ಅಪ್ರಾಪ್ತ ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ತಡೆಗೆ ಎಲ್ಲ ಇಲಾಖೆಗಳು ಶ್ರಮಿಸಬೇಕು ಎಂದು ಹಾಸನ ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಧೀಶ ಟಿ ಎನ್ ಇನವಳ್ಳಿ ಸೂಚಿಸಿದ್ದಾರೆ.
ಪೋಕ್ಸೊ ಕಾಯಿದೆ ಅನುಷ್ಠಾನ, ಮಕ್ಕಳ ಮೇಲಿನ ಲೈಂಗಿಕ ಹಾಗೂ ಇತರ ಶೋಷಣೆಗಳನ್ನು ತಡೆದು ರಕ್ಷಣೆ ನೀಡುವ ಕುರಿತು ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
“ಇಲಾಖೆಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕು. ಸಂಘ ಸಂಸ್ಥೆಗಳ ಸಹಕಾರ ಪಡೆದು ಶಾಲೆ, ಕಾಲೇಜು ಸೇರಿದಂತೆ ಸಮುದಾಯಗಳಲ್ಲಿ ವ್ಯಾಪಕ ಜಾಗೃತಿ ಮೂಡಿಸಬೇಕು. ಶಾಲಾ ಕಾಲೇಜುಗಳಲ್ಲಿ ಮಕ್ಕಳ ಸಹಾಯವಾಣಿ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಉತ್ತಮ ಹಾಗೂ ಕೆಟ್ಟ ಸ್ಪರ್ಶದ ಬಗ್ಗೆ ತಿಳಿಸಿಕೊಡಬೇಕು” ಎಂದು ತಿಳಿಸಿದರು.
“ಶಿಕ್ಷಕರು ಗುರುವಿನ ಸಮಾನ. ಅವರು ನೈತಿಕ ಹೊಣೆಗಾರಿಕೆಯಿಂದ ನಡೆದುಕೊಳ್ಳಬೆಕು. ಶಾಲೆ, ವಸತಿ ಶಿಕ್ಷಣ ವ್ಯವಸ್ಥೆಯಲ್ಲೇ ಶೋಷಣೆ ಎದುರಿಸುವಂತಾಗಬಾರದು. ಶೋಷಣೆಗೆ ಒಳಗಾದ ಸಂದರ್ಭದಲ್ಲಿ ದೂರು ನೀಡಲು ಮಕ್ಕಳು, ಪೋಷಕರು ಹಿಂಜರಿಯುತ್ತಿದ್ದಾರೆ. ಆದರೆ ಇದರಿಂದ ತಪ್ಪಿತಸ್ಥರಿಗೆ ರಕ್ಷಣೆ, ಪ್ರೋತ್ಸಾಹ ಸಿಗಲಿದೆ. ಹಾಗಾಗಿ ಸಾಮಾಜಿಕವಾಗಿ ಅರಿವು ಮೂಡಿಸಬೇಕು. ಸಮಾಜ ಘಾತುಕ ಶಕ್ತಿಗಳನ್ನು ಹತ್ತಿಕ್ಕಬೇಕು” ಎಂದರು.
“ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಮಕ್ಕಳ ಸಹಾಯವಾಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಇತರ ಇಲಾಖೆಗಳು ಹೆಚ್ಚಿನ ಜವಾಬ್ಧಾರಿ ವಹಿಸಬೇಕು. ನಾವು ಪುಸ್ತಕದಲ್ಲಿರುವದನ್ನು ಮಾತ್ರ ಕಲಿಸುತ್ತಿದ್ದೇವೆಯೇ ಹೊರತು, ಜೀವನದ ಪಾಠ ಹೇಳಿಕೊಡುವುದನ್ನು ಮರೆಯುತ್ತಿದ್ದೇವೆ. ಈಗಲಾದರು ಬದುಕಿನ ಮೌಲ್ಯ, ನೈತಿಕ ಶಿಕ್ಷಣ ಕಲಿಸಬೇಕು. ಪೋಷಕರ ಮನೋಭಾವ, ಮಕ್ಕಳನ್ನು ಬೆಳೆಸುವ ರೀತಿ ಬದಲಾವಣೆ ಆಗಬೇಕು” ಎಂದು ಸಲಹೆ ನೀಡಿದರು.
