ಬಿಜೆಪಿ ಪ್ರಕಾರ ‘ಆಪರೇಷನ್ ಸಿಂಧೂರ’ ಯಶಸ್ವಿ: ಅಭಿಯಾನ ಆರಂಭಿಸಿದ ಸ್ತ್ರೀದ್ವೇಷಿಗಳು!

Date:

Advertisements
ಬಿಜೆಪಿ ಪ್ರಕಾರ 'ಆಪರೇಷನ್ ಸಿಂಧೂರ' ಯಶಸ್ವಿಯಾಗಿದೆ. ಆ ನೆಪದಲ್ಲಿ ಬಿಜೆಪಿ ದೇಶದ ಪ್ರತಿ ಮನೆಗೂ ಸಿಂಧೂರ ತಲುಪಿಸುವ ಅಭಿಯಾನವನ್ನು ಆರಂಭಿಸಿದೆ. ಆದರೆ ಮನುಸ್ಮೃತಿಯನ್ನು ಒಡಲಲ್ಲಿ ಅಡಗಿಸಿಟ್ಟುಕೊಂಡ ಮನುವಾದಿಗಳು ಮಹಿಳೆಯರನ್ನು ಗೌರವಿಸುವುದುಂಟೇ?

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ-ಪಾಕಿಸ್ತಾನ ಸಂಘರ್ಷ ಉಲ್ಭಣಗೊಂಡು, ಕದನ ವಿರಾಮದೊಂದಿಗೆ ಕೊನೆಗೊಂಡಿದೆ. ಪಾಕ್‌ ವಿರುದ್ಧ ಭಾರತ ನಡೆಸಿದ ‘ಆಪರೇಷನ್ ಸಿಂಧೂರ’ ಹೆಸರಿನ ಕಾರ್ಯಾಚರಣೆಯ ಬಗ್ಗೆ ರಾಷ್ಟ್ರವ್ಯಾಪಿ ಭಾರೀ ಚರ್ಚೆಯಾಗುತ್ತಿದೆ. ಕಾರ್ಯಾಚರಣೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ‘ಭಾರತದ ಇತಿಹಾಸದಲ್ಲಿ ಅತಿದೊಡ್ಡ ಮತ್ತು ಅತ್ಯಂತ ಯಶಸ್ವಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ’ ಎಂದು ಬಣ್ಣಿಸಿದ್ದಾರೆ. ‘ತನ್ನ ದೇಹದಲ್ಲಿ ಹರಿಯುತ್ತಿರುವುದು ರಕ್ತವಲ್ಲ. ಕುದಿಯುತ್ತಿರುವ ಸಿಂಧೂರ’ ಎಂದು ಅಬ್ಬರಿಸಿದ್ದಾರೆ.

ಆದಾಗ್ಯೂ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಯಶಸ್ಸಿನ ಬಗ್ಗೆ ಜಾಗತಿಕವಾಗಿ ಪ್ರಶ್ನೆಗಳು, ಸಂದೇಹಗಳು, ವಿಮರ್ಶೆಗಳು ವ್ಯಕ್ತವಾಗುತ್ತಲೇ ಇವೆ. ಯಾವೊಬ್ಬ ಭಯೋತ್ಪಾದಕನನ್ನು ಸದೆಬಡಿಯದ, ಭಯೋತ್ಪಾದನೆಯನ್ನು ನಿರ್ನಾಮ ಮಾಡದ, ಕೇವಲ ಭಯೋತ್ಪಾದಕ ನೆಲೆ ಮೇಲೆ ದಾಳಿ ಮಾಡಿದ ಕಾರ್ಯಾಚರಣೆಯು ಸಂಪೂರ್ಣ ಯಶಸ್ವಿಗೊಂಡಿದೆ ಎನ್ನಲು ಹೇಗೆ ಸಾಧ್ಯ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.

ಈ ಎಲ್ಲ ಗೊಂದಲಗಳ ನಡುವೆಯೂ ‘ಆಪರೇಷನ್ ಸಿಂಧೂರ’ವನ್ನು ಬಿಜೆಪಿ ತನ್ನ ರಾಜಕೀಯ ಲಾಭಕ್ಕೆ ಪ್ರತಿ ಬಿಂದುವನ್ನೂ ಬಳಸಿಕೊಳ್ಳುತ್ತಿದೆ. ದೇಶದ ಪ್ರತಿ ಮನೆಗೂ ಸಿಂಧೂರ ತಲುಪಿಸುವ ಅಭಿಯಾನವನ್ನು ಬಿಜೆಪಿ ಆರಂಭಿಸಿದೆ.

