ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈ ವರ್ಷ ಆಸ್ತಿ ತೆರಿಗೆ ಸಂಗ್ರಹದ ಮೂಲಕ ತನ್ನ ಆದಾಯವನ್ನು ಶೇ.50 ರಷ್ಟು ಹೆಚ್ಚಿಸುವ ಗುರಿಯನ್ನು ನಿಗದಿಪಡಿಸಿದೆ.
ಪಾಲಿಕೆಯು 2022-23ರಲ್ಲಿ ಆಸ್ತಿ ತೆರಿಗೆಯಿಂದ ₹2,300 ಕೋಟಿ ಸಂಗ್ರಹಿಸಿದ್ದರೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ₹4,600 ಕೋಟಿ ಸಂಗ್ರಹಿಸಲು ಗುರಿ ನಿಗದಿಪಡಿಸಿದೆ.
“ನಾವು ಪ್ರತಿ ವಲಯಕ್ಕೆ ಸಾಪ್ತಾಹಿಕ ಗುರಿ ಹೊಂದಿದ್ದೇವೆ. ಪ್ರತಿ ವಾರ ತೆರಿಗೆ ಸಂಗ್ರಹದ ಪ್ರಗತಿಯನ್ನು ಪರಿಶೀಲಿಸುತ್ತಿದ್ದೇವೆ. ಗುರಿ ಮುಟ್ಟಲು ವಿಫಲರಾದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ” ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
“’ಬಿ’ ಖಾತಾ ಆಸ್ತಿಗಳನ್ನು ‘ಎ’ ಖಾತಾಗೆ ಅಕ್ರಮವಾಗಿ ಪರಿವರ್ತಿಸುವುದರ ವಿರುದ್ಧವೂ ಪಾಲಿಕೆ ಕಠಿಣ ಕ್ರಮ ಕೈಗೊಳ್ಳಲಿದೆ. ನಮ್ಮ ಅಧಿಕಾರಿಗಳು ಖಾತಾಗಳ ಮೇಲಾಗುವ ಪರಿವರ್ತನೆಗಳನ್ನು ಪರಿಶೀಲಿಸುತ್ತಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾರೆ” ಎಂದು ಅವರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪಾದಚಾರಿ ಮೇಲೆ ಹರಿದ ಬಿಬಿಎಂಪಿ ಕಸದ ಲಾರಿ; ಮಹಿಳೆಯ ಸ್ಥಿತಿ ಗಂಭೀರ
“ಮುಂಗಾರು ಪೂರ್ವ ಸಿದ್ಧತೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಮಳೆನೀರು ಸರಾಗವಾಗಿ ಹರಿದು ಹೋಗುವಂತೆ ನೋಡಿಕೊಳ್ಳುತ್ತಿದ್ದಾರೆ. ಮಳೆ ನೀರು ಹರಿದು ಹೋಗಲಾಗದ 198 ದುರ್ಬಲ ಸ್ಥಳಗಳನ್ನು ಬೆಂಗಳೂರು ಟ್ರಾಫಿಕ್ ಪೊಲೀಸ್ ಗುರುತಿಸಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ಸಹ 226 ಪ್ರದೇಶಗಳನ್ನು ಪಟ್ಟಿ ಮಾಡಿದೆ. ಈ ಎಲ್ಲ ಪ್ರದೇಶಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯುವಂತೆ ಕ್ರಮಕೈಗೊಂಡಿದ್ದೇವೆ” ಎಂದು ಹೇಳಿದರು.
ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ನಿರ್ದೇಶನದಂತೆ ಅಧಿಕಾರಿಗಳು 100 ದಿನಗಳ ಕ್ರಿಯಾ ಯೋಜನೆಯನ್ನು ರೂಪಿಸುತ್ತಿದ್ದಾರೆ. ತ್ಯಾಜ್ಯ ನಿರ್ವಹಣೆ ಮತ್ತು ಫುಟ್ಪಾತ್ ದುರಸ್ತಿಯಂತಹ ಕೆಲವು ಅಂಶಗಳನ್ನು ಡಿಸಿಎಂ ಸೂಚಿಸಿದ್ದಾರೆ ಎಂದು ಗಿರಿನಾಥ್ ಹೇಳಿದರು.