“ನಗರದ ಅಂಬೇಡ್ಕರ್ ಭವನದಲ್ಲಿ ಜುಲೈ 22ರಂದು ಮಾನವ ಕಳ್ಳ ಸಾಗಾಣಿಕೆ ತಡೆ ಕುರಿತು ಹಾಗೂ 26 ರಂದು ಮಹಿಳಾ ದೌರ್ಜನ್ಯ ತಡೆ ಕುರಿತು ಕಾರ್ಯಾಗಾರ ಏರ್ಪಡಸಿಲಾಗಿದ್ದು, ಎಲ್ಲ ಇಲಾಖೆಗಳು ಇದರಲ್ಲಿ ಪಾಲ್ಗೊಳ್ಳಬೇಕು” ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಟಿ ಎನ್ ಇನವಳ್ಳಿ ತಿಳಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರವಿಕಾಂತ್ ಮಾತನಾಡಿ,
“ವಸತಿ ಶಾಲೆಗಳಲ್ಲಿ ಹೆಚ್ಚಿನ ಅರಿವು ಕಾರ್ಯಕ್ರಮ ನಡೆಸಿ, ಜಿಲ್ಲೆಯ ಎಲ್ಲ ಶಿಕ್ಷಕರಿಗೂ ವಿಶೇಷ ಕಾರ್ಯಾಗಾರ ಏರ್ಪಡಿಸಬೇಕು. ಬಾಲ್ಯ ವಿವಾಹ ತಡೆಗೆ ಪರಿಣಾಮಕಾರಿ ಕ್ರಮಗಳಾಗಬೇಕು. ಮುಗ್ಧ ಮಕ್ಕಳಿಗೆ ರಕ್ಷಣೆ ದೊರೆಯಬೇಕು” ಎಂದರು.
“ಸಖಿ ಕೇಂದ್ರದ ಬಗ್ಗೆ ಹಾಗೂ ವಿವಿಧ ಕಾಯಿದೆ ಬಗ್ಗೆ ಅರಿವು ಮೂಡಿಸಲು ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ. ಮಕ್ಕಳ ಹಕ್ಕುಗಳ ಉಲ್ಲಂಘನೆ ಬಗ್ಗೆ ಗರಿಷ್ಠ ನಿಗಾ ವಹಿಸಬೇಕಿದೆ” ಎಂದರು.
ಜಿಲ್ಲಾಧಿಕಾರಿ ಸತ್ಯಭಾಮ ಮಾತನಾಡಿ, “ನಮ್ಮಲ್ಲಿ ನೈತಿಕತೆ ಕುಸಿಯುತ್ತಿದೆ. ನಾವು ಮಕ್ಕಳಿಗೆ ಸಂಸ್ಕಾರ ಕಲಿಸಬೇಕಿದೆ. ಜೊತೆಗೆ ಎಲ್ಲ ಇಲಾಖೆಗಳೂ ನಮ್ಮ ದೇಶದ ಮುಂದಿನ ಭವಿಷ್ಯವಾಗಿರುವ ಮಕ್ಕಳ ಹಕ್ಕುಗಳನ್ನು ರಕ್ಷಿಸಿ ಎಲ್ಲೂ ದೌರ್ಜನ್ಯ ನಡೆಯದಂತೆ ನೋಡಿಕೊಳ್ಳಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಅರ್ಹ ಫಲಾನುಭವಿಗಳಿಗೆ ಸೂರು ಕಲ್ಪಿಸಿ: ಸಂಸದ ಸಿದ್ದೇಶ್ವರ್
“ಮಕ್ಕಳಿಗೆ ಹೆಚ್ಚಾಗಿ ನೈತಿಕ ಶಿಕ್ಷಣ ಕಲಿಸಬೇಕು. ಮಾನವ ಧರ್ಮ, ವಿವೇಕಗಳನ್ನು ಕಲಿಸಬೇಕಿದೆ. ಸಂಬಂಧಗಳ ಮೌಲ್ಯ ಕಲಿಸಬೇಕು. ಸಮಾಜ ಸರಿಯಾದ ಹಾದಿಯಲ್ಲಿ ಸಾಗಬೇಕು” ಎಂದು ಅಭಿಪ್ರಾಯಪಟ್ಟರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ ಟಿ ಶಾಂತಲಾ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಚಂದ್ರಶೇಖರ್, ಜಿಲ್ಲಾ ಸ್ಕೌಟ್ ಮತ್ತು ಗೈಡ್ಸ್ ಆಯುಕ್ತ ಡಾ. ವೀರಭದ್ರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಸುರೇಶ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರುಗಳಾದ ಪ್ರಕಾಶ್ ಮತ್ತು ಮಹಾಲಿಂಗಯ್ಯ, ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ, ಕಾರ್ಮಿಕ ಅಧಿಕಾರಿ ಜುಮುನ ಭಾರತೀಯ ಸೇವಾ ದಳದ ರಾಣಿ ಇದ್ದರು.