Advertisements

ಪಹಲ್ಗಾಮ್‌ನಲ್ಲಿ 26 ಮಂದಿ ಹಿಂದುಗಳನ್ನು ಭಯೋತ್ಪಾದಕರು ಹತ್ಯೆಗೈದ ಕಾರಣಕ್ಕೆ, ಹಿಂದು ಮಹಿಳೆಯರ ಸಿಂಧೂರವನ್ನು ಅಳಿಸಿದ್ದಕ್ಕೆ ಪ್ರತೀಕಾರವೆಂದು ಭಾರತ ನಡೆಸಿದ ಕಾರ್ಯಾಚರಣೆಗೆ ‘ಆಪರೇಷನ್ ಸಿಂಧೂರ’ ಎಂದು ಹೆಸರಿಡಲಾಗಿತ್ತು. ಈಗ, ಬಿಜೆಪಿ ಮನೆ-ಮನೆಗೆ ಸಿಂಧೂರ ಕಳಿಸುತ್ತಿದೆ. ಆದರೆ, ಹಿಂದು ಮಹಿಳೆಯರ ಸಿಂಧೂರದ ಬಗ್ಗೆ ಇಷ್ಟೆಲ್ಲ ಅಬ್ಬರದ ಮಾತನಾಡುತ್ತಿರುವ ಬಿಜೆಪಿ, ಅಷ್ಟೇ ಸ್ತ್ರೀವಿರೋಧಿ ಎಂಬುದು ಮರೆಮಾಚಲಾಗದ, ಬಚ್ಚಿಡಲಾಗದ ಸತ್ಯ.

ಹೇಳಿ-ಕೇಳಿ ಬಿಜೆಪಿ/ಆರ್‌ಎಸ್‌ಎಸ್‌ನ ಸಿದ್ಧಾಂತವೇ ಮನುವಾದ. ಮನು ಬರೆದ ಮನುಸ್ಮೃತಿಯೇ ನಮ್ಮ ಸಂವಿಧಾನವೆಂದು ಬಿಜೆಪಿ/ಆರ್‌ಎಸ್‌ಎಸ್‌ ಹೇಳಿಕೊಳ್ಳುತ್ತವೆ. ಭಾರತೀಯ ಸಂವಿಧಾನವನ್ನು ಬುಡಮೇಲು ಮಾಡಿ ಮನುಸ್ಮೃತಿಯನ್ನು ಜಾರಿಗೊಳಿಸಬೇಕು ಎಂಬುದೇ ಇವರ ಮೂಲ ಅಜೆಂಡಾ.

ಬಿಜೆಪಿ ಆರಾಧಿಸುವ ಮನುಸ್ಮೃತಿಯು ಮಹಿಳೆಯರನ್ನು ನಾಲ್ಕು ಗೋಡೆಗಳ ನಡುವಿನ ಬದುಕಿಗೆ ಸೀಮಿತಗೊಳಿಸಬೇಕೆಂದು ಹೇಳುತ್ತದೆ. ಮಹಿಳೆಯು ತನ್ನ ಜೀವನದ ವಿವಿಧ ಹಂತಗಳಲ್ಲಿ (ಬಾಲ್ಯ, ಯೌವನ, ವೃದ್ಧಾಪ್ಯ) ತನ್ನ ತಂದೆ, ಗಂಡ ಹಾಗೂ ಪುತ್ರನ ರಕ್ಷಣೆಯಲ್ಲಿಯೇ ಬದುಕಬೇಕು, ಆಕೆ ಸ್ವತಂತ್ರವಾಗಿರಲು ಅರ್ಹಳಲ್ಲ, ವಿವಾಹವು ಮಹಿಳೆಯ ಜೀವನದ ಅತ್ಯಂತ ಪ್ರಮುಖ ಭಾಗ, ಮಹಿಳೆ ಗಂಡನಿಗೆ ವಿಧೇಯಳಾಗಿ, ಕುಟುಂಬದ ಕರ್ತವ್ಯಗಳನ್ನು ನಿರ್ವಹಿಸಬೇಕು, ಗಂಡನನ್ನು ದೇವರಂತೆ ಪೂಜಿಸಬೇಕು, ಮಹಿಳೆ ಆಸ್ತಿಗೆ ಒಡತಿಯಾಗಲು ಅರ್ಹಳಲ್ಲ, ವಿಧವೆಯರು ಪುನರ್‌ವಿವಾಹ ಆಗಬಾರದು ಎಂದು ಪ್ರತಿಪಾದಿಸುತ್ತದೆ.

