2024ರ ಲೋಕಸಭಾ ಚುನಾವಣೆಗೆ ಪ್ರತಿಪಕ್ಷಗಳ ಒಗ್ಗಟ್ಟಿನ ತಂತ್ರ ರೂಪಿಸುತ್ತಿವೆ. ಮಂಗಳವಾರ ಬೆಂಗಳೂರಿನಲ್ಲಿ ಪ್ರತಿಪಕ್ಷಗಳ ಸಭೆ ನಡೆಯುತ್ತಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡ ಸಭೆಯಲ್ಲಿ ಭಾಗಿಯಾಗಿದ್ದಾರೆ. ಈ ನಡುವೆ, ನಿತೀಶ್ ಕುಮಾರ್ ಅವರನ್ನು ‘ಅಸ್ಥಿರ ಪ್ರಧಾನಿ ಅಭ್ಯರ್ಥಿ’ ಎಂದು ಅಪಹಾಸ್ಯ ಮಾಡಿ ಕೆಲವು ಪೋಸ್ಟರ್‌ಗಳನ್ನು ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಅಳವಡಿಸಿರುವುದು ಕಂಡುಬಂದಿದೆ.
ನಿತೀಶ್ ಅವರನ್ನು ಅಪಹಾಸ್ಯ ಮಾಡಿರುವ ಪೋಸ್ಟರ್‌ಗಳು ಬೆಂಗಳೂರಿನ ಚಾಲುಕ್ಯ ವೃತ್ತ, ವಿಂಡ್ಸರ್ ಮ್ಯಾನರ್ ಸೇತುವೆ ಮತ್ತು ಹೆಬ್ಬಾಳ ಸಮೀಪದ ಏರ್‌ಪೋರ್ಟ್ ರಸ್ತೆಯಲ್ಲಿ ಕಂಡುಬಂದಿವೆ. ಆದರೆ, ಪೋಸ್ಟರ್‌ಗಳನ್ನು ಯಾರು ಹಾಕಿದ್ದಾರೆ ಎಂಬುದು ತಿಳಿದುಬಂದಿಲ್ಲ. ಪೋಸ್ಟರ್ ಹಾಕಿದವರು ಯಾರು ಎಂಬುದನ್ನು ತಿಳಿಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
‘ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಬೆಂಗಳೂರಿನ ಕೆಂಪು ಕಾರ್ಪೆಟ್ ಹಾಕಿ ಸ್ವಾಗತಿಸುತ್ತಿದೆ. ಅವರು ಅಸ್ಥಿರ ಪ್ರಧಾನಿ ಅಭ್ಯರ್ಥಿ’ ಎಂದು ವ್ಯಂಗ್ಯ ಮಾಡಲಾಗಿದೆ. ಮಾತ್ರವಲ್ಲದೆ, ಬಿಹಾರದ ಸುಲ್ತಾನ್‌ಗಂಜ್ ಸೇತುವೆ ಕುಸಿತದ ಬಗ್ಗೆಯೂ ಪೋಸ್ಟರ್‌ನಲ್ಲಿ ಉಲ್ಲೇಖಿಲಾಗಿದ್ದು, ‘ಸೇತುವೆ ಕುಸಿತದ ಮೊದಲ ದಿನಾಂಕ – ಏಪ್ರಿಲ್ 2022, ಸೇತುವೆ ಕುಸಿತದ ಎರಡನೇ ದಿನಾಂಕ – ಜೂನ್ 2023. ಬಿಹಾರಕ್ಕೆ ಕುಸಿದು ಬೀಳುವ ಕೊಡುಗೆ’ ಎಂದು ಬರೆಯಲಾಗಿದೆ.
“ಬಿಹಾರದ ಸೇತುವೆಗಳಿಗೆ ನಿತೀಶ್ ಅವರ ಆಳ್ವಿಕೆಯನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೂ, ಪ್ರತಿಪಕ್ಷಗಳ ಏಕತೆಯನ್ನು ಮುನ್ನಡೆಸಲು ಅವರಿಗೆ ಜವಬ್ದಾರಿ ನೀಡಲಾಗಿದೆ” ಎಂದೂ ಪೋಸ್ಟರ್‌ಗಳಲ್ಲಿ ಲೇವಡಿ ಮಾಡಲಾಗಿದೆ.
