ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿರುವ ಕಾಲ್ತುಳಿತ ಘಟನೆ ಅನಿರೀಕ್ಷಿತ ದುರಂತವಾಗಿದ್ದು, ಈ ದುರ್ಘಟನೆ ಬಗ್ಗೆ ಮ್ಯಾಜಿಸ್ಟ್ರೇಟ್ ಮೂಲಕ ತನಿಖೆ ನಡೆಸಲಾಗುವುದು. ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ದುರಂತದ ಬಗ್ಗೆ ನಮ್ಮ ನಿವಾಸದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದುರಂತದಲ್ಲಿ 11 ಮಂದಿ ಮೃತಪಟ್ಟಿದ್ದಾರೆ. ಒಟ್ಟು 47 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ 14 ಮಂದಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ತೆರಳಿದ್ದಾರೆ. 33 ಮಂದಿ ಒಳ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಅಸೋಷಿಯೇಶನ್ ಆರ್.ಸಿ.ಬಿ. ತಂಡದ ಸಂಭ್ರಮಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ಸಂಭ್ರಮಾಚರಣೆ ಸಮಯದಲ್ಲಿ ಕಾಲ್ತುಳಿತ ದುರಂತ ಸಂಭವಿಸಿದೆ. ಇದೊಂದು ಅನಿರೀಕ್ಷಿತ ದುರಂತವಾಗಿದ್ದು ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ನೀಡಲಾಗುವುದು. ದುರಂತದಿಂದ ಗಾಯಗೊಂಡಿರುವ ಎಲ್ಲರ ಆಸ್ಪತ್ರೆಯ ಖರ್ಚನ್ನು ಸರಕಾರವೇ ಭರಿಸಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಈ ದುರಂತ ನಡೆಯಬಾರದಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದ ಒಳಗೆ 35 ಸಾವಿರ ಜನರಿಗೆ ಕುಳಿತುಕೊಳ್ಳುವ ಆಸನಗಳ ವ್ಯವಸ್ಥೆ ಇದೆ. ಇದಕ್ಕಿಂತ ಸ್ವಲ್ಪ ಜಾಸ್ತಿ ಜನ ಸೇರಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಒಮ್ಮೆಲೆ 3ರಿಂದ 4 ಲಕ್ಷ ಅಭಿಮಾನಿಗಳು ಜಮಾಯಿಸಿ ಕ್ರೀಡಾಂಗಣದ ಒಳಗೆ ನುಗ್ಗಲು ಯತ್ನಿಸಿದಾಗ ಈ ದುರಂತ ನಡೆದಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸೌಧದ ಎದುರು ಸರಕಾರದ ವತಿಯಿಂದ ಸಂಭ್ರಮಾಚರಣೆ ನಡೆಸಲಾಗಿತ್ತು. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು. ಅಲ್ಲಿ ಯಾವುದೇ ದುರಂತ ನಡೆದಿಲ್ಲ. ಎಲ್ಲಾ ವ್ಯವಸ್ಥೆಯೂ ಚೆನ್ನಾಗಿ ಇತ್ತು. ಆದರೆ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ 3ರಿಂದ 4 ಲಕ್ಷ ಅಭಿಮಾನಿಗಳು ಸೇರಿದಾಗ ಉಂಟಾದ ನೂಕುನುಗ್ಗಲಿನಿಂದ ಕಾಲ್ತುಳಿತ ಸಂಭವಿಸಿದೆ. ಇದರಲ್ಲಿ ಯುವಕ, ಯುವತಿಯರು ಸೇರಿ 11 ಮಂದಿ ಮೃತಪಟ್ಟಿದ್ದಾರೆ. ಇದೊಂದು ದುಖದ ಘಟನೆಯಾಗಿದೆ. ಮೃತರ ಕುಟುಂಬದ ಜೊತೆ ಸರಕಾರ ನಿಲ್ಲಲಿದೆ ಎಂದು ಅವರು ತಿಳಿಸಿದರು.
ಈ ದಿನ ಸಂಪಾದಕೀಯ | ವೀರಣ್ಣ ಮಡಿವಾಳರ ಅವರನ್ನು ಅವಮಾನಿಸಿದ್ದೇ ಅನಾಗರಿಕತೆ! ಅಮಾನತನ್ನು ವಾಪಸು ಪಡೆಯಿರಿ