ಇದೇ ಮನುವಾದಿ ಅಜೆಂಡಾದ ಭಾಗವಾಗಿಯೇ ಬಿಜೆಪಿಗರು ಈಗ ಮನೆ-ಮನೆಗೆ ಸಿಂಧೂರ ಕಳಿಸಿ, ಮಹಿಳೆಯರಿಗೆ ‘ಗಂಡನಿಂದಲೇ ನಿಮ್ಮ ಬದುಕು, ಸಿಂಧೂರವೇ ನಿಮ್ಮ ಜೀವ-ಜೀವಾಳ’ ಎಂಬ ಸಂದೇಶ ರವಾನಿಸಲು ಮುಂದಾಗಿದೆ. ಸಿಂಧೂರವು ಹಿಂದು ವೈವಾಹಿಕ ಬದುಕಿನ ಸಾಂಪ್ರದಾಯಿಕ ಸಂಕೇತವಾಗಿ ಕಾರ್ಯನಿರ್ವಹಿಸುತ್ತದೆ. ಇದು ಮಹಿಳೆಯ ವೈಯಕ್ತಿಕ ಗುರುತನ್ನು ಮರೆಮಾಡಿ, ಪಿತೃಪ್ರಧಾನ ಚೌಕಟ್ಟಿನೊಳಗೆ ದೂಡುತ್ತದೆ. ಅದೇ ಚೌಕಟ್ಟನ್ನು ನೆನಪಿಸಲು ಬಿಜೆಪಿ ಸಿಂಧೂರ ಕಳಿಸುತ್ತಿದೆ.

ಈ ಲೇಖನ ಓದಿದ್ದೀರಾ?: ‘ಆಪರೇ‍ಷನ್ ಸಿಂಧೂರ’ದಲ್ಲಿವೆ ಹಲವು ವೈಫಲ್ಯಗಳು: ಇಲ್ಲಿದೆ ಪೂರ್ಣ ಮಾಹಿತಿ

ಮಹಿಳೆಯರ ಹಣೆಯ ಕುಂಕುಮವನ್ನು ರಕ್ಷಿಸುತ್ತೇವೆ ಎನ್ನುವ ಬಿಜೆಪಿ ಅಥವಾ ಕೇಂದ್ರ ಸರ್ಕಾರದ ಉದ್ದೇಶವು ಹಿಂದು ಪುರುಷರ ರಕ್ಷಣೆಯ ಆದ್ಯತೆಯನ್ನು ಸೂಚಿಸುತ್ತದೆಯೇ ಹೊರತು, ಮಹಿಳೆಯರ ರಕ್ಷಣೆಯನ್ನಲ್ಲ. ಆದಾಗ್ಯೂ, ಹಿಂದು ಮಹಿಳೆಯರ ಸಿಂಧೂರ ಕಸಿದುಕೊಂಡವರ ವಿರುದ್ಧ ನಡೆದ ಕಾರ್ಯಾಚರಣೆಯನ್ನು ಇಡೀ ಜಗತ್ತಿಗೆ ಇಬ್ಬರು ಮಹಿಳೆಯರು – ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್‌ ಕಮಾಂಡರ್ ವ್ಯೋಮಿಕಾ ಸಿಂಗ್ – ವಿವರಿಸಿದರು. ಇದು ಮಹಿಳೆಯನ್ನು ಸಂಕೇತಿಸಿದರೂ, ಸೇನೆಯಲ್ಲಿನ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗ ನೀಡುವುದಕ್ಕೆ ಬಿಜೆಪಿಯ ವಿರೋಧ ಮತ್ತು ಮಹಿಳಾ ಅಧಿಕಾರಿಗಳನ್ನು ‘ಶಾರೀರಿಕವಾಗಿ ಅನರ್ಹ’ ಎಂದಿರುವುದನ್ನೂ ಎಂದಿಗೂ ಕ್ಷಮಿಸಲಾಗದು.

