ಟೆಸ್ಲಾದಂತಹ ಜಾಗತಿಕ ಇವಿ ತಯಾರಕರನ್ನು ಆಕರ್ಷಿಸಲು ವಿನ್ಯಾಸಗೊಳಿಸಲಾಗಿತ್ತು. ಈ ನೀತಿಯ ಘೋಷಣೆಯ ನಂತರ, ಟೆಸ್ಲಾದ ಭಾರತದ ಯೋಜನೆಗಳ ಕುರಿತು ಒಂದಿಷ್ಟು ಆಶಾವಾದವನ್ನು ಹೆಚ್ಚಿಸಿತು. ಆ ನಂತರ 2024ರ ಏಪ್ರಿಲ್‌ನಲ್ಲಿ ಮಸ್ಕ್ ಭಾರತಕ್ಕೆ ಭೇಟಿ ನೀಡಿ ಕಾರ್ಯಾರಂಭಿಸುವ ಯೋಜನೆಯನ್ನು ಘೋಷಿಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಈ ಭೇಟಿಯನ್ನು ಮುಂದೂಡಲಾಗಿತ್ತು. ಅಲ್ಲದೆ ಟೆಸ್ಲಾದಿಂದ 20 ಸಾವಿರ ಕೋಟಿ ರೂಗಳಿಗಿಂತಲೂ ಹೆಚ್ಚಿನ ಬಂಡವಾಳ ಹೂಡಿಕೆ ಘೋಷಣೆ ನಿರೀಕ್ಷಿಸಲಾಗಿತ್ತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸ್ಥಳೀಯ ಸರ್ಕಾರಗಳ ಚುನಾವಣೆ ವಿಳಂಬ; ಕಾಂಗ್ರೆಸ್ ನಡೆ ಸಂವಿಧಾನ ವಿರೋಧಿಯಲ್ಲವೇ?
ಒಂದು ಅಂದಾಜಿನ ಪ್ರಕಾರ, 20 ಸಾವಿರ ಕೋಟಿ ರೂ. ಹೂಡಿಕೆಯಿಂದ ಸ್ಥಾಪನೆಯಾಗುವ ಒಂದು ಉತ್ಪಾದನಾ ಘಟಕವು ವಾರ್ಷಿಕವಾಗಿ ಲಕ್ಷ ಕೋಟಿ ರೂ.ವರೆಗೂ ಆದಾಯ ಬರುವ ಸಾಧ್ಯತೆಯಿತ್ತು. ಇದರಲ್ಲಿ ತೆರಿಗೆ, ರಫ್ತು ಮತ್ತು ಸ್ಥಳೀಯ ಮಾರಾಟದಿಂದ ಸರ್ಕಾರಕ್ಕೆ ಗಣನೀಯ ಆದಾಯ ದೊರೆಯುತ್ತಿತ್ತು. ಅಲ್ಲದೆ ಟೆಸ್ಲಾ ಕಾರ್ಖಾನೆ ಸ್ಥಾಪನೆಯಾದರೆ ಪ್ರಾಥಮಿಕ ಹಂತದಲ್ಲಿ ಕನಿಷ್ಠ 20 ಸಾವಿರ ಮಂದಿ ನೇರ ಉದ್ಯೋಗ ಪಡೆದುಕೊಳ್ಳುವ ಸಾಧ್ಯತೆ ಇತ್ತು. ಅದರೊಂದಿಗೆ ಸಾರಿಗೆ, ಅದರ ಸಂಬಂಧಿತ ಉದ್ಯಮಗಳು ಸೇರಿ ಸುಮಾರು 50 ಸಾವಿರ ಮಂದಿ ಏಕಕಾಲದಲ್ಲಿ ಅಥವಾ ಹಂತ ಹಂತವಾಗಿ ಉದ್ಯೋಗದಲ್ಲಿ ತೊಡಗಿಸಿಕೊಳ್ಳಬಹುದಿತ್ತು. ಭಾರತಕ್ಕೆ ಟೆಸ್ಲಾ ಕಂಪನಿ ಬಂದರೆ ದೇಶಕ್ಕೆ ಒಂದಿಷ್ಟು ಆರ್ಥಿಕ ಲಾಭವು ಉಂಟಾಗುತ್ತಿತ್ತು. ಮಸ್ಕ್ ಅವರ ಕಂಪನಿಯು ನೇರವಾಗಿ ಕಾರು ಉತ್ಪಾದನೆಗಷ್ಟೇ ಅಲ್ಲದೆ, ಬ್ಯಾಟರಿ ತಂತ್ರಜ್ಞಾನ, ಸೊಲಾರ್ ಎನರ್ಜಿ ಘಟಕಗಳು, ಕಾಂಪೋನೆಂಟ್ ತಯಾರಿಕೆ ಇತ್ಯಾದಿಗಳನ್ನೂ ಒಳಗೊಂಡಿರುತ್ತದೆ. ಇದರಿಂದಾಗಿ ಅನೇಕ ಸಂಬಂಧಿತ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿತ್ತು.
