ನಕಲಿ ಹಾಗೂ ಕಳಪೆ ಬೀಜ, ರಸಗೊಬ್ಬರ, ಕ್ರಿಮಿನಾಶಕ ಕಾಳಸಂತೆಯಲ್ಲಿ ಮಾರಾಟ ದಂಧೆ ಕುರಿತು ಗಮನ ಸೆಳೆದ ಕಾರಣಕ್ಕೆ ರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಚನ್ನಪ್ಪ ಆನೇಗುಂದಿ ಅವರ ಮೇಲೆ ಕೃಷಿ ಪರಿಕರಗಳ ಮಾರಾಟಗಾರರು ಸುಳ್ಳು ದೂರು ನೀಡಿದ್ದಾರೆ.
ರೈತರಿಗೆ ರಸೀದಿ ನೀಡದೇ ಕೃಷಿ ಪರಿಕರಗಳ ಖರೀದಿಗೆ ಒತ್ತಾಯಿಸುವುದು, ದಾಸ್ತಾನು ಪಟ್ಟಿ, ದರ ಪಟ್ಟಿ ಪ್ರಕಟಿಸದೇ ಕಾಳಸಂತೆ ದರದಲ್ಲಿ ಮಾರಾಟ ಮಾಡುವುದು, ರೈತರು ಕೇಳಿದ ಬೀಜ ,ಕ್ರಿಮಿನಾಶಕ ಹಾಗೂ ಗೊಬ್ಬರ ನೀಡದೇ ಕಳಪೆ ಹಾಗೂ ನಕಲಿ ಬ್ರಾಂಡ್ ವಿರುದ್ಧ ಯಾದಗಿರಿ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರಿಗೆ ಆಗ್ರಹಿಸಿದ್ದರು.
ಇದನ್ನು ನ್ಯಾಯೋಚಿತವಾಗಿ ಪರಿಶೀಲಿಸದೇ ಮಾರಾಟಗಾರರ ಸಂಘ ಚನ್ನಪ್ಪ ಅವರ ವಿರುದ್ಧ ದೂರು ದಾಖಲಿಸಿರುವುದನ್ನು ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಸಮಿತಿ ಅಧ್ಯಕ್ಷ ಯು.ಬಸವರಾಜ, ಪ್ರಧಾನ ಕಾರ್ಯದರ್ಶಿ ಟಿ. ಯಶವಂತ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಚನ್ನಪ್ಪ ಆನೇಗುಂದಿ ಅವರ ಆರೋಪದಿಂದ ನಮಗೆ ಅವಮಾನ ಆಗಿದೆ ಎಂದು ಸುಮಾರು 400ಕ್ಕೂ ಹೆಚ್ಚು ಕೃಷಿ ಪರಿಕರಗಳ ಮಾರಾಟಗಾರರು ಮೆರವಣಿಗೆ ಮುಖಾಂತರ ಭೀಮರಾಯಗುಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಜಿಲ್ಲಾ ಪಂಚಾಯತ್ ಸಿಇಓ, ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಮುಂತಾದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲೇ ಉಸ್ತುವಾರಿ ಸಚಿವರಿಗೆ ಆಹವಾಲು ಹೇಳಿಕೊಳ್ಳುವಾಗ ಸುಮ್ಮನಿದ್ದ ಕೃಷಿ ಪರಿಕರಗಳ ಮಾರಾಟಗಾರರು ಅವರೆಲ್ಲರೂ ಕಾರ್ಯಕ್ರಮ ಮುಗಿಸಿ ತೆರಳಿದ ನಂತರ ಕೃಷಿ ಪರಿಕರಗಳ ಮಾರಾಟ ಸಂಘದ ರಾಜ್ಯಾಧ್ಯಕ್ಷ ಬಸನಗೌಡ ಮಾಲಿಪಾಟೀಲ್ ಹಾಗೂ ಅಶೋಕರೆಡ್ಡಿ ಲಿಂಗದಾಳ ಅವರ ನೇತೃತ್ವದಲ್ಲಿ ದೂರು ಹೇಳಿದ್ದಕ್ಕಾಗಿ ಅವಾಚ್ಯವಾಗಿ ನಿಂದಿಸಿ, ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಇಂತಹ ಬೆದರಿಕೆಗಳಿಂದ ರೈತ ಹೋರಾಟವನ್ನು ಬಗ್ಗು ಬಡಿಯಲು ಸಾಧ್ಯವಿಲ್ಲ. ನಕಲಿ ಹಾಗೂ ಕಳಪೆ ಕೃಷಿ ಪರಿಕರಗಳ ಮಾರಾಟ ಮತ್ತು ಕಾಳಸಂತೆ ಮಾರಾಟದ ವಿರುದ್ಧ ರೈತ ಹೋರಾಟ ನಿಲ್ಲಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಕೆಪಿಆರ್‌ಎಸ್ ಕರ್ನಾಟಕ ರಾಜ್ಯ ಸಮಿತಿ ತಿಳಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಧೈರ್ಯವಾಗಿ ದೂರು ಹೇಳಿದ್ದಕ್ಕೆ ನಿಂದನೆ, ಬೆದರಿಕೆ, ದೌರ್ಜನ್ಯ ಎಸಗಿದ ಬಸನಗೌಡ ಮಾಲಿಪಾಟೀಲ್, ಅಶೋಕ ರೆಡ್ಡಿ ಲಿಂಗದಾಳ ಮುಂತಾದವರ ಮೇಲೆ ಶಹಾಪುರ ತಾಲ್ಲೂಕು ಅಧ್ಯಕ್ಷ ಭೀಮಣ್ಣ ಪಟ್ಟೆದಾರ್ ನೀಡಿದ್ದ ದೂರನ್ನು ದಾಖಲಿಸಿಕೊಳ್ಳದೇ ತಿರಸ್ಕರಿಸಿ ದೂರು ಅರ್ಜಿಯ ಮೇಲೆ ತಿರಸ್ಕರಿಸಲಾಗಿದೆ ಎಂದು ಸಹಿ ಮತ್ತು ಶೀಲು ಹಾಕಿದ್ದಾರೆ. ಮಾರಾಟಗಾರರು ನೀಡಿದ ದೂರನ್ನು ದಾಖಲಿಸಿ ರೈತರು ನೀಡಿದ ದೂರನ್ನು ತಿರಸ್ಕರಿಸಿರುವುದು ಪೊಲೀಸರ ಪಕ್ಷಪಾತವನ್ನು ತೋರುತ್ತದೆ ಎಂದು ದೂರಿದರು.
ಈ ಸುದ್ದಿ ಓದಿದ್ದೀರಾ: ಕಾರ್ಮಿಕರ ಸ್ಥಿತಿ: ಎಲ್ಲಿಂದ ಎಲ್ಲಿಗೆ? (ಭಾಗ- 1)
ಕೂಡಲೇ ರೈತರು ನೀಡಿರುವ ದೂರನ್ನು ದಾಖಲಿಸಿ ನಿಂದನೆ, ಬೆದರಿಕೆ ದೌರ್ಜನ್ಯ ಎಸಗಿರುವ ಗುಂಪು ಹಲ್ಲೆಗೆ ಪ್ರಚೋದಿಸಿರುವ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ರಾಜ್ಯಾಧ್ಯಕ್ಷ ಮತ್ತಿತರರನ್ನು ಬಂಧಿಸಬೇಕು. ಕೂಡಲೇ ನಕಲಿ, ಕಳಪೆ ಬೀಜ, ಗೊಬ್ಬರ, ದಾಖಲಾಗಿರುವ ಸುಳ್ಳು ದೂರನ್ನು ರದ್ದುಪಡಿಸಿ ಅನ್ಯಾಯ, ಅಕ್ರಮದ ವಿರುದ್ಧ ,ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ರೈತ ನಾಯಕರಿಗೆ ಸೂಕ್ತ ರಕ್ಷಣೆ ನೀಡಬೇಕು. ಇಲ್ಲವಾದರೆ ಬೃಹತ್ ಪ್ರತಿಭಟನೆ ಎದುರಿಸಬೇಕಾಗುತ್ತದೆ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.