ರೋಚಕ ಹಣಾಹಣಿಯ ಐಪಿಎಲ್ ಫೈನಲ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 190 ರನ್ನುಗಳ ಸವಾಲಿನ ಮೊತ್ತ ಪೇರಿಸಿದೆ.
ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಆರ್‌ಸಿಬಿಗೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿದರು. ಕೊಹ್ಲಿ ಜೊತೆ ಆರಂಭಿಕನಾಗಿ ಬ್ಯಾಟ್ ಮಾಡಿದ ಫಿಲ್ ಸಾಲ್ಟ್ ಎರಡು ಬೌಂಡರಿ ಒಂದು ಸಿಕ್ಸರ್‌ನೊಂದಿಗೆ 16 ರನ್ ಗಳಿಸಿ ಔಟಾದರು.
ಇದನ್ನು ಓದಿದ್ದೀರಾ? ಐಪಿಎಲ್ ಫೈನಲ್‌ಗಿಂತ ಹೆಚ್ಚಾದ ಆರ್‌ಸಿಬಿ ಜ್ವರ, ಏನಿದು ವಿದ್ಯಮಾನ?
ಕನ್ನಡಿಗ ಮಾಯಾಂಕ್ ಅಗರ್‌ವಾಲ್ ಒಂದಷ್ಟು ಹೊತ್ತು ಬ್ಯಾಟ್ ಬೀಸಿ 18 ಚೆಂಡುಗಳಲ್ಲಿ 2 ಬೌಂಡರಿ, ಒಂದು ಸಿಕ್ಸರ್‌ನೊಂದಿಗೆ 26 ರನದದ ಪೇರಿಸಿ ಚಹಾಲ್ ಬೌಲಿಂಗ್‌ನಲ್ಲಿ ಪೆವಿಲಿಯನ್‌ಗೆ ತೆರಳಿದರು. ನಾಯಕ ಪಟಿದಾರ್ ಕೂಡ ಹೆಚ್ಚು ಹೊತ್ತು ನಿಲ್ಲದೆ 16 ಚೆಂಡುಗಳಲ್ಲಿ ಬಂದಷ್ಟು ಸಮಯ ಬ್ಯಾಟ್ ಬೀಸಿ 2 ಸಿಕ್ಸರ್ 1 ಬೌಂಡರಿಯೊಂದಿಗೆ 26 ರನ್ ಗಳಿಸಿ ಜೇಮಿಸನ್ ಬೌಲಿಂಗ್‌ನಲ್ಲಿ ಎಲ್‌ಬಿಗೆ ಔಟಾದರು.
15 ಓವರ್‌ಗಳ ತನಕ ಆಟವಾಡಿದ ಸ್ಟಾರ್ ಅಟಗಾರ ವಿರಾಟ್ ಕೊಹ್ಲಿ ಒಮರ್ಜಾಯಿ ಬೌಲಿಂಗ್‌ನಲ್ಲಿ ಕ್ಯಾಚ್ ನೀಡಿ ಔಟಾದರು. 43 ರನ್‌ಗಳ ಅವರ ಆಟದಲ್ಲಿ 3 ಆಕರ್ಷಕ ಬೌಂಡರಿಗಳಿದ್ದವು.
ಸ್ಫೋಟಕ ಆಟಗಾರ ಲಿಯಾಮ್ ಲಿವಿಂಗ್‌ಸ್ಟೋನ್ 15 ಚೆಂಡುಗಳಲ್ಲಿ 2 ಭರ್ಜರಿ ಸಿಕ್ಸರ್ ಸಿಡಿಸಿ 25 ರನ್ ಬಾರಿಸಿ ಕೈಲ್ ಜೇಮಿಸನ್‌ಗೆ ವಿಕೆಟ್ ಒಪ್ಪಿಸಿದರು.
