ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ದಡ್ಡಿ ಗ್ರಾಮ ಪಂಚಾಯಿತಿಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಬುಧವಾರ ಭೇಟಿ ನೀಡಿ, ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.
ಗ್ರಾಪಂನ 15ನೇ ಹಣಕಾಸು ಅನುದಾನ, ನರೇಗಾ ಯೋಜನೆಯಡಿ ಕೈಗೆತ್ತಿಕೊಂಡ ಕಾಮಗಾರಿಗಳ ಕುರಿತು ಪಂಚಾಯಿತಿ ಸಿಬ್ಬಂದಿಗಳಿಂದ ಮಾಹಿತಿ ಪಡೆದು, ನಿಗದಿತ ಕಾಲಾವಧಿಯಲ್ಲಿ ಗುಣಮಟ್ಟದೊಂದಿಗೆ ಪೂರ್ಣಗೊಳಿಸಲು ಸೂಚಿಸಿದರು.
ಬಳಿಕ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಕರ್ನಾಟಕದ ಗಡಿ ಭಾಗದ ದಡ್ಡಿ ಬಳಿಯ ಘಟಪ್ರಭಾ ನದಿಗೆ ಅಡ್ಡಲಾಗಿ ಇರುವ ಕಿರಿದಾದ ಸೇತುವೆಯನ್ನು ಮೇಲ್ದರ್ಜೆಗೇರಿಸಲು ಕ್ರಮ ವಹಿಸಲಾಗಿದೆ. ಪಂಚಾಯಿತಿ ವ್ಯಾಪ್ತಿಯ ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿ-ಶಾಲೆ ಕಟ್ಟಡಗಳನ್ನು ಪುನರ್ ನಿರ್ಮಿಸಲಾಗುವುದು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀ ನಾಯಕ ಅಧ್ಯಕ್ಷತೆ ವಹಿಸಿದ್ದರು. ಸಚಿವರ ಆಪ್ತ ಸಹಾಯಕ ದಯಾನಂದ ಪಾಟೀಲ, ಸದಸ್ಯರಾದ ನೀಲಕಂಠ ಮಠಪತಿ, ರಾಜು ಗಡ್ಕರಿ ನಸೀಮಾ ಬುಡ್ಡನವರ, ಪಿತಾಂಬರ್ ಇಂಗವಲೆ, ಮುಖಂಡರಾದ ಮಂಜು ಕಾಂಬಳೆ, ವಿಶ್ವನಾಥ ಪಾಟೀಲ, ಸಂದೀಪ ಮಾನೆ, ಕಾರ್ಯದರ್ಶಿ ಯಾಸೀನ್ ಅರಳಿ, ಗ್ರಾಪಂ ಸಿಬ್ಬಂದಿಗಳಾದ ಬಸವರಾಜ ಜಾಂಬೋಟಿ, ಸಂತೋಷ ಹೊಳೆಪ್ಪಗೋಳ, ನರೇಗಾ ಸಿಬ್ಬಂದಿ ಬಸವರಾಜ ಕಟ್ಟಿ ಮತ್ತಿತರರು ಉಪಸ್ಥಿತರಿದ್ದರು.