ದೇವದುರ್ಗ ಪಟ್ಟಣದಲ್ಲಿರುವ ಬಾಲಕಿಯರ ಸರ್ಕಾರಿ ಪ್ರೌಢಶಾಲೆಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು ಹಾಗೂ ತಾಲೂಕಿನ ಗುಂಟ್ರಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಮೇಲ್ಚಾವಣಿ ಬೀಳುವ ಹಂತದಲ್ಲಿದೆ. ಅದನ್ನು ದುರಸ್ತಿ ಮಾಡಿಸಬೇಕು ಎಂದು ಆಗ್ರಹಿಸಿ ಅಂಬೇಡ್ಕರ್ ಸ್ವಾಭಿಮಾನ ಸೇನೆ (ಎಎಸ್‌ಎಸ್) ಕಾರ್ಯಕರ್ತರು ಆಗ್ರಹಿಸಿದ್ದಾರೆ.
ರಾಯಚೂರು ಜಿಲ್ಲೆಯ ದೇವದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸಂಘಟನೆಯ ಕಾರ್ಯಕರ್ತರು ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. “ಬಾಲಕಿಯರ ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಊಟದ ನಂತರ ಮಕ್ಕಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ನಲ್ಲಿಯಲ್ಲಿ ಬರುವ ನೀರು ಉಪ್ಪಾಗಿದ್ದು, ಆ ನೀರನ್ನು ಕುಡಿದು ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇದೆ. ಶಾಲೆಗೆ ನೀರು ಫಿಲ್ಟರ್ ಮಶಿನ್ ಅಳವಡಿಸಬೇಕು,” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
“ಗುಂಟ್ರಾಳದ ಸರ್ಕಾರಿ ಶಾಲೆಯ ಮೇಲ್ಚವಾಣಿ ಬೀಳುವ ಸ್ಥಿತಿಯಲ್ಲಿದೆ. ಅದನ್ನು ದುರಸ್ತಿ ಮಾಡಿಸಬೇಕು. ಈ ಬಗ್ಗೆ ಈಗಾಗಲೇ ನಾಲ್ಕು ಬಾರಿ ಮನವಿ ಸಲ್ಲಿಸಿದ್ದರೂ, ಕ್ರಮ ಕೈಗೊಂಡಿಲ್ಲ,” ಎಂದು ಕಿಡಿಕಾರಿದರು.
ಕೂಡಲೇ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲವಾದಲ್ಲಿ, ಎರಡೂ ಶಾಲೆಗಳ ವಿದ್ಯಾರ್ಥಿಗಳೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ, ಹೋರಾಟ ನಡೆಸಲಾಗುತ್ತದೆ ಎಂದು ಎಎಸ್‌ಎಸ್ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.
ಹಕ್ಕೊತ್ತಾಯ ಸಲ್ಲಿಸುವ ವೇಳೆ, ಸಂಘಟನೆಯ ಮಲ್ಲಪ್ಪ ಗೌಡೂರು, ಬಸವರಾಜ ಜಾಲಹಳ್ಳಿ, ಬಾಳಪ್ಪ ಭಾವಿಮನಿ, ಅಮಾತೆಪ್ಪ ಜೋಳದಹೆಡ್ಗಿ, ಭೀಮಶಪ್ಪ ಗುಂಟ್ರಾಳ, ದುರುಗಪ್ಪ ಸಮುದ್ರ, ಯಲ್ಲಪ್ಪ ಕರಿಗುಡ್ಡ ಇದ್ದರು.