ಆಪರೇಷನ್ ಸಿಂಧೂರ್ ಸಮಯದಲ್ಲಿ ಸೇನೆಯ ಚಲನವಲನಗಳಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನಿ ಗುಪ್ತಚರ ಆಪರೇಟಿವ್ಸ್‌ಗೆ ಹಂಚಿಕೊಳ್ಳುತ್ತಿದ್ದ ಆರೋಪದ ಮೇಲೆ ಪಂಜಾಬ್‌ನ ತರಣ್ ತರಣ್ ಜಿಲ್ಲೆಯ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ.
ಪಾಕಿಸ್ತಾನಿ ಗುಪ್ತಚರ ಆಪರೇಟಿವ್ಸ್ (ಪಿಐಒ) ಜೊತೆ ಹಂಚಿಕೊಂಡ ಮಾಹಿತಿಯನ್ನು ಒಳಗೊಂಡ ಮೊಬೈಲ್ ಫೋನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಜೊತೆಯಲ್ಲಿ ಆರೋಪಿಯು ಸಂಪರ್ಕದಲ್ಲಿದ್ದನೆಂದು ಆರೋಪಿಸಲಾಗಿದೆ. ಸೂಕ್ಷ್ಮ ಮಾಹಿತಿಯನ್ನು ರವಾನಿಸಲು ಹಣವನ್ನು ಸಹ ಪಡೆದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ತರಣ್ ಜಿಲ್ಲೆಯ ಮೊಹಲ್ಲಾ ರೋಡುಪುರದ ನಿವಾಸಿ ಗಗನ್‌ದೀಪ್ ಸಿಂಗ್ ಅಲಿಯಾಸ್ ಗಗನ್ ಎಂದು ಆರೋಪಿಯನ್ನು ಗುರುತಿಸಿರುವುದಾಗಿ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ತಿಳಿಸಿದ್ದಾರೆ.
ಇದನ್ನೂ ಓದಿರಿ: ಪಹಲ್ಗಾಮ್ ದಾಳಿ ಬಳಿಕ ಕಳೆಗುಂದಿದ ಕಾಶ್ಮೀರದ ʼಖೀರ್ ಭವಾನಿ ಮೇಳʼ
ತರಣ್ ತರಣ್ ಜಿಲ್ಲಾ ಪೊಲೀಸರು ಮತ್ತು ಪೊಲೀಸ್ ಕೌಂಟರ್ ಇಂಟೆಲಿಜೆನ್ಸ್ ವಿಭಾಗದ ಜಂಟಿ ಕಾರ್ಯಾಚರಣೆಯ ವೇಳೆ ಆತನ ಸೆರೆಯಾಗಿದೆ.
“ಬಂಧಿತ ಆರೋಪಿಯು ಐಎಸ್ಐ ಮತ್ತು ಪಾಕಿಸ್ತಾನ ಮೂಲದ ಖಲಿಸ್ತಾನಿ ಬೆಂಬಲಿಗ ಗೋಪಾಲ್ ಸಿಂಗ್ ಚಾವ್ಲಾ ಎಂಬಾತನೊಂದಿಗೆ ಸಂಪರ್ಕದಲ್ಲಿದ್ದನು. ಆಪರೇಷನ್ ಸಿಂಧೂರ್ ಸಮಯದಲ್ಲಿ ಸೇನಾ ಚಲನವಲನಗಳ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡಿದ್ದನು” ಎಂದು ಡಿಜಿಪಿಯವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿರಿ: ಪಹಲ್ಗಾಮ್ ದುರಂತ; ವಿಶೇಷ ಅಧಿವೇಶನಕ್ಕೆ ಇಂಡಿಯಾ ಬಣ ಆಗ್ರಹ
ಸೇನಾ ನಿಯೋಜನೆ ಮತ್ತು ಕಾರ್ಯತಂತ್ರದ ಸ್ಥಳಗಳು ಸೇರಿದಂತೆ ವರ್ಗೀಕೃತ ವಿವರಗಳನ್ನು ಹಂಚಿಕೊಳ್ಳುವಲ್ಲಿ ಆರೋಪಿ ನಿರತನಾಗಿದ್ದ. ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟು ಮಾಡುವ ಕೃತ್ಯ ಇದಾಗಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ.
ಗಗನ್‌ದೀಪ್ ಕಳೆದ ಐದು ವರ್ಷಗಳಿಂದ ಖಲಿಸ್ತಾನಿ ಬೆಂಬಲಿಗ ಗೋಪಾಲ್ ಸಿಂಗ್ ಚಾವ್ಲಾನೊಂದಿಗೆ ಸಂಪರ್ಕದಲ್ಲಿದ್ದನು, ಆತನ ಮೂಲಕ ಗಗನ್‌ಗೆ ಪಿಐಒಗಳ ಪರಿಚಯವಾಯಿತು ಎಂದು ವಿವರಿಸಿದ್ದಾರೆ.
ಪಾಕಿಸ್ತಾನ ಪರ ಬೇಹುಗಾರಿಕೆ ಮಾಡುತ್ತಿರುವವರನ್ನು ಬಂಧಿಸುವಲ್ಲಿ ಸರ್ಕಾರ ಸಕ್ರಿಯವಾಗಿದೆ. ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಸೇರಿ ಆರು ಜನರ ಬಂಧನವಾಗಿತ್ತು. ಆನಂತರ ವೇತನ್ ಲಕ್ಷ್ಮಣ, ಅಜಯ್ ರವಿ ಎಂಬವರನ್ನು ಸೇರಿ ಎಂಟು ಜನರ ಅರೆಸ್ಟ್ ಆಗಿತ್ತು. ಬೆಂಗಳೂರಿನ ಬಿಇಎಲ್‌ನಲ್ಲಿ ಉದ್ಯೋಗಿಯಾಗಿದ್ದ ರಾಜ್ ದೀಪ್ ಎಂಬಾತ ಸೆರೆ ಸಿಕ್ಕಿದ್ದ. ಹರ್ಯಾಣದಲ್ಲಿ ದೇವೇಂದ್ರ ಎಂಬಾತನ ಬಂಧನವಾಗಿತ್ತು. ಗುಜರಾತ್‌ನ ಸಹದೇವ್ ಗೋಹಿಲ್ ಅರೆಸ್ಟ್ ಆಗಿದ್ದ. ಪಾಕಿಸ್ತಾನ ಪರ ಪೋಸ್ಟ್ ಹಾಕಿರುವ ಆರೋಪದ ಮೇಲೆ ಈವರೆಗೂ ಸುಮಾರು 81ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