ಯುವ ಆಟಗಾರ ಜಿತೇಶ್ ಶರ್ಮಾ ಕೂಡ 10 ಚೆಂಡುಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್‌ನೊಂದಿಗೆ 24 ರನ್ ಬಾರಿಸಿ ವೈಶಾಕ್ ಬೌಲಿಂಗ್‌ನಲ್ಲಿ ಬೌಲ್ಡ್ ಆದರು. ಕೊನೆಯಲ್ಲಿ ಬಂದ ಶಫರ್ಡ್ 17 ರನ್ ಗಳಿಸಿ ಔಟ್ ಆದರು.
ಪಂಜಾಬ್ ಪರ ಕೈಲ್ ಜೇಮಿಸನ್ 48/2, ಚಹಾಲ್ 37/1, ವೈಶಾಕ್ 30/1, ಅರ್ಷದೀಪ್ ಸಿಂಗ್ 40/3 ವಿಕೆಟ್ ಕಬಳಿಸಿದರು.
ಎರಡೂ ತಂಡಗಳು ಬಹಳ ಸಮಯದ ನಂತರ ಫೈನಲ್ ತಲುಪಿದ್ದು, ಇಲ್ಲಿಯವರೆಗೆ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲವಾದ್ದರಿಂದ ಈ ಪಂದ್ಯದಲ್ಲಿ ಯಾವ ತಂಡ ಗೆದ್ದರೂ ಅದು ಅವರ ಚೊಚ್ಚಲ ಐಪಿಎಲ್ ಪ್ರಶಸ್ತಿಯಾಗಲಿದೆ.
ಇದು ಬೆಂಗಳೂರಿನ ನಾಲ್ಕನೇ ಐಪಿಎಲ್ ಫೈನಲ್ ಆಗಲಿದೆ. ಇದಕ್ಕೂ ಮೊದಲು ತಂಡವು 3 ಬಾರಿ ಸೋಲನ್ನು ಎದುರಿಸಿದೆ. 2009 ರಲ್ಲಿ ಮೊದಲು ಡೆಕ್ಕನ್ ಚಾರ್ಜರ್ಸ್ ವಿರುದ್ಧ ಸೋಲನುಭವಿಸಿತು. ನಂತರ 2011 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತಿತು. ನಂತರ 2016 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಬೆಂಗಳೂರು ತಂಡವನ್ನು ಕೇವಲ 8 ರನ್‌ಗಳ ಅಂತರದಿಂದ ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಮತ್ತೊಂದೆಡೆ, ಪಂಜಾಬ್ ಕಿಂಗ್ಸ್ ಎರಡನೇ ಬಾರಿಗೆ ಫೈನಲ್ ಆಡುತ್ತಿದೆ. 2014 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಫೈನಲ್ ಆಡಿದ್ದ ಪಂಜಾಬ್‌ಗೆ ಸೋಲು ಎದುರಾಗಿತ್ತು.
ಪಂದ್ಯವಾಡುತ್ತಿರುವ ಉಭಯ ತಂಡಗಳ ಆಟಗಾರರು:
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಮಯಾಂಕ್ ಅಗರ್ವಾಲ್ , ರಜತ್ ಪಾಟೀದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರೊಮಾರಿಯೊ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಲ್, ಜೋಶ್ ಹ್ಯಾಜಲ್‌ವುಡ್.
ಪಂಜಾಬ್ ಕಿಂಗ್ಸ್ : ಪ್ರಭ್‌ಸಿಮ್ರನ್ ಸಿಂಗ್, ಪ್ರಿಯಾಂಶ್ ಆರ್ಯ, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಶ್ರೇಯಸ್ ಐಯರ್ (ನಾಯಕ), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೋಯಿನಿಸ್, ಅಜಮತುಲ್ಲಾ ಒಮರ್‌ಜಾಯ್, ಕೈಲ್ ಜೇಮಿಸನ್, ಅರ್ಶದೀಪ್ ಸಿಂಗ್, ಯುಜ್ವೇಂದ್ರ ಚಹಲ್, ವಿಜಯಕುಮಾರ್ ವೈಶಾಕ್