ಪೂರೈಕೆ ಸರಪಳಿ, ಲಾಜಿಸ್ಟಿಕ್ಸ್, ಮಾರಾಟ ಮತ್ತು ಸೇವಾ ಕೇಂದ್ರಗಳಿಗೆ ಸಂಬಂಧಿಸಿದ ಪರೋಕ್ಷ ಉದ್ಯೋಗಾವಕಾಶಗಳು ಸೇರಿ ಲಕ್ಷಕ್ಕೂ ಅಧಿಕ ಉದ್ಯೋಗಾವಕಾಶಗಳು ಲಭಿಸಲು ಸಾಧ್ಯವಾಗುತ್ತಿತ್ತು. ಭಾರತದಲ್ಲಿ ಇಂತಹ ಒಂದು ಘಟಕವು ಸ್ಥಾಪನೆಯಾದರೆ, ಇದು ದೇಶದ ಆಟೋಮೊಬೈಲ್ ಉದ್ಯಮದಲ್ಲಿ ಕೌಶಲ್ಯಾಭಿವೃದ್ಧಿಯನ್ನು ಉತ್ತೇಜಿಸುವುದರ ಜೊತೆಗೆ, ತಾಂತ್ರಿಕ ಆವಿಷ್ಕಾರಗಳಿಗೆ ದಾರಿ ಮಾಡಿಕೊಡಬಹುದು. ಈಗ ಕೇಂದ್ರ ಕೈಗಾರಿಕೆ ಮಂತ್ರಿಗಳ ಅಧಿಕೃತ ಹೇಳಿಕೆಯಿಂದ ಈ ಆಶಾವಾದಕ್ಕೆ ತಣ್ಣೀರು ಎರಚಿದಂತಿದೆ. ಟೆಸ್ಲಾದ ಆಸಕ್ತಿಯು ಕೇವಲ ಶೋರೂಂಗಳ ಸ್ಥಾಪನೆಗೆ ಸೀಮಿತವಾಗಿದೆ ಎಂದು ಅವರು ಒತ್ತಿಹೇಳಿದ್ದಾರೆ. ಇದಕ್ಕೆ ವಿರುದ್ಧವಾಗಿ, ಮೆರ್ಸಿಡಿಸ್-ಬೆಂಜ್, ವೋಕ್ಸ್‌ವಾಗನ್-ಸ್ಕೋಡಾ, ಹ್ಯುಂಡೈ ಮತ್ತು ಕಿಯಾದಂತಹ ಇತರ ಜಾಗತಿಕ ಆಟೋಮೊಬೈಲ್ ಕಂಪನಿಗಳು ಭಾರತದ ಇವಿ ನೀತಿಯಡಿಯಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಆಸಕ್ತಿಯನ್ನು ತೋರಿವೆಯಂಥೆ. ಹಾಗೆ ನೋಡಿದರೆ ಟೆಸ್ಲಾ ಭಾರತದಲ್ಲಿ ಕೈಗಾರಿಕೆಯನ್ನು ಆರಂಭಿಸದಿರಲು ಹಲವು ಕಾರಣಗಳು ಇವೆ.
