ಆರ್‌ಸಿಬಿ 18 ವರ್ಷಗಳ ನಂತರ ಐಪಿಎಲ್ ಟ್ರೋಫಿ ಗೆದ್ದಿದೆ. ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ತಂಡದ ಮಾಜಿ ಮಾಲೀಕ, ದೇಶಕ್ಕೆ ವಂಚಿಸಿ ಇಂಗ್ಲೆಂಡ್‌ನಲ್ಲಿ ತಲೆ ಮರೆಸಿಕೊಂಡಿರುವ ವಿಜಯ್ ಮಲ್ಯ ಹಾಗೂ ಆತನ ಪುತ್ರ ಸಿದ್ಧಾರ್ಥ್ ಮಲ್ಯ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಮಾಜಿ ಆರ್‌ಸಿಬಿ ಮಾಲೀಕ ವಿಜಯ್ ಮಲ್ಯ ಅವರ ಪುತ್ರ ಸಿದ್ಧಾರ್ಥ್ ಮಲ್ಯ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಮ್ಮ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಗೆದ್ದಾಗ ಕಣ್ಣೀರು ಹಾಕಿ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋ ಜೊತೆಗೆ ಸಂದೇಶ ಹಂಚಿಕೊಂಡಿರುವ ಸಿದ್ಧಾರ್ಥ್ ಮಲ್ಯ ಹದಿನೆಂಟು ದೀರ್ಘ ವರ್ಷಗಳು… ನನಗೆ ಏನು ಹೇಳಬೇಕೆಂದು ಸಹ ತಿಳಿದಿಲ್ಲ,” ಅವರು ಕಣ್ಣೀರು ಹಾಕಿದ್ದಾರೆ.
ಆರ್‌ಸಿಬಿ ಗೆದ್ದ ನಂತರ ವಿಜಯ್ ಮಲ್ಯ ಕೂಡ ಟ್ವೀಟ್ ಮಾಡಿದ್ದಾರೆ. ‘ನಾನು ಆರ್‌ಸಿಬಿಯನ್ನು ಸ್ಥಾಪಿಸಿದಾಗ ಬೆಂಗಳೂರಿಗೆ ಐಪಿಎಲ್ ಟ್ರೋಫಿ ಬರಬೇಕು ಎಂಬುದು ನನ್ನ ಕನಸಾಗಿತ್ತು. ಯುವಕನಾಗಿದ್ದಾಗ ದಂತಕಥೆಯ ಕಿಂಗ್ ಕೊಹ್ಲಿಯನ್ನು ಆಯ್ಕೆ ಮಾಡುವ ಸೌಭಾಗ್ಯ ನನಗಿತ್ತು. ಅವರು 18 ವರ್ಷಗಳ ಕಾಲ ಆರ್‌ಸಿಬಿ ಜೊತೆಗೆ ಇದ್ದಾರೆ ಎಂಬುದು ಗಮನಾರ್ಹ. ಆರ್‌ಸಿಬಿ ಇತಿಹಾಸದ ಅಳಿಸಲಾಗದ ಭಾಗವಾಗಿ ಉಳಿದಿರುವ ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್ ಅವರನ್ನು ಆಯ್ಕೆ ಮಾಡುವ ಗೌರವವೂ ನನಗಿತ್ತು. ಅಂತಿಮವಾಗಿ, ಐಪಿಎಲ್ ಟ್ರೋಫಿ ಬೆಂಗಳೂರಿಗೆ ಆಗಮಿಸುತ್ತದೆ. ನನ್ನ ಕನಸನ್ನು ನನಸಾಗಿಸಿದ ಎಲ್ಲರಿಗೂ ಅಭಿನಂದನೆಗಳು” ಎಂದು ತಿಳಿಸಿದ್ದಾರೆ
ವಿಜಯ್ ಮಲ್ಯ ತಂಡ ಖರೀದಿಸಿದಾಗ ಸಿದ್ಧಾರ್ಥ್ ತಂಡದೊಂದಿಗೆ ಔಪಚಾರಿಕವಾಗಿ ಸಂಬಂಧ ಹೊಂದಿಲ್ಲದಿದ್ದರೂ, ಮೈದಾನದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದರು. ಕೆಲವು ಬಾರಿ ವಿವಾದಕ್ಕೂ ಕಾರಣವಾಗಿದ್ದರು. ಫ್ರಾಂಚೈಸಿಯ ಆರಂಭಿಕ ವರ್ಷಗಳಲ್ಲಿ, ಅವರು ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ತಂಡದ ಬ್ರ್ಯಾಂಡಿಂಗ್‌ನಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ತಂಡದ ಡಿಜಿಟಲ್ ವಿಭಾಗಗಳನ್ನು ಸಹ ಮುನ್ನಡೆಸಿದ್ದರು.