1,700 ಕೋಟಿ ರೂ.ಗಳ ಮಹತ್ವಾಕಾಂಕ್ಷೆಯ ಆಗುವನಿ-ಸುಲ್ತಂಗಂಜ್ ಗಂಗಾ ಸೇತುವೆಯು ನಿರ್ಮಾಣದ ಹಂತದಲ್ಲಿದೆ. ಕಾಮಗಾರಿ ನಡೆಯುತ್ತಿರುವಾಗಲೇ 14 ತಿಂಗಳ ಅವಧಿಯಲ್ಲಿ ಎರಡು ಬಾರಿ ಕುಸಿದು ಬಿದ್ದಿದೆ. 2014ರಲ್ಲಿ ಆಗಲೂ ಮುಖ್ಯಮಂತ್ರಿಯಾಗಿದ್ದ ನಿತೀಶ್ ಕುಮಾರ್ ಅವರು ಚತುಷ್ಪತ ರಸ್ತೆಯುಳ್ಳ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಕಾಮಗಾರಿ ಆರಂಭವಾಗಿತ್ತು. 2022ರ ಏಪ್ರಿಲ್‌ನಲ್ಲಿ ಗುಡುಗು ಸಹಿತ ಮಳೆ ಸುರಿದ ಸಮಯದಲ್ಲಿ ಸೇತುವೆಯ ಕೆಲವು ಪಿಲ್ಲರ್‌ಗಳು ಕುಸಿದು ಬಿದ್ದಿದ್ದವು. ಇದೀಗ 14 ತಿಂಗಳುಗಳ ಬಳಿ ಕಳೆದ ತಿಂಗಳು (ಜೂನ್ )14ರಂದು ಮತ್ತೊಮ್ಮೆ ಸೇತುವೆ ಕುಸಿದು ಬಿದ್ದಿದೆ.
ಈ ಸುದ್ದಿ ಓದಿದ್ದೀರಾ?: ಬೆಂಗಳೂರು ಮಹಾ ಮೈತ್ರಿಕೂಟ ಸಭೆ | ಕಾಂಗ್ರೆಸ್‌ಗೆ ಉತ್ತರ ಹತ್ತಿರ; ದೂರವಾಯಿತೇಕೆ ದಕ್ಷಿಣ?
ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲೇಬೇಕೆಂದು ಪ್ರತಿ ಪಕ್ಷಗಳು ನಿರ್ಧರಿಸಿವೆ. ಅದಕ್ಕಾಗಿ ಸಭೆಗಳನ್ನು ನಡೆಸುತ್ತಲೇ ಇವೆ. ಜೂನ್ 23ರಂದು ಬಿಹಾರದ ಪಾಟ್ನಾದಲ್ಲಿ ಮೊದಲ ಸುತ್ತಿನ ಸಭೆ ನಡೆದಿತ್ತು. ಇದೀಗ, ಎರಡನೇ ಸುತ್ತಿನ ಸಭೆ ಬೆಂಗಳೂರಿನಲ್ಲಿ ಮಂಗಳವಾರ ನಡೆಯುತ್ತಿದೆ.
ಸಭೆಯಲ್ಲಿ ಕಾಂಗ್ರೆಸ್, ಸಂಯುಕ್ತ ಜನತಾದಳ (ಜೆಡಿಯು), ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ), ಕೊಂಗು ದೇಸ ಮಕ್ಕಳ್ ಕಚ್ಚಿ (ಕೆಡಿಎಂಕೆ), ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ), ಕ್ರಾಂತಿಕಾರಿ ಸಮಾಜವಾದಿ ಪಕ್ಷ (ಆರ್‌ಎಸ್‌ಪಿ), ತೃಣಮೂಲ ಕಾಂಗ್ರೆಸ್ (ಟಿಎಂಸಿ), ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ), ಆಮ್ ಆದ್ಮಿ ಪಕ್ಷ (ಎಎಪಿ), ಎಡಪಕ್ಷಗಳು ಸೇರಿದಂತೆ ಹಲವಾರು ಪಕ್ಷಗಳ ನಾಯಕರು ಭಾಗಿಯಾಗಿದ್ದಾರೆ.