ಭಾರತದ ಇವಿ ಮಾರುಕಟ್ಟೆಯ ಗಾತ್ರ ಮತ್ತು ಖರೀದಿ ಸಾಮರ್ಥ್ಯ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. 2023ರಲ್ಲಿ ಭಾರತದಲ್ಲಿ ಕೇವಲ ಶೇ. 2 ರಷ್ಟು ಕಾರು ಮಾರಾಟವು ಎಲೆಕ್ಟ್ರಿಕ್ ವಾಹನಗಳಿಗೆ ಸಂಬಂಧಿಸಿತ್ತು. ಇದು ಚೀನಾದ 1.1 ಕೋಟಿ ಇವಿ ಮಾರಾಟಕ್ಕೆ ಹೋಲಿಸಿದರೆ ತೀರಾ ಕಡಿಮೆ. ಟೆಸ್ಲಾದ ಕಾರುಗಳು, ವಿಶೇಷವಾಗಿ 35,000 ಡಾಲರ್‌ಗಿಂತ ಹೆಚ್ಚಿನ ಬೆಲೆಯ ಉನ್ನತ ಮಾದರಿಗಳು, ಭಾರತದ ಸಾಮಾನ್ಯ ಗ್ರಾಹಕರ ಖರೀದಿ ಸಾಮರ್ಥ್ಯಕ್ಕಿಂತ ದುಬಾರಿಯಾಗಿವೆ. ಇದೇ ಕಾರಣಕ್ಕಾಗಿ, ಟೆಸ್ಲಾ ದೊಡ್ಡ ಬಂಡವಾಳ ಹೂಡಿಕೆಗೆ ಹಿಂದೇಟು ಹಾಕಿರಬಹುದು.
ಇದರ ಜೊತೆಗೆ ಅಮೆರಿದಲ್ಲಿ ಎರಡನೇ ಬಾರಿಗೆ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್‌ರವರ ಆಡಳಿತದ ಒತ್ತಡವು ಟೆಸ್ಲಾದ ನಿರ್ಧಾರದ ಮೇಲೆ ಪರಿಣಾಮ ಬೀರಿದೆ. 2025ರ ಫೆಬ್ರವರಿಯಲ್ಲಿ ಟ್ರಂಪ್ ಟೆಸ್ಲಾದ ಭಾರತದ ವಿಸ್ತರಣೆಯನ್ನು “ಅನ್ಯಾಯ” ಎಂದು ಕರೆದಿದ್ದರು. ಅದಲ್ಲದೆ ಭಾರತದಲ್ಲಿ ಆಪಲ್ ಫೋನ್ ತಯಾರಿಕೆಗೆ ಕೂಡ ಟ್ರಂಪ್ ನೇರವಾಗಿ ವಿರೋಧ ವ್ಯಕ್ತಪಡಿಸಿದ್ದರು. ಇವೆಲ್ಲವೂ ಟೆಸ್ಲಾ ಭಾರತ ಪ್ರವೇಶಕ್ಕೆ ಅಡ್ಡಿಯಾಗಿದೆ. ಈಗಾಗಲೇ ಬಿವೈಡಿ, ಹ್ಯುಂಡೈ, ಕಿಯಾ, ಎಂಜಿ ಮೋಟಾರ್ಸ್ ಮುಂತಾದ ಕಂಪನಿಗಳು ಭಾರತದಲ್ಲಿ ತಮ್ಮ ಘಟಕಗಳನ್ನು ಸ್ಥಾಪಿಸಿ ಮಾರುಕಟ್ಟೆಯಲ್ಲಿ ಪೈಪೋಟಿ ನೀಡುತ್ತಿವೆ. ಟೆಸ್ಲಾ ಬಾರದಿರುವ ಸಮಯದಲ್ಲಿಯೇ ಇತರ ಕಂಪನಿಗಳು ತಮ್ಮ ಮೂಲಸೌಕರ್ಯ ಮತ್ತು ಗ್ರಾಹಕ ಬೆಂಬಲವನ್ನು ಬಲಪಡಿಸುತ್ತಿರುವುದು ಟೆಸ್ಲಾಕ್ಕೆ ಭಾರತೀಯ ಮಾರುಕಟ್ಟೆಗೆ ಅಡಚಣೆಯಾಗಿದೆ ಎಂದು ಹೇಳಬಹುದು.