ರಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಅಗತ್ಯ ಸೌಲಭ್ಯಗಳು ಇಲ್ಲ. ವೈದ್ಯರು ಆಸ್ಪತ್ರೆ ಯಲ್ಲಿ ಇರುವುದಿಲ್ಲ. ಆಸ್ಪತ್ರೆಯನ್ನು ಅವ್ಯವಸ್ಥೆಯ ತಾಣವಾಗಿಸಿರುವ ರಿಮ್ಸ್ ನಿರ್ದೇಶಕ ಡಾ. ಬಸವರಾಜ ಪೀರಾಪುರ ಅವರನ್ನು ಸೇವೆಯಿಂದ ಅಮಾನತು ಮಾಡಬೇಕೆಂದು ಒತ್ತಾಯಿಸಿ ರಾಯಚೂರಿನಲ್ಲಿ ದಲಿತ ಸಂಘರ್ಷ ಸಮಿತಿ (ದಸಂಸ-ಭೀಮವಾದ) ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ರಿಮ್ಸ್ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿರುವ ಕಾರ್ಯಕರ್ತರು, “ಆಸ್ಪತ್ರೆ ಅವ್ಯವಸ್ಥೆಗಳ ಬಗ್ಗೆ ಈ ಹಿಂದೆಯೇ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಅಧಿಕಾರಿಗಳು ಮತ್ತು ಸಚಿವರ ಗಮನಕ್ಕೆ ತಂದಿದ್ದೆವು. ಆದರೂ, ಈವರೆಗೆ ಯಾವುದೆ ಕ್ರಮ ಕೈಗೊಂಡಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಸಂಘಟನೆಯ ಮುಖಂಡ ನರಸಿಂಹಲು, “ಆಸ್ಪತ್ರೆ ಸಮಸ್ಯೆಯ ಬಗ್ಗೆ ಜಿಲ್ಲಾ ಉಸ್ತುವಾರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ರಿಮ್ಸ್‌ನ ವ್ಯವಸ್ಥೆ ಸುಧಾರಣೆಯಾಗದ ಕಾರಣ ಹಾಗೂ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ಸೌಲಭ್ಯ ದೊರೆಯದ ಕಾರಣ ಧರಣಿ ನಡೆಸುತ್ತಿದ್ದೇವೆ” ಎಂದು ಹೇಳಿದ್ದಾರೆ.
“ಹೊರ ರೋಗಿ ಹಾಗೂ ಒಳ ರೋಗಿಗಳಿಗೆ ತಜ್ಞ ವೈದ್ಯರು ಚಿಕಿತ್ಸೆ ನೀಡುವುದಿಲ್ಲ. ತರಬೇತಿ ಪಡೆಯುತ್ತಿರುವ ವೈದ್ಯರೇ ಚಿಕಿತ್ಸೆ ನೀಡುತ್ತಿದ್ದಾರೆ. ತಜ್ಞ ವೈದ್ಯರು ಬಯೋಮೆಟ್ರಿಕ್ ಹಾಜರಾತಿ ಹಾಕಿ, ತಮ್ಮ ಖಾಸಗಿ ಕ್ಲಿನಿಕ್‌ಗೆ ಹೋಗುತ್ತಾರೆ” ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಎಲ್ ವಿ ಸುರೇಶ್, ನರಸಪ್ಪ, ಆಂಜನೇಯ, ತಿಮ್ಮಪ್ಪ, ಸೈಯದ್, ಅನಿಲ್ ಇನ್ನಿತರರು ಇದ್ದರು.