ತಂಬಾಕು ಸೇವನೆಯು ಮನುಷ್ಯನ ಜೀವನಾಯುಷ್ಯವನ್ನೇ ಕಡಿಮೆ ಮಾಡುತ್ತದೆ. ಇದು ಗೊತ್ತಿದ್ದೂ ಇತ್ತೀಚಿನ ದಿನಗಳಲ್ಲಿ ಯುವಜನತೆ ಈ ಚಟಕ್ಕೆ ಆಸಕ್ತರಾಗುತ್ತಿರುವುದು ದುರಂತಕರ ಸಂಗತಿ ಎಂದು ವಿಜಯಪುರ ಜಿಲ್ಲಾ ಸಮಾಜ ಕಾರ್ಯಕರ್ತ ಶ್ರೀಕಾಂತ ಪೂಜಾರ ಕಳವಳ ವ್ಯಕ್ತಪಡಿಸಿದರು.
ನಗರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್ ಕೋಶದ ಸ್ನಾತಕ ಘಟಕ, ‘ಆ’ ಘಟಕ, ಯುವ ರೆಡ್ ಕ್ರಾಸ್ ಘಟಕ ಮತ್ತು ಸಮಾಜ ಕಾರ್ಯ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ತಂಬಾಕು ರಹಿತ ದಿನದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ತಂಬಾಕು ಮತ್ತು ನಿಕೋಟಿನ್ ಉತ್ಪನ್ನಗಳನ್ನು ಸೇವಿಸುವುದರಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಪೋಸ್ಟರ್‌ಗಳನ್ನು ತೋರಿಸುವ ಮೂಲಕ ಉಪನ್ಯಾಸ ನೀಡುತ್ತಾ, ತಂಬಾಕು ಗುಟ್ಕಾ, ಸಿಗರೇಟ್, ಆರ್.ಎಮ್.ಡಿ. ಮಾವಾ ಇತ್ಯಾದಿಗಳನ್ನು ತಯಾರಿಸಲು ವಿಷಕಾರಿ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇದರ ಸೇವನೆಯಿಂದ ಮನುಷ್ಯನಲ್ಲಿ ಬಾಯಿ ಕ್ಯಾನ್ಸರ್, ಗಂಟಲು ಕ್ಯಾನ್ಸರ್, ಶ್ವಾಸಕೋಶದ ತೊಂದರೆಗಳು, ಕಿಡ್ನಿಗೆ ಸಂಬಂಧಿಸಿದ ಕಾಯಿಲೆಗಳು ಉಂಟಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಮಹಿಳಾ ವಿವಿಯ ಅರ್ಥಶಾಸ್ತ್ರ ವಿಭಾಗದ ಪ್ರೊ ಡಿ ಎಂ ಮದರಿ ಮಾತನಾಡಿ, “ತಂಬಾಕು ಸೇವನೆ ವ್ಯಕ್ತಿಯ ಮೇಲೆ ಎಷ್ಟು ಕೆಟ್ಟ ಪರಿಣಾಮ ಬೀರುತ್ತದೆ ಎಂಬುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು. ತಂಬಾಕು ಉತ್ಪನ್ನಗಳನ್ನು ಸೇವಿಸುವವರಿಗೆ ನೇರವಾಗಿ ಆರೋಗ್ಯ ಹಾನಿ ಉಂಟಾದರೆ, ತಂಬಾಕು ಸೇವಿಸುವ ವ್ಯಕ್ತಿಯ ಜೊತೆಗೆ ಇರುವವರಿಗೂ ಶೇ.10ರಷ್ಟು ಪ್ರಮಾಣದಲ್ಲಿ ಅದರ ದುಷ್ಪರಿಣಾಮಗಳು ತೊಂದರೆಯುಂಟು ಮಾಡುತ್ತವೆ. ಸಮಾಜಮುಖಿ ಕಾರ್ಯನಿರ್ವಹಿಸುವ ಎನ್ಎಸ್ಎಸ್ ಸ್ವಯಂ ಸೇವಕಿಯರಿಗೆ ಈ ಕುರಿತು ಮಾಹಿತಿ ನೀಡಿದರೆ, ಅವರು ತಮ್ಮ ಸಮುದಾಯದಲ್ಲಿ ಅರಿವು ಮೂಡಿಸಲು ನೆರವಾಗುತ್ತದೆ” ಎಂದರು.
ಇದನ್ನೂ ಓದಿ: ವಿಜಯಪುರ | ಕೃಷಿ ಉಪಕರಣಗಳ ಸಮರ್ಪಕ ಪೂರೈಕೆಗೆ ರೈತ ಸಂಘ ಆಗ್ರಹ
ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಕೋಶದ ಜಿಲ್ಲಾ ಸಲಹೆಗಾರ ಡಾ. ಪ್ರಕಾಶ ಚವ್ಹಾಣ ಮಾತನಾಡಿ, “ತಂಬಾಕು ಮುಕ್ತ ಸಮಾಜ ನಿರ್ಮಾಣದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಿ ಕಾರ್ಯನಿರ್ವಹಿಸುವ ಅಗತ್ಯವಿದೆ” ಎಂದು ತಿಳಿಸಿದರು. ತಂಬಾಕು ಮುಕ್ತ ಸಮಾಜಕ್ಕಾಗಿ ಪ್ರಮಾಣ ವಚನವನ್ನು ಸಹ ಬೋಧಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಕಾರ್ಯ ವಿಭಾಗದ ಬೋಧಕ ಸಿಬ್ಬಂದಿಗಳು, ಎನ್.ಎಸ್.ಎಸ್ ಸ್ನಾತಕ ಮತ್ತು ಆ ಘಟಕದ ಸ್ವಯಂಸೇವಕಿಯರು ಹಾಗೂ ಮತ್ತಿತರು ಉಪಸ್ಥಿತರಿದ್ದರು.