ಇದೇ ಕರ್ನಲ್ ಸೋಫಿಯಾ ಅವರನ್ನು ಮಧ್ಯಪ್ರದೇಶದ ಬಿಜೆಪಿ ಸಚಿವ ವಿಜಯ್ ಶಾ ಅವರು ‘ಭಯೋತ್ಪಾದಕರ ಸಹೋದರಿ’ ಎಂದು ಕರೆದರು. ಈ ಹೇಳಿಕೆಯನ್ನು ತಮ್ಮ ಭಾಷಣದಲ್ಲಿ ಮೂರು ಬಾರಿ ಮತ್ತೆ-ಮತ್ತೆ ಉಚ್ಚರಿಸಿದರು. ಭಾರತೀಯ ಸೇನೆಗಾಗಿ ದುಡಿಯುತ್ತಿರುವ ಕರ್ನಲ್ ಸೋಫಿಯಾ ಅವರನ್ನು ಅವಮಾನಿಸಿದರು.

ಹರಿಯಾಣ ಸಂಸದ ರಾಮ್ ಚಂದರ್ ಜಂಗ್ರಾ ಅವರು ‘ಪಹಲ್ಗಾಮ್‌ನಲ್ಲಿ ಹಾಜರಿದ್ದ ಮಹಿಳೆಯರಿಗೆ ಧೈರ್ಯದ ಕೊರತೆಯಿದೆ’ ಎಂದು ದೂಷಿಸಿದರು. ಕರ್ನಾಟಕದ ಬಿಜೆಪಿ ನಾಯಕ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್ ರವಿಕುಮಾರ್ ಅವರು, ಐಎಎಸ್ ಅಧಿಕಾರಿ ಫೌಜಿಯಾ ತರನ್ನಮ್ ಅವರನ್ನು ‘ಪಾಕಿಸ್ತಾನದಿಂದ ಬಂದವರು’ ಎಂದು ನಿಂದಿಸಿದರು. ಕೋಮುದ್ವೇಷ ಪ್ರಚೋದಿಸುವ ಹೇಳಿಕೆ ನೀಡಿದರು. ಈ ಮೂರು ಹೇಳಿಕೆಗಳು ಸ್ತ್ರೀದ್ವೇಷಿ ಮತ್ತು ಕೋಮುವಾದಿ ಹೇಳಿಕೆಗಳೇ ಆಗಿವೆ.

ಇನ್ನು, ಇದೇ ಪಹಲ್ಗಾಮ್ ದಾಳಿಯ ನಂತರ ಭಾರತದಲ್ಲಿ ಮುಸ್ಲಿಂ ದ್ವೇಷ ವ್ಯಾಪಕವಾಗಿ ಹರಡಲಾರಂಭಿಸಿತ್ತು. ಪಹಲ್ಗಾಮ್‌ ದಾಳಿಯನ್ನು ತನ್ನ ಪತಿ, ಕ್ಯಾಪ್ಟನ್ ವಿಜಯ್ ನರ್ವಾಲ್ ಅವರನ್ನು ಕಳೆದುಕೊಂಡ ನವವಿವಾಹಿತೆ ಹಿಮಾನ್ಶಿ ನರ್ವಾಲ್ ಅವರು ಈ ಕೋಮುದ್ವೇಷವನ್ನು ಖಂಡಿಸಿದರು. ‘ಆಪತ್ತಿನ ಸಮಯದಲ್ಲಿ ಕಾಶ್ಮೀರದ ಮುಸ್ಲಿಮರೇ ತಮಗೆ ನೆರವಾದರು, ಅನಗತ್ಯವಾಗಿ ಕಾಶ್ಮೀರಿಗರನ್ನು, ಮುಸ್ಲಿಮರನ್ನು ಗುರಿಯಾಗಿಸಿಕೊಳ್ಳಬೇಡಿ’ ಎಂದು ಶಾಂತಿಗಾಗಿ ಕರೆಕೊಟ್ಟರು. ಅವರ ಈ ಕರೆಯ ಕಾರಣಕ್ಕಾಗಿಯೇ ಅವರನ್ನು ವಿಕೃತವಾಗಿ ಬಿಜೆಪಿ ಬೆಂಬಲಿಗರು ಟ್ರೋಲ್ ಮಾಡಿದರು.

