ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಒಂದಾಗಿ ಹೋರಾಡಲು ವಿರೋಧ ಪಕ್ಷಗಳು ಸಿದ್ಧತೆ ನಡೆಸಿದ್ದು, ಆ ಭಾಗವಾಗಿ ಬೆಂಗಳೂರಿನಲ್ಲಿ ಪ್ರತಿಪಕ್ಷಗಳ ಎರಡನೆಯ ಸಭೆ ನಡೆಯುತ್ತಿದೆ.
ವಿರೋಧ ಪಕ್ಷಗಳ ಸಭೆಯ ಉಸ್ತುವಾರಿಯನ್ನು ರಾಜ್ಯ ಕಾಂಗ್ರೆಸ್ ವಹಿಸಿದ್ದು 24 ಪ್ರತಿಪಕ್ಷಗಳ ನಾಯಕರು ಈ ಸಭೆಗೆ ಆಗಮಿಸಿದ್ದಾರೆ. ಕೆಲವು ರಾಜ್ಯಗಳ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರು ಹಾಗೂ ಆಯಾ ಪಕ್ಷದ ಪ್ರಮುಖ ನಾಯಕರು ಸಭೆಯಲ್ಲಿದ್ದಾರೆ.
ಬೆಂಗಳೂರಿಗೆ ಆಗಮಿಸಿದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರದ ಮಾಜಿ ಸಚಿವರಿಗೆ ಶಿಷ್ಟಾಚಾರ ಪ್ರಕಾರ ಆ ಎಲ್ಲ ಗಣ್ಯರ ಸ್ವಾಗತಕ್ಕೆ ಐಎಎಸ್ ಅಧಿಕಾರಿಗಳನ್ನು ನಿಯೋಜಿಸಿರುವ ಬಗ್ಗೆ ಕುಮಾರಸ್ವಾಮಿ ಕ್ಯಾತೆ ತೆಗೆದು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಕೂಡ ತಿರುಗೇಟು ನೀಡಿದ್ದಾರೆ.
“ಬೆಂಗಳೂರಿಗೆ ಆಗಮಿಸಿದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರದ ಮಾಜಿ ಸಚಿವರುಗಳನ್ನು ರಾಜ್ಯ ಅತಿಥಿಗಳೆಂದು ಪರಿಗಣಿಸಲಾಗಿತ್ತು. ಶಿಷ್ಟಾಚಾರದ ಪ್ರಕಾರ ಆ ಎಲ್ಲ ಗಣ್ಯರ ಸ್ವಾಗತಕ್ಕೆ ಮಾತ್ರ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಇದರ ಹೊರತಾಗಿ ಈ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಯಾವ ಪಾತ್ರವೂ ಇಲ್ಲ. ಈ ರೀತಿಯ ಶಿಷ್ಟಾಚಾರದ ಪಾಲನೆ ಹಿಂದಿನ ಎಲ್ಲ ಸರ್ಕಾರದ ಕಾಲದಲ್ಲಿಯೂ ನಡೆದಿತ್ತು” ಎಂದು ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಅವರಿಗೆ ಟ್ವೀಟ್ ಮೂಲಕವೇ ಪ್ರತಿಕ್ರಿಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಹಾಘಟಬಂಧನ್ | ಕಾಂಗ್ರೆಸ್ ಸರ್ಕಾರದಿಂದ ರಾಜ್ಯದಲ್ಲಿ ‘ಐಎಎಸ್ ಜೀತ ಪದ್ಧತಿ’ ಜಾರಿ: ಕುಮಾರಸ್ವಾಮಿ ಆರೋಪ
“ಬಿಜೆಪಿಯೇತರ ಪಕ್ಷಗಳ ಮಹಾ ಮೈತ್ರಿಕೂಟದ ಸಭೆಯಲ್ಲಿ ಭಾಗವಹಿಸಲು ಹೊರ ರಾಜ್ಯಗಳಿಂದ ಬಂದ ರಾಜಕಾರಣಿಗಳ ಆತಿಥ್ಯಕ್ಕೆ ರಾಜ್ಯ ಸರ್ಕಾರ ಐಎಎಸ್ ಅಧಿಕಾರಿಗಳನ್ನು ಕಳುಹಿಸದೆ ಮತ್ಯಾರನ್ನು ಕಳುಹಿಸಬೇಕು? ಕುಮಾರಸ್ವಾಮಿಗೆ ಮಾತನಾಡಲು ವಿಷಯ ಇಲ್ಲವೆಂದು ಕಾಣುತ್ತದೆ. ಸುದ್ದಿಯಲ್ಲಿರಬೇಕು ಎನ್ನುವ ಹಪಾಹಪಿ ಅವರಿಗಿದೆ. ಐಎಎಸ್ ಅಧಿಕಾರಿಗಳನ್ನು ಹಿರಿಯ ನಾಯಕರಿಗೆ ಶಿಷ್ಟಾಚಾರ ಪ್ರಕಾರ ನೇಮಿಸಲಾಗಿದೆ. ಈ ಪದ್ಧತಿ ಈ ಹಿಂದಿನಿಂದಲೂ ನಡೆದುಕೊಂಡು ಬಂದಿದೆ” ಎಂದು ಡಿಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಕುಮಾರಸ್ವಾಮಿ ಹೇಳಿದ್ದೇನು?
“ಬಂಡವಾಳಶಾಹಿ ವ್ಯವಸ್ಥೆಯಲ್ಲಿ ನಂಬಿಕೆ ಹೊಂದಿರುವ ಕಾಂಗ್ರೆಸ್ ಪಕ್ಷ, ರಾಜ್ಯದಲ್ಲಿ ‘ಐಎಎಸ್ ಜೀತ ಪದ್ಧತಿ’ಯನ್ನು ಜಾರಿಗೆ ತರುವ ಮೂಲಕ ಹೊಸ ನಮೂನೆಯ ‘ರಾಜಕೀಯ, ಆಡಳಿತ ವಸಾಹತುಶಾಹಿ’ಯನ್ನು ದೇಶಕ್ಕೆ ಪರಿಚಯ ಮಾಡಿದೆ. ಹೌದು; ಕಾಂಗ್ರೆಸ್ ಯಾವಾಗಲೂ ಕುಖ್ಯಾತಿಗಳಿಗೇ ಕುಖ್ಯಾತಿ. ಅಂಥ ಅಪಾಯಕಾರಿ ಹಸ್ತವಾಸಿಯೇ ಕೈ ಪಕ್ಷದ ಆಸ್ತಿ” ಎಂದು ಟೀಕಿಸಿದ್ದರು.