ಇದನ್ನು ಓದಿದ್ದೀರಾ? ಐಪಿಎಲ್ ಫೈನಲ್‌ಗಿಂತ ಹೆಚ್ಚಾದ ಆರ್‌ಸಿಬಿ ಜ್ವರ, ಏನಿದು ವಿದ್ಯಮಾನ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಲೀಕತ್ವವು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಎಂಬ ಕಂಪನಿಗೆ ಸೇರಿದೆ. ಈ ಕಂಪನಿ ಬ್ರಿಟಿಷ್ ಮೂಲದ ಡಿಯಾಜಿಯೋ ಎಂಬ ಅಂತಾರಾಷ್ಟ್ರೀಯ ಮದ್ಯ ಉತ್ಪಾದನಾ ಸಂಸ್ಥೆಯ ಸಹಸಂಸ್ಥೆಯಾಗಿದೆ.
ಆರ್‌ಸಿಬಿ ಆರಂಭದಲ್ಲಿ ಯುನೈಟೆಡ್ ಸ್ಪಿರಿಟ್ಸ್ ಒಡೆತನದಲ್ಲಿತ್ತು, ಅದು ಆಗ ವಿಜಯ್ ಮಲ್ಯ ಅವರ ನಿಯಂತ್ರಣದಲ್ಲಿತ್ತು. ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (ಯುಎಸ್‌ಎಲ್), ಇದು ಬ್ರಿಟಿಷ್ ಬಹುರಾಷ್ಟ್ರೀಯ ಪಾನೀಯ ಕಂಪನಿಯಾದ ‘ಡಿಯಾಜಿಯೊ’ ದ ಅಂಗಸಂಸ್ಥೆಯಾಗಿದೆ. 2008ರಲ್ಲಿ, ಆರ್‌ಸಿಬಿಯನ್ನು ವಿಜಯ್ ಮಲ್ಯ ಅವರು ತಮ್ಮ ಯುನೈಟೆಡ್ ಬ್ರೂವರೀಸ್ ಗ್ರೂಪ್‌ನ ಮೂಲಕ 111.6 ಮಿಲಿಯನ್ ಡಾಲರ್‌ಗೆ(937.44 ಕೋಟಿ ರೂಪಾಯಿ) ಖರೀದಿಸಿದರು. ವಿರಾಟ್ ಕೊಹ್ಲಿ, ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್‌ರಂತಹ ಆಟಗಾರರನ್ನು ಒಳಗೊಂಡ ಕಾರಣ ಆರ್‌ಸಿಬಿ ಹೆಚ್ಚು ಖ್ಯಾತಿಗಳಿಸಿತು.
2016ರಲ್ಲಿ ವಿಜಯ್ ಮಲ್ಯ ಬ್ಯಾಂಕ್‌ಗಳಿಗೆ ವಂಚಿಸಿ ದೇಶ ತೊರೆದಾಗ ಆರ್‌ಸಿಬಿಯ ಮಾಲೀಕತ್ವ ಯುಎಸ್‌ಎಲ್ ಕಂಪನಿಯ ಪಾಲಾಯಿತು. ಪ್ರಸ್ತುತ, ಆರ್‌ಸಿಬಿಯನ್ನು ಯುಎಸ್‌ಎಲ್‌ನ ಮೂಲಕ ಡಿಯಾಜಿಯೊ ಸಂಸ್ಥೆ ನಿರ್ವಹಿಸುತ್ತದೆ. ಪ್ರಥಮೇಶ್ ಮಿಶ್ರಾ ಅವರು ಆರ್‌ಸಿಬಿಯ ಚೇರ್ಮನ್ ಮತ್ತು ಡಿಯಾಜಿಯೊ ಇಂಡಿಯಾದ ಮುಖ್ಯ ವಾಣಿಜ್ಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.