ಬಿಜೆಪಿಯ ಹಿಂಬಾಲಕರು ಹಿಮಾನ್ಶಿ ಅವರ ನೋಟ, ಮೇಕಪ್‌ಗಳನ್ನು ಅಪಹಾಸ್ಯ ಮಾಡಿದರು. ಆಕೆ ಜೆಎನ್‌ಯುನಲ್ಲಿ ಓದಿದ್ದ ಸಂದರ್ಭದ ಚಿತ್ರಗಳನ್ನು ಹಂಚಿಕೊಂಡು ‘ನಗರ ನಕ್ಸಲ್’ ಎಂದು ಬಣ್ಣಿಸಿದರು. ಆರಂಭದಲ್ಲಿ ಹಿಮಾನ್ಶಿ ಅವರ ಬಗ್ಗೆ ಸಹಾನುಭೂತಿ ತೋರಿದವರೇ, ಕೋಮುದ್ವೇಷವನ್ನು ಖಂಡಿಸಿದಕ್ಕಾಗಿ ಆಕೆಯ ವಿರುದ್ಧ ವಿಕೃತ ದಾಳಿ ಮಾಡಿದರು. ಇದು ಬಿಜೆಪಿ ಸೂಚಿಸುವ ಮನುವಾದದ ಮತ್ತೊಂದು ಮುಖ/ಮುಖವಾಡದ ಸಂಕೇತವಾಗಿತ್ತು.

ಈ ಲೇಖನ ಓದಿದ್ದೀರಾ?: ‘ಆಪರೇಷನ್ ಸಿಂಧೂರ’ ಕುರಿತು ಪ್ರಬಂಧ ಸ್ಪರ್ಧೆ ಘೋಷಿಸಿದ ರಕ್ಷಣಾ ಸಚಿವಾಲಯ: ವಿಜೇತರಿಗೆ ಬಹುಮಾನವೇನು?

ಆಪರೇಷನ್ ಸಿಂಧೂರದ ಸುತ್ತಲಿನ ಚರ್ಚೆಯ ಹೊರತಾಗಿಯೂ ಬಿಜೆಪಿಯ ಸ್ತ್ರೀದ್ವೇಷಕ್ಕೆ ಹತ್ತಾರು ಉದಾಹರಣೆಗಳಿವೆ. ಇತ್ತೀಚೆಗೆ, ದೆಹಲಿ ನ್ಯಾಯಾಲಯವು ಭಾರತೀಯ ಕುಸ್ತಿ ಫೆಡರೇಷನ್‌ನ (WFI) ಮಾಜಿ ಮುಖ್ಯಸ್ಥ, ಬಿಜೆಪಿ ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ‘ಪೋಕ್ಸೋ’ ಪ್ರಕರಣವನ್ನು ರದ್ದುಗೊಳಿಸಿದೆ. ಆದಾಗ್ಯೂ, ಲೈಂಗಿಕ ದೌರ್ಜನ್ಯದ ಪ್ರಕರಣಗಳು ಮುಂದುವರೆದಿವೆ. 2023ರ ಜನವರಿಯಲ್ಲಿ, ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಸೇರಿದಂತೆ ಭಾರತದ ಹಲವಾರು ಮಹಿಳಾ ಕುಸ್ತಿಪಟುಗಳು ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ”ಬ್ರಿಜ್ ಭೂಷಣ್ ಅವರು ಅಪ್ರಾಪ್ತ ವಯಸ್ಕರು ಸೇರಿದಂತೆ ಹಲವಾರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ; ಮಾತನಾಡಿದವರನ್ನು ಬೆದರಿಸಿದ್ದಾರೆ; ದೂರುಗಳನ್ನು ನಿಗ್ರಹಿಸಲು WFI ಅಧ್ಯಕ್ಷರಾಗಿ ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ” ಎಂದು ಆರೋಪಿಸಿದರು. ಬ್ರಿಜ್ ಭೂಷಣ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೆಹಲಿಯಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಿದರು.

ಆದರೆ, ತನ್ನ ಹೊಣೆಗಾರಿಕೆಯನ್ನು ಮರೆತ ಬಿಜೆಪಿಯ ಉನ್ನತ ನಾಯಕತ್ವವು ಮೌನಕ್ಕೆ ಶರಣಾಯಿತು. ಮಾತ್ರವಲ್ಲ, ಪ್ರತಿಭಟನಾನಿರತ ಮಹಿಳಾ ಕುಸ್ತಿಪಟುಗಳ ಮೇಲೆ ದೆಹಲಿ ಪೊಲೀಸರಿಂದ ಹಲ್ಲೆ, ದೌರ್ಜನ್ಯ ನಡೆಸಿತು. ಪ್ರತಿಭಟನೆಯನ್ನು ಹತ್ತಿಕ್ಕಲು ಯತ್ನಿಸಿತು.

ಮಹಿಳಾ ಕುಸ್ತಿಪಟುಗಳನ್ನು ಅಮಾನವೀಯವಾಗಿ ನಡೆಸಿಕೊಂಡದ್ದು ಮಾತ್ರವಲ್ಲದೆ, ಕಥುವಾದಲ್ಲಿ ಅಪ್ರಾಪ್ತ ಬಾಲಕಿ ಆಶಿಫಾ ಬಾನು ಮೇಲಿನ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಆರೋಪಿಯ ಪರವಾಗಿ ಬಿಜೆಪಿಯ ಸಂಸದ, ಶಾಸಕರು ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ಉನ್ನಾವೋದಲ್ಲಿ 2017ರಲ್ಲಿ ನಡೆದಿದ್ದ ದಲಿತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಆರೋಪಿಯಾಗಿದ್ದ. ಆದರೆ, ಆತನ ವಿರುದ್ಧ ಬಿಜೆಪಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಆದಾಗ್ಯೂ, ಪ್ರಕರಣವನ್ನು ಮುಚ್ಚಿ ಹಾಕಲು ಆತನ ಬೆಂಬಲಿಗರು ಸಂತ್ರಸ್ತ ಬಾಲಕಿಯ ಕುಟುಂಬದ ಮೇಲೆ ನಿರಂತರವಾಗಿ ದಾಳಿ ನಡೆಸಿ, ಆಕೆಯ ಕುಟುಂಬಸ್ಥರನ್ನು ಕೊಂದರು ಎಂಬ ಆರೋಪಗಳಿವೆ.

ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗೀಯ ಅವರು ಮಹಿಳೆಯ ಉಡುಪಿನ ಬಗ್ಗೆ ತುಚ್ಛ ಹೇಳಿಕೆ ನೀಡಿದ್ದರು. ಅವರು, ಪಾಶ್ಚಿಮಾತ್ಯ ಉಡುಪುಗಳನ್ನು ಧರಿಸುವ ಮಹಿಳೆಯರನ್ನು ‘ಶೂರ್ಪನಕಿಯರು’ ಎಂದು ಕರೆದಿದ್ದರು. ಇನ್ನು, 2025ರ ದೆಹಲಿ ವಿಧಾನಸಭಾ ಚುನಾವಣೆಯ ವೇಳೆ, ಬಿಜೆಪಿ ನಾಯಕ ರಾಮೇಶ್ ಬಿಧೂರಿ ಅವರು ಕಲ್‌ಕಾಜಿ ಪ್ರದೇಶದ ರಸ್ತೆಗಳನ್ನು ಪ್ರಿಯಾಂಕಾ ಗಾಂಧಿಯ ಕಾಲುಗಳಂತೆ ನಿರ್ಮಾಣ ಮಾಡುತ್ತೇವೆ ಎಂದು ಸೆಕ್ಸಿಸ್ಟ್‌ ಹೇಳಿಕೆ ನೀಡಿ ಬಿಜೆಪಿಯ ಕೊಳಕು ಮನಸ್ಥಿತಿಯನ್ನು ಹೊರಹಾಕಿದ್ದರು.

ಇಂತಹ ಹಲವಾರು ನಿದರ್ಶನಗಳು ಬಿಜೆಪಿಯಲ್ಲಿರುವ ಸ್ತ್ರೀವಿರೋಧಿ ಧೋರಣೆಯನ್ನು ಸೂಚಿಸುತ್ತವೆ. ಸ್ತ್ರೀದ್ವೇಷ ಮತ್ತು ಸಿನಿಕತನದ ಶೋಷಣೆಯ ಕಲೆಯು ಬಿಜೆಪಿಯಲ್ಲಿಯೇ ಆಳವಾಗಿ ಬೇರೂರಿದೆ. ಅದನ್ನು ತೊಳೆದುಕೊಳ್ಳಲು ಬಿಜೆಪಿ ಸಿದ್ಧವಾಗಿಲ್ಲ. ಬದಲಿಗೆ ಮಹಿಳೆಯರಿಗೆ ಸಿಂಧೂರ ಕೊಡಲು ಮುಂದಾಗಿದೆ. ಇದು ಆಪರೇಷನ್ ಸಿಂಧೂರವನ್ನೂ ರಾಜಕೀಕರಣಗೊಳಿಸುವ ಹಿಂದಿನ ಕಟು ಸತ್ಯ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

Download Eedina App